ರಜತೋತ್ಸವಕ್ಕೆ ಉಡುಪಿ ಜಿಲ್ಲೆ ಸಜ್ಜು : ಸಚಿವ ಎಸ್.ಅಂಗಾರ
Team Udayavani, Aug 16, 2022, 10:16 AM IST
ಉಡುಪಿ : ಜಿಲ್ಲೆಗೆ 25 ವರ್ಷ ಪೂರ್ಣಗೊಳ್ಳುತ್ತಿರುವುದರಿಂದ ಸಾಗಿಬಂದ ಹಾದಿ, ಜಿಲ್ಲೆಯ ಚಾರಿತ್ರಿಕ, ಸಾಂಸ್ಕೃತಿಕ, ಶೈಕ್ಷಣಿಕ, ಆರ್ಥಿಕತೆಯು ದೇಶವ್ಯಾಪಿ ಪಸರಿಸುವ ಕಾರ್ಯಕ್ಕೆ ನಾವೆಲ್ಲರೂ ಸಜ್ಜಾಗಿದ್ದೇವೆ. ದೇಶ ವನ್ನು ಚೈತನ್ಯಯುತ, ಅಭಿವೃದ್ಧಿ ಶೀಲ ರಾಷ್ಟ್ರವಾಗಿಸಲು ಕಾರ್ಯೋನ್ಮುಖ ರಾಗಬೇಕು ಎಂದು ಉಸ್ತುವಾರಿ ಸಚಿವ ಎಸ್. ಅಂಗಾರ ಕರೆ ನೀಡಿದರು.
ಅವರು ಸೋಮ ವಾರ ಅಜ್ಜರ ಕಾಡಿನ ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು.
ತ್ರಾಸಿ-ಮರವಂತೆ, ಪಡುವರಿ ಸೋಮೇಶ್ವರ ಬೀಚ್, ಒತ್ತಿನೆಣೆ ಕಡಲ ತೀರವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಸರಕಾರ 25 ಕೋ.ರೂ. ಮಂಜೂರಾತಿ ನೀಡಿದೆ. ಪಶ್ಚಿಮವಾಹಿನಿ ಯೋಜನೆಯಡಿ 204.13 ಕೋ.ರೂ.ಗಳಲ್ಲಿ 175ಕ್ಕೂ ಅಧಿಕ ಕಿಂಡಿ ಅಣೆಕಟ್ಟುಗಳ ಕಾಮ ಗಾರಿ ಕೈಗೊಳ್ಳಲಾಗಿದೆ. ಸಾಗರಮಾಲಾ ಯೋಜನೆಯಡಿ ಕೇಂದ್ರ ಹಾಗೂ ರಾಜ್ಯ ಸರಕಾರದ ಅನುದಾನದಲ್ಲಿ ಹಂಗಾರಕಟ್ಟೆಯಲ್ಲಿ 780 ಲ.ರೂ.ಗಳಲ್ಲಿ ಕೋಸ್ಟಲ್ ಬರ್ತ್ ನಿರ್ಮಾಣ ಕಾಮಗಾರಿ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಗಂಗೊಳ್ಳಿಯಲ್ಲಿ ಕೋಸ್ಟಲ್ ಬರ್ತ್ ನಿರ್ಮಾಣಕ್ಕೆ 95.88 ಕೋ.ರೂ., ಬೈಂದೂರು ವಿವಿಧೋದ್ದೇಶದ ಬಂದರು ನಿರ್ಮಾಣಕ್ಕೆ 228.78 ಕೋ.ರೂ., ಮಲ್ಪೆಯ ವಿವಿಧೋದ್ದೇಶದ ಬಂದರು ನಿರ್ಮಾಣಕ್ಕೆ 304.17 ಕೋ.ರೂ. ಕಾಮಗಾರಿಗೆ ಅನುಮೋದನೆ ದೊರಕಿದೆ ಎಂದರು.
