Madras Eye ಕೆಂಗಣ್ಣಿಗೆ ಸ್ವಯಂ ಐಸೊಲೇಶನ್ ಉತ್ತಮ ಪರಿಹಾರ
ಕೋಳಿ ಕಣ್ಣಿನ ಹಾವಳಿ ತಡೆಗೆ ಕ್ರಮಗಳು; ಫೋನ್‌ಇನ್ ಕಾರ್ಯಕ್ರಮ
Team Udayavani, Aug 9, 2023, 7:05 AM IST
ಮಣಿಪಾಲ: ಕೋಳಿ ಕಣ್ಣು (ಕೆಂಗಣ್ಣು/ ಮದ್ರಾಸ್ ಐ) ಹಾವಳಿ ನಿಯಂತ್ರಿಸಲು ಸ್ವಯಂ ಆಸಕ್ತಿಯಿಂದ ಪ್ರತ್ಯೇಕವಾಗಿರುವುದು (ಐಸೊಲೇಶನ್) ಉತ್ತಮ ಪರಿಹಾರವಾಗಿದೆ ಎಂದು ಮಣಿಪಾಲ ಕೆಎಂಸಿ ಮತ್ತು ಕಸ್ತೂರ್ಬಾ ಆಸ್ಪತ್ರೆಯ ನೇತ್ರ ವಿಭಾಗದ ಯುನಿಟ್ ಹೆಡ್ ಮತ್ತು ಪ್ರಾಧ್ಯಾಪಕಿ ಡಾ| ಸುಲತಾ ಭಂಡಾರಿ ಸಲಹೆ ನೀಡಿದ್ದಾರೆ.
ಕೋಳಿ ಕಣ್ಣು ಕಾಯಿಲೆ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಕಾಯಿಲೆಯನ್ನು ತಡೆಗಟ್ಟುವ ಬಗ್ಗೆ “ಉದಯವಾಣಿ’ ವತಿಯಿಂದ ಮಂಗಳವಾರ ಮಣಿಪಾಲದ ಕೇಂದ್ರ ಕಚೇರಿಯಲ್ಲಿ ಆಯೋಜಿಸಲಾದ ಫೋನ್ ಇನ್ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಜನರ ಸಂದೇಹಗಳಿಗೆ ಉತ್ತರಿಸಿ ಸೂಕ್ತ ಮಾರ್ಗದರ್ಶನ ನೀಡಿದರು. ಅವರು ನೀಡಿದ ಅಭಿಪ್ರಾಯಗಳು ಇಂತಿವೆ:
ಕೆಂಗಣ್ಣು ಲಕ್ಷಣಗಳು
ಕೆಂಗಣ್ಣು ಎಂದರೆ ಕಣ್ಣಿನ ಬಿಳಿ ಭಾಗ ಕೆಂಪಾಗುವ ಕಾಯಿಲೆಯಾಗಿದೆ. ಈ ವೇಳೆ ಕಣ್ಣಿನಲ್ಲಿ ನೀರು ಬರುವುದು, ರೆಪ್ಪೆ ಯಲ್ಲಿ ಊತ, ಕಣ್ಣಿನಲ್ಲಿ ಹಿಕ್ಕು, ಕಿವಿಯ ಹತ್ತಿರ ನೋವು, ಕಣ್ಣು ತೆರೆಯಲು ಕಷ್ಟವಾ ಗುವಂತಹ ಸಮಸ್ಯೆಗಳು ಉದ್ಭವಿಸುತ್ತವೆ. ಬಿಸಿಲು ನೋಡಲು ಆಗದಿರುವುದು, ಚಚ್ಚು ವಂತಾಗುತ್ತದೆ. ಈ ಸಮಸ್ಯೆ ಗಂಭೀರವಾದರೆ ಕಣ್ಣಿನಲ್ಲಿರುವ ಕಪ್ಪು ಭಾಗದಲ್ಲಿಯೂ ಸಣ್ಣ ಸಣ್ಣ ಚುಕ್ಕೆಗಳು ಕಾಣಿಸಿಕೊಂಡು ದೃಷ್ಟಿದೋಷವೂ ಉಂಟಾಗಬಹುದು.
