ಅಮಾಸೆಬೈಲಿನ ಸಾಧಕ ಕೃಷಿಕ ಸತೀಶ್ ಹೆಗ್ಡೆ
ಬೆವರಹನಿಯೇ ಫಸಲಾಗಿ ಬೆಳೆಯಿತು
Team Udayavani, Dec 19, 2019, 4:22 AM IST
ಹೆಸರು: ಸತೀಶ್ ಹೆಗ್ಡೆ
ಏನೇನು ಕೃಷಿ: ಭತ್ತ, ಪಪ್ಪಾಯಿ, ಹೈನುಗಾರಿಕೆ
ಎಷ್ಟು ವರ್ಷ ಕೃಷಿ: 15
ಕೃಷಿ ಪ್ರದೇಶ: 4.5 ಎಕ್ರೆ
ಸಂಪರ್ಕ: 9008925721
ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಕೃಷಿಗೆ ಮಹತ್ವದ ಸ್ಥಾನವಿದೆ. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.
ಕುಂದಾಪುರ: ಪ್ರಕೃತಿ ನನಗೆ ಮೋಸ ಮಾಡಿಲ್ಲ. ಒಂದು ಬೆಳೆಯಲ್ಲಿ ನಷ್ಟವಾದರೂ ಇನ್ನೊಂದರಲ್ಲಿ ಫಸಲು ಕೊಟ್ಟಿದೆ ಎಂದೇ ಮಾತಿಗೆ ತೊಡಗುತ್ತಾರೆ ಅಮಾಸೆಬೈಲಿನ ಕೆಳಸುಂಕದ ಸಾಧಕ ಕೃಷಿಕ ಸತೀಶ್ ಹೆಗ್ಡೆ. ಎಲೆಕ್ಟ್ರಿಕಲ್ ಡಿಪ್ಲೋಮಾ ಓದಿ ಬಿಎಸ್‌ಎನ್‌ಎಲ್‌ನಲ್ಲಿ ಉದ್ಯೋಗ ದೊರೆತರೂ ಸತೀಶ್ ಅವರನ್ನು ಸೆಳೆದದ್ದು ಕೃಷಿ. ಏನೆಂದರೆ ಏನೂ ಇಲ್ಲದ 4.5 ಎಕ್ರೆ ಭೂಮಿಯಲ್ಲಿ ಹಚ್ಚಹಸಿರು ಕಂಗೊಳಿಸುವಂತೆ ಮಾರ್ಪಾಡು ತಂದದ್ದು ಆಸಕ್ತಿ. ಬೆಳೆದ ಫಸಲು ಕೈಗೆ ಬಂದಾಗ ಆಗುವ ಖುಷಿ ಮುಂದೆ ಮಾಡಿದ ಸಾಲ ಏನೇನೂ ಅಲ್ಲ ಎನ್ನುತ್ತಾರೆ. ಪ್ರತಿವರ್ಷ ಹೊಸ ಅನ್ವೇಷಣಾ ಬೆಳೆಗಳಿಗೆ ಬಂಡವಾಳ ತೊಡಗಿಸುವಾಗ ಅದರಿಂದ ಲಾಭವೇ ಬರುತ್ತದೆ ಎನ್ನುವ ನಂಬಿಕೆ ಇಟ್ಟಿರುವುದಿಲ್ಲ. ಪ್ರಯೋಗಗಳು ಕೈಕೊಟ್ಟದ್ದೂ ಇದೆ. ಆದರೂ ಕೃಷಿ ಕೈ ಹಿಡಿದು ಪೋಷಿಸಿ ಬೆಳೆಸಿದೆ. ಚಾಪೆನೇಜಿ ನೆಟ್ಟು ಶ್ರೀಪದ್ಧತಿಯಲ್ಲಿ ಭತ್ತ ಬೆಳೆದು ದಾಖಲೆಯ ಫಸಲು ಪಡೆದಿದ್ದಾರೆ. 1.5 ಎಕರೆ ಭತ್ತ ಬೆಳೆದಿದ್ದು ಉತ್ತಮ ಮಳೆಯಾದ ಕಾರಣ ಎಕರೆಗೆ 22 ಕ್ವಿಂ. ಭತ್ತ ದೊರೆತಿದೆ. ಕಳೆದ ವರ್ಷ ಎಕರೆಗೆ 15 ಕ್ವಿಂ. ಇಳುವರಿಯಾಗಿತ್ತು. ಮಳೆಯಿಂದ ಪಪ್ಪಾಯಿ, ಹರಿವೆ, ಮುಳ್ಳುಸೌತೆ ನಷ್ಟವಾದರೆ ಭತ್ತದಲ್ಲಿ ಅಧಿಕ ಬೆಳೆ ಖುಷಿ ನೀಡಿದೆ.
