ಕರಾವಳಿಗರಿಗೆ ತಂಪೆರೆಯುವ ರಸ್ತೆ ಬದಿ ಜ್ಯೂಸ್, ಹಣ್ಣು ಮಾರಾಟ ಅಂಗಡಿಗಳು !
Team Udayavani, Apr 1, 2019, 6:30 AM IST
ಕಾಪು : ಕರಾವಳಿಯಲ್ಲಿ ಬಿಸಿಲಿನ ಬೇಗೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತಿದೆ. ಬಿಸಿಲಿನ ಝಳಕ್ಕೆ ಮೈ – ಮುಖವೆಲ್ಲ ಬೆವರು ತೊಟ್ಟಿಕ್ಕುತ್ತಿದ್ದು ತಂಪಿನ ವಾತಾವರಣಕ್ಕಾಗಿ ಜನ ಹಾತೊರೆಯುವಂತಾಗಿದೆ. ತಂಪಿಗಾಗಿ ಹಾತೊರೆಯುವ ಜನರಿಗೆ ಹೆದ್ದಾರಿ ಬದಿಯಲ್ಲಿ ಸಿಗುವ ಕಬ್ಬು ಜ್ಯೂಸ್, ಕಲ್ಲಂಗಡಿ ಜ್ಯೂಸ್ ಮತ್ತು ಎಳನೀರು ಮಾರಾಟ ಅಂಗಡಿಗಳು ಅಮೃತ ಸಂಜೀವಿನಿಯಂತೆ ಕೈಹಿಡಿಯುತ್ತಿವೆ.
ಕಾಪು ತಾಲೂಕಿನ ಮೂಲಕ ಹಾದು ಹೋಗುವ ಹೆಜಮಾಡಿಯಿಂದ ಉದ್ಯಾವರದರೆಗಿನ ರಾ. ಹೆ. 66ರಲ್ಲಿ ಇಕ್ಕೆಲಗಳಲ್ಲಿ 10 ಕ್ಕೂ ಹೆಚ್ಚು ತಾಜಾ ಕಬ್ಬಿನ ಜ್ಯೂಸ್ ಅಂಗಡಿಗಳಿದ್ದು, ವಿವಿಧ ಗ್ರಾಮಗಳನ್ನು ಸಂಪರ್ಕಿಸುವ ಒಳ ರಸ್ತೆಗಳಲ್ಲಿಯೂ ಸುಮಾರು 10ಕ್ಕೂ ಅಧಿಕ ಕಬ್ಬಿನ ಜ್ಯೂಸ್ ಅಂಗಡಿಗಳಿವೆ. ಇದರೊಂದಿಗೆ ರಾ. ಹೆ. 66 ಮತ್ತು ಮತ್ತು ಗ್ರಾಮೀಣ ರಸ್ತೆಗಳಲ್ಲಿ ಇರುವ ಎಳನೀರು ಮಾರಾಟದ ಅಂಗಡಿಗಳು, ಕಲ್ಲಂಗಡಿ ಮಾರಾಟದ ಅಂಗಡಿಗಳು ಕೂಡಾ ಜನರನ್ನು ತಮ್ಮತ್ತ ಸೆಳೆಯುತ್ತಿವೆ.
