ಸಾಸ್ತಾನ ಟೋಲ್: ನಿತ್ಯ ಶುಲ್ಕ ಜಟಾಪಟಿ
Team Udayavani, May 4, 2018, 6:30 AM IST
ಕೋಟ: ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಸಾಸ್ತಾನ-ಗುಂಡ್ಮಿ ಟೋಲ್‌ಗೇಟ್‌ನಲ್ಲಿ ಇದುವರೆಗೆ ಸ್ಥಳೀಯ ಸುಮಾರು ಹತ್ತು ಕಿ.ಮೀ. ವರೆಗಿನ ಎಲ್ಲ ವಾಣಿಜ್ಯ ವಾಹನಗಳಿಗೆ ಶುಲ್ಕ ರಹಿತ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿತ್ತು. ಆದರೆ ನಷ್ಟದ ಕಾರಣ ನೀಡಿ ನವಯುಗ ಕಂಪನಿ ಶುಲ್ಕ ಸಂಗ್ರಹಿಸುತ್ತಿರುವುದು ಜಟಾಪಟಿಗೆ ಕಾರಣವಾಗಿದೆ.
ಮಾತಿನ ಚಕಮಕಿ!
ಮೇ ಮೊದಲ ವಾರದಿಂದ ಎಲ್ಲಾ ವಾಣಿಜ್ಯ ವಾಹನಗಳು ಕಡ್ಡಾಯವಾಗಿ ಟೋಲ್ ಪಾವತಿಸಬೇಕು ಎಂದು ಕಳೆದ ತಿಂಗಳು ದಿಢೀರ್ ಆಗಿ ಕಂಪನಿ ನಿರ್ಧರಿಸಿತ್ತು. ಇದರಿಂದ ಆತಂಕಕ್ಕೊಳಗಾದ ಸ್ಥಳೀಯ ವಾಣಿಜ್ಯ ವಾಹನಗಳ ಮಾಲಕರು ಶುಲ್ಕ ವಿನಾಯಿತಿಗೆ ಮನವಿ ಮಾಡಿದ್ದರು. ಆದರೆ ಅದಕ್ಕೆ ಕಂಪನಿ ಒಪ್ಪದ್ದರಿಂದ ನಿತ್ಯ ಟೋಲ್ ಸಿಬಂದಿ, ವಾಹನ ಚಾಲಕರ ಮಧ್ಯೆ ಮಾತಿನ ಚಕಮಕಿ ನಡೆಯುತ್ತಿದೆ.
ಈ ಹಿಂದೆ ತಡೆ ಇತ್ತು
2017 ಫೆಬ್ರವರಿಯಲ್ಲಿ ಟೋಲ್ ಆರಂಭಿಸುವಾಗ ಸ್ಥಳೀಯರಿಂದಲೂ ಟೋಲ್ ಪಡೆಯಲು ಮುಂದಾಗಿತ್ತು. ಆಗ ಉಡುಪಿ ಜಿಲ್ಲೆಯ ಎಲ್ಲಾ ವಾಹನಗಳಿಗೆ ಉಚಿತ ಪ್ರವೇಶ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಜಾಗೃತ ಸಮಿತಿ ಪ್ರತಿಭಟನೆ, ಜಿಲ್ಲಾ ಬಂದ್ ನಡೆಸಿತ್ತು. ಜಿಲ್ಲಾಡಳಿತ ಹಾಗೂ ಹೆದ್ದಾರಿ ಇಲಾಖೆಯ ಉನ್ನತಧಿಕಾರಿಗಳು ಸಭೆ ನಡೆಸಿ ಕಾಮಗಾರಿ ಪೂರ್ಣಗೊಳ್ಳುವ ತನಕ ಟೋಲ್ ಸಂಗ್ರಹಿಸಬಾರದು. ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಆದೇಶ ನೀಡಿದ್ದರು. ಅದರಂತೆ ಇದುವರೆಗೆ ನಡೆದು ಬಂದಿತ್ತು. ಕನಿಷ್ಠ ಐದಾರು ಕಿ.ಮೀ. ವಾಹನಗಳಿಗಾದರು ಸಂಪೂರ್ಣ ಶುಲ್ಕ ವಿನಾಯಿತಿ ಮುಂದುವರಿಸಬೇಕು ಎನ್ನುವ ಬೇಡಿಕೆಯ ಪಟ್ಟನ್ನು ವಾಹನ ಚಾಲಕರು ಇಟ್ಟಿದ್ದಾರೆ.
ಯಾರಿಗೆ ಎಷ್ಟು ಶುಲ್ಕ?
