ಗಂಗೊಳ್ಳಿ: ಮೀನುಗಾರರಿಗೆ ಗಾಯದ ಮೇಲೆ ಬರೆ
Team Udayavani, Apr 24, 2018, 9:33 AM IST
ಗಂಗೊಳ್ಳಿ: ವಾತಾವರಣದ ಉಷ್ಣಾಂಶದಲ್ಲಿನ ಭಾರೀ ಏರಿಕೆಯಿಂದಾಗಿ ಈ ಮೀನುಗಾರಿಕೆ ಋತುವಿನಲ್ಲಿ ಆರು ತಿಂಗಳು ಮೀನುಗಾರಿಕೆ ನಿಷೇಧಕ್ಕೆ ಒಳಗಾದಂತಾಗಿದೆ. ಮೀನುಗಳ ಕೊರತೆ ಉದ್ಭವಿಸಿದ ಹಿನ್ನೆಲೆಯಲ್ಲಿ ಗಂಗೊಳ್ಳಿ ಸಹಿತ ಹಲವೆಡೆ ಮಾರ್ಚ್ ಮೊದಲ ವಾರದಿಂದಲೇ ಮೀನುಗಾರಿಕೆ ಸ್ಥಗಿತಗೊಂಡಿದೆ. ವರ್ಷದಲ್ಲಿ ಮಳೆಗಾಲದಲ್ಲಿ ಮಾತ್ರ (ಮೂರು ತಿಂಗಳು) ಮೀನುಗಾರಿಕೆ ನಿಷೇಧವಿರುತ್ತಿತ್ತು. ಅದೀಗ ಉಷ್ಣಾಂಶ ಏರಿಕೆಯಿಂದ ಆರು ತಿಂಗಳಿಗೆ ಏರಿದಂತಾಗಿದೆ. ಈ ಹಿಂದೆ ಜೂನ್ ಅಂತ್ಯಕ್ಕೆ ಸ್ಥಗಿತಗೊಳಿಸಲಾಗುತ್ತಿತ್ತು. ಸಣ್ಣ ಬೋಟುಗಳು, ದೋಣಿಗಳು ಆಗೊಮ್ಮೆ – ಈಗೊಮ್ಮೆ ತೆರಳುತ್ತಿದ್ದರೂ, ಮೀನುಗಳು ಸಿಗದೇ ಬರಿಗೈಯಲ್ಲಿ ವಾಪಸಾಗುತ್ತಿವೆ. ಮತ್ಸ್ಯಕ್ಷಾಮ, ಒಖೀ ಚಂಡಮಾರುತದಿಂದ ತತ್ತರಿಸಿದ್ದ ಕರಾವಳಿಯ ಮೀನುಗಾರರಿಗೆ ಈಗ ಮತ್ತೂಂದು ಹೊಡೆತ ಬಿದ್ದಂತಾಗಿದೆ.
ವಾತಾವರಣದಲ್ಲಿ ಸುಮಾರು 26ರಿಂದ 27 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದ್ದರೆ ಮಾತ್ರ ಮೀನುಗಳು ಸಮುದ್ರದ ಮೇಲ್ಭಾಗಕ್ಕೆ ಬರುತ್ತವೆ. ಆದರೆ ಮಾರ್ಚ್‌ನಲ್ಲಿಯೇ ಸಮುದ್ರದ ಮೇಲ್ಭಾಗದ ಉಷ್ಣಾಂಶ ಸುಮಾರು 30 ಡಿಗ್ರಿ ಸೆಲ್ಸಿಯಸ್‌ಗೆ ಏರಿತ್ತು, ಇಂಥ ಸಂದರ್ಭದಲ್ಲಿ ಸಮುದ್ರದ ಆಳ ಹಾಗೂ ಮಧ್ಯ ಭಾಗದಲ್ಲೇ ಮೀನುಗಳು ಉಳಿಯುತ್ತವೆ. ಹೀಗಾಗಿ ಮೀನುಗಾರಿಕೆಗೆ ತೆರಳಿದವರಿಗೆ ಮೀನುಗಳು ಸಿಗುತ್ತಿಲ್ಲ. ಉಡುಪಿ ಜಿಲ್ಲೆಯ 2ನೇ ಅತೀ ದೊಡ್ಡ ಮೀನುಗಾರಿಕಾ ನೆಲೆ ಗಂಗೊಳ್ಳಿಯಲ್ಲಿ ಫೆ. 28ರವರೆಗೆ ಮೀನುಗಾರರು ಮೀನುಗಾರಿಕೆ ನಡೆಸಿದ್ದರು. ಬಳಿಕ ಬೋಟುಗಳನ್ನು ಗಂಗೊಳ್ಳಿ ಬಂದರು, ಮ್ಯಾಂಗನೀಸ್ ವಾರ್ಫ್‌ನಲ್ಲಿ ಲಂಗರು ಹಾಕಲಾಗಿದೆ.