25ಕ್ಕೂ ಹೆಚ್ಚು ಕಬ್ಬಿನ ಜ್ಯೂಸ್ ಅಂಗಡಿಗಳು
ಉಡುಪಿ, ಹೆಜಮಾಡಿ, ಮೂಲ್ಕಿ ಮತ್ತು ಮಂಗಳೂರು ಮೂಲದ ಉದ್ಯಮಿಗಳು ರಾಷೀrÅಯ ಹೆದ್ದಾರಿ ಮತ್ತು ಗ್ರಾಮೀಣ ರಸ್ತೆಗಳ ಬದಿಯಲ್ಲಿ ಅಲ್ಲಲ್ಲಿ ಕಬ್ಬಿನ ಜ್ಯೂಸ್ ಹಾಲಿನ ಘಟಕವನ್ನು ತೆರೆದಿದ್ದಾರೆ. ಸುಮಾರು 20ಕ್ಕೂ ಹೆಚ್ಚು ತಾಜಾ ಕಬ್ಬಿನ ಜ್ಯೂಸ್ ಮಾಡಿಕೊಡುವ ಸ್ಟಾಲ್‌ಗಳಿದ್ದು ಇಲ್ಲಿ ಉತ್ತರ ಪ್ರದೇಶ ಮೂಲದ ಕಾರ್ಮಿಕರು ಬೆವರಿಳಿಸಿ, ಜ್ಯೂಸ್ ತಯಾರಿಸಿ ಕರಾವಳಿಗರಿಗೆ ನೀಡುತ್ತಿದ್ದಾರೆ. ಕಬ್ಬಿನ ಜ್ಯೂಸ್ ತೆಗೆಯುವ ಯಂತ್ರ, ಅದಕ್ಕೆ ಬೇಕಾದ ಇಂಧನ ಮತ್ತು ಕಬ್ಬನ್ನು ಉದ್ಯಮಿಗಳೇ ಪೂರೈಸುತ್ತಿದ್ದು, ಕಾರ್ಮಿಕರಿಗೆ ವಸತಿ ಸಹಿತ ಮಾಸಿಕ ವೇತನವನ್ನು ನೀಡಲಾಗುತ್ತದೆ.
ಜ್ಯೂಸ್‌ಗಿಂತ ಹಣ್ಣಿಗೆ ಹೆಚ್ಚಿನ ಬೇಡಿಕೆ
ಹೆದ್ದಾರಿ ಬದಿ ಮತ್ತು ಗ್ರಾಮೀಣ ರಸ್ತೆಗಳ ಬದಿಯಲ್ಲಿ ಕಾಣಸಿಗುವ ಕಲ್ಲಂಗಡಿ ಮತ್ತು ಎಳನೀರು ಮಾರಾಟದ ಅಂಗಡಿಗಳಲ್ಲೂ ಉತ್ತಮ ವ್ಯಾಪಾರ ಕಂಡು ಬರುತ್ತಿದೆ. ಅತ್ಯಂತ ಪೌಷ್ಠಿಕಾಂಶ ಭರಿತ ಮತ್ತು ಸೆಕೆಯ ಭೀತಿಯನ್ನು ದೂರ ಮಾಡಿ, ಶರೀರದ ಉಷ್ಣಾಂಶವನ್ನು ಕುಗ್ಗಿಸಿ, ನೀರಿನ ಅಂಶವನ್ನು ಹೆಚ್ಚಿಸುವ ರೋಗ ನಿರೋಧಕ ಶಕ್ತಿ ಕಲ್ಲಂಗಡಿ ಹಣ್ಣಿನಲ್ಲಿದೆ. ಅದರೊಂದಿಗೆ ಇದು ಆರೋಗ್ಯ ಸಂಬಂಧಿ ಸಮಸ್ಯೆಗೂ ಪರಿಹಾರ ಒದಗಿಸುತ್ತದೆ ಎಂಬ ನಂಬಿಕೆಯಿದೆ. ಅದಕ್ಕಿಂತಲೂ ಮುಖ್ಯವಾಗಿ ಒಂದು ಲೋಟ ಜ್ಯೂಸ್‌ಗೆ 20 – 30 ರೂ. ಕೊಡಬೇಕಾದ ಅನಿವಾರ್ಯತೆಯಿದ್ದು, ಅದರ ಬದಲು ಅಷ್ಟೇ ದರಕ್ಕೆ ಹಣ್ಣು ಸಿಗುವುದರಿಂದ ಮನೆಗೆ ಕೊಂಡೊಯ್ದು ಮನೆ ಮಂದಿಯೆಲ್ಲಾ ಒಟ್ಟಿಗೆ ಕುಳಿತು ತಿನ್ನಬಹುದಲ್ವಾ ಎಂಬ ಕಾರಣದಿಂದಾಗಿ ಹಣ್ಣಿಗೆ ಬೇಡಿಕೆ ಹೆಚ್ಚಾಗಿದೆ.
