ಕೇಂದ್ರ ಸರಕಾರದ ಸಾಗರಮಾಲಾ ಯೋಜನೆ : ಹಂಗಾರಕಟ್ಟೆ – ಮಣಿಪಾಲ ಜಲಮಾರ್ಗ ಅಭಿವೃದ್ಧಿ
Team Udayavani, Aug 6, 2022, 8:49 AM IST
ಉಡುಪಿ : ಕೇರಳ, ಗೋವಾ ಮಾದರಿಯಲ್ಲಿ ಕರ್ನಾಟಕದ ಕರಾವಳಿಯಲ್ಲೂ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಭಾಗವಾಗಿ ಉಡುಪಿ ಜಿಲ್ಲೆಯ ಹಂಗಾರಕಟ್ಟೆಯಿಂದ ಮಣಿಪಾಲದವರೆಗೂ ಕೇಂದ್ರ ಸರಕಾರದ ಸಾಗರಮಾಲಾ ಯೋಜನೆಯಡಿ ಜಲಮಾರ್ಗವನ್ನು ಅಭಿವೃದ್ಧಿಪಡಿಸಲಾಗುತ್ತದೆ.
ಹಂಗಾರಕಟ್ಟೆ ಅಳಿವೆ ಮಾರ್ಗವಾಗಿ ಬೆಂಗ್ರೆ, ಕೆಮ್ಮಣ್ಣು, ಕಲ್ಯಾಣಪುರದಿಂದ ಮಣಿಪಾಲದ ವರೆಗೂ ದೋಣಿಗಳು ಸರಾಗವಾಗಿ ಬರಲು ಬೇಕಾದ ವ್ಯವಸ್ಥೆಯನ್ನು ಈ ಯೋಜನೆಯಡಿ ಮಾಡಲಾಗುತ್ತದೆ. ಸದ್ಯ ಬೆಂಗ್ರೆ, ಕೆಮ್ಮಣ್ಣು ಸುತ್ತಲಿನ ಪ್ರದೇಶದಲ್ಲಿ ಒಂದೆರಡು ಬೋಟ್ ಹೌಸ್‌ಗಳು ಓಡಾಡುತ್ತಿವೆ. ಸಮುದ್ರದ ನೀರಿನ ಉಬ್ಬರ ಇದ್ದಾಗ ಈ ಬೋಟುಗಳು ಎಲ್ಲೆಡೆ ಸರಾಗವಾಗಿ ಚಲಿಸುತ್ತವೆ. ಇಳಿತ ಇದ್ದಾಗ ಸಂಚಾರ ಕಷ್ಟವಾಗುತ್ತದೆ. ಹೀಗಾಗಿ ಸಾಗರಮಾಲಾ ಯೋಜನೆಯಡಿ ಪ್ರಮುಖವಾಗಿ ಪ್ರವಾಸೋದ್ಯಮ ಬೋಟುಗಳ ಸಂಚಾರಕ್ಕೆ ಅನುಕೂಲವಾಗುವಂತೆ ಹೂಳೆತ್ತುವ ಕಾರ್ಯ ನಡೆಯಲಿದೆ ಎಂದು ಮೀನುಗಾರಿಕೆ ಮತ್ತು ಬಂದರು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
25 ಕೋ.ರೂ.
ಇತ್ತೀಚೆಗೆ ದಿಲ್ಲಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿಯವರು ಕರಾವಳಿಯಲ್ಲಿ ಎಸ್‌ಇಝಡ್ ಮಿತಿ ಸಡಿಲಿಕೆಗೆ ಕೇಂದ್ರ ಮೀನುಗಾರಿಕೆ ಸಚಿವರ ಜತೆ ಚರ್ಚಿಸಿದ್ದರು. ಹಂಗಾರಕಟ್ಟೆ-ಮಣಿಪಾಲ ಜಲಮಾರ್ಗದ ಅಭಿವೃದ್ಧಿಯ ಬಗ್ಗೆಯೂ ಮಾತುಕತೆ ನಡೆದಿದ್ದು, ಈ ಜಲಮಾರ್ಗ ಅಭಿವೃದ್ಧಿಗೆ ಒಪ್ಪಿಗೆ ಸೂಚಿಸಲಾಗಿದೆ. ಅಂದಾಜು 25 ಕೋ.ರೂ. ಕಾಮಗಾರಿಗೆ ತಾತ್ವಿಕ ಅನುಮೋದನೆಯೂ ದೊರೆತಿದೆ ಎಂದು ಮೂಲಗಳು ಖಚಿತಪಡಿಸಿವೆ.
