ಏರುತ್ತಿರುವ ಕಾಂಡ್ಲಾ ನಡುಗುಡ್ಡೆ ವಿಸ್ತೀರ್ಣ
ಪ್ರವಾಸೋದ್ಯಮಕ್ಕೆ ಅವಕಾಶ, ನದಿ ಪಾತ್ರ ಬದಲು
Team Udayavani, Jan 10, 2020, 5:04 AM IST
ಕುಂದಾಪುರ ತಾಲೂಕಿನ ಪ್ರಮುಖ ನದಿಗಳಲ್ಲಿ ಸೃಷ್ಟಿಯಾಗಿರುವ ಕಾಂಡ್ಲಾ ನಡುಗುಡ್ಡೆಯ ವಿಸ್ತೀರ್ಣ ಹೆಚ್ಚಾಗುತ್ತಿದ್ದು ಜನರಿಗೆ ಆತಂಕ ಉಂಟಾಗಿದೆ. ನದಿ ತೀರ ವಾಸಿಗಳು ಭವಿಷ್ಯದಲ್ಲಿ ಸಂಭವಿಸಬಹುದಾದ ಪ್ರಾಕೃತಿಕ ವಿಪತ್ತಿನ ಕುರಿತು ಅಂಜುತ್ತಿದ್ದಾರೆ.
ಕುಂದಾಪುರ: ತಾಲೂಕಿನ ಪ್ರಮುಖ ನದಿಗಳಲ್ಲಿ ಕಾಂಡ್ಲಾ ನಡುಗುಡ್ಡೆಯ ವಿಸ್ತೀರ್ಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಇದರಿಂದ ನದಿಪಾತ್ರ ಬದಲಾಗಬಹುದು ಎಂಬ ಆತಂಕ ಕೆಲವರದ್ದಾದರೆ ಭವಿಷ್ಯದಲ್ಲಿ ಪ್ರಾಕೃತಿಕ ಅಸಮತೋಲನ ಉಂಟಾಗುವ ಆತಂಕವೂ ಮೂಡಿದೆ.ಇದಕ್ಕೆ ಸಂಬಂಧಪಟ್ಟಂತೆ ಆತಂಕ ಅನಗತ್ಯ ಎಂದು ಅನುಭವಿಗಳು ಹೇಳಿದ್ದಾರೆ. ಈ ನಡುಗುಡ್ಡೆಯನ್ನು ಪ್ರವಾಸೋದ್ಯಮಕ್ಕೆ ಬಳಸಿಕೊಳ್ಳಲು ಅವಕಾಶ ಇದ್ದು ಈ ಕುರಿತು ಗಮನಹರಿಸುವ ಅಗತ್ಯವಿದೆ.
ಎಲ್ಲೆಲ್ಲಿ?
ಸೌಪರ್ಣಿಕಾ, ವಾರಾಹಿ, ಪಂಚಗಂಗಾವಳಿ ಮೊದಲಾದ ನದಿಗಳಲ್ಲಿ ಕಾಂಡ್ಲಾ ನಡುಗುಡ್ಡೆ ಇದೆ. ನದಿ ಮಧ್ಯದಲ್ಲಿ ಪ್ರಾಕೃತಿಕವಾಗಿ ನಡುಗುಡ್ಡೆ ಸೃಷ್ಟಿಯಾಗಿದ್ದರೆ ನದಿಬದಿಯಲ್ಲಿ ಅರಣ್ಯ ಇಲಾಖೆ ವತಿಯಿಂದ ನೆಟ್ಟು ಬೆಳೆಸಲಾಗಿದೆ. ಬಬ್ಬುಕುದ್ರು, ಕನ್ನಡಕುದ್ರು, ರಾಜಾಡಿ ಹೊಳೆ, ಪಂಚಗಂಗಾವಳಿ, ಹೆಮ್ಮಾಡಿ, ಸಂಗಮ್ ಸೇತುವೆ ಬಳಿ, ಅರಾಟೆ, ಹೆಮ್ಮಾಡಿ ತೊಪು, ಬುಗುರಿಕಡು, ಕೋಡಿ ಚಕ್ರೇಶ್ವರಿಯಿಂದ ಜಟ್ಟಿಗೇಶ್ವರ ದೇವಸ್ಥಾನವರೆಗೆ, ಮೂಡ್ಲಕಟ್ಟೆ ಮೊದಲಾದೆಡೆ ಕಾಂಡ್ಲಾ ಪ್ರದೇಶ ಇದೆ.