ಕಲ್ಲಂಗಡಿ ಹಣ್ಣಿಗೆ ಹೆಚ್ಚು ಬೇಡಿಕೆ ಯಾಕೆ ?
ಇತೀ¤ಚಿನ ದಿನಗಳಲ್ಲಿ ಹೆಚ್ಚಾಗಿ ಕರಾವಳಿಯ ರೈತರು ತಮ್ಮ ಕೃಷಿ ಗದ್ದೆಯಲ್ಲೇ ಸಾವಯವ ಗೊಬ್ಬರವನ್ನು ಬಳಸಿ ಕಲ್ಲಂಗಡಿ ಹಣ್ಣನ್ನು ಬೆಳೆಸುತ್ತಿದ್ದಾರೆ. ಪೇಟೆಯಲ್ಲಿ ಸಿಗುವ ಹಣ್ಣಿಗಿಂತ ಹಳ್ಳಿಯಲ್ಲಿ ಬೆಳೆಯುವ ಹಣ್ಣುಗಳು ರುಚಿಕರವಾಗಿರುವುದರಿಂದ ಮತ್ತು ರೈತರು ವ್ಯಾಪಾರಿಗಳಿಗೆ ಕಡಿಮ ದರದಲ್ಲಿ ಹಣ್ಣನ್ನು ಪೂರೈಸಿ, ಗ್ರಾಹಕರಿಗೂ ಕಡಿಮೆ ಬೆಲೆಯಲ್ಲಿ ಸಿಗುವಂತೆ ನೋಡಿಕೊಳ್ಳುತ್ತಿರುವುದರಿಂದ ಕಲ್ಲಂಗಡಿ ಹಣ್ಣಿಗೆ ಹೆಚ್ಚಿನ ಬೇಡಿಕೆ ಕಂಡು ಬರುತ್ತಿದೆ.
ಎಳನೀರಿಗೆ ಭಾರೀ ಬೇಡಿಕೆ
ಇತೀ¤ಚಿನ ದಿನಗಳಲ್ಲಿ ರಸ್ತೆ ಬದಿಯ ಅಂಗಡಿಗಳಲ್ಲಿ ಎಲ್ಲಾ ವಿಧದ ಹಣ್ಣುಗಳ ಜ್ಯೂಸ್‌ಗಳು ಕೂಡಾ ಸಿಗುತ್ತಿದ್ದರೂ ಕೂಡಾ ವಿಶೇಷವಾಗಿ ಸಿಗುವ ಎಳನೀರಿಗೆ ಜನರಿಂದ ಭಾರೀ ಬೇಡಿಕೆ ವ್ಯಕ್ತವಾಗುತ್ತಿದೆ. ಪೇಟೆಯಲ್ಲಿ ಇರುವ ಜ್ಯೂಸ್ ಅಂಗಡಿಗಳಲ್ಲಿ ಸಿಗಲಾರದ ಎಳನೀರು ಜ್ಯೂಸ್‌ಗಳು ರಸ್ತೆ ಬದಿಯಲ್ಲಿ ಇರುವ ಸಣ್ಣಪುಟ್ಟ ಗೂಡಂಗಡಿ ಮಾದರಿಯ ಅಂಗಡಿಗಳಲ್ಲಿ ಸಿಗುತ್ತಿರುವುದರಿಂದ ಪೇಟೆಗೆ ಹೋಗಿ ಜ್ಯೂಸ್ ಕುಡಿಯುವವರ ಸಂಖ್ಯೆಯಲ್ಲಿ ಇಳಿಮುಖವಾಗಿದೆ.