ಕಿಂಡಿ ಅಣೆಕಟ್ಟು ಅಡ್ಡಿ
ಹಂಗಾರಕಟ್ಟೆ-ಮಣಿಪಾಲ ಜಲಮಾರ್ಗವೂ ಬಹುತೇಕ ಸ್ವರ್ಣಾ ನದಿಯಲ್ಲೇ ಇರುವುದರಿಂದ ಹಂಗಾರಕಟ್ಟೆಯಿಂದ ಬೆಂಗ್ರೆ, ಕೆಮ್ಮಣ್ಣು ಮಾರ್ಗವಾಗಿ ಕಲ್ಯಾಣಪುರದ ವರೆಗೂ ಬೋಟುಗಳು ಸರಾಗವಾಗಿ ಬರಲಿವೆ. ಆದರೆ ಕಲ್ಯಾಣಪುರದಲ್ಲಿ ಈಗಾಗಲೇ ಒಂದು ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಿರುವುದರಿಂದ ಅಲ್ಲಿಂದ ಮಣಿಪಾಲದ (ಸ್ವರ್ಣಾ ನದಿ-ಮಣಿಪಾಲದ ಎಂಡ್‌ಪಾಯಿಂಟ್ ಕೆಳಭಾಗ) ಭಾಗಕ್ಕೆ ಬೋಟು ಸಂಚಾರ ಕಷ್ಟವಾಗಲಿದೆ. ಹೀಗಾಗಿ ಕಿಂಡಿ ಅಣೆಕಟ್ಟು ಪೂರ್ಣ ಪ್ರಮಾಣದಲ್ಲಿ ಯೋಜನೆ ಅನುಷ್ಠಾನಕ್ಕೆ ಅಡ್ಡಿಯಾಗುವ ಸಾಧ್ಯತೆಯಿದೆ. ಹಂಗಾರಕಟ್ಟೆಯಿಂದ ಕಲ್ಯಾಣಪುರ ಕಿಂಡಿ ಅಣೆಕಟ್ಟಿನ ವರೆಗೂ ಮೊದಲ ಹಂತದಲ್ಲಿ ಜಲಮಾರ್ಗದ ಅಭಿವೃದ್ಧಿ ಮಾಡುವ ಸಾಧ್ಯತೆಯಿದೆ ಎಂದು ಹೇಳಾಗುತ್ತಿದೆ.
ಮೀನುಗಾರಿಕೆ ಬೋಟುಗಳಿಗೂ ಅನುಕೂಲ
ಸಾಗರಮಾಲಾ ಯೋಜನೆಯಡಿ ಆರಂಭದಲ್ಲಿ ಪ್ರವಾಸಿ ಬೋಟುಗಳು ಸರಾಗವಾಗಿ ಓಡಾಡಲು ಅನುಕೂಲವಾಗುವಂತೆ ಹೂಳೆತ್ತುವ ಕಾರ್ಯ ನಡೆಯಲಿದೆ. ಇದಾದ ಅನಂತರದಲ್ಲಿ ನಿರ್ದಿಷ್ಟ ಸ್ಥಳಗಳಲ್ಲಿ ಬೋಟು ಲಂಗರು ಹಾಕಲು ಬೇಕಾದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಮೀನುಗಾರಿಕೆ ಬೋಟುಗಳನ್ನು ಲಂಗರು ಹಾಕಲು ಸ್ಥಳಾವಕಾಶದ ಕೊರತೆಯಿದೆ. ಹೀಗಾಗಿ ಜಲಮಾರ್ಗದ ಸಂಪೂರ್ಣ ಅಭಿವೃದ್ಧಿ ಅನಂತರ ಮೀನುಗಾರಿಕೆಯ ಬೋಟುಗಳು, ಭವಿಷ್ಯದಲ್ಲಿ ಸಣ್ಣ ಪ್ರಮಾಣದಲ್ಲಿ ವಾಣಿಜ್ಯ ಉದ್ದೇಶಿತ ಬೋಟುಗಳು ಓಡಲು ಅವಕಾಶ ಮಾಡಿಕೊಡುವ ಸಾಧ್ಯೆಯೂ ಇದೆ. ದೂರದೃಷ್ಟಿಯ ಯೋಜನೆಯೊಂದಿಗೆ ಇದನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ ಎಂದು ಮೀನುಗಾರಿಕೆ ಇಲಾಖೆಯ ಮೂಲಗಳು ತಿಳಿಸಿವೆ.
ಹಂಗಾರಕಟ್ಟೆ -ಮಣಿಪಾಲ ಜಲಮಾರ್ಗದ ಅಭಿವೃದ್ಧಿಯಿಂದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಕೇಂದ್ರ ಸರಕಾರದ ಸಾಗರಮಾಲಾ ಯೋಜನೆಯಲ್ಲಿ ಕಾಮಗಾರಿ ನಡೆಯಲಿದೆ. ತಾತ್ವಿಕ ಅನುಮೋದನೆಯೂ ಸಿಕ್ಕಿದೆ.
– ಎಸ್. ಅಂಗಾರ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆ ಸಚಿವ
– ರಾಜುಖಾರ್ವಿ ಕೊಡೇರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.