ಮಳೆ-ನೆರೆ : ಟ್ಯೂಬ್ ಅಳವಡಿಸಿ ಅಂತಿಮ ಸಂಸ್ಕಾರಕ್ಕೆ ಶವ ಸಾಗಾಟ
Team Udayavani, Jul 9, 2018, 6:00 AM IST
ಕಟಪಾಡಿ: ಅಂತಿಮ ಸಂಸ್ಕಾರಕ್ಕಾಗಿ ಶವವನ್ನು ಕೊಂಡೊಯ್ಯಲು ಟ್ಯೂಬ್ ಅಳವಡಿಸಿದ ಸ್ಟ್ರೆಚರ್ ಮೂಲಕ ನೆರೆ ನೀರಿನಲ್ಲಿ ತೇಲಿಸಿಕೊಂಡು ಶ್ಮಶಾನಕ್ಕೆ ಕೊಂಡೊಯ್ದ ಘಟನೆ ಜು.8ರಂದು ಕಟಪಾಡಿ ಬೀಡು ಕಂಬಳಕಟ್ಟದ ಬಳಿ ನಡೆದಿದೆ.
ಜು. 7ರ ತಡರಾತ್ರಿಯಲ್ಲಿ ಸುಮಾರು 98ರ ಹರೆಯದ ವಯೋವೃದ್ಧೆ ಕಲ್ಲಾಪು ಎಂಬಲ್ಲಿನ ಸೇಸಿ ಪೂಜಾರ್ತಿ ಎಂಬವರು ನಿಧನ ಹೊಂದಿದ್ದರು. ಮೃತರ ಶವ ದಹನಕ್ಕೆ ಶ್ಮಶಾನಕ್ಕೆ ಕೊಂಡೊಯ್ಯಲು ತುಂಬಿದ್ದ ನೆರೆ ನೀರು ಇಳಿಯದೆ ಅಡ್ಡಿಯಾಗಿತ್ತು. ಮನೆಯಿಂದ ಹೆದ್ದಾರಿ ಪಕ್ಕದವರೆಗೆ ಸುಮಾರು ಅರ್ಧ ಕಿ.ಮೀ. ಮಿಕ್ಕಿದ ದಾರಿಯನ್ನು ಕ್ರಮಿಸಬೇಕಿತ್ತು.
ಆದರೆ ನಿರಂತರವಾಗಿ ಜು. 6, 7ರಂದು ಸುರಿದ ಮಳೆಯ ಕಾರಣದಿಂದ ಈ ಮನೆಯ ಸುತ್ತಲ ಪ್ರದೇಶವು ಜಲಾವೃತಗೊಂಡಿತ್ತು. ಆ ಕಾರಣದಿಂದ ಮನೆ ಮಂದಿ ನೆರೆಗೆ ಎದುರಾಗಿ ಅಷ್ಟೊಂದು ದೂರ ನೆರೆ ನೀರಿನಲ್ಲಿ ಶವವನ್ನು ಹೊತ್ತುಕೊಂಡು ಸಾಗಲು ತುಸು ಕಷ್ಟಸಾಧ್ಯವೆಂದು ಮನಗಂಡರು.
ದೋಣಿಯ ವ್ಯವಸ್ಥೆ ಅಸಾಧ್ಯವಾದ ಕಾರಣ ಸ್ಥಳೀಯ ಕೋಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಳ್ಳಿಗುಡ್ಡೆ ಶ್ಮಶಾನದಲ್ಲಿನ ಆ್ಯಂಬುಲೆನ್ಸ್‌ನ ಸ್ಟ್ರೆಚ್ಚರ್‌ಗೆ ಘನ ವಾಹನದ ರಬ್ಬರ್ ಟ್ಯೂಬ್ ಕಟ್ಟಿ ಶವದ ಅಂತಿಮ ವಿಧಿವಿಧಾನಗಳನ್ನು ಪೂರೈಸಿದ ಅನಂತರ ಅದರಲ್ಲಿರಿಸಿ ನೆರೆ ನೀರಿನ ಮೇಲೆ ತೇಲಿಸಿಕೊಂಡು ಶವವನ್ನು ಕಟಪಾಡಿ ಬೀಡು ಕೆರೆಯ ಬಳಿಯವರೆಗೆ ತಂದು ಅನಂತರದಲ್ಲಿ ಆ್ಯಂಬುಲೆನ್ಸ್ ಮೂಲಕ ಶ್ಮಶಾನಕ್ಕೆ ಸಾಗಿಸಿ ಅಂತಿಮ ಸಂಸ್ಕಾರ ನಡೆಸಲಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.