ಕೊಳೆಗೇರಿ ಮಕ್ಕಳ ಭವಿಷ್ಯ ರೂಪಿಸುವ ಅಪರೂಪದ ಮಹಿಳೆ
Team Udayavani, Oct 18, 2018, 11:31 AM IST
ಉಡುಪಿ: ಸಿರಿವಂತಿಕೆ ಇದ್ದವರು ಆರ್ಥಿಕವಾಗಿ ಹಿಂದುಳಿದವರಿಗೆ ಆಸರೆಯಾಗುವ ಉದಾಹರಣೆಗಳು ಕಡಿಮೆ. ಆದರೆ ಇಲ್ಲೊಬ್ಬರು ನಿರಂತರ ತನ್ನ ಕೈಲಾದ ಸೇವೆಯನ್ನು ಕೊಳೆಗೇರಿ ಮಕ್ಕಳಿಗೆ ಮಾಡುತ್ತಿದ್ದು ಮಾದರಿಯಾಗಿದ್ದಾರೆ. ಉಡುಪಿಯ ವಾದಿರಾಜ ರಸ್ತೆಯಲ್ಲಿರುವ ಉದ್ಯಮಿಯೋರ್ವರ ಪತ್ನಿ ಕೊಳಗೇರಿಯ ಮಕ್ಕಳಿಗೆ ಉಚಿತ ಶಿಕ್ಷಣ, ಶುಶ್ರೂಷೆ, ತರಬೇತಿ, ಭಾರತೀಯ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸಿಕೊಡುವುದರಲ್ಲಿಯೇ ಮಗ್ನರಾಗಿದ್ದಾರೆ.
ಕೊಳೆಗೇರಿ ಮಕ್ಕಳ ಆಶಾದೀಪ ಈ ರೂಪಾ
ಉದ್ಯಮಿ ನಾಗರಾಜ್ ಬಲ್ಲಾಳ್ ಅವರ ಪತ್ನಿ ರೂಪಾ ಅವರು ಮೂಲತಃ ಬೆಂಗಳೂರಿನವರು. ಯೋಗ ಥೆರಪಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸುಮಾರು 10 ವರ್ಷಗಳಿಂದ ಉಡುಪಿಯ ಬೀಡಿನಗುಡ್ಡೆಯ ಕೊಳಗೇರಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳನ್ನು ತಮ್ಮ ಮನೆಗೆ ಕರೆತಂದು ಮನೆಯಲ್ಲಿ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ಬಡತನ, ಹೆತ್ತವರ ದುಶ್ಚಟ ಇತ್ಯಾದಿ ಕಾರಣಗಳಿಂದ ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿರುವ ಮಕ್ಕಳಿಗೆ ಶಿಕ್ಷಣ, ಶಿಸ್ತು, ಸರಳತೆ, ಸಂಸ್ಕಾರ, ಸಂಸ್ಕೃತಿಯನ್ನು ಕಲಿಸುವಲ್ಲಿ ರೂಪಾ ಅವರು ತೊಡಗಿಸಿಕೊಂಡಿದ್ದಾರೆ.
ಪಠ್ಯೇತರ ಚಟುವಟಿಕೆಗೂ ಸಹಕಾರ
ಮಕ್ಕಳಿಗೆ ಶಿಕ್ಷಣ ಮಾತ್ರವಲ್ಲದೆ ವ್ಯಾಯಾಮ, ಆಸಕ್ತರಿಗೆ ಕ್ರೀಡೆ ಮತ್ತು ಆಟೋಟಗಳಿಗೆ ಪ್ರೋತ್ಸಾಹ, ತರಬೇತುದಾರರ ನೇಮಕ ಮಾಡಿದ್ದಾರೆ. ಆರೋಗ್ಯದಲ್ಲಿ ವ್ಯತ್ಯಾಸವಾದಾಗ ಸ್ವತಃ ಅವರೇ ತಮ್ಮ ಕಾರಿನಲ್ಲಿ ಕರೆದೊಯ್ದು ಚಿಕಿತ್ಸೆ ನೀಡುವುದು, ಉಪಾಹಾರದ ವ್ಯವಸ್ಥೆಯನ್ನೂ ಮಾಡುತ್ತಾರೆ. ಬಡತನದಿಂದ ಸ್ಲಂ ಮಕ್ಕಳು ಖಿನ್ನತೆಗೆ ಒಳಗಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಸಂಗೀತ, ಕಲೆ, ಕರಾಟೆ, ಭರತನಾಟ್ಯ ಶಿಕ್ಷಣವನ್ನೂ ಕೊಡಿಸುತ್ತಿದ್ದಾರೆ.
