ಜ.15ರ ಅನಂತರ ಕಾಮಗಾರಿಗೆ ಚಾಲನೆ
ಪರ್ಕಳ ರಾ.ಹೆ. ವಿಸ್ತರಣೆ: ಭೂಸ್ವಾಧೀನಕ್ಕೆ ನೋಟಿಫಿಕೇಶನ್
Team Udayavani, Jan 10, 2021, 5:40 AM IST
ಉಡುಪಿ: ಮಲ್ಪೆ -ತೀರ್ಥಹಳ್ಳಿ ಸಂಪರ್ಕಿಸುವ ಬಹುನಿರೀಕ್ಷಿತ ಪರ್ಕಳ ಪೇಟೆಯಲ್ಲಿ ಹಾದುಹೋಗುವ ರಾ.ಹೆ. 169(ಎ) ವಿಸ್ತರಣೆ ಕಾಮಗಾರಿ ಅನೇಕ ವಿಘ್ನಗಳನ್ನು ಎದುರಿಸಿದ ಬಳಿಕ ಕೊನೆಗೂ ಜ.15ರ ಬಳಿಕ ಆರಂಭವಾಗುವ ನಿರೀಕ್ಷೆಯಿದೆ.
ಪರ್ಕಳ ರಾ.ಹೆ. 169(ಎ) ಕಾಮಗಾರಿಗೆ ಸಂಬಂಧಿಸಿ ದಂತೆ ಭೂಸ್ವಾಧೀನ ನೋಟಿಫಿಕೇಶನ್ ಆಗಿದ್ದು, ಜ.13ರಂದು ಸರ್ವೆ ಅಧಿಕಾರಿಗಳು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಕಟ್ಟಡ ಹಾಗೂ ಭೂಮಿಗೆ ಪ್ರತ್ಯೇಕ ಮೌಲ್ಯ ನಿಗದಿ ಪಡಿಸಿದ್ದು, ಆ ವರದಿಯನ್ನು ಸರ್ವೆ ಅಧಿಕಾರಿಗಳು ಪಡೆದುಕೊಳ್ಳಲಿದ್ದಾರೆ. ಈಗಾಗಲೇ ಭೂ ಸಂತ್ರಸ್ತರ ಪರಿಹಾರ ಮೊತ್ತ ಬಿಡುಗಡೆಯಾಗಿದೆ.
ಜಿಲ್ಲಾ ವ್ಯಾಪ್ತಿಯ ಮಣಿಪಾಲ, ಉಡುಪಿ, ಹೆಬ್ರಿ ಸೇರಿದಂತೆ ಒಟ್ಟು 12 ಕಡೆಗಳಲ್ಲಿ 31.987 ಕಿ.ಮೀ. ರಸ್ತೆ ಚತುಷ್ಪಥವಾಗಲಿದೆ. ಇದರಲ್ಲಿ ಈಗಾಗಲೇ ಮಣಿಪಾಲ-ಕಡಿಯಾಳಿವರೆಗಿನ ಹೆದ್ದಾರಿ ಕಾಮಗಾರಿ ಮತ್ತು ಭೂಸ್ವಾಧೀನಕ್ಕೆ ಒಟ್ಟು 99.86 ಕೋ.ರೂ. ಮಂಜೂರಾಗಿ ಕಾಮಗಾರಿ ಪೂರ್ಣಗೊಂಡಿದೆ. ಈ ಭಾಗದಲ್ಲಿ ಕೇವಲ ಶೇ.10ರಷ್ಟು ಖಾಸಗಿ ಜಾಗವಿತ್ತು. ಇದು ಒಟ್ಟು 636 ಕೋ.ರೂ. ಯೋಜನೆಯದಾಗಿದೆ.