ರಜೆ, ಮನೆಯಲ್ಲಿ ಪ್ರತ್ಯೇಕ ವಾಸ ಉತ್ತಮ
ಕೆಂಗಣ್ಣು ಸಮಸ್ಯೆ ಕಾಣಿಸಿಕೊಂಡರೆ ತಜ್ಞ ನೇತ್ರ ವೈದ್ಯರನ್ನು ಭೇಟಿಯಾಗಿ ಸೂಕ್ತ ಔಷಧ ಪಡೆದು ಕೊಳ್ಳಬೇಕು. ಶಾಲೆ ಹಾಗೂ ಕೆಲಸಕ್ಕೆ ಹೋಗುವವರಾ ದರೆ ರಜೆ ಮಾಡುವುದೇ ಉತ್ತಮ. 7ರಿಂದ 8 ದಿನಗಳ ಕಾಲ ಇದರ ತೀವ್ರತೆ ಇರುವ ಕಾರಣ ಈ ಅವಧಿಯಲ್ಲಿ ಸ್ವಯಂ ಐಸೊಲೇಶನ್‌ಗೆ ಒಳಗಾಗಬೇಕು. ಮನೆ ಯಲ್ಲಿ ಪ್ರತ್ಯೇಕವಾಗಿ ವಾಸ ಮಾಡಬೇಕು. ಕೆಂಗಣ್ಣಿಗೆ ಗುರಿಯಾದವರು ತಾವು ಬಳಸಿದ ವಸ್ತುಗಳನ್ನು ಇತರರು ಬಳಕೆ ಮಾಡದಂತೆ ಎಚ್ಚರ ವಹಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಕಾರಣಕ್ಕೂ ಓಡಾಟ ಮಾಡಬಾರದು. ಮುಖ್ಯವಾಗಿ ಶುಚಿತ್ವಕ್ಕೆ ಆದ್ಯತೆ ನೀಡಬೇಕು.
ಮುನ್ನೆಚ್ಚರಿಕೆ ಹೇಗೆ?
ಮುಖ್ಯವಾಗಿ ಜನದಟ್ಟಣೆ ಇರುವ ಪ್ರದೇಶಗಳಿಗೆ ಹೋಗಬಾರದು. ಲಕ್ಷಣಗಳು ಕಾಣಿಸಿಕೊಂಡಾಗ ಕುದಿಸಿ ತಣ್ಣಗಾದ ನೀರಿನಲ್ಲಿ ಹತ್ತಿ ಉಂಡೆ ಒದ್ದೆ ಮಾಡಿ ಕಣ್ಣನ್ನು ಶುಚಿಗೊಳಿಸಬಹುದು. ಪದೇ ಪದೆ ಕಣ್ಣಿನ ಮೇಲೆ ಕೈಯಾಡಿಸಬಾರದು.
ಈಜು ಕೊಳಗಳನ್ನು ಬಳಸ ಬಾರದು. ಏಕೆಂದರೆ ನೀರಿನಿಂದ ವೈರಾಣುಗಳು ಬಹಳ ವೇಗದಲ್ಲಿ ಹರ ಡುತ್ತವೆ. ವೈದ್ಯರ ಸಲಹೆ ಇಲ್ಲದೆ ಸ್ಟಿರಾಯ್ಡ ಐ ಡ್ರಾಪ್ ಕೂಡ ಬಳಸಬಾರದು. ತೆಂಗಿನ ಎಣ್ಣೆ, ಸಹಿತ ಅಡುಗೆ ಮನೆಯೊಳಗೆ ಬಳಕೆ ಮಾಡುವ ಸಾಮಗ್ರಿಗಳನ್ನು ಬಳಸಲೇಬಾರದು. ಯಾಕೆಂದರೆ ಇದು ಕೆಂಗಣ್ಣು ಆಗದೆ ಬೇರೆ ರೀತಿಯ ಸಮಸ್ಯೆ ಆಗಿದ್ದರೆ ಕಣ್ಣಿನಲ್ಲಿ ಫಂಗಸ್ ಬೆಳೆದು ಕಪ್ಪುಗುಡ್ಡೆಯೂ ಬಿಳಿಯಾಗುತ್ತದೆ. ಬಳಿಕ ಇದು ಹುಣ್ಣಾಗಿ ಕಣ್ಣನ್ನೇ ತೆಗೆಯಬೇಕಾದ ಸನ್ನಿವೇಶವೂ ಎದು ರಾಗಬಹುದು.
ಚಿಕಿತ್ಸೆ ಹೇಗೆ?