ಶಿಕ್ಷಣ ಪ್ರೇಮಿ ಕುಟುಂಬ
ರೂಪಾ ಅವರ ಪತಿ ಉದ್ಯಮಿ ನಾಗರಾಜ್ ಬಲ್ಲಾಳ್, ಅವರಿಬ್ಬರ ಮಕ್ಕಳಾದ ಡಾ| ಅರ್ಜುನ್ ಬಲ್ಲಾಳ್, ಡಾ| ಪ್ರಿಯಾಂಕಾ ಬಲ್ಲಾಳ್ ಕೂಡ ಈ ಮಕ್ಕಳ ಶಿಕ್ಷಣಕ್ಕೆ ತಮ್ಮ ಕೊಡುಗೆ ನೀಡುತ್ತಿದ್ದಾರೆ. ಜತೆಗೆ ಉದ್ಯಮಿ ದಂಪತಿ ತಮ್ಮ ಮಕ್ಕಳಂತೆಯೇ ಕೊಳೆಗೇರಿ ಮಕ್ಕಳಿಗೂ ವಾತ್ಸಲ್ಯ, ಮಮಕಾರ ತೋರಿಸುತ್ತಾರೆ.
ಮನೆ ಶಾಲೆಯಾಯಿತು!
ನಿತ್ಯದ ಪಾಠಕ್ಕೆ ಶಾಲೆಯಂತೆ ಇವರ ಮನೆಯಲ್ಲಿಯೂ ಮಹಡಿಯ ಮೇಲೆ ವಿಶಾಲವಾದ ತರಗತಿ ಕೋಣೆಯನ್ನೇ ನಿರ್ಮಿಸಲಾಗಿದೆ. ರೂಪಾ ಅವರು ಮಕ್ಕಳಿಗೆ ಇಂಗ್ಲಿಷ್, ಗಣಿತ, ವಿಜ್ಞಾನ ಶಿಕ್ಷಣ ನೀಡುತ್ತಿದ್ದು, ಮಕ್ಕಳಿಗೆ ಕೈಬರಹ ಸುಂದರವಾಗಲು ತರಬೇತಿ ನೀಡುತ್ತಾರೆ. ಅಲ್ಲದೆ ಅರ್ಥವಾಗದ ಮಕ್ಕಳಿಗೆ ಸನ್ನೆ, ಸಂಜ್ಞೆಯಿಂದಲೂ ತಿಳಿ ಹೇಳುತ್ತಾರೆ. ಅವರ ಈ ಸೇವೆಯನ್ನು ಗಮನಿಸಿದ ಆಸುಪಾಸಿನ ಶಿಕ್ಷಕಿಯರು, ಗೃಹಿಣಿಯರೂ ಇಲ್ಲಿಗೆ ಬಂದು ಪಾಠ ಮಾಡುತ್ತಿದ್ದಾರೆ. ಜತೆಗೆ ರೂಪಾ ಅವರ ವಿದ್ಯಾರ್ಥಿಗಳಾದ ಬಾಗಲಕೋಟೆಯ ಚಂದ್ರಕಲಾ, ಹೇಮಲತಾ ಶೆಟ್ಟಿ, ಶೈಲಾ ಕಿರಣ್ ಆದಿಉಡುಪಿ ಅವರು ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ.
ಸ್ಲಂ ಮಕ್ಕಳಿಗೆ ‘ತವರುಮನೆ’
ಮಕ್ಕಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ ರೂಪಾ ಅವರು 400ಕ್ಕೂ ಮಿಕ್ಕಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿದ್ದಾರೆ. ಈಗ ಅವರ ಮನೆಯಲ್ಲಿ 30 ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಈ ಮಕ್ಕಳು ಸಂಜೆ ಪಾಠ ಪ್ರವಚನ ಮುಗಿದ ಬಳಿಕ ತಮ್ಮ ಸ್ವಂತ ಮನೆಗಳಿಗೆ ತೆರಳುವುದಕ್ಕೆ ಕೇಳುವುದಿಲ್ಲ. ಹಾಸ್ಟೆಲ್‌ನಲ್ಲಿರುವ ಮಕ್ಕಳೂ ರಜೆ ಸಂದರ್ಭ ಇಲ್ಲಿಗೇ ನೇರವಾಗಿ ಬರುತ್ತಾರೆ. ಸುಮಾರು 5 ವರ್ಷದಿಂದ ಹಿಡಿದು ಎಂಜಿನಿಯರಿಂಗ್ ಮಾಡುವ ವಿದ್ಯಾರ್ಥಿಗಳೂ ಕೂಡ ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.
