ಡಿಸಿ ಜತೆ ಮಾತುಕತೆ ಸಫಲ: ಬಿಜೆಪಿ ಧರಣಿ ಅಂತ್ಯ
Team Udayavani, Aug 31, 2017, 7:50 AM IST
ಉಡುಪಿ: ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆಯನ್ನು ಶೀಘ್ರ ಆರಂಭಿಸಬೇಕು ಹಾಗೂ ಸಾಂಪ್ರದಾಯಿಕ ಮರಳುಗಾರಿಕೆ ನಡೆಸುತ್ತಿದ್ದ ಎಲ್ಲರಿಗೂ ಅನುಮತಿ ನೀಡಬೇಕೆಂದು ಆಗ್ರಹಿಸಿ ಬುಧವಾರ ಜಿಲ್ಲಾ ಬಿಜೆಪಿ ಹಮ್ಮಿಕೊಂಡಿದ್ದ ಅಹೋರಾತ್ರಿ ಧರಣಿಯು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರ ಜತೆಗೆ ಮಾತುಕತೆ ನಡೆಸಿದ ಬಳಿಕ ಧರಣಿಯನ್ನು ಹಿಂದೆಗೆದುಕೊಳ್ಳಲಾಯಿತು. ಇದಕ್ಕೂ ಮುನ್ನ ಧರಣಿಗಾಗಿ ಉಡುಪಿ ಕ್ಲಾಕ್ ಟವರ್ ಬಳಿ ಅಳವಡಿಸಿದ್ದ ಪೆಂಡಾಲ್ ತೆರವುಗೊಳಿಸಿದ್ದ ಕಾರಣ ಬಿಜೆಪಿ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರೇ ಪ್ರತಿಭಟನೆ ನಡೆಸಿತು.
ಉಡುಪಿ ಸರ್ವಿಸ್ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಮೂಲಕ ತೆರಳಿದ ಬಿಜೆಪಿ ನಾಯಕರು, ಜನಪ್ರತಿನಿಧಿಗಳು, ಕಾರ್ಯಕರ್ತರು ಮರಳು ಗಾರಿಕೆ ಆರಂಭಿಸಬೇಕೆಂದು ಒತ್ತಾಯಿಸಿ ಪ್ರತಿಭಟಿಸಿದರು. ಆಗ ಬಿಜೆಪಿ ನಿಯೋಗದ ಜತೆ ಡಿಸಿ ಹಾಗೂ ಎಸ್‌ಪಿ ಡಾ| ಸಂಜೀವ್ ಎಂ. ಪಾಟೀಲ್ ಮಾತುಕತೆ ನಡೆಸಿದರು. ಸಾಂಪ್ರದಾಯಿಕ ಮರಳುಗಾರಿಕೆ ನಡೆಸುತ್ತಿದ್ದ ಎಲ್ಲರಿಗೂ ಅನುಮತಿ ಕೊಡುವ ಸಂಬಂಧ ಸೆ. 2ರ ಸಭೆಯಲ್ಲಿ ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ಡಿಸಿ ತಿಳಿಸಿದರು.
