ಸಸ್ಯ ಕ್ಷೇತ್ರಗಳಲ್ಲಿ ಸಿದ್ಧವಾಗಿವೆ ಸಸಿಗಳು, ವಿತರಣೆ ಆರಂಭ
ಖರೀದಿದಾರರಿಗೆ ಬೆಲೆ ಏರಿಕೆ ಬಿಸಿ, ಇಲಾಖೆಗೂ ತಲೆಬಿಸಿ!
Team Udayavani, Jun 16, 2023, 3:24 PM IST
ಉಡುಪಿ/ಕಾರ್ಕಳ: ಮುಂಗಾರು ಮಳೆಗೆ ಗಿಡಗಳನ್ನು ನೆಡಲು ಇದು ಸೂಕ್ತ ಕಾಲ. ಮುಂಗಾರು ತಡವಾದರೂ ಜಿಲ್ಲೆಯ ಎಲ್ಲ ಸಸ್ಯ ಕ್ಷೇತ್ರಗಳಲ್ಲಿ ಸಸಿಗಳು ಸಿದ್ಧಗೊಂಡಿದ್ದು, ವಿವಿಧ ಜಾತಿಯ ಸಸ್ಯಗಳನ್ನು ಬೆಳೆಸಲಾಗಿದೆ. ಜಿಲ್ಲೆಯಲ್ಲಿ ಕುಂದಾಪುರ ಉಪ ಅರಣ್ಯ ವಿಭಾಗದ ಪ್ರಾದೇಶಿಕ ಸಸ್ಯ ಕ್ಷೇತ್ರ ಮತ್ತು ಸಾಮಾಜಿಕ ಅರಣ್ಯ ಇಲಾಖೆ ಸಸ್ಯ ಕ್ಷೇತ್ರ ಪ್ರತ್ಯೇಕವಾಗಿದ್ದು, ಎರಡು ವಿಭಾಗಗಳಲ್ಲಿ ಸಸಿಗಳ ಮಾರಾಟಕ್ಕೆ ತಯಾರಿಯಾಗಿದೆ.
ಕಳೆದ ಬಾರಿಗಿಂತ ಈ ವರ್ಷ ಬೆಲೆ ದುಪ್ಪಟ್ಟಾಗಿರುವುದರಿಂದ ರೈತರು ಸೇರಿದಂತೆ ಖರೀದಿದಾರರು ಖರೀದಿಗೆ ಹಿಂದೇಟು ಹಾಕುತ್ತಿದ್ದು, ಬೆಳೆಸಿದ ಸಸಿ ನಿಗದಿತ ಸಮಯದೊಳಗೆ ಮಾರಾಟವಾಗದಿದ್ದಲ್ಲಿ ವ್ಯರ್ಥವಾಗಲಿದೆ. ಒಂದೆಡೆ ಮಳೆಯೂ ಕೈಕೊಟ್ಟಿರುವುದರಿಂದ ಸಾರ್ವಜನಿಕರು ಖರೀದಿಗೆ ಇನ್ನೂ ಮನಸ್ಸು ಮಾಡುತ್ತಿಲ್ಲ. ಪ್ರತಿ ವರ್ಷ ಎಸ್‌ಎಸ್‌ಆರ್ ದರಗಳು ಹೆಚ್ಚಳವಾಗುತ್ತಿದ್ದಂತೆ ಉತ್ಪಾದನಾ ವೆಚ್ಚದ ಮೇಲೆ ಶೇಕಡಾವಾರು ದರ ಏರಿಕೆಯಾಗುತ್ತಿದ್ದು, ಈ ಬಾರಿ ಅದು ಅಧಿಕವಾಗಿದೆ. ಹಳೆಯ ದರ 1 ರೂ. ಇದ್ದ ಸಸಿಗೆ 6 ರೂ. 3 ರೂ. ಇದ್ದ ಸಸಿಗೆ 23 ರೂ. ಅಧಿಕಪ್ರಮಾಣದಲ್ಲಿ ದರ ಹೆಚ್ಚಿಸಿರುವುದು ಖರೀದಿದಾರರಿಗೆ ಸಂಕಷ್ಟ ತಂದೊಡ್ಡಿದೆ. ಇದರಿಂದ ರೈತರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.ಇತ್ತೀಚೆಗೆ ಹೆಚ್ಚು ಅರಣ್ಯ ನಾಶವಾಗುತ್ತಿದ್ದು, ಸಸ್ಯಗಳನ್ನು ಸರಕಾರ ಉಚಿತವಾಗಿ ರೈತರಿಗೆ ವಿತರಣೆ ಮಾಡುವ ಮೂಲಕ ಪ್ರೋತ್ಸಾಹಿಸಬೇಕು ಜತೆಗೆ ಸರಕಾರ ಸಸಿಗಳ ಬೆಲೆ ಏರಿಕೆ ಮಾಡಿರುವ ನಿರ್ಧಾರವನ್ನು ವಾಪಸ್ ಪಡೆಯಬೇಕೆನ್ನುವ ಆಗ್ರಹ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ.