ಮತ್ಸ್ಯ ಸಂತತಿ
ಕಾಂಡ್ಲಾ ಬೇರಿನಿಂದಾಗಿ ದಿಬ್ಬಗಳು ಗಟ್ಟಿಯಾಗುತ್ತವೆ. ನದಿಕೊರೆತ ಕಡಿಮೆಯಾಗುತ್ತದೆ. ತೀರ ಪ್ರದೇಶ ರಕ್ಷಣೆಗೆ ಅನುಕೂಲ. ಕಾಂಡ್ಲಾ ಬುಡದಲ್ಲಿ ತಾಳಿc ಜಾತಿಯ ಮೀನು ಮರಿ, ಏಡಿ ಸಂತಾನೋತ್ಪತ್ತಿಯಾಗುತ್ತದೆ. ಸಮುದ್ರದ ನೀರಿನ ಉಬ್ಬರ ಇಳಿತ ಸಂದರ್ಭ ನೀರಿನ ವೇಗವನ್ನು ನಿಯಂತ್ರಿಸಲು ಇದು ಸಹಕಾರಿ.
ಆರೋಪ
ಅರಣ್ಯ ಇಲಾಖೆಯವರು ನದಿ ಬದಿಯಲ್ಲಿ ಕಾಂಡ್ಲಾ ಗಿಡ ಬೆಳೆಸುವ ಬದಲು ನದಿಮಧ್ಯದಲ್ಲಿ ಬೆಳೆಸಿದ್ದಾರೆ. ವಿನಾಯಕ, ಕೋಡಿ, ಫೆರ್ರಿರಸ್ತೆ ಬಳಿ ಎಕರೆಗಟ್ಟಲೆ ಪ್ರದೇಶದಲ್ಲಿ 60 ಸಾವಿರ ಕಾಂಡ್ಲಾ ಗಿಡ ನೆಟ್ಟು ಬೆಳೆಸಲಾಗಿದೆ. ಈಗ ಉಪಗ್ರಹದಲ್ಲಿ ಹಸಿರು ಕಾಣುವ ಕಾರಣ ಸಿಆರ್‌ಝೆಡ್ ಕಾಯ್ದೆ ಪ್ರಕಾರ ಗಿಡಗಳನ್ನು ಕಡಿಯಲು ಕಷ್ಟ ಎಂದು ನಿರಾಕರಿಸಲಾಗುತ್ತಿದೆ. ಅಸಲಿಗೆ ಅರಣ್ಯ ಇಲಾಖೆ ನದಿ ಬದಿಯಲ್ಲಿ ಮಾತ್ರ ನೆಡಬೇಕು ವಿನಾ ನದಿ ಮಧ್ಯದಲ್ಲಿ ನೆಡಬಾರದು.
ಗ್ರೀನ್‌ವಾಲ್ ಯೋಜನೆ
2008ರಲ್ಲಿ ಅರಣ್ಯ ಇಲಾಖೆ ಗ್ರೀನ್‌ವಾಲ್ ಯೋಜನೆಯಡಿ ಕಾಂಡ್ಲವನ ಪೋಷಣೆ ಆರಂಭಿಸಿತ್ತು. ಜಿಲ್ಲೆಯಲ್ಲಿ ಅಂದಾಜು 900 ಹೆಕ್ಟೇರ್ ಕಾಂಡ್ಲಕಾಡು ರಚಿಸಲಾಗಿದೆ. ಕುಂದಾಪುರ ತಾಲೂಕಿನಲ್ಲಿ ಕಳೆದ 25 ವರ್ಷಗಳಿಂದ ಕಾಂಡ್ಲವನ ರಚನೆ, ವಿಸ್ತರಣೆ ನಡೆಯುತ್ತಿದೆ.