ಈಗ ನಮ್ಮ ಆಸ್ಪತ್ರೆಗೆ ದಿನನಿತ್ಯ 25ರಿಂದ 30 ಮಂದಿ ಈ ಕಾಯಿಲೆಯ ಚಿಕಿತ್ಸೆಗಾಗಿಯೇ ಆಗಮಿಸುತ್ತಿದ್ದಾರೆ. ತಜ್ಞ ನೇತ್ರ ವೈದ್ಯರ ಬಳಿ ಕೆಂಗಣ್ಣು ತಪಾಸಣೆಗೆಂದು ಹಲವಾರು ಪರಿಕರಗಳಿರುತ್ತವೆ. ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳಲ್ಲಿಯೂ ಕಣ್ಣಿನ ತಜ್ಞರ ಸೇವೆ ಲಭ್ಯವಿದೆ. ವೈದ್ಯರೂ ಚಿಕಿತ್ಸೆ ನೀಡುವಾಗ ಎಚ್ಚರಿಕೆ ವಹಿಸಬೇಕು. ನಮ್ಮ ಆಸ್ಪತ್ರೆಯಲ್ಲಿ ಒಮ್ಮೆ ರೋಗಿ ಬಂದು ಹೋದರೆ ಕನಿಷ್ಠ ಆರೇಳು ನಿಮಿಷ ಶುಚಿಗೊಳಿಸುವ ಕೆಲಸ ನಡೆಯುತ್ತದೆ. ಕಣ್ಣಿನ ಗಂಭೀರತೆಯನ್ನು ಅರಿತು ಸೂಕ್ತ ಆ್ಯಂಟಿಬಯೋಟಿಕ್ ಆಯಿಂಟ್‌ಮೆಂಟ್ ನೀಡಲಾಗುತ್ತದೆ. ವೈದ್ಯರು ಸೂಚಿಸಿದಂತೆಯೇ ಅದನ್ನು ತೆಗೆದುಕೊಳ್ಳಬೇಕು. ನೇತ್ರ ತಜ್ಞರಲ್ಲದ ವೈದ್ಯರು ಟಾರ್ಚ್ ಲೈಟ್ ಹಾಕಿ ನೋಡುವುದಿದೆ. ಈ ಚಿಕಿತ್ಸೆ ಕೂಡ ಪರವಾಗಿಲ್ಲ. ಚಿಕಿತ್ಸೆಯ ಅವಧಿಯಲ್ಲಿ ಮೊಬೈಲ್ ಹಾಗೂ ಟಿವಿ ನೋಡಲು ಯಾವುದೇ ಸಮಸ್ಯೆ ಇಲ್ಲ. ಪತ್ರಿಕೆ, ಪುಸ್ತಕಗಳನ್ನೂ ಓದಬಹುದು. ಆದರೆ ಕೆಂಗಣ್ಣು ಪೀಡಿತರು ಮುಟ್ಟಿದ ವಸ್ತುಗಳನ್ನು ಇತರರು ಮುಟ್ಟಬಾರದು. 7ರಿಂದ 8 ದಿನಗಳ ಕಾಲ ಮನೆಮಂದಿಯಿಂದ ಅಂತರ ಕಾಯ್ದುಕೊಳ್ಳುವ ಜತೆಗೆ ಶುಚಿತ್ವಕ್ಕೆ ಆದ್ಯತೆ ನೀಡಬೇಕು.
ಸೆಲೂನ್‌ಗಳಲ್ಲಿ ಎಚ್ಚರ
ಕೆಂಗಣ್ಣು ಸೋಂಕಿತರು ಸೆಲೂನ್‌ಗಳಿಗೆ ಹೋಗಬಾರದು. ಹೋದದ್ದೇ ಆದಲ್ಲಿ ಅವರಿಗೆ ಬಳಸಿದ ಬಟ್ಟೆ, ಸಹಿತ ಉಪಯೋಗಿಸಿದ ವಸ್ತುಗಳನ್ನು ಇನ್ನೊಬ್ಬರಿಗೆ ಸೆಲೂನ್ ಸಿಬಂದಿ ಬಳಸಬಾರದು. ಇದು ಕೂಡ ಕಾಯಿಲೆ ಹಬ್ಬಲು ಕಾರಣವಾಗುತ್ತದೆ. ಕೆಂಗಣ್ಣು ಸೋಂಕಿತರು ಬಂದರೆ ಅವರನ್ನು ಹಿಂದಕ್ಕೆ ಕಳುಹಿಸುವುದು ಉತ್ತಮ.
ಹೇಗೆ ಹರಡುತ್ತದೆ?
ಕೆಂಗಣ್ಣು ಸೋಂಕಿಗೆ ಒಳಗಾದ ವ್ಯಕ್ತಿಗಳು ಕಣ್ಣಿಗೆ ಕೈ ಹಾಕಿ ಸ್ಪರ್ಶಿಸಿದ ಜಾಗವನ್ನು ಇತರರು ಸ್ಪರ್ಶಿಸುವುದರಿಂದ ಹರಡುವ ಸಾಧ್ಯತೆಗಳಿರುತ್ತವೆ.