ಎಲ್ಲ ಸಸ್ಯ ಕ್ಷೇತ್ರಗಳಲ್ಲಿ ಇಲಾಖೆ ಅಧಿಕಾರಿಗಳು, ಸಿಬಂದಿ ಕಾಳಜಿ ವಹಿಸಿ 40ಕ್ಕೂ ಅಧಿಕ ಜಾತಿಗಳ ಲಕ್ಷಾಂತರ ಸಸಿಗಳನ್ನು ಬೆಳೆಸಿದ್ದಾರೆ. ಸಸಿಗಳನ್ನು ಇಲ್ಲಿ ವೈಜ್ಞಾನಿಕವಾಗಿ ಬೆಳೆಸಲಾಗಿದ್ದು, ಮಾರಾಟ ಮಾಡುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಅರಣ್ಯ ನಾಶವಾಗುತ್ತಿರುವ ಈ ದಿನಗಳಲ್ಲಿ ಸಸ್ಯಗಳನ್ನು ಸರಕಾರ ಉಚಿತವಾಗಿ ರೈತರಿಗೆ ವಿತರಣೆ ಮಾಡುವ ಮೂಲಕ ಪ್ರೋತ್ಸಾಹಿಸಬೇಕು ಎನ್ನುವುದು ರೈತರ ಹಾಗೂ ಸಾರ್ವಜನಿಕರ ಅಭಿಪ್ರಾಯವಾಗಿದೆ.
ಲಭ್ಯ ವಿವಿಧ ಜಾತಿಯ ಸಸಿಗಳು
ಮಹಾಗನಿ, ನೇರಳೆ, ಹಲಸು, ಹೆಬ್ಬಲಸು, ಲಕ್ಷ್ಮಣಫಲ, ಬಾದಾಮಿ, ಶ್ರೀಗಂಧ, ಕದಂಬ, ಸಾಗುವಾನಿ, ನೆಲ್ಲಿ, ಬಿಲ್ವಪತ್ರೆ, ಪುನರ್‌ಪುಳಿ, ಗೇರು, ನುಗ್ಗೆ, ಸೀಮರೊಬ, ಬೇಂಗ, ಸಿಹಿಹುಣಸೆ,ಪೇರಳೆ, ಬೀಟೆ, ಸೀಮೆತಂಗಡಿ, ಬೇಲ, ಸೈತೊಡಿಯ, ದಾಳಿಂಬೆ, ಲಿಂಬೆ, ಸೀತಾಪಲ, ರಕ್ತಚಂದನ, ಬಿದಿರು, ಜಂಬುನೇರಳೆ, ಹೊಳೆದಾಸವಾಳ, ರೆಂಜ, ಮಾವು, ಅಶ್ವತ್ಥ, ಅತ್ತಿ, ಟೊಕೊಮೋ, ಬೊಲ್ಪಾಲೆ, ಕಕ್ಕೆ, ಗುಲ್ಮಾವು, ಕದಂಬ, ರಂಬುಟನ್, ಬಸವನಪಾದ, ಸಿರಿಹೊನ್ನೆ, ಹೊಂಗೆ, ಫೆಲ್ಟಾಪೆರಾ, ಗಾಳಿ ಮೊದಲಾದ ಸಸಿಗಳಿವೆ.
