ಬಡ ಕುಟುಂಬದಲ್ಲಿ ಅರಳಿದ ಪ್ರತಿಭಾನ್ವಿತೆ ಸನಾ ಕೌಸರ್
Team Udayavani, May 22, 2018, 2:40 AM IST
ಶಿರ್ವ : ಎಸೆಸೆಲ್ಸಿ ಪರೀಕ್ಷೆಯಲ್ಲಿ 608ಅಂಕಗಳೊಂದಿಗೆ ಶೇ.97.28 ಫಲಿತಾಂಶ ದಾಖಲಿಸಿರುವ ಶಿರ್ವ ಫೈಝಲ್ ಇಸ್ಲಾಂ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸನಾ ಕೌಸರ್. ಕೋಚಿಂಗ್ ಇಲ್ಲದೆ, ತರಗತಿಯಲ್ಲಿ ಕಲಿಸಿದ ಪಾಠಗಳನ್ನು ಶಿಕ್ಷಕರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡಿ ಶಾಲೆಯ ಚರಿತ್ರೆಯಲ್ಲಿ ಅತ್ಯಧಿಕ ಅಂಕ ದಾಖಲಿಸಿದ ವಿದ್ಯಾರ್ಥಿನಿ ಎಂಬ ಕೀರ್ತಿಗೆ ಪಾತ್ರಳಾಗಿದ್ದಾಳೆ.
ಗ್ರಾಮೀಣ ಪ್ರದೇಶದ ತೀರಾ ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದು, ಶಾಲೆಯ ಆಡಳಿತ ಮಂಡಳಿಯ ಸದಸ್ಯರ ಪ್ರಾಯೋಜಕತ್ವದಲ್ಲಿ ಕಷ್ಟಪಟ್ಟು ಕಲಿತು ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿ ಶಾಲೆಗೆ ಮತ್ತು ಹೆತ್ತವರಿಗೆ ಕೀರ್ತಿ ತಂದಿದ್ದಾಳೆ.
ಬಡ ಕುಟುಂಬ
ಶಿರ್ವ ಮಸೀದಿ ಬಳಿಯ ನಿವಾಸಿ ಕೂಲಿ ಕಾರ್ಮಿಕ ಸಾಬ್‌ಜಾನ್ (ದೂರವಾಣಿ: 8105249544) ಮತ್ತು ಮನೆಗೆಲಸದ ಜುಬೇದಾ ದಂಪತಿಯ ಇಬ್ಬರು ಮಕ್ಕಳಲ್ಲಿ ಕಿರಿಯವಳು ಸನಾ ಕೌಸರ್. ಈಕೆಯ ಹೆತ್ತವರು ಮೂಲತಃ ಅರಸೀಕೆರೆಯವರು. ಸಹೋದರ ಮಹಮ್ಮದ್ ಪರ್ವೇಜ್ ಕೂಡಾ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು ಇದೇ ಶಾಲೆಯಲ್ಲಿ ದ್ವಿತೀಯ ಸ್ಥಾನ ಪಡೆದು ಪಾಸಾಗಿ ಪ್ರಸ್ತುತ ಶಿರ್ವ ಸಂತ ಮೇರಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಸೈನ್ಸ್ ವಿಭಾಗದಲ್ಲಿ ಕಲಿಯುತ್ತಿದ್ದಾನೆ. ತಂದೆ 2ನೇ ತರಗತಿ ಕಲಿತಿದ್ದರೆ ತಾಯಿ 4ನೇ ತರಗತಿ ಪಾಸು ಮಾಡಿದ್ದಾರೆ. ತಾವು ಹೆಚ್ಚು ವಿದ್ಯೆ ಪಡೆಯದೆ ಇದ್ದರೂ ಬಡತನ ಇದ್ದರೂ ಮಕ್ಕಳು ಉನ್ನತ ಶಿಕ್ಷಣ ಗಳಿಸಬೇಕೆಂಬುದು ಹೆತ್ತವರ ಹೆಬ್ಬಯಕೆ.
ಶಾಲೆಯ ಪಕ್ಕದಲ್ಲಿರುವ ಬಾಡಿಗೆ ಮನೆಯಲ್ಲಿ ಈ ಕುಟುಂಬ ವಾಸವಾಗಿದ್ದು, ಆರ್ಥಿಕ ಅಡಚಣೆಯ ನಡುವೆಯೂ ಸನಾ ಕೌಸರ್ ಸಿಎ ಪಾಸು ಮಾಡಬೇಕೆಂಬ ಕನಸು ಕಾಣುತ್ತಿದ್ದಾಳೆ.
ಸಿಎ ಕನಸು
ಮನೆಯ ಪಕ್ಕದಲ್ಲಿ ಶಾಲೆ ಇದ್ದುದರಿಂದ ಓದಲು ಶಿಕ್ಷಕರು, ಅಪ್ಪ-ಅಮ್ಮ ತುಂಬಾ ಸಹಕಾರ ನೀಡಿದ್ದಾರೆ. ಶಾಲೆಯ ಶಿಕ್ಷಕರ ಟ್ಯೂಶನ್ ಬಿಟ್ಟರೆ ಯಾವುದೇ ಕೋಚಿಂಗ್‌ಗೆ ಹೋಗಲಿಲ್ಲ. ಮುಂದೆ ಸಿಎ ಪಾಸು ಮಾಡುವ ಕನಸಿದೆ.
– ಸನಾ ಕೌಸರ್
ಯಶೋಗಾಥೆ ತಿಳಿಸಿ
ಹತ್ತಾರು ಕೊರತೆಗಳ ಮಧ್ಯೆ ಪರೀಕ್ಷೆ ಯನ್ನು ಗೆದ್ದು ಸ್ಫೂರ್ತಿಯಾದವರು ಹಲವರಿದ್ದಾರೆ. ಎಸೆಸೆಲ್ಸಿ ಪರೀಕ್ಷೆಯಲ್ಲಿ ಹೀಗೆಯೇ ನಿಮ್ಮ ಸುತ್ತಮುತ್ತ ಕಷ್ಟದ ಕಲ್ಲು ಮುಳ್ಳುಗಳ ಮಧ್ಯೆಯೇ ಮಹತ್ತರ ಸಾಧನೆ ಮಾಡಿದವರಿದ್ದರೆ ಅವರ ದೂರವಾಣಿ ಸಂಖ್ಯೆ, ಹೆಸರು ತಿಳಿಸಿ. ನಾವು ಅವರ ಬಗ್ಗೆ ಪ್ರಕಟಿಸುತ್ತೇವೆ, ಉಳಿದವರಿಗೂ ಸ್ಫೂರ್ತಿಯಾಗಲಿ.
ನಮ್ಮ ವಾಟ್ಸಪ್ ಸಂಖ್ಯೆ
99641 69554
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.