ಆಗುಂಬೆಯಿಂದ “ವರುಣ’ ಉಡುಪಿಗೆ ಶಿಫ್ಟ್?
Team Udayavani, May 24, 2022, 1:30 AM IST
ಬೆಂಗಳೂರು: ದಕ್ಷಿಣ ಭಾರತದ ಚಿರಾಪುಂಜಿ ಹಣೆಪಟ್ಟಿ ಈಗ ಆಗುಂಬೆಯಿಂದ ಕರಾವಳಿಗೆ ಶಿಫ್ಟ್ ಆಗಿದೆಯೇ? ಭವಿಷ್ಯದಲ್ಲಿ ಪಶ್ಚಿಮಘಟ್ಟಗಳಲ್ಲಿ ಇನ್ನೂ ವ್ಯಾಪಕ ಮಳೆ ಸುರಿಯಲಿದೆಯೇ?
“ಹೌದು’ ಎನ್ನುತ್ತವೆ ಕಳೆದ ಐದು ವರ್ಷಗಳಿಂದ ಸುರಿಯುತ್ತಿರುವ ಮಳೆಯ ಅಂಕಿ-ಅಂಶಗಳು ಹಾಗೂ ವಿಜ್ಞಾನಿಗಳ ಸಂಶೋಧನೆಗಳು.
ಈ ಹಿಂದೆ ಆಗುಂಬೆಯಲ್ಲಿ ಗರಿಷ್ಠ ಮಳೆಯಾಗುತ್ತಿತ್ತು. ಇದೇ ಕಾರಣಕ್ಕೆ ದಕ್ಷಿಣ ಭಾರತದ ಚಿರಾಪುಂಜಿ ಎಂಬ ಹೆಗ್ಗಳಿಕೆಗೂ ಅದು ಪಾತ್ರವಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಆ ಪಟ್ಟ ಕಳಚುತ್ತಿದ್ದು, ಕರಾವಳಿಯ ಉಡುಪಿ ಗರಿಷ್ಠ ಮಳೆಗೆ ಸಾಕ್ಷಿಯಾಗುತ್ತಿದೆ. ಮುಂಬರುವ ವರ್ಷಗಳಲ್ಲಿ ಕೂಡ ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ದತ್ತಾಂಶದ ಪ್ರಕಾರ 2015ರಿಂದ 2021ರ ಅವಧಿಯಲ್ಲಿ ಐದು ವರ್ಷ ಉಡುಪಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ರಾಜ್ಯದಲ್ಲೇ ಅತೀ ಹೆಚ್ಚು ಮಳೆ ದಾಖಲಾಗಿದೆ. ಇದಕ್ಕೆ ಪೂರಕವಾಗಿ ಹೇಳುವುದಾದರೆ, ಉಡುಪಿ ತಾಲೂಕಿನ ಬೈರಂಪಳ್ಳಿಯಲ್ಲಿ 2016ರಲ್ಲಿ 59.16 ಸೆಂ.ಮೀ. ಮಳೆಯಾಗಿತ್ತು. ಆ ವರ್ಷ ರಾಜ್ಯದಲ್ಲೇ ದಾಖಲಾದ ಅತಿಹೆಚ್ಚು ಮಳೆ ಅದು ಎನ್ನಲಾಗಿದೆ. ಅದೇ ರೀತಿ, 2017ರಲ್ಲಿ ಕಾರ್ಕಳ ತಾಲ್ಲೂಕಿನ ಶಿರ್ಲಾಲುವಿನಲ್ಲಿ ಅತಿ ಹೆಚ್ಚು ಅಂದರೆ 69.39 ಸೆಂ.ಮೀ. ಮಳೆ ದಾಖಲಾಗಿತ್ತು. 2019ರಲ್ಲಿ ಹೆಬ್ರಿಯಲ್ಲಿ 93.40 ಸೆಂ.ಮೀ. ಮಳೆ ಸುರಿದು, ಆ ವರ್ಷದ ಅಧಿಕ ಮಳೆಯಾದ ಸ್ಥಳ ಎಂದೆನಿಸಿಕೊಂಡಿತು. 2021ರಲ್ಲಿ ಉಡುಪಿಯ ಇನ್ನಂಜೆಯಲ್ಲಿ ಗರಿಷ್ಠ 79.88 ಸೆಂ.ಮೀ. ಮಳೆ ಸುರಿಯಿತು. ಅದರ ಮರುವರ್ಷ ಕಾರ್ಕಳದ ಮುದ್ರಾಡಿಯಲ್ಲಿ 79.49 ಸೆಂ.ಮೀ.
ಮಳೆಯಾಗಿತ್ತು. ಚಿಕ್ಕಮಗಳೂರಿನ ಶೃಂಗೇರಿ ತಾಲೂಕಿನ ಕೆರೆ ಎಂಬಲ್ಲಿ 52.99 ಸೆಂ.ಮೀ. ಮಳೆ 2015ರಲ್ಲಿ ದಾಖಲಾಗಿದ್ದು, ಇದು ರಾಜ್ಯದಲ್ಲೇ ಹೆಚ್ಚು. ಉ.ಕ. ಜಿಲ್ಲೆ ಸಿದ್ದಾಪುರ ತಾ| ಕೊಕಣಿಯಲ್ಲಿ 2018ರಲ್ಲಿ 79.78 ಸೆಂ.ಮೀ. ಮಳೆ ದಾಖಲಾಗಿತ್ತು. ಈ ಎರಡೂ ಜಿಲ್ಲೆಗಳೂ ಪಶ್ಚಿಮ ಘಟ್ಟದ ಭಾಗಗಳೇ 2015ರಿಂದ 2121ರ ಅವಧಿಯಲ್ಲಿ ಆಗುಂಬೆಗಿಂತ ನಾಲ್ಕು ಬಾರಿ ಹೊಸನಗರ ತಾ|ನ ಹುಲಿಕಲ್‌ನಲ್ಲಿ ಅತಿ ಹೆಚ್ಚು ಮಳೆಯಾಗಿದೆ.
ತಾಪಮಾನವೂ ಹೆಚ್ಚಳ!
ತಾಪಮಾನದಲ್ಲೂ ಹೆಚ್ಚಳ ಆಗಿದೆ. ಪಶ್ಚಿಮಘಟ್ಟ ಪ್ರದೇಶಗಳಲ್ಲಿ 0.5 ಡಿಗ್ರಿ ಸೆ. ಉಷ್ಣಾಂಶ ಏರಿಕೆ ಆಗಿದೆ. ಇದಕ್ಕೆಲ್ಲ ಮುಖ್ಯ ಕಾರಣ ಕಳೆದ ಎರಡು-ಮೂರು ದಶಕಗಳಲ್ಲಿ ಅರಣ್ಯಪ್ರದೇಶ ಗಣನೀಯವಾಗಿ ಕಡಿಮೆಯಾಗಿದ್ದು, ಕೃಷಿ ಚಟುವಟಿಕೆಗಳು, ಅಕೇಷಿಯ, ರಬ್ಬರ್‌ನಂತಹ ಏಕವಿಧದ ಗಿಡಮರಗಳು ಹೆಚ್ಚಾಗಿವೆ’ ಎಂದು ಐಐಎಸ್ಸಿಯ ವಿಜ್ಞಾನಿ ಟಿ.ವಿ. ರಾಮಚಂದ್ರ ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.