ಕಾಂಡ್ಲಾ ಬೆಳೆದ ಪ್ರದೇಶ ದ್ವೀಪದಂತಿರುವ ಕಾರಣ ಪ್ರವಾಸೋದ್ಯಮಕ್ಕೆ ಅವಕಾಶ ಇದೆ. ಈಗಾಗಲೇ ತಮಿಳುನಾಡಿನ ಚಿದಂಬರಂನಲ್ಲಿ ಇಂತಹ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದಾರೆ. ಕುಂದಾಪುರದಲ್ಲೂ ನದಿ ತೀರ, ಕಡಲತೀರ, ಕಾಂಡ್ಲಾವನ ಪ್ರದೇಶವನ್ನು ಒಟ್ಟಾಗಿ ಪ್ರವಾಸೋದ್ಯಮಕ್ಕೆ ಒತ್ತು ನೀಡಬಹುದು.
ಆತಂಕ
ನದಿಮಧ್ಯದಲ್ಲಿ ಗಿಡಗಳು ಬೆಳೆಸುವಾಗ ಸೂಕ್ತ ಪ್ರದೇಶದ ಆಯ್ಕೆ ಮಾಡಿಲ್ಲ. ಮರಳಿನ ಮೇಲೆಯೇ ನೆಡಲಾಗಿದೆ. ಎಲೆಗಳು ಉದುರಿ ನದಿ ನೀರು ಕಲುಷಿತವಾಗುವುದಷ್ಟೇ ಅಲ್ಲ ಕಲ್ಮಶದ ವಾಸನೆಯೂ ಬರುತ್ತದೆ. ಮರಳಿನಲ್ಲಿ ನೆಟ್ಟ ಕಾರಣ ಎರಡು ಮೂರು ವರ್ಷಗಳಲ್ಲಿ ಗಿಡಗಳೇ ನದಿಯಲ್ಲಿ ಬೀಳಬಹುದು. ನದಿ ನೀರಿನ ಹರಿವಿನ ಪಾತ್ರ ಬದಲಾಗುತ್ತದೆ. ಇದು ತೀರವಾಸಿಗಳಿಗೆ ಆತಂಕ ಕಟ್ಟಿಟ್ಟ ಬುತ್ತಿ. ತಲ್ಲೂರು ಹೆದ್ದಾರಿ ಸೇತುವೆ ಬಳಿ ಹೊಳೆಯನ್ನು ಮುಕ್ಕಾಲುಪಾಲು ಕಾಂಡ್ಲವನ ಆವರಿಸಿದ ಕಾರಣ ಮೀನುಗಾರಿಕೆ ಮೇಲೆ ಪರಿಣಾಮ ಉಂಟಾಗಿದೆ. ನದಿದಂಡೆಯಲ್ಲಿ ಹುಲುಸಾಗಿ ಬೆಳೆಯಬೇಕಿದ್ದ ಕಾಂಡ್ಲವನ ನದಿಮಧ್ಯೆ ಬೆಳೆದದ್ದೇ ಅಸಹಜ ಬೆಳವಣಿಗೆಯಾಗಿದ್ದು ಒಂದಷ್ಟು ಆತಂಕಗಳಿಗೆ ಕಾರಣ.
ಆತಂಕ ಇಲ್ಲ
ದೋಣಿ ಸಂಚಾರಕ್ಕೆ ಆತಂಕ ಇಲ್ಲ . ತಲೆತಲಾಂತರದಿಂದ ಇವೆ. ಇದು ನದಿಗೆ ರಕ್ಷಣೆ ನೀಡುತ್ತದೆ. ಅರಾಟೆ ಬಳಿ ಈಚೆಗೆ ಸೃಷ್ಟಿಯಾದ ನಡುಗುಡ್ಡೆ ಇದೆ.