ನಡುಬೆಳೆ
ಸತೀಶ್ ಹೆಗ್ಡೆ ಅವರು 4 ಸಾವಿರದಷ್ಟು ಮೋಹಿತ್‌ನಗರ ಹಾಗೂ ಮಂಗಳ ಅಡಿಕೆ ಗಿಡ ಬೆಳೆಸಿದ್ದು ಈ ಬಾರಿ ಇಂಟರ್‌ವೊಹಿತ್‌ಮಂಗಳ ಎಂಬ ಹೊಸತಳಿಯ 300 ಗಿಡ ನೆಟ್ಟಿದ್ದಾರೆ. ಅಡಿಕೆಗೆ ಕಾಳುಮೆಣಸಿನ ಬಳ್ಳಿ ಹಬ್ಬಿಸಿದ್ದಾರೆ. ಮಧ್ಯ ಬೆಳೆಯಾಗಿ ಕೊಕ್ಕೊ ಬೆಳೆದಿದ್ದಾರೆ.
ಪಪ್ಪಾಯಿ
700 ಥೈವಾನ್ ರೆಡ್‌ಲೇಡಿ ಪಪ್ಪಾಯಿ ಬೆಳೆಸಿದ್ದರೂ ಮಳೆಗೆ ಉಳಿದದ್ದು 300 ಮಾತ್ರ. ಹತ್ತು ದಿನಕ್ಕೊಮ್ಮೆ 2 ಕ್ವಿಂಟಾಲ್‌ಗಿಂತಲೂ ಜಾಸ್ತಿ ಕಟಾವಿಗೆ ಬರುತ್ತದೆ. ರಾಸಾಯನಿಕ ಗೊಬ್ಬರ ಹಾಕಿದರೆ ಪಪ್ಪಾಯಿ ತೂಗುತ್ತದೆ, ಆದರೆ ಬಾಳಿಕೆ ಕಡಿಮೆ. ಹಟ್ಟಿಯ ಸ್ಲರಿ ನೀರು ಹಾಕಿ ಪೂರ್ಣ ಸಾವಯವವಾದರೆ ತೂಕ ಕಡಿಮೆಯಾದರೂ ಬಾಳಿಕೆ ಜಾಸ್ತಿ, ಇಳುವರಿಯೂ ಅಧಿಕ. 6 ತಿಂಗಳಲ್ಲಿ ಫಲ ಕೊಡಲು ಆರಂಭಿಸಿದ ಗಿಡ 4 ವರ್ಷ ಬಾಳುತ್ತದೆ. 1 ಗಿಡಕ್ಕೆ 1 ದಿನಕ್ಕೆ 1 ರೂ.ವಿನಂತೆ ಖರ್ಚುಮಾಡಿ 1 ಕೆಜಿಗೆ 1 ರೂ.ವಿನಂತೆ ಮಾರಿದರೂ ಪಪ್ಪಾಯಿಯಲ್ಲಿ ನಷ್ಟವಿಲ್ಲ ಎಂಬ ಲೆಕ್ಕ ಮಡಗುತ್ತಾರೆ ಸತೀಶ್.
ಮಿಶ್ರಕೃಷಿ
200 ಪಚ್ಚೆಬಾಳೆ, 200 ಏಲಕ್ಕಿಬಾಳೆ ಬೆಳೆದಿದ್ದು ಉಳ್ಳಾಲ, ಭಾಸ್ಕರ ತಳಿಯ 150 ಗೇರುಗಿಡಗಳಿವೆ. 60ರಿಂದ70ರಷ್ಟು ಗಿರಿರಾಜ ನಾಟಿಕೋಳಿ ಸಾಕಿದ್ದಾರೆ. 80 ಬುಡದಷ್ಟು ಬಸಳೆ ಬೆಳೆದಿದ್ದಾರೆ. ಹರಿವೆ ಬೆಳೆ ನವಂಬರ್‌ನ ಮಳೆಗೆ ಕೊಚ್ಚಿ ನೀರಿನಲ್ಲಿ ಹರಿದೇ ಹೋಗಿದೆ.
ಡಬ್ಬದಲ್ಲಿ ಸುವರ್ಣಗೆಡ್ಡೆ
ಕಾಡುಹಂದಿ ಕಾಟದಿಂದಾಗಿ ಸುವರ್ಣಗಡ್ಡೆ ಉಳಿಯುತ್ತಿಲ್ಲ. ಅದಕ್ಕಾಗಿ ಡಬ್ಬದಲ್ಲಿ ಗಿಡ ಇಟ್ಟು ನೆಟ್ಟಿದ್ದಾರೆ. ಇದರಿಂದಾಗಿ ಹಂದಿಗೆ ಗಡ್ಡೆ ದೊರೆಯುವುದಿಲ್ಲ.
ಪ್ರಶಸ್ತಿ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೃಷಿ ಪ್ರಶಸ್ತಿ (2015), ಪ್ರತಿಷ್ಠಿತ ಸಬ್ಲಾಡಿ ಶೀನಪ್ಪ ಶೆಟ್ಟಿ ಕೃಷಿ ಪ್ರಶಸ್ತಿ (2017), ಕೃಷಿ ಇಲಾಖೆಯಿಂದ ತಾಲೂಕು ಮಟ್ಟದ ಸಾಧಕ ಕೃಷಿಕ (2017) ಸೇರಿದಂತೆ ಹತ್ತಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ರಾಜ್ಯದ ನಾನಾ ಭಾಗದಿಂದ ಇವರ ಕೃಷಿಯನ್ನು ವೀಕ್ಷಿಸಲು ರೈತರು ಆಗಮಿಸುತ್ತಿದ್ದಾರೆ.
