ಮಳೆ ವಿಳಂಬ: ಇನ್ನೆರಡು ದಿನಕ್ಕೆ ಮಾತ್ರ ನಗರಸಭೆ ನೀರು?
Team Udayavani, Jun 3, 2017, 11:56 AM IST
ಉಡುಪಿ: ಮುಂಗಾರು ಪೂರ್ವ ಮಳೆ ಉಡುಪಿ ಜಿಲ್ಲೆಯಲ್ಲಿ ತೀರಾ ಕಡಿಮೆಯಾಗಿದ್ದರಿಂದ ಉಡುಪಿ ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆಗೆ ಸಮಸ್ಯೆ ಬಂದೊದಗಿದೆ. ಸ್ವರ್ಣ ಪ್ರದೇಶದ ಅಲ್ಲಲ್ಲಿ ಡ್ರೆಜ್ಜಿಂಗ್ ಮಾಡಿ ನೀರು
ಕೊಡಲಾಗುತ್ತಿದ್ದು, ಈಗ ಎಲ್ಲ ಗುಂಡಿಗಳಿಂದಲೂ ನೀರು ತೆಗೆಯಲಾಗಿದ್ದು, ಇನ್ನು ಎಲ್ಲಿಯೂ ತೆಗೆಯಲು ನೀರಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕರಾವಳಿ ಭಾಗದ ಹೆಚ್ಚಿನೆಲ್ಲ ಕಡೆಗಳಲ್ಲಿ ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದರೂ ಉಡುಪಿಯಲ್ಲಿ ಮಾತ್ರ ಇನ್ನೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯೇ ಆಗಿಲ್ಲ. ಅದಲ್ಲದೆ ಸ್ವರ್ಣ ನದಿಗೆ ನೀರು ಹರಿದು ಬರುವ ಪ್ರದೇಶವಾಗಿರುವ ಕಾರ್ಕಳದಲ್ಲಿಯೂ ಈ ಬಾರಿ ಮುಂಗಾರು ಪೂರ್ವ ಮಳೆ ತೀರಾ ಕಡಿಮೆಯಾಗಿದೆ. ಹೀಗಾಗಿ ನಗರಸಭೆಯ ನಲ್ಲಿ ಮೂಲಕ ನೀರು ಪೂರೈಕೆಗೆ ಏನು ಮಾಡುವುದೆಂದು ನಗರಸಭೆ ಚಿಂತಿಸುತ್ತಿದೆ.
ಬತ್ತಿದ ನೀರಿನ ಸೆಳೆಗಳು: ಕೆಲವು ಪ್ರದೇಶಗಳಲ್ಲಿ ಸಾಧಾರಣ ಮಳೆ ಬಂದರೂ ನೀರು ಹರಿದು ಹೋಗುವಷ್ಟು ಬಂದಿಲ್ಲ. ಸಾಧಾರಣವಾಗಿ ಸುರಿದ ಮಳೆ ನೀರು ಅಲ್ಲಿಯೇ ಭೂಮಿಗೆ ಇಂಗಿ ಹೋಗುತ್ತಿದೆ. ಶೀರೂರು ಮಾಣೈ, ಭಂಡಾರಿ ಬೆಟ್ಟು ಹಾಗೂ ಪುತ್ತಿಗೆ ಪ್ರದೇಶದಲ್ಲಿ ಅಲ್ಲಲ್ಲಿ ಸಂಗ್ರಹವಿರುವ ನೀರನ್ನು ಡ್ರೆಜ್ಜಿಂಗ್ ಮಾಡಿ ಬಜೆ ಅಣೆಕಟ್ಟಿಗೆ ಹರಿಸಿ ಶುದ್ಧೀಕರಿಸಿ ಪ್ರಸ್ತುತ 4 ದಿನಕ್ಕೊಮ್ಮೆ ಸರಬರಾಜು ಮಾಡಲಾಗುತ್ತಿದೆ. ಇದೇ ಮೊದಲ ಬಾರಿ ಎನ್ನುವಂತೆ ಪುತ್ತಿಗೆ ಬ್ರಿಡ್ಜ್ ಬಳಿಯ ಗುಂಡಿಯೂ ಸಂಪೂರ್ಣ ಬರಿದಾಗಿದ್ದು ಇನ್ನು ಪಂಪಿಂಗ್ ಮಾಡಲು ಆ ಗುಂಡಿಗಳಲ್ಲಿ ನೀರಿನ ಸೆಲೆಯೇ ಇಲ್ಲವಾಗಿದೆ.
