ನಿಷ್ಕ್ರಿಯ ಸಂಸದರನ್ನು ಮನೆಗೆ ಕಳಿಸಿ: ಪ್ರಮೋದ್ ಮಧ್ವರಾಜ್
Team Udayavani, Apr 16, 2019, 6:30 AM IST
ಶಿರ್ವ : ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದ ಸಂಸದರು ನಿಷ್ಕ್ರಿಯರಾಗಿದ್ದು, ಕೇಂದ್ರ ಸರಕಾರದ ಅನುದಾನದಿಂದ ಕಾಪು ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಸ್ವಪಕ್ಷೀಯ ಕಾರ್ಯಕರ್ತರಿಂದಲೇ ಗೋಬ್ಯಾಕ್ ಘೋಷಣೆಗೆ ಒಳಗಾದ ಸಂಸದೆ ಶೋಭಾ ಕರಂದ್ಲಾಜೆ ಬಗ್ಗೆ ಇಡೀ ಕ್ಷೇತ್ರದಲ್ಲಿ ಮತದಾರರು ಅಸಮಾಧಾನಗೊಂಡಿದ್ದಾರೆ. ಶಾಸಕ, ಸಚಿವನಾಗಿ ಪ್ರಾಮಾಣಿಕ ಕೆಲಸ ಮಾಡಿದ್ದು, ಜನಸಾಮಾನ್ಯರ ಕೈಗೆ ಸಿಗುವ ಸಂಸದನಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ದುಡಿಯುತ್ತೇನೆ. ಕೆಲಸ ಮಾಡಿದವರನ್ನು ದಿಲ್ಲಿಗೆ ಕಳಿಸಿ, ಕೆಲಸ ಮಾಡದ ನಿಷ್ಕ್ರಿಯ ಸಂಸದರನ್ನು ಮನೆಗೆ ಕಳಿಸಿ ಎಂದು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಜನತಾದಳ, ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಹೇಳಿದರು.
ಅವರು ರವಿವಾರ ಶಿರ್ವ ಮಟ್ಟಾರ್‌ನಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಇನ್ನುಳಿದ ಮೂರು ದಿನಗಳಲ್ಲಿ ಸಾಧ್ಯವಾದಷ್ಟು ಮತದಾರರನ್ನು ಸಂಪರ್ಕಿಸಿ ಮತದಾನ ದಲ್ಲಿ ಪಾಲ್ಗೊಳ್ಳುವಂತೆ ಮಾಡಿ ಅತ್ಯಧಿಕ ಮತಗಳಿಂದ ಗೆಲ್ಲಿಸಿ ಸಂಸದನಾಗಿ ಆಯ್ಕೆಯಾಗುವಲ್ಲಿ ಶ್ರಮಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.
ಮಾಜಿ ಶಾಸಕ ವಿನಯಕುಮಾರ್ ಸೊರಕೆ ಮಾತನಾಡಿ ಲೋಕಸಭಾ ಕ್ಷೇತ್ರದಲ್ಲಿ ಸಂಸದರ ವಿರುದ್ಧ ಅಲೆ ಇದ್ದು ಪ್ರಮೋದ್ ಮಧ್ವರಾಜ್ ಅತ್ಯಧಿಕ ಮತಗಳಿಂದ ಗೆಲ್ಲುವುದು ನಿಶ್ಚಿತ. ಕೇಂದ್ರ ಸರಕಾರದಿಂದ ಶಿರ್ವ, ಬೆಳ್ಮಣ್ ರಸ್ತೆಯಾಗಲೀ, ಇತರ ರಸ್ತೆಗಳಿಗಾಗಲೀಯಾವುದೇ ಅನುದಾನ ಕೇಂದ್ರ ಸರಕಾರದಿಂದ ಬಂದಿಲ್ಲ. ಕ್ಷೇತ್ರದಲ್ಲಿ ಸಂಸದರಿಂದ ಯಾವ ಕೆಲಸವೂ ಆಗಿಲ್ಲ. ಪ್ರಮೋದ್ ಮಧ್ವರಾಜ್ ಸಮರ್ಥ ಅಭ್ಯರ್ಥಿಯಾಗಿದ್ದು, ಅವರನ್ನು ಗೆಲ್ಲಿಸಿ ಕಳುಹಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯ ವಿಲ್ಸನ್ ರೊಡ್ರಿಗಸ್, ಹಿರಿಯ ಧುರೀಣ ಇಗ್ನೇಶಿಯಸ್ ಡಿ‡’ಸೋಜಾ ಶಿರ್ವ, ಗ್ರಾ.ಪಂ ಸದಸ್ಯರಾದ ಲೀನಾ ಮಥಾಯಸ್, ಮೆಲ್ವಿನ್ ಡಿ‡’ಸೋಜಾ,ರತನ್ ಶೆಟ್ಟಿ, ಮಾಜಿ ಜಿ.ಪಂ. ಸದಸ್ಯೆ ಐಡಾ ಗಿಬ್ಬ ಡಿ‡’ಸೋಜಾ, ಕಾಪು ಕಾಂಗ್ರೆಸ್ ಕ್ಷೇತ್ರಾಧ್ಯಕ್ಷ ನವೀನ್‌ಚಂದ್ರ ಸುವರ್ಣ, ಜಿಲ್ಲಾ ಉಸ್ತುವಾರಿ ಪ್ರಕಾಶ್ ಜತ್ತನ್ನ, ಜನತಾದಳ ಜಿಲ್ಲಾಧ್ಯಕ್ಷ ಯೋಗೀಶ ಶೆಟ್ಟಿ, ದಳದ ಮುಖಂಡ ವಾಸುದೇವ ರಾವ್, ಹರೀಶ್ ಕಿಣಿ ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.