ಸೇವನೆಗೆ ಮುನ್ನ ಎಚ್ಚರ ವಹಿಸಿ
ಕೆಲವೊಂದು ಪ್ರದೇಶಗಳಲ್ಲಿ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದೇ, ಶುಚಿತ್ವಕ್ಕೂ ಗಮನ ಹರಿಸದೇ ರಸ್ತೆ ಬದಿಯಲ್ಲಿ ಅಂಗಡಿಗಳನ್ನು ಇಟ್ಟುಕೊಂಡು, ತಾಜಾ ಜ್ಯೂಸ್ ಮಾಡಿಕೊಡುವ ಅಂಗಡಿಗಳು ಹೆಚ್ಚಾಗಿವೆ. ಆದರೆ ಇಲ್ಲಿ ನೀಡಲಾಗುವ ಜ್ಯೂಸ್‌ಗಳನ್ನು ಕುಡಿಯುವ ಸಂದರ್ಭದಲ್ಲಿ ಗ್ರಾಹಕರು ಗಮನ ಹರಿಸಬೇಕು. ಮಾತ್ರವಲ್ಲದೇ ಮನೆ ಮನೆಗೆ ಬರುವ ಐಸ್ ಕ್ಯಾಂಡಿ ಮಾರಾಟಗಾರರ ಬಗ್ಗೆಯೂ ಎಚ್ಚರ ವಹಿಸುವುದರ ಅಗತ್ಯವಿದೆ. ರಸ್ತೆ ಬದಿ ಸಿಗುವ ಆಹಾರ ಪದಾರ್ಥ, ಮುಕ್ತ ವಾತಾವರಣದಲ್ಲಿ ಸಿದ್ಧ ಪಡಿಸುವ ಪಾನೀಯ, ಪಾನೀಯದ ಅಂಗಡಿಗಳಲ್ಲಿ ಬಳಸುವ ನೀರು, ಐಸ್ ಸಹಿತ ಇತರ ವಸ್ತುಗಗಳ ಬಗ್ಗೆಯೂ ಎಚ್ಚರ ವಹಿಸುವುದು ಅತ್ಯಗತ್ಯ.
– ರವಿ ಪ್ರಕಾಶ್, ಪರಿಸರ ಎಂಜಿನಿಯರ್, ಕಾಪು ಪುರಸಭೆ
ಶುಚಿತ್ವಕ್ಕೆ ಆದ್ಯತೆ ನೀಡುತ್ತೇವೆ
ಉದ್ಯೋಗ ಅರಸಿಕೊಂಡು ಬರುತ್ತಿರುವ ನಮಗೆ ಕಬ್ಬಿನ ಹಾಲಿನ ಅಂಗಡಿ ತೆರೆದು ನೀಡುವ ಮೂಲಕ ಮಂಗಳೂರಿನ ಉದ್ಯಮಿ ಆಶ್ರಯದಾತರಾಗಿ ಮೂಡಿ ಬಂದಿದ್ದಾರೆ. ಕಬ್ಬಿನ ಹಾಲು ತೆಗೆಯಲು ಸ್ಟಾಲ್, ಕಬ್ಬು, ಇಂಧನ ಸಹಿತ ಎಲ್ಲಾ ವ್ಯವಸ್ಥೆಗಳನ್ನು ಮಾಲಕರೇ ಮಾಡಿಕೊಡುತ್ತಾರೆ. ದಿನವಹಿ 70 ರಿಂದ 80 ಗ್ಲಾಸ್ ಜ್ಯೂಸ್ ಮಾರಾಟವಾಗುತ್ತದೆ. ನಮಗೆ ಉಚಿತ ವಸತಿ, ಊಟ ಸಹಿತವಾಗಿ ತಿಂಗಳ ವೇತನ ನೀಡುತ್ತಾರೆ. ನಮ್ಮಲ್ಲಿ ನಾವು ಶುಚಿತ್ವಕ್ಕೂ ಹೆಚ್ಚಿನ ಆದ್ಯತೆ ನೀಡುತ್ತಾ ಬರುತ್ತಿದ್ದೇವೆ.
– ಪರೀಕ್ಷಿತ್, ಕಬ್ಬಿನ ಜ್ಯೂಸ್ ಸ್ಟಾಲ್ ನಿರ್ವಾಹಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.