-ರಾಮಪ್ಪ ಖಾರ್ವಿ ಗಂಗೊಳ್ಳಿ,
ಮೀನುಗಾರರು
ಭಯ ಅನಗತ್ಯ
ಹಿನ್ನೀರಿನ ಮಧ್ಯದಲ್ಲಿ ಸೃಷ್ಟಿಯಾದ ಮ್ಯಾಂಗ್ರೂವ್ ಕಾಡುಗಳು ಸಹಜವಾಗಿ ಬೆಳೆದಂತವು. ಇವುಗಳು ಸಮುದ್ರದಿಂದ ಬರುವ ನೀರಿನ ರಭಸವನ್ನು ಕಡಿಮೆ ಮಾಡುತ್ತವೆ. ನದಿಪಾತ್ರದ ಜನರಿಗೆ ರಕ್ಷಣೆಯನ್ನು ನೀಡುತ್ತವೆೆ. ನದಿ ಬದಿಯಲ್ಲಿ ನೆಟ್ಟಂತಹ ಗಿಡಗಳು ನದಿ ಕೊರೆತ ತಡೆಯುತ್ತವೆ. ಇವುಗಳಿಂದ ತೊಂದರೆಯಾದ ಉದಾಹರಣೆ ಈ ವರೆಗೆ ಲಭಿಸಿಲ್ಲ. ಆದ್ದರಿಂದ ಭಯ ಅನಗತ್ಯ.
-ಪ್ರಭಾಕರ ಕುಲಾಲ್,
ವಲಯ ಅರಣ್ಯಾಧಿಕಾರಿ, ಕುಂದಾಪುರ
ಗಮನಕ್ಕೆ ತರಲಾಗಿದೆ
ನಡುಗುಡ್ಡೆಯಲ್ಲಿರುವ ಕಾಂಡ್ಲ ಗಿಡಗಳನ್ನು ತೆರವುಗೊಳಿಸುವ ಕುರಿತು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ನಡುಗುಡ್ಡೆಯನ್ನು ಪ್ರವಾಸಿತಾಣವಾಗಿ ಮಾಡಬಹುದು. ಈ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬಹುದು. ಅರಣ್ಯ ಇಲಾಖೆ ನದಿಬದಿಯಲ್ಲಿ ನೆಡಬೇಕಾದ ಗಿಡಗಳನ್ನು ಮರಳು ತುಂಬಿದ ನದಿ ಮಧ್ಯೆ ನೆಟ್ಟು ಆತಂಕ ಸೃಷ್ಟಿಗೆ ಕಾರಣವಾಗಿದೆ. ಇದು ಭವಿಷ್ಯದಲ್ಲಿ ಅಪಾಯ ತಂದೊಡ್ಡುವ ಸಾಧ್ಯತೆಯಿದೆ. ನದಿ ನೀರಿನ ಹರಿವು ಬದಲಾಗಲಿದೆ.
-ಕೆಂಚನೂರು ಸೋಮಶೇಖರ ಶೆಟ್ಟಿ,
ಸಾಮಾಜಿಕ ಹೋರಾಟಗಾರರು
ಪ್ರಾಕೃತಿಕ
ನಡುಗುಡ್ಡೆಯನ್ನು ಪ್ರವಾಸೋದ್ಯಮಕ್ಕೆ ಬಳಸಿಕೊಳ್ಳಲು ಅವಕಾಶ ಇದ್ದು ಈ ಕುರಿತು ಗಮನಹರಿಸುವ ಅಗತ್ಯ.
-ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
MUST WATCH
ಹೊಸ ಸೇರ್ಪಡೆ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Puttur: ಮಹಿಳೆಯ ಮಾನಭಂಗಕ್ಕೆ ಯತ್ನ; ಆರೋಪಿಗೆ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.