ಕಡಿಮೆಯಾದ ಬಳಕೆ ಪ್ರಮಾಣ
ಆಗಾಗ ಅಲ್ಪ ಸ್ವಲ್ಪ ಮಳೆ ಬಂದಿದ್ದರಿಂದಲೋ ಏನೋ ಈಗ ನಗರದಲ್ಲಿ ನೀರಿನ ಒಟ್ಟಾರೆ ಬಳಕೆ ಪ್ರಮಾಣ ಕಡಿಮೆಯಾಗಿದೆ. ಅಂದರೆ ಈವರೆಗೆ ಕುಡಿಯುವ ನೀರನ್ನು ಅನ್ಯ ಉದ್ದೇಶಕ್ಕೆ ಬಳಸುವ ಜನರೇ ಹೆಚ್ಚು ಎನ್ನುವುದು ಇದರಿಂದ ತಿಳಿಯ ಬಹುದು. ಮಳೆ ಬಂದ ಅನಂತರ ಗಾರ್ಡನ್, ಗಿಡಗಳಿಗೆ, ವಾಹನ ತೊಳೆಯಲು ಮಳೆ ನೀರನ್ನೇ ಸಂಗ್ರಹಿಸಿ ಬಳಸುತ್ತಿರುವುದರಿಂದ ಒಟ್ಟಾರೆ ಬಳಕೆ ಪ್ರಮಾಣ ಕಡಿಮೆಯಾಗಿರಬಹುದು. ವಾರದ ಹಿಂದೆ ಸುಮಾರು ದಿನಕ್ಕೆ 140 ರಿಂದ 150 ಟ್ಯಾಂಕರ್ ನೀರು ಬೇಡಿಕೆಯಿದ್ದರೆ, ಈಗ ಕೇವಲ 80- 90 ಟ್ಯಾಂಕರ್ ನೀರು ಬಳಕೆಯಾಗುತ್ತಿದೆ.
ಸ್ವರ್ಣ ನದಿಗೆ ಹೆಚ್ಚಿನ ನೀರು ಹರಿದು ಬರುವ ಕಾರ್ಕಳ ಭಾಗದಲ್ಲಿ ಗುರುವಾರ ರಾತ್ರಿಯಿಂದ ಮಳೆಯಾಗುತ್ತಿದೆ. ಶುಕ್ರವಾರವೂ ಮುಂದುವರಿದಿದೆ. ಆದರೆ ರಭಸವಾಗಿ ನೀರು ಹರಿದುಹೋಗು ವಷ್ಟು ಜೋರಾಗಿ ಇನ್ನೂ ಮಳೆಯಾಗಿಲ್ಲ.
ಏನು ಮಾಡಬೇಕೆಂದು ತಿಳಿಯುತ್ತಿಲ್ಲ
ಸ್ವರ್ಣ ನದಿಯ ಬಜೆ ಜಲಾಶಯದ ಪ್ರದೇಶಗಳಾದ ಶೀರೂರು, ಪುತ್ತಿಗೆ, ಭಂಡಾರಿಬೆಟ್ಟು, ಮಾಣೈ ಹೀಗೆ ಎಲ್ಲ ಪ್ರದೇಶಗಳಿಂದಲೂ ಡ್ರೆಜ್ಜಿಂಗ್ ಮಾಡಿ ಸುಮಾರು 9 ಬೋಟ್ ಪಂಪ್ ಮೂಲಕ ಸಿಕ್ಕಷ್ಟು ನೀರನ್ನು ಪಂಪಿಂಗ್ ಮಾಡಲಾಗಿತ್ತು. ಆದರೆ ಇನ್ನೂ ಸರಿಯಾಗಿ ಮಳೆಯಾಗಮನವೇ ಆಗಿಲ್ಲದ್ದರಿಂದ ನಲ್ಲಿ ಮೂಲಕ ನೀರು ಪೂರೈಕೆಗೆ ಏನು ಮಾಡಬೇಕು ಅನ್ನುವುದೇ ತಿಳಿಯುತ್ತಿಲ್ಲ
– ರಾಘವೇಂದ್ರ, ನಗರಸಭೆಯ ಪರಿಸರ ಅಭಿಯಂತರ
ಪಂಪಿಂಗ್ ಅಸಾಧ್ಯ
ನಗರಕ್ಕೆ ದಿನಕ್ಕೆ ಒಟ್ಟು 23 ದಶಲಕ್ಷ ಲೀಟರ್ ನೀರು ಅಗತ್ಯವಿದ್ದು, 4 ದಿನಕ್ಕೊಮ್ಮೆ ಕೊಡುತ್ತಿರುವುದರಿಂದ ಬಜೆ ಅಣೆಕಟ್ಟಿನಲ್ಲಿ ಕನಿಷ್ಠ 10 ದಶಲಕ್ಷ ಲೀಟರ್ ನೀರಿನ ಸಂಗ್ರಹವಾದರೂ ಅಗತ್ಯವಿದೆ. ಇಲ್ಲವಾದರೆ 200 ಎಚ್‌ಪಿ ಸಾಮರ್ಥ್ಯದ ಪಂಪಿನ ಫುಟ್‌ಬಾಲ್‌ನಲ್ಲಿ ನೀರು ಮೇಲೆ ಬರುವುದಿಲ್ಲ. ಅಲ್ಲಿಂದ ನಗರಕ್ಕೆ 500 ಎಚ್‌ಪಿ ಸಾಮರ್ಥ್ಯದ ಪಂಪ್‌ಗೆ ಕನಿಷ್ಠ 10 ಗಂಟೆ ಪಂಪಿಂಗ್ ಮಾಡಲು ನೀರು ಅಗತ್ಯವಿದೆ. ಇನ್ನು ಅಷ್ಟು ನೀರು ಸಂಗ್ರಹವಾಗುವ ಬಗ್ಗೆ ಸಂಶಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.