Udupi: ಬಸ್ ಚಾಲನೆ ವೇಳೆ ಹೃದಯಾಘಾತ… ಚಾಲಕನ ಸಮಯ ಪ್ರಜ್ಞೆಯಿಂದ ಪಾರಾದ ಶಾಲಾ ಮಕ್ಕಳು
Team Udayavani, Jun 5, 2024, 6:28 PM IST
ಉಡುಪಿ: ಶಾಲಾ ಬಸ್ ಚಲಾಯಿಸುತ್ತಿರುವಾಗಲೇ ಚಾಲಕನಿಗೆ ಲಘು ಹೃದಯಾಘಾತವಾಗಿದ್ದು, ಆತನ ಸಮಯಪ್ರಜ್ಞೆಯಿಂದ ವಿದ್ಯಾರ್ಥಿಗಳು ಪಾರಾದ ಘಟನೆ ಪೆರಂಪಳ್ಳಿ ಸಮೀಪ ಬುಧವಾರ ಸಂಜೆ ವೇಳೆ ನಡೆದಿದೆ.
ಬಸ್ ಚಾಲಕ ಮಣಿಪಾಲದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಾಲಕ ಪೇತ್ರಿ ನಿವಾಸಿ ಆಲ್ವಿನ್ ಡಿ’ಸೋಜಾ (53) ಅವರು ಬ್ರಹ್ಮಾವರದ ಖಾಸಗಿ ಶಾಲೆಯಿಂದ ಪೆರಂಪಳ್ಳಿ ಮಾರ್ಗವಾಗಿ ಮಣಿಪಾಲದತ್ತ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅವರಿಗೆ ಲಘು ಹೃದಯಾಘಾತವಾಗಿದ್ದು, ಕೂಡಲೇ ವಾಹನವನ್ನು ರಸ್ತೆಯ ಬದಿಗೆ ತಂದು ನಿಲ್ಲಿಸಿದ್ದಾರೆ. ಈ ವೇಳೆ ಎದುರಿಗಿದ್ದ ಕಂಬವೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಬಸ್‌ನ ಎದುರು ಭಾಗ ಹಾಗೂ ಗ್ಲಾಸ್‌ಗೆ ಹಾನಿಯಾಗಿದೆ.
ಸಣ್ಣಪುಟ್ಟ ಗಾಯಗಳೊಂದಿಗೆ ವಿದ್ಯಾರ್ಥಿಗಳು ಪಾರು
ಬಸ್ಸಿನಲ್ಲಿ 50ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದರು ಎನ್ನಲಾಗಿದೆ. ಬಸ್ ಚಾಲಕ ಕೂಡಲೇ ನಿಲ್ಲಿಸಿದ ಪರಿಣಾಮ ದೊಡ್ಡ ಅವಘಡವೊಂದು ತಪ್ಪಿದೆ. ಘಟನೆಯಿಂದಾಗಿ ಮಕ್ಕಳು ಕೆಲವು ಕಾಲ ಭಯಭೀತರಾಗಿದ್ದರು. ಕೂಡಲೇ ಬಸ್‌ನಲ್ಲಿದ್ದ ಸಹಾಯಕರು ಶಾಲೆಯ ಮುಖ್ಯಸ್ಥರು ಹಾಗೂ ವಿದ್ಯಾರ್ಥಿಗಳ ಪೋಷಕರಿಗೆ ಮಾಹಿತಿ ನೀಡಿದರು.
ಸ್ಥಳೀಯರ ಸಹಕಾರದಿಂದ ಬಸ್ ಚಾಲಕನನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅನಂತರ ಸಂಸ್ಥೆಯ ಮತ್ತೂಂದು ಬಸ್ ಆಗಮಿಸಿ ವಿದ್ಯಾರ್ಥಿಗಳನ್ನು ಅವರ ಮನೆಗೆ ತಲುಪಿಸಲಾಯಿತು. ಗಾಯಾಳು ವಿದ್ಯಾರ್ಥಿಗಳಿಗೆ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು.
ಅನುಭವಿ ಚಾಲಕ
ಬಸ್ ಚಾಲಕ 4 ವರ್ಷಗಳಿಂದ ಸಂಸ್ಥೆಯ ಶಾಲಾ ಬಸ್ ಚಾಲಕರಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದರು. ಸರಳ ಸಜ್ಜನ ವ್ಯಕ್ತಿಯಾಗಿದ್ದು, ಇದುವರೆಗೆ ಇಂತಹ ಯಾವುದೇ ಘಟನೆಗಳು ನಡೆದಿರಲಿಲ್ಲ. ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ ಎಂದು ಶಾಲೆಯ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.
ಮಣಿಪಾಲ ಪೊಲೀಸರು ಘಟನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖಾಸಗಿ ಬಸ್ ಚಾಲಕರಿಗೆ ಬೇಕಿದೆ ಆರೋಗ್ಯ ತಪಾಸಣೆ
ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿದ್ದು, ಚಾಲಕರಲ್ಲಿಯೂ ಈ ಸಮಸ್ಯೆ ಕಂಡುಬರುತ್ತಿದೆ. ಶಾಲಾ ವಾಹನ ಚಾಲಕರನ್ನು ಸಂಸ್ಥೆಯ ವತಿಯಿಂದ ಕಡ್ಡಾಯವಾಗಿ ಕನಿಷ್ಠ 6 ತಿಂಗಳಿಗೊಮ್ಮೆಯಾದರೂ ಆರೋಗ್ಯ ತಪಾಸಣೆಗೆ ಒಳಪಡಿಸಬೇಕು. ಹಿರಿಯ ಚಾಲಕರು ಅನುಭವಿಗಳಾದರೂ ಅನಾರೋಗ್ಯ ಸಮಸ್ಯೆಗಳೂ ಉಂಟಾಗುವ ಸಾಧ್ಯತೆಗಳಿರುತ್ತವೆ ಈ ಬಗ್ಗೆ ಶಾಲಾಡಳಿತ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಮಕ್ಕಳ ಪೋಷಕರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
High Court: ಮತದಾರರಿಗೆ ಅನುದಾನ ಆಮಿಷ; ನಡ್ಡಾ ವಿರುದ್ಧದ ಪ್ರಕರಣ ರದ್ದು
Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್. ಅಶೋಕ್ ಆಗ್ರಹ
MUDA; 50:50 ಹಂಚಿಕೆ ರದ್ದು ತೀರ್ಮಾನ; ನ್ಯಾ| ದೇಸಾಯಿ ಆಯೋಗದ ವರದಿ ಬಳಿಕ ನಿವೇಶನ ವಾಪಸ್
Nagpur: ರಾಹುಲ್ ಕಾರ್ಯಕ್ರಮದಲ್ಲಿ ಖಾಲಿ ಸಂವಿಧಾನ ಪುಸ್ತಕ ಹಂಚಿಕೆ: ಬಿಜೆಪಿ ಆರೋಪ
Pollution: ವಾಯುಮಾಲಿನ್ಯ ನಿಯಂತ್ರಣ ಸರಕಾರ ಇಚ್ಛಾಶಕ್ತಿ ಪ್ರದರ್ಶಿಸಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.