ಕಾಮಗಾರಿ ವಿಳಂಬಕ್ಕೆ ಕಾರಣ? :
ಪರ್ಕಳದ ಕಾಮಗಾರಿಗೆ ಸಂಬಂಧಿಸಿದಂತೆ 3ಎ ನೋಟಿಫಿಕೇಶನ್ ಬಂದ ವರ್ಷದೊಳಗೆ ಭೂಸ್ವಾಧೀನಪಡಿಸಿಕೊಳ್ಳುವ ನೋಟಿಫಿಕೇಶನ್ ಆಗ ಬೇಕಿತ್ತು. ಈ ಪ್ರಕ್ರಿಯೆ ಸಮಯದಲ್ಲಿ ಲಾಕ್‌ಡೌನ್ ಆದ ಹಿನ್ನೆಲೆಯಲ್ಲಿ ಎಲ್ಲ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಇದರಿಂದಾಗಿ ಎರಡನೇ ಬಾರಿ ಈ ಪ್ರಕ್ರಿಯೆಯನ್ನು ಮಾಡಬೇಕಾಗಿದ್ದರಿಂದ ಕಾಮಗಾರಿ ಇನ್ನಷ್ಟು ವಿಳಂಬ ಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜತೆಗೆ ಪರ್ಕಳದಲ್ಲಿ ಸುಮಾರು 900 ಮೀ. ಭೂಮಿಯು ಖಾಸಗಿಗೆ ಸಂಬಂಧಿಸಿದ್ದಾಗಿದೆ. ಇದೀಗ ತಕರಾರು ನಡುವೆ ಭೂಸ್ವಾಧೀನಕ್ಕೆ ನೋಟಿಫಿಕೇಶನ್ ಆಗಿದೆ.
ಎಲ್ಲೆಲ್ಲಿ ಚತುಷ್ಪಥ? :
ಮಲ್ಪೆಯಿಂದ ತೀರ್ಥಹಳ್ಳಿಯ ವರೆಗಿನ ನಗರ ಪ್ರದೇಶಗಳಲ್ಲಿ ಚತುಷ್ಪಥ ರಸ್ತೆ ನಿರ್ಮಾಣವಾಗಲಿದೆ. ತೀರ್ಥಹಳ್ಳಿ, ರಂಜದಕಟ್ಟೆ, ಮೇಗರವಳ್ಳಿ, ನಾಲೂರು, ಗುಡ್ಡೆಕೇರೆ, ಹೊಸೂರು, ಆಗುಂಬೆ, ಸೋಮೇಶ್ವರ ಪೇಟೆ, ಸೋಮೇಶ್ವರ ಗ್ರಾಮೀಣ, ಹೆಬ್ರಿ, ಪರ್ಕಳ, ಮಣಿಪಾಲ, ಉಡುಪಿಯಲ್ಲಿ ಚತುಷ್ಪಥ ರಸ್ತೆ. ಪೆರ್ಡೂರು ಮತ್ತು ಹಿರಿಯಡ್ಕದಲ್ಲಿ ಬೈಪಾಸ್ ನಿರ್ಮಾಣವಾಗಲಿದೆ. ಉಳಿದಂತೆ ಆಗುಂಬೆ ಘಾಟಿ ಪ್ರದೇಶ, ಕೈಮರ, ಗುಡ್ಡೆಕೆರೆ, ಹೊಸೂರು, ಆಗುಂಬೆ, ತೀರ್ಥಹಳ್ಳಿ, ರಂಜದಕಟ್ಟೆ, ಮುಳಬಾಗಿಲು, ಮೇಗರವಳ್ಳಿ, ನಾಲೂರು ಗ್ರಾಮೀಣ ಭಾಗಗಳಲ್ಲಿ ದ್ವಿಪಥ ರಸ್ತೆ ನಿರ್ಮಾಣವಾಗಲಿದೆ.
ಪರ್ಕಳ ರಾ.ಹೆ. 169ಎ ಕಾಮಗಾರಿ ಜ.15ರ ಅನಂತರ ಪ್ರಾರಂಭವಾಗಲಿದೆ. ಭೂ ಸಂತ್ರಸ್ತರಿಗೆ ಪರಿಹಾರ ನಿಧಿ ಪಾವತಿಯಾಗಲಿದೆ. ಡಿಪಿಆರ್‌ನಂತೆ ರಸ್ತೆ ನಿರ್ಮಾಣವಾಗಲಿದೆ. ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ತಿಳಿಸಲಾಗುವುದು.–ಕೆ.ರಘುಪತಿ ಭಟ್, ಶಾಸಕರು, ಉಡುಪಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.