ಎಲ್ಲೆಲ್ಲಿ ಎಷ್ಟು ಸಸಿಗಳು ಲಭ್ಯವಿದೆ ?
ಸಾಮಾಜಿಕ ಅರಣ್ಯ ವಿಭಾಗದ ಕಾರ್ಕಳವಲಯದ ಮಾಳ ಕೂಡಿಗೆ ಸಸ್ಯಕ್ಷೇತ್ರದಲ್ಲಿ 51,000 ಸಸಿಗಳು, ಉಡುಪಿ ವಲಯದ ಪೆರ್ಡೂರು ಸಸ್ಯಕ್ಷೇತ್ರದಲ್ಲಿ 53,000 ಸಸಿಗಳು, ಕುಂದಾಪುರ ವಲಯದ ಹಾಲಾಡಿ ಸಸ್ಯಕ್ಷೇತ್ರದಲ್ಲಿ 51,000 ಸಸಿ ಬೆಳೆಸಲಾಗಿದೆ.
ಕುಂದಾಪುರ ಉಪ ಅರಣ್ಯ ವಿಭಾಗದ ಪ್ರಾದೇಶಿಕ ಸಸ್ಯಕ್ಷೇತ್ರ ಮಾವಿನಗುಳಿಯಲ್ಲಿ 28,000 ಸಸಿಗಳು, ಸರ್ಪನಮನೆ 22,500, ಮೆಟ್ಕಲ್‌ಗುಡ್ಡೆ 36,000, ಬೈಕಾಡಿ 58,000, ಮಡಾಮಕ್ಕಿ 22,500, ಕುತ್ಲೂರು 16,000, ಶಿರ್ಲಾಲು 66,000, ಅಳದಂಗಡಿ 22,500 ಸಸಿಗಳು ಲಭ್ಯವಿದೆ.
ಸಸಿ ದರ ಹೆಚ್ಚಳದ ಸಮಸ್ಯೆ
ಕುಂದಾಪುರ ಉಪ ಅರಣ್ಯ ವಿಭಾಗದ ಎಲ್ಲ ಸಸ್ಯ ಕ್ಷೇತ್ರಗಳಲ್ಲಿ ಸಸಿಗಳ ಮಾರಾಟ ಆರಂಭಗೊಂಡಿದೆ. ಮಳೆ ವಿಳಂಬ, ಸಸಿಗಳ ದರ ಹೆಚ್ಚಳದಿಂದ ಸಮಸ್ಯೆಯಾಗಿದೆ. ರೈತರಿಗೆ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಸಿಗಳ ದರವನ್ನು ಇಳಿಕೆ ಮಾಡಲು ಸರಕಾರದ ಗಮನಕ್ಕೆ ತಂದಿದ್ದೇವೆ. ಅರಣ್ಯ ಇಲಾಖೆ ಸಚಿವರು ಈ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದ್ದಾರೆ.
– ಉದಯ ನಾಯ್ಕ,
ಡಿಎಫ್ಒ, ಕುಂದಾಪುರ ಉಪ ಅರಣ್ಯ ವಿಭಾಗ
ಸಸಿ ವಿತರಣೆ ಆರಂಭ
ಸಾಮಾಜಿಕ ಅರಣ್ಯ ವಿಭಾಗದಿಂದ ರೈತರಿಗೆ ಉಪಯೋಗವಾಗುವ ಉತ್ತಮ ಜಾತಿಯ ಸಸಿ ಬೆಳೆಸಿದ್ದೇವೆ. ಸಸಿಗಳನ್ನು ರೈತರಿಗೆ ವಿತರಿಸಲು ಆರಂಭಿಸಲಾಗಿದೆ.
-ಕ್ಲಿಫರ್ಡ್ ಲೋಬೋ, ಡಿಎಫ್ಒ, ಸಾಮಾಜಿಕ ಅರಣ್ಯ, ಉಡುಪಿ ಜಿಲ್ಲೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.