ಶಿರ್ವ: ತಂದೆ -ತಾಯಿಯ ವಿವಾಹ ವಾರ್ಷಿಕೋತ್ಸವಕ್ಕೆ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಿದ ಮಕ್ಕಳು
ಅಟ್ಟಿಂಜೆ ಶಂಭು ಶೆಟ್ಟಿ-ಹೇಮಲತಾ ಶೆಟ್ಟಿ ದಂಪತಿ ಮತ್ತು ಮಕ್ಕಳ ಕೊಡುಗೆ
Team Udayavani, May 19, 2022, 9:53 AM IST
ಶಿರ್ವ: ಅಟ್ಟಿಂಜೆ ಶಂಭು ಶೆಟ್ಟಿ ಮತ್ತು ಹೇಮಲತಾ ಶೆಟ್ಟಿಯವರ ವಿವಾಹ ವಾರ್ಷಿಕೋತ್ಸವದ ಸ್ವರ್ಣ ಮಹೋತ್ಸವದ ಸವಿನೆನಪಿಗಾಗಿ ಅವರ ಮಕ್ಕಳು ಸುಮಾರು 40 ಲ. ರೂ. ವೆಚ್ಚದಲ್ಲಿ ನಿರ್ಮಿಸಿ ಶಿರ್ವ ಗ್ರಾ.ಪಂ. ಗೆ ಕೊಡುಗೆಯಾಗಿ ನೀಡಿದ ಹೈಟೆಕ್ ಬಸ್ಸು ನಿಲ್ದಾಣ ಬುಧವಾರ ಲೋಕಾರ್ಪಣೆಗೊಂಡಿತು.
ನೂತನ ಬಸ್ಸು ನಿಲ್ದಾಣವನ್ನು ಶಿರ್ವ ಅಟ್ಟಿಂಜೆ ಶಂಭು ಶೆಟ್ಟಿ ಮತ್ತು ಹೇಮಲತಾ ಶೆಟ್ಟಿ ದಂಪತಿ ಉದ್ಘಾಟಿಸಿದರು. ಬಳಿಕ ಶಿರ್ವ ಮಹಿಳಾ ಸೌಧದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಆಗಮ ವಿದ್ವಾಂಸ ಕುತ್ಯಾರು ಕೇಂಜ ಶ್ರೀಧರ ತಂತ್ರಿ, ಶಿರ್ವ ಆರೋಗ್ಯ ಮಾತಾ ದೇವಾಲಯದ ಪ್ರಧಾನ ಧರ್ಮಗುರು ರೆ|ಫಾ| ಡೆನ್ನಿಸ್ ಡೇಸಾ ಮತ್ತು ಶಿರ್ವ ಸುನ್ನಿ ಜಾಮಿಯಾ ಮಸೀದಿಯ ಖತೀಬರಾದ ಸಿರಾಜುದ್ದೀನ್ ಝೈನಿ ದೀಪ ಬೆಳಗಿಸಿ ಉದ್ಘಾಟಿಸಿದರು.
ವಿವಾಹ ವಾರ್ಷಿಕೋತ್ಸವದ ಸ್ವರ್ಣ ಮಹೋತ್ಸವ ಆಚರಿಸುತ್ತಿರುವ ಅಟ್ಟಿಂಜೆ ಶಂಭು ಶೆಟ್ಟಿ ದಂಪತಿಯನ್ನು ಶಿರ್ವ ಗ್ರಾ.ಪಂ. ವತಿಯಿಂದ ಸಮ್ಮಾನಿಸಿ ಗೌರವಿಸಲಾಯಿತು. ಗ್ರಾ.ಪಂ. ಸದಸ್ಯೆ ವೈಲೆಟ್ ಕ್ಯಾಸ್ತಲಿನೋ ಸಮ್ಮಾನ ಪತ್ರ ವಾಚಿಸಿದರು. ಬಸ್‌ನಿಲ್ದಾಣದ ಗುತ್ತಿಗೆದಾರ ಆನಂದ ಅರಾನ್ಹಾ ಅವರನ್ನು ಗೌರವಿಸಲಾಯಿತು.
ಮುಖ್ಯ ಅತಿಥಿ ಎಲ್ಲೂರು ಸೀಮೆಯ ಆಗಮ ವಿದ್ವಾಂಸ ಕುತ್ಯಾರು ಕೇಂಜ ಶ್ರೀಧರ ತಂತ್ರಿ ಮಾತನಾಡಿ ಮನುಷ್ಯನ ಲೌಕಿಕ ಯಾತ್ರೆಯ ತಾಣ ಬಸ್ಸು ತಂಗುದಾಣವಾಗಿದ್ದು, ದೇವರು ಕೊಟ್ಟ ಸಂಪತ್ತನ್ನು ಸಮಾಜಕ್ಕಾಗಿ ವಿನಿಯೋಗಿಸಿದಾಗ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದರು.
ಶಿರ್ವ ಆರೋಗ್ಯ ಮಾತಾ ದೇವಾಲಯದ ಪ್ರಧಾನ ಧರ್ಮಗುರು ರೆ|ಫಾ| ಡೆನ್ನಿಸ್ ಡೇಸಾ ಮಾತನಾಡಿ ಬಸ್ ನಿಲ್ದಾಣ ಎಲ್ಲರನ್ನೂ ಒಗ್ಗೂಡಿಸುವ ಸಾಮರಸ್ಯದ ತಾಣವಾಗಿದ್ದು, ಸಮಾಜಕ್ಕೆ ಕೊಡುಗೆ ನೀಡಿದ ಶಂಭು ಶೆಟ್ಟಿ ದಂಪತಿ ಮತ್ತು ಮಕ್ಕಳನ್ನು ಅಭಿನಂದಿಸಿದರು.
ಇದನ್ನೂ ಓದಿ:ಮುಂದುವರಿದ ಭಾರೀ ಮಳೆ: ಮೈಸೂರು, ದಕ್ಷಿಣ ಕನ್ನಡ, ಶಿವಮೊಗ್ಗದ ಶಾಲೆಗಳಿಗೆ ರಜೆ ಘೋಷಣೆ
ಶಿರ್ವ ಸುನ್ನಿ ಜಾಮಿಯಾ ಮಸೀದಿಯ ಖತೀಬರಾದ ಸಿರಾಜುದ್ದೀನ್ ಝೈನಿ ಮಾತನಾಡಿ ಸ್ನೇಹ,ಸೌಹಾರ್ದತೆ ಮತ್ತು ಸಹಬಾಳ್ವೆಯೊಂದಿಗೆ ಜೀವನ ನಡೆಸುವ ಶಿರ್ವದಲ್ಲಿ ಜನಮಾನಸದಲ್ಲಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯುವ ಕೆಲಸ ಶಂಭು ಶೆಟ್ಟಿ ದಂಪತಿ ಮತ್ತು ಮಕ್ಕಳಿಂದ ನಡೆದಿದೆ ಎಂದು ಹೇಳಿದರು.
ಶಿರ್ವ ಗ್ರಾ.ಪಂ. ಅಧ್ಯಕ್ಷ ಕೆ.ಆರ್. ಪಾಟ್ಕರ್‌ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾ.ಪಂ. ಉಪಾಧ್ಯಕ್ಷೆ ಗ್ರೇಸಿ ಕಾರ್ಡೋಜಾ ಮತ್ತು ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷೆ ವನಿತಾ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಸುಧೀರ್ ಶೆಟ್ಟಿ, ಪ್ರದೀಪ