ಹೋರಾಟದ ಎಚ್ಚರಿಕೆ
ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ಬಿಜೆಪಿಯ ಬೃಹತ್ ಹೋರಾಟದ ಫಲವಾಗಿ ಜಿಲ್ಲೆಯ 2 ವರ್ಷಗಳ ಮರಳು ಸಮಸ್ಯೆಗೆ ಮುಕ್ತಿ ಸಿಗುತ್ತಿದೆ. ಡಿಸಿ ಹಾಗೂ ಎಸ್‌ಪಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸೆ. 2ರಂದು ಬೇಡಿಕೆ ಈಡೇರಿಸದಿದ್ದರೆ ಇದಕ್ಕಿಂತಲೂ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು. ಬಿಜೆಪಿ ಪಕ್ಷದ ಧ್ವಜವಿರುವ ಪೆಂಡಾಲ್ ತೆರವುಗೊಳಿಸಿದ ನಗರಸಭೆಯ ಪೌರಾಯುಕ್ತರ ವಿರುದ್ಧ ಬೃಹತ್ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಸಾರ್ವಜನಿಕ ಕ್ಷಮೆಗೆ ಆಗ್ರಹ
ಈ ಹೋರಾಟ ಇಂದಿಗೆ ಮಾತ್ರ ಹಿಂದೆಗೆದುಕೊಳ್ಳುತ್ತಿ ರುವುದು. ಮತ್ತೆ ಮರಳು ಸಮಸ್ಯೆ ಇತ್ಯರ್ಥವಾಗದಿದ್ದಲ್ಲಿ ಬೃಹತ್ ಹೋರಾಟ ಮಾಡಲಾಗುವುದು. ನಗರಸಭೆ ಹಾಗೂ ಜಿಲ್ಲಾಡಳಿತದ ಬಳಿ ಅಹೋರಾತ್ರಿ ಧರಣಿ ನಡೆಸಲು ಅನುಮತಿ ಕೇಳಿದ್ದರೂ ನಗರಸಭೆ ಸಂಜೆ 6 ಗಂಟೆವರೆಗೆ ಮಾತ್ರ ಅವಕಾಶ ನೀಡಿತ್ತು. ಸಚಿವರ ಮಾತು ಕೇಳಿ ಪೌರಾಯುಕ್ತರು ಪೆಂಡಾಲ್ ತೆರವುಗೊಳಿಸಿದ್ದಾರೆ. ಬುಧವಾರ ನಡೆಯುವ ನಗರಸಭೆ ಅಧಿವೇಶನದಲ್ಲಿ ಸಾರ್ವಜನಿಕ ಕ್ಷಮೆ ಕೇಳಬೇಕು, ಇಲ್ಲದಿದ್ದಲ್ಲಿ ನಗರಸಭೆಗೆ ಮುತ್ತಿಗೆ ಹಾಕಲಾಗುವುದು ಎಂದು ಮಾಜಿ ಶಾಸಕ ರಘುಪತಿ ಭಟ್ ಎಚ್ಚರಿಸಿದರು.
ಭಜನೆ, ಡ್ಯಾನ್ಸ್, ಬ್ಯಾಂಡ್
ಡಿಸಿ ಕಚೇರಿ ಎದುರು ಭಾರೀ ಸಂಖ್ಯೆಯಲ್ಲಿ ಬಿಜೆಪಿಗರು ಸೇರಿ ನಾಸಿಕ್ ಬ್ಯಾಂಡ್ ಸದ್ದಿಗೆ ಕುಣಿದರು. ಮಹಿಳಾ ನಾಯಕಿಯರಿಂದ ಭಜನೆ, ದೇಶಭಕ್ತಿ ಗೀತೆ ಹಾಡಲಾಯಿತು. “ಅಂಬಿಗಾ ನಾ ನಿನ್ನ ನಂಬಿದೆ| ಜಗದಂಬಾರಮಣ ನಾ ನಂಬಿದೆ…| ಹಾಡೂ ಕೇಳಿಬಂತು. ಮುಂಜಾಗ್ರತಾ ಕ್ರಮವಾಗಿ ಭಾರೀ ಭದ್ರತೆ ಮಾಡಲಾಗಿತ್ತು. ಪೆಂಡಾಲ್ ತೆರವುಗೊಳಿಸಿದ ಪೌರಾಯುಕ್ತರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಉಡುಪಿಯಿಂದ ಜಿಲ್ಲಾಧಿಕಾರಿವರೆಗೆ ಸುಮಾರು 6.5 ಕಿ.ಮೀ. ಪಾದಯಾತ್ರೆಯಲ್ಲಿ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ನಾಯಕರಾದ ಮಟ್ಟಾರ್ ರತ್ನಾಕರ ಹೆಗ್ಡೆ, ರಘುಪತಿ ಭಟ್, ಯಶಪಾಲ್ ಸುವರ್ಣ, ಕುಯಿಲಾಡಿ ಸುರೇಶ್ ನಾಯಕ್, ವೀಣಾ ಕೆ. ಶೆಟ್ಟಿ, ರಶ್ಮಿತಾ ಬಾಲಕೃಷ್ಣ ಶೆಟ್ಟಿ, ಗೀತಾಂಜಲಿ ಸುವರ್ಣ, ರವಿ ಅಮೀನ್, ಗೀತಾ ಶೇಟ್, ಕುತ್ಯಾರು ನವೀನ್ ಶೆಟ್ಟಿ, ಪ್ರಭಾಕರ ಪೂಜಾರಿ, ಗಿರೀಶ್ ಅಂಚನ್ ಮತ್ತಿತರರು, ಹೊಯಿಗೆ ಹೋರಾಟಗಾರರ ಸಮಿತಿ ಪ್ರಮುಖರು ನಡೆದರು. ಮಾಜಿ ಶಾಸಕ ಲಾಲಾಜಿ ಮೆಂಡನ್, ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ನಾಯಕರಾದ ಉದಯ್ ಕುಮಾರ್ ಶೆಟ್ಟಿ, ಸೋಮಶೇಖರ್ ಭಟ್, ಬೈಕಾಡಿ ಸುಪ್ರಸಾದ್ ಶೆಟ್ಟಿ, ಶ್ಯಾಮಲಾ ಕುಂದರ್ ಪಾಲ್ಗೊಂಡಿದ್ದರು.