ಯುವಜನರು ಸ್ವಾತಂತ್ರ್ಯದ ಮೌಲ್ಯ ವನ್ನು ಅರ್ಥಮಾಡಿಕೊಳ್ಳಬೇಕು. ದೇಶದ ಸಮಷ್ಠಿ ಸ್ವಾತಂತ್ರ್ಯ ಹಾಗೂ ದೇಶವಾಸಿಗಳ ವ್ಯಷ್ಟಿ ಬೆರೆತಾಗ ಅಭಿವೃದ್ಧಿಯ ದಾರಿ ಗೋಚರಿಸುತ್ತದೆ. ಇನ್ನೊಬ್ಬರ ಸ್ವಾತಂತ್ರ್ಯವನ್ನು ಗೌರವಿಸುವವನೇ ತನ್ನ ಸ್ವಾತಂತ್ರ್ಯದ ಹಕ್ಕು ಮಂಡಿಸಬಹುದು ಎಂದರು.
ಶಾಸಕ ರಘುಪತಿ ಭಟ್, ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ., ಜಿ.ಪಂ. ಸಿಇಒ ಪ್ರಸನ್ನ ಎಚ್., ಎಸ್‌ಪಿ ವಿಷ್ಣುವರ್ಧನ, ಎಡಿಸಿ ವೀಣಾ ಬಿ.ಎನ್., ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮೈಸೂರು ಎಲೆಕ್ಟ್ರಿಕ್ ಇಂಡಸ್ಟ್ರೀಸ್ ಅಧ್ಯಕ್ಷ ಕೆ. ಉದಯ ಕುಮಾರ ಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ ಕಲ್ಮಾಡಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್ ಇದ್ದರು.
ವೈಚಾರಿಕ ಸ್ವಾತಂತ್ರ್ಯ
ಇಲ್ಲಿನ ಋಷಿ ಮುನಿಗಳು ಆಧ್ಯಾತ್ಮಿಕ ಹಾಗೂ ಪಾರಮಾರ್ಥಿಕ ಚಿಂತನೆ, ಚರ್ಚೆ ನಡೆಸುತ್ತಿದ್ದರು. ಪ್ರಕೃತಿಯ ಪ್ರಯೋಜನವನ್ನು ಕಂಡುಕೊಂಡಿದ್ದ ಆಯುರ್ವೇದ, ಯೋಗ ತಜ್ಞರು ಇದ್ದರು. ನಳಂದಾ, ತಕ್ಷಶಿಲೆಯಂತಹ ವಿ.ವಿ.ಗಳಷ್ಟೇ ಅಲ್ಲದೆ, ಗ್ರಾಮ ಗ್ರಾಮದಲ್ಲೂ ಶಿಕ್ಷಣ ವ್ಯವಸ್ಥೆ ಇತ್ತು. ಲೋಹ, ಶಿಲ್ಪ ಕಲೆಗಳ ಪರಮೋಚ್ಚ ಮಟ್ಟದಲ್ಲಿ ಸಾಧನೆ ಮಾಡಿ ದೇವಾಲಯಗಳನ್ನು ಕಟ್ಟಿದ ಕಲಾ ಪರಂಪರೆ ಈ ದೇಶದಲ್ಲಿತ್ತು. ಸಂಗೀತ, ನೃತ್ಯ ಶಾಸ್ತ್ರಗಳನ್ನೇ ರಚಿಸಿದ್ದ ವಿದ್ವಾಂಸರ ಸಹಿತವಾಗಿ ಬೇರೆಲ್ಲೂ ಇಲ್ಲದ ವೈಚಾರಿಕ ಸ್ವಾತಂತ್ರ್ಯ ಭಾರತದಲ್ಲಿತ್ತು ಎಂದು ಅಂಗಾರ ಹೇಳಿದರು.
ಸಮ್ಮಾನ
ಕಾಮನ್ವೆಲ್ತ್‌ನಲ್ಲಿ ಪದಕ ವಿಜೇತ ಗುರುರಾಜ್ ಪೂಜಾರಿ ಅವರನ್ನು ಸಮ್ಮಾನಿಸಿ, 2020-21ನೇ ಸಾಲಿನಲ್ಲಿ ಎಸೆಸೆಲ್ಸಿಯಲ್ಲಿ ಸಾಧನೆ ಮಾಡಿದ 10 ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡಲಾಯಿತು. ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಿಸಲಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.