ನಿಸ್ವಾರ್ಥ ಸೇವೆಯೇ ನಿಜವಾದ ಸಮಾಜ ಸೇವೆ: ಡಾ| ಮಧುಸೂದನ್
Team Udayavani, Jul 4, 2017, 3:45 AM IST
ಕಾರ್ಕಳ: ಸೇವೆಯನ್ನು ಆತ್ಮ ತೃಪ್ತಿ ಮತ್ತು ಮನಃಸಂತೋಷಕ್ಕಾಗಿ ಮಾಡುತ್ತೇವೆ. ಲಯನ್ಸ್ ಕ್ಲಬ್ ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದವರ ಸೇವೆಯ ಜೊತೆಗೆ ಬಡ ವಿದ್ಯಾರ್ಥಿ ಹಾಗೂ ರೋಗಿಗಳಿಗೆ ಸಹಾಯ ಮಾಡುತ್ತದೆ. ಆ ಮೂಲಕ ನಿಸ್ವಾರ್ಥ ದೃಷ್ಟಿಯಿಂದ ಮಾಡುವುದೇ ನಿಜವಾದ ಸಮಾಜ ಸೇವೆ ಎಂದು ಲಯನ್ಸ್ ಕ್ಲಬ್ ಜಿಲ್ಲೆ 317ಸಿ ಇದರ ಪೂರ್ವ ಗವರ್ನರ್ ಡಾ| ಕೆ. ಮಧುಸೂದನ್ ಹೆಗ್ಡೆ ಹೇಳಿದ್ದಾರೆ.
ಬೆ„ಲೂರಿನ ಅರ್ಚನಾ ಸಭಾಭವನದಲ್ಲಿ ರವಿವಾರ ಜರಗಿದ ನೀರೆ ಬೈಲೂರು ಲಯನ್ಸ್ ಮತ್ತು ಲಯನೆಸ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪದಗ್ರಹಣ ನೆರವೇರಿಸಿ ಅವರು ಮಾತನಾಡಿದರು.
ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ರಾಜೇಶ್ ಶೆಟ್ಟಿ ಮಾತನಾಡಿ, ಸಂಸ್ಥೆಯು ಈಗಾಗಲೇ ಹಲವಾರು ಸಾಮಾಜಿಕ ಸೇವೆಯೊಂದಿಗೆ ಜಿಲ್ಲೆಯಲ್ಲಿ ಪ್ರತಿಷ್ಠಿತ ಘಟಕವಾಗಿ ಬೆಳೆದಿದ್ದು, ಸದಸ್ಯರ ಸಹಕಾರದೊಂದಿಗೆ ಇದನ್ನು ಮುಂದುವರಿಸುವುದಾಗಿ ತಿಳಿಸಿ, ಬಡ ಕ್ಯಾನ್ಸರ್ ರೋಗಿ ಅಕ್ಷಯ ಆಚಾರ್ಯ ಅವರಿಗೆ ಸಹಾಯ ಧನವನ್ನು ವಿತರಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪ್ರಾಂತೀಯ ಅಧ್ಯಕ್ಷ ಸುಜಯ್ ಜತ್ತನ್ನ, ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದರು. ವಲಯಾಧ್ಯಕ್ಷೆ ವೈಜಯಂತಿ ಕಾರಂತ್, ಕ್ಯಾಬಿನೆಟ್ ಕೋಶಾಧಿಕಾರಿ ದಿನೇಶ್ ಬಂಗೇರಾ ಮತ್ತು ವಿದ್ಯಾಲತಾ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.2016-17ರ ಅಧ್ಯಕ್ಷ ಸತೀಶ್ ಶೆಟ್ಟಿ ಸ್ವಾಗತಿಸಿ, ತನ್ನ ಅಧಿಕಾರಾವಧಿಯಲ್ಲಿ ಸೇವೆ ಸಲ್ಲಿಸಿದ ಕಾರ್ಯದರ್ಶಿ ಸದಾನಂದ ಎನ್. ಗೋಲಿಯಾರ್ ಮತ್ತು ಕೋಶಾಧಿಕಾರಿ ಶಾಕೀರ್ ಹುಸೆ„ನ್ ಅವರನ್ನು ಸಮ್ಮಾನಿಸಿದರು.
ಲಯನ್ ಕೋಶಾಧಿಕಾರಿ ಸುಕನ್ಯಾ ಯು. ಹೆಗ್ಡೆ, ಲಯನೆಸ್ ಅಧ್ಯಕ್ಷೆ ಪ್ರಮೀಳಾ ಆರ್. ಶೆಟ್ಟಿ, ಕಾರ್ಯದರ್ಶಿ ಪ್ರವೀಣಾ ಶೆಟ್ಟಿ, ಕೋಶಾಧಿಕಾರಿ ಕೀರ್ತಿ ಎಸ್. ಶೆಟ್ಟಿ, ಚಂದ್ರಕಾಂತಿ ಎಸ್. ಗೋಲಿಯಾರ್ ಉಪಸ್ಥಿತರಿದ್ದರು.
ಪೂರ್ವಾಧ್ಯಕ್ಷ ಉದಯ್ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ, ನೂತನ ಕಾರ್ಯದರ್ಶಿ ಲತೀಶ್ ರೈ ವಂದಿಸಿದರು. ಗುರುಪ್ರಸಾದ್ ಶೆಟ್ಟಿ ಪರಿಚಯಿಸಿದರು.ಪದಗ್ರಹಣ ನೆರವೇರಿಸಿದ ಡಾ| ಮಧುಸೂದನ್ ಹೆಗ್ಡೆ ಮತ್ತು ನಿಕಟ ಪೂರ್ವ ಅಧ್ಯಕ್ಷ ಸತೀಶ್ ಶೆಟ್ಟಿ ದಂಪತಿಯನ್ನು ಹಾಗೂ ಲಯನ್ಸ್ ಕ್ಲಬ್‌ಗ ಹಲವಾರು ವರ್ಷಗಳಿಂದ ಸಲ್ಲಿಸಿದ ಸೇವೆಗಾಗಿ ಹಿರಿಯ ಸದಸ್ಯ ಡಾ| ಜೆ. ದಿನೇಶ್ಚಂದ್ರ ಹೆಗ್ಡೆ ಅವರನ್ನು ಈ ಸಂದರ್ಭದಲ್ಲಿ ಸಮ್ಮಾನಿಸಲಾಯಿತು.