ನಗರಸಭೆಯಿಂದ ಪೆಂಡಾಲ್ ತೆರವು
ಬಿಜೆಪಿ ಆಯೋಜಿಸಿದ್ದ ಅಹೋರಾತ್ರಿ ಸಲುವಾಗಿ ಕ್ಲಾಕ್ ಟವರ್ ಮುಂಭಾಗ ಅಳವಡಿಸಿದ್ದ ಪೆಂಡಾಲ್‌ನ್ನು ನಗರಸಭೆ ವತಿಯಿಂದ ಸಂಜೆ ತೆರವುಗೊಳಿಸಿದರು. ನಗರಸಭೆಯ ಜೆಸಿಬಿ ಹಾಗೂ ಪಿಕಪ್ ವಾಹನದಲ್ಲಿ ಪೆಂಡಾಲ್ ಸಾಮಗ್ರಿಗಳನ್ನು ಕೊಂಡೊಯ್ಯಲಾಯಿತು. ಈ ವೇಳೆ ಕ್ಲಾಕ್ ಟವರ್ ಸುತ್ತ ಭಾರೀ ಭದ್ರತೆ ಮಾಡಲಾಗಿತ್ತು. ಇಲ್ಲಿ ಜನಸಂದಣಿ ಹೆಚ್ಚಿದ್ದು, ಸಂಜೆ ವೇಳೆ ವಾಹನ ದಟ್ಟಣೆಯು ಅಧಿಕವಾಗಿರುವುದರಿಂದ ರಾತ್ರಿ ವೇಳೆ ಪೆಂಡಾಲ್ ಹಾಕಲು ಅನುಮತಿ ನೀಡಿಲ್ಲ. ಜತೆಗೆ ಡಿಸಿ ಹಾಗೂ ಎಸ್‌ಪಿ ಸಹ ಸೂಚನೆ ನೀಡಿದ್ದು, ಆ ಬಳಿಕ ತೆರವುಗೊಳಿಸಲಾಗಿದೆ ಎಂದು ಸ್ಥಳದಲ್ಲಿದ್ದ ನಗರಸಭೆ ಅಧಿಕಾರಿಗಳು ತಿಳಿಸಿದರು.
ಸೆ. 2ರ ಸಭೆ ಬಳಿಕ ನಿರ್ಧಾರ
ಜಿಲ್ಲೆಯಲ್ಲಿ ಹಿಂದೆ ಸಾಂಪ್ರದಾಯಿಕ ಮರಳುಗಾರಿಕೆ ನಡೆಸುತ್ತಿದ್ದ 168 ಮಂದಿ ಪೈಕಿ ಈಗಾಗಲೇ 134 ಮಂದಿಗೆ ಅನುಮತಿ ನೀಡಲಾಗಿದೆ. 4 ಮಂದಿ ವಿರುದ್ಧ ಅಕ್ರಮ ಮರಳುಗಾರಿಕೆ ಪ್ರಕರಣದಡಿ ಅನುಮತಿ ನಿರಾಕರಿಸಲಾಗಿದೆ. ಇನ್ನುಳಿದ 30 ಮಂದಿಗೆ ಕೊಡಬೇಕಾ? ಅಥವಾ ಬೇಡವಾ? ಅನ್ನುವುದು ಸೆ. 2 ರಂದು 7 ಮಂದಿಯ ಮರಳು ಸಮಿತಿ ಸಭೆಯಲ್ಲಿ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು.
– ಪ್ರಿಯಾಂಕಾ ಮೇರಿ ಫ್ರಾನ್ಸಿಸ್,
ಜಿಲ್ಲಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.