ಮಕ್ಕಳೆಂದರೆ ಅತ್ಯಂತ ಪ್ರೀತಿ
ಚಿಕ್ಕಂದಿನಿಂದಲೂ ನನಗೆ ಮಕ್ಕಳೆಂದರೆ ಅದೇನೋ ಪ್ರೀತಿ, ಸೆಳೆತ, ಮಕ್ಕಳೊಂದಿಗೆ ಮಕ್ಕಳಾಗುವುದೆಂದರೆ ನನಗೆ ಅತ್ಯಂತ ಇಷ್ಟ. ಇದರಿಂದ ಮನಸ್ಸಿಗೆ ನೀಡುವ ಆನಂದ ಬೇರಾವುದರಿಂದಲೂ ದೊರಕುವುದಿಲ್ಲ. ಈ ನೆಲೆಯಲ್ಲಿ ಮಕ್ಕಳ ಮೇಲಿನ ಅತೀವ ಪ್ರೀತಿಯೇ ನನ್ನನ್ನು ಅವರಿಗೆ ಶಿಕ್ಷಣ ನೀಡಲು ಪ್ರಮುಖ ಕಾರಣ.ಕೊಳೆಗೇರಿ ಮಕ್ಕಳೂ ಕಲಿತರೆ ಉತ್ತಮ ಸಮಾಜ ನಿರ್ಮಾಣವಾಗಲಿದೆ ಎನ್ನುವ ದೃಷ್ಟಿಯಿಂದ ಮುಂದುವರೆದಿದ್ದೇನೆ. ಇದಕ್ಕೆ ಮನೆಯವರು, ಊರಿನವರೂ ಸಹಕಾರ ನೀಡುತ್ತಿದ್ದಾರೆ.
-ರೂಪಾ ಬಲ್ಲಾಳ್, ಗೃಹಿಣಿ
ಹೆತ್ತವರ ಅಭಿಮತ
ನನ್ನ ಮಗ ಅಭಿನಂದನ್ ಎಂಎಸ್‌ಡಬ್ಲ್ಯೂ ಮಾಡಿ ಈಗ ಸಾಫ್ಟ್ವೇರ್ ಎಂಜಿಯರಿಂಗ್ ಮಾಡುತ್ತಿದ್ದರೆ, ಅಭಿಲಾಷ್ ಎಂಬಿಎ ಮಾಡುತ್ತಿದ್ದಾನೆ. ಇದಕ್ಕೆ ರೂಪಾ ಅವರ ಸಂಪೂರ್ಣ ಸಹಕಾರವೇ ಕಾರಣ.
– ಗಣೇಶ್ ಶೆಟ್ಟಿ ಬನ್ನಾಡಿ,
ರೂಪಾ ಅವರ ನೌಕರ
3 ವರ್ಷಗಳಿಂದ ನನ್ನ ಮೂವರು ಮಕ್ಕಳು ಇಲ್ಲಿಗೆ ಬಂದು ಶಿಕ್ಷಣ ಪಡೆಯುತ್ತಿದ್ದಾರೆ. ಶಿಕ್ಷಣದ ಫೀಸು ಕೂಡ ತುಂಬಿದ್ದಾರೆ. ಒಬ್ಬ ಮಗ ಮಂಜುನಾಥ ಬಂಟಕಲ್ಲಿನಲ್ಲಿ 3ನೇ ವರ್ಷದ ಸಿವಿಲ್ ಎಂಜಿನಿಯರಿಂಗ್ ಓದುತ್ತಿದ್ದಾನೆ. ಮತ್ತೂಬ್ಬ ಪುತ್ರ ಬಸವರಾಜ್ ಗೆ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಇದ್ದು, ಆತನಿಗೆ ಆಳ್ವಾಸ್‌ನಲ್ಲಿ ಉಚಿತ ಸೀಟ್ ಗಳಿಸಿ ಬಿಕಾಂ ಓದುತ್ತಿದ್ದಾನೆ. ಮತ್ತೂಬ್ಬ ಮಗ ಸಂತೋಷ್ ಬೋರ್ಡ್ ಹೈಸ್ಕೂಲಿನಲ್ಲಿ ದ್ವಿ.ಪಿಯು ಓದುತ್ತಿದ್ದಾನೆ. ಈ ಮಹಾತಾಯಿ ನಮ್ಮ ಪಾಲಿನ ದೇವತೆಯಾಗಿ ದೊರಕಿದ್ದಾರೆ.
-ಮಲ್ಲಮ್ಮ ಬಾಗಲಕೋಟೆ
ಎಸ್.ಜಿ. ನಾಯ್ಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.