ಹೈನುಗಾರಿಕೆ
ಜೆರ್ಸಿ, ಎಚ್‌ಎಫ್ ತಳಿಯ 7 ಹಸುಗಳಿದ್ದು ದಿನಕ್ಕೆ 25 ಲೀ. ಹಾಲು ಮಾರುತ್ತಾರೆ. ಸಿಹಿಮೀನು ಮೀನುಗಾರಿಕೆಯಲ್ಲಿ 5 ಸಾವಿರ ಮರಿ ಬಿಟ್ಟಿದ್ದಾರೆ. ತೋಟದ ಗಿಡಗಳ ಕುಸುಮಗಳ ಮಧುವ ಹೀರಲು 6 ಪೆಟ್ಟಿಗೆಗಳಲ್ಲಿ ಜೇನು ಕೂರಿಸಿದ್ದಾರೆ. ಮೆಣಸು, ತೆಂಗು ಹೀಗೆ ಎಲ್ಲ ಬಗೆಯ ಕೃಷಿಗೂ ಇವರ ಪುಟ್ಟತೋಟದಲ್ಲಿ ಜಾಗವಿದೆ.
ಮಿಶ್ರಬೆಳೆ ಮಾಡಿ
ಒಂದೇ ಬೆಳೆ ಮಾಡಿ ಬೆಲೆಯಿಲ್ಲ ಎಂದು ನಷ್ಟ ಅನುಭವಿಸುವಂತಾಗಬಾರದು. ಏಕ ರೂಪದ ಕೃಷಿಯ ಬದಲು ಹತ್ತಾರು ಕೃಷಿ ಎಂಬ ಪ್ರಯೋಗಾತ್ಮಕ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಣ್ಣ ಜಾಗದಲ್ಲಿ ಬೇರೆ ಬೇರೆ ಮಿಶ್ರ ಕೃಷಿ ಮಾಡುವ ಮೂಲಕ ಕೃಷಿಯೂ ಲಾಭದಾಯಕವಾಗುತ್ತದೆ. ಯಂತ್ರಗಳನ್ನು ಜಾಸ್ತಿ ಬಳಸಿದರೆ ಕಡಿಮೆ ಖರ್ಚಾಗುತ್ತದೆ. ಮೊದಲು ಭತ್ತಕ್ಕೆ ಎಕರೆಗೆ 30 ಸಾವಿರ ಖರ್ಚಾಗುತ್ತಿದ್ದ ನಮಗೆ ಈ ವರ್ಷ ಯಂತ್ರಗಳಿಂದಾಗಿ 15 ಸಾವಿರ ರೂ. ಮಾತ್ರ ಖರ್ಚಾಗಿದೆ. ನನ್ನ ಜಾಗ ಹಿರಿಯರಿಂದ ಬಂದ ಬಳುವಳಿಯಲ್ಲ. ಸಾಲ ಮಾಡಿ ಖರೀದಿಸಿದ ಭೂಮಿ ಇಂದು ಹಸಿರುಸಿರಿಯಿಂದ ಕಂಗೊಳಿಸುವಂತೆ ಮಾಡಿದ್ದು ಹಗಲಿರುಳ ಬೆವರ ಹನಿ ಸೋಕಿದ್ದರ ಫಲ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷತೆ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ತೊಡಗಿಸಿಕೊಂಡು ಕೃಷಿ ಮಾಹಿತಿ ಪಡೆದು ಕೊಡುತ್ತಿದ್ದೇನೆ. ಗಂಗೊಳ್ಳಿಯ ವ್ಯಾಪಾರಿಯೊಬ್ಬರು ಮನೆಗೇ ಬಂದು ಖರೀದಿ ಸುತ್ತಾರೆ. ಕುಂದಾಪುರ ಸಂತೆಗೆ ಬಂದು ಇಡೀ ದಿನ ವ್ಯಯಿಸಿ, ಸಾಗಾಟ ವೆಚ್ಚ ಮಾಡಿ ಮಾರುವುದೇ ಕಷ್ಟ
-ಸತೀಶ್ ಹೆಗ್ಡೆ, ಅಮಾಸೆಬೈಲು
ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್
Bunts Hostel, ಕರಂಗಲ್ಪಾಡಿ ಜಂಕ್ಷನ್: ಶಾಶ್ವತ ಡಿವೈಡರ್ ನಿರ್ಮಾಣ ಕಾಮಗಾರಿ
Mangaluru: ರಾತ್ರಿ ಪ್ರಿಪೇಯ್ಡ್ ಆಟೋ ಇಲ್ಲದೆ ಪ್ರಯಾಣಿಕರ ಪರದಾಟ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.