ಶುಭ ತರಲಿಲ್ಲ ಈ ಋತು: ಈ ಮೀನುಗಾರಿಕಾ ಋತು ಲಾಭಕ್ಕಿಂತ ನಷ್ಟವನ್ನೇ ಉಂಟು ಮಾಡಿದೆ ಎನ್ನುತ್ತಾರೆ ಮೀನುಗಾರರು. ಮುಂಗಾರು ಮುಗಿದು ಮೀನುಗಾರಿಕಾ ನಿಷೇಧ ಅವಧಿ ಮುಗಿದು ಮೀನುಗಾರಿಕೆ ಆರಂಭಗೊಂಡ ಮೊದಲ 3 ತಿಂಗಳು ಹೆಚ್ಚಿನ ಪ್ರಮಾಣದಲ್ಲಿ ಮೀನುಗಳು ಸಿಗದೇ ನಷ್ಟ ಅನುಭವಿಸಿದ್ದೆವು. ಆ ಬಳಿಕ ಒಖೀ ಚಂಡಮಾರುತದಿಂದ ಕೆಲವು ಕಾಲ ಮೀನುಗಾರಿಕೆ ಸ್ಥಗಿತಗೊಂಡಿತ್ತು. ಅದಲ್ಲದೆ ಪರ್ಸಿನ್ ಬೋಟುಗಳಿಗೆ ಸಬ್ಸಿಡಿ ಡೀಸೆಲ್ ಹಾಗೂ ನಾಡದೋಣಿಗಳಿಗೆ ಸಬ್ಸಿಡಿ ಸೀಮೆಎಣ್ಣೆ ಅನೇಕ ತಿಂಗಳಿಂದ ಸಿಗದೇ ಸಮಸ್ಯೆಯಾಗಿದೆ.
ತೇವಾಂಶ ವಾಪಸು ಹೋಗುತ್ತಿಲ್ಲ
ವಾತಾವರಣದಲ್ಲಿ ಉಷ್ಣಾಂಶ ವಿಪರೀತ ಏರಿಕೆಯಾಗಿ ಸಮುದ್ರದ ನೀರು ಆವಿಯಾಗಿ ಮೋಡಗಳಾಗುತ್ತವೆ. ಇದರಿಂದ ಭೂಮಿಗೆ ಬಿದ್ದ ಬಿಸಿಲಿನಿಂದ ಉಂಟಾಗುವ ತೇವಾಂಶವು ಮತ್ತೆ ಆಕಾಶಕ್ಕೆ ಹೋಗುವುದಿಲ್ಲ. ವಾತಾವರಣದ ಉಷ್ಣತೆ ಇಳಿಕೆಯಾಗುವುದಿಲ್ಲ. ಕರಾವಳಿ ಭಾಗದಲ್ಲಿ ಉಷ್ಣಾಂಶ ಹೆಚ್ಚಲು ಇದು ಪ್ರಮುಖ ಕಾರಣ. ಆದರೆ ಇದಕ್ಕೂ ಜಾಗತಿಕ ತಾಪಮಾನ ಏರಿಕೆಗೂ ಸಂಬಂಧ ಕಲ್ಪಿಸಲು ಸಾಧ್ಯವಿಲ್ಲ. ಈ ಪ್ರಕ್ರಿಯೆ ಕರಾವಳಿ ಭಾಗದಲ್ಲಿ ಮಾತ್ರ ನಡೆಯುತ್ತಿರುವುದರಿಂದ ಇಲ್ಲಿ ಮಾತ್ರ ಹೆಚ್ಚಿನ ಉಷ್ಣಾಂಶ ದಾಖಲಾಗುತ್ತಿದೆ.