ಸ್ಥಳೀಯರಿಗೆ ಕಡ್ಡಾಯವಾಗಿ ಟೋಲ್ ಆರಂಭಗೊಂಡರೂ ಬಿಳಿ ಬಣ್ಣದ ನಂಬರ್ ಪ್ಲೇಟ್ ಹೊಂದಿರುವ ಸ್ಥಳೀಯ ಖಾಸಗಿ ವಾಹನಗಳಿಗೆ ಶುಲ್ಕ ಇರುವುದಿಲ್ಲ. ಆದರೆ ಹಳದಿ ಬಣ್ಣದ ನಂಬರ್ ಪ್ಲೇಟ್‌ನ ವಾಣಿಜ್ಯ ವಾಹನಗಳಿಗೆ ಏಕ ಮುಖ ಸಂಚಾರಕ್ಕೆ 40 ರೂ., ದ್ವಿಮುಖ ಸಂಚಾರಕ್ಕೆ 60ರೂ., ತಿಂಗಳ ಪಾಸ್‌ಗೆ 1280 ರೂ. ಪಾವತಿಸಬೇಕಾಗುತ್ತದೆ ಹಾಗೂ ನಾಲ್ಕು ಚಕ್ರಕ್ಕಿಂತ ಹೆಚ್ಚು ಲಘು ವಾಣಿಜ್ಯ ವಾಹನ ಅಥವಾ ಸರಕು ವಾಹನಗಳಿಗೆ ಏಕಮುಖ ಸಂಚಾರಕ್ಕೆ 60ರೂ., ದ್ವಿಮುಖ ಸಂಚಾರಕ್ಕೆ 95ರೂ. ಅಥವಾ ಮಾಸಿಕ ಪಾಸ್‌ಗೆ 2070ರೂ ನೀಡಬೇಕಾಗುತ್ತದೆ.
ಈ ಹಿಂದೆ ಸಭೆಯಲ್ಲಿ ಕಾಮಗಾರಿ ಪೂರ್ಣಗೊಳ್ಳದೆ ಹಾಗೂ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಟೋಲ್ ಪಡೆವಂತಿಲ್ಲ ಎಂದು ತೀರ್ಮಾನಿಸಲಾಗಿತ್ತು. ಆದರೆ ಈಗ ಏಕಾಏಕಿ ಶುಲ್ಕ ಸಂಗ್ರಹ ಸರಿಯಲ್ಲ. ಸ್ಥಳೀಯರಿಗೆ ರಿಯಾಯಿತಿ ಬೇಕು. ಜಿಲ್ಲಾಡಳಿತ ಮಧ್ಯಪ್ರವೇಶಿಸಬೇಕು.
-ಸಾಸ್ತಾನ ಪ್ರತಾಪ್ ಶೆಟ್ಟಿ, ಅಧ್ಯಕ್ಷರು, ರಾ.ಹೆದ್ದಾರಿ ಜಾಗೃತಿ ಸಮಿತಿ
ಯಾವುದೇ ವಾಣಿಜ್ಯ ವಾಹನಗಳಿಗೆ ಉಚಿತ ಪ್ರವೇಶ ನೀಡಲು ಕಾನೂನಿನಂತೆ ಅವಕಾಶವಿಲ್ಲ. ಆದರೂ ಇದುವರೆಗೆ ರಿಯಾಯಿತಿ ನೀಡಿದ್ದೇವೆ. ಸ್ಥಳೀಯರ ಮನವಿಯಂತೆ ಸಂಪೂರ್ಣ ರಿಯಾಯಿತಿ ಸಾಧ್ಯವಿಲ್ಲ.
– ರವಿಬಾಬು, ಟೋಲ್ ಅಧಿಕಾರಿ
ಮನೆಯಿಂದ ಸ್ಟ್ಯಾಂಡ್ಗೆ ಬರಬೇಕಾದರೂ ಶುಲ್ಕ ಪಾವತಿಸಬೇಕಾಗುತ್ತದೆ. ಕನಿಷ್ಠ ಐದಾರು ಕಿ.ಮೀ. ವ್ಯಾಪ್ತಿಯವರಿಗೆ
ರಿಯಾಯಿತಿ ಬೇಕು ಎನ್ನುವ ಬೇಡಿಕೆಯೊಂದಿಗೆ ಟೋಲ್ ನೀಡಲು ನಿರಾಕರಿಸುತ್ತಿದ್ದೇವೆ.
-ಸಂಜೀವ ಸಾಸ್ತಾನ, ಗೂಡ್ಸ್ ರಿಕ್ಷಾ ಚಾಲಕರು
ರಾಜೇಶ ಗಾಣಿಗ ಅಚ್ಲಾಡಿ