ಇದೇ ಕಾರಣಕ್ಕೆ ಸಾರ್ವಜನಿಕ ಸ್ಥಳದಲ್ಲಿ ಓಡಾಟ ಮಾಡಿದ ಬಳಿಕ ನಮ್ಮ ಕೈಯನ್ನು ಸಾಬೂನಿನಿಂದ ತೊಳೆದುಕೊಳ್ಳುವುದು ಉತ್ತಮ. ಜತೆಗೆ ಈ ಅವಧಿಯಲ್ಲಿ ಪದೇ ಪದೆ ಕಣ್ಣಿಗೆ ಕೈ ಹಾಕದಿರುವುದು ಉತ್ತಮ.
ಶಾಲಾ ಮಕ್ಕಳೇ ಎಚ್ಚರ ವಹಿಸಿ
ಸೋಂಕಿಗೆ ಒಳಗಾದವರು ಕೂಲಿಂಗ್ ಗ್ಲಾಸ್ ಧರಿಸುತ್ತಾರಾದರೂ ಇದರಿಂದ ಹರಡುವ ಸಾಧ್ಯತೆ ಕಡಿಮೆಯಾಗುತ್ತದೆ ಎಂದು ಹೇಳಲು ಅಸಾಧ್ಯ. ಇದೇ ರೀತಿ ಮಕ್ಕಳು ಈ ಸೋಂಕಿಗೆ ತುತ್ತಾದರೆ ಶಾಲಾ-ಕಾಲೇಜಿಗೆ ರಜೆ ಹಾಕಬೇಕು. ಇಲ್ಲದಿದ್ದರೆ ಇದು ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ಹಬ್ಬುವ ಸಾಧ್ಯತೆಗಳಿರುತ್ತವೆ. ಈ ಬಗ್ಗೆ ವೈದ್ಯರೇ ಸರ್ಟಿಫಿಕೆಟ್ ನೀಡುತ್ತಾರೆ. ಪೋಷಕರು ಕೂಡ ಮಕ್ಕಳಿಗೆ ವೈದ್ಯರು ನೀಡಿದ ಔಷಧವನ್ನು ಕಣ್ಣಿಗೆ ಹಾಕಿದ ಬಳಿಕ ತಮ್ಮ ಕೈಗಳನ್ನು ಸಾಬೂನಿನಿಂದ ತೊಳೆಯಬೇಕು. ಜತೆಗೆ ಅವರು ಬಳಸಿದ ವಸ್ತುಗಳನ್ನು ಬಳಸಬಾರದು. ಕೆಲವು ದಿನಗಳ ಮಟ್ಟಿಗೆ ಪ್ರತ್ಯೇಕ ಕೊಠಡಿಯಲ್ಲಿ (ಐಸೊಲೇಶನ್) ವಾಸ ಮಾಡಿದರೆ ಉತ್ತಮ.
– ಡಾ| ಸುಲತಾ ಭಂಡಾರಿ
ಕರೆ ಮಾಡಿದವರು …
ಸುಶ್ಮಿತಾ ಹೊಸಂಗಡಿ, ಶೀಲಾ ಮಂಗಳೂರು, ಸುರೇಶ್ ಕಾರ್ಕಳ, ಸೀತಮ್ಮ ಭಟ್ಕಳ, ರಮೇಶ್ ಶೆಟ್ಟಿ ಹಾಲಾಡಿ, ಉಷಾ ನಾಯಕ್ ಬೆಳ್ಳಂಪಳ್ಳಿ, ಮೀನಾಕ್ಷಿ ಬಾಕೂìರು, ಬಾಲಕೃಷ್ಣ ಶೆಟ್ಟಿ ಶಿರ್ವ, ಪುರುಷೋತ್ತಮ ನಾಯಕ್ ಅಲೆವೂರು, ಪ್ರಸನ್ನ ಕಲ್ಯಾಣಪುರ, ಗಾಯತ್ರಿ ಮಣಿಪಾಲ, ಗುರುದತ್ ಪೈ ಮಂಗಳೂರು, ಸುಜಾತಾ ಬೈಂದೂರು, ಪ್ರದೀಪ್ ವಂಡಾರು, ಸುಮಂತ್ ಕುಂದಾಪುರ, ರಾಮದಾಸ್ ಸುವರ್ಣ ಕಲ್ಮಾಡಿ, ಜಾನೆಟ್ ಕಲ್ಯಾಣಪುರ, ಅಬ್ಟಾಸ್ ಸಾಸ್ತಾನ, ಸೂರಿ ಸಾಸ್ತಾನ, ಹಮೀದ್ ವಿಟ್ಲ, ಎ.ಕೃಷ್ಣಾನಂದ ಶೆಟ್ಟಿ ಐಕಳ, ಕೆ.ಜಿ.ಪೈ ಮೂಲ್ಕಿ, ಪ್ರದೀಪ್ ಉಡುಪಿ, ರಾಜೇಶ್ ಬಂಟ್ವಾಳ, ಅಮರೇಶ ಮಂದಾರ್ತಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.