– ಡಾ| ಬಾಲಕೃಷ್ಣ , ಭೂವಿಜ್ಞಾನ ಪ್ರಾಧ್ಯಾಪಕರು, MIT ಮಣಿಪಾಲ
ಮೀನಿನ ದರವೂ ಏರಿಕೆ
ಮೀನಿನ ಬೇಡಿಕೆಯೂ ಹೆಚ್ಚಿಗೆ ಇದ್ದುದರಿಂದ ಎಲ್ಲ ಮೀನುಗಳ ದರ ಏರಿಕೆಯಾಗಿದೆ. ಇದರಿಂದ ಜನ ಮೀನು ಕೊಂಡುಕೊಳ್ಳುತ್ತಿಲ್ಲ. ಸೀಸನ್‌ನಲ್ಲಿ ಕೆಜಿಗೆ 70 ರೂ. ಇದ್ದ ಬಂಗುಡೆಗೆ ಈಗ 110 ರಿಂದ 130 ರೂ. ವರೆಗೂ ಬೇಡಿಕೆಯಿದೆ. ಬೈಗೆ (ಭೂತಾಯಿ) 40 ಕೆಜಿಯ 1 ಬುಟ್ಟಿಗೆ 1,800 ರೂ. ಇದೆ. ಅದೇ ಸೀಸನ್‌ನಲ್ಲಾದರೆ 1 ಸಾವಿರ ರೂ. ಇರುತ್ತಿತ್ತು. ಅಂಜಲ್ ಕೆಜಿಗೆ ಈಗ 600 ರೂ. ಇದ್ದರೆ, ಸೀಸನ್‌ನಲ್ಲಿ 400 ರೂ. ಗೆ ಸಿಗುತ್ತಿತ್ತು.
– ರಾಮಪ್ಪ ಗಂಗೊಳ್ಳಿ, ಮೀನು ವ್ಯಾಪಾರಿ
ಅರ್ಧದಷ್ಟು ವಹಿವಾಟು ಇಲ್ಲ
ಗಂಗೊಳ್ಳಿ ಬಂದರಿನಲ್ಲಿ ಹಿಂದೆ ಎಲ್ಲ ಸುಮಾರು 40 ರಿಂದ 50 ಟನ್‌ವರೆಗೂ ಮೀನುಗಳು ಸಿಗುತ್ತಿದ್ದರೆ, ಈಗ ಕೇವಲ 20 ರಿಂದ 30 ಟನ್‌ನಷ್ಟು ಸಿಗು ತ್ತಿವೆ. ಪರ್ಸಿನ್ ಬೋಟುಗಳು 40 ರಿಂದ 50 ಇದ್ದರೆ, ಟ್ರಾಲ್ ಬೋಟುಗಳು 100 ರಿಂದ 150 ರವರೆಗೆ ಇರಬಹುದು. 40 ರಿಂದ 50 ನಾಡದೋಣಿಗಳಿವೆ. ಈ ಬಾರಿ 1 ಕೋ.ರೂ. ಆದಾಯ ಬರುವವರಿಗೆ ಕೇವಲ 50 ಲಕ್ಷ ರೂ. ಮಾತ್ರ ಸಿಕ್ಕಿದೆ.
– ರಮೇಶ್ ಕುಂದರ್, ಅಧ್ಯಕ್ಷರು, ಪರ್ಸಿನ್ ಮೀನುಗಾರರ ಸ್ವಸಹಾಯ ಸಂಘ
ಎಲ್ಲೆಡೆ ಮತ್ಸ್ಯಕ್ಷಾಮ ಇದೆ
ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಸಿಕ್ಕಿರುವ ಮೀನುಗಳ ಪ್ರಮಾಣ ಕಡಿಮೆಯಿದೆ. ಗಂಗೊಳ್ಳಿ ಮಾತ್ರವಲ್ಲ, ಎಲ್ಲೆಡೆ ಸಮಸ್ಯೆಯಿದೆ. ಬೇಕಾದಷ್ಟು ಪ್ರಮಾಣದಲ್ಲಿ ಮೀನುಗಳು ಸಿಗುತ್ತಿಲ್ಲ. ಇದರಿಂದ ಮೀನುಗಾರರು ತೊಂದರೆ ಅನುಭವಿಸುತ್ತಿರುವುದರ ಅರಿವಿದೆ. ಆದರೆ ಸಂಪೂರ್ಣ ಮೀನುಗಾರಿಕೆ ಸ್ಥಗಿತಗೊಂಡಿಲ್ಲ. ಇನ್ನು ಒಂದು ತಿಂಗಳ ಅವಧಿಯಿದೆ.
– ಅಂಜನಾದೇವಿ, ಮೀನುಗಾರಿಕಾ ಸಹಾಯಕ ನಿರ್ದೇಶಕಿ, ಗಂಗೊಳ್ಳಿ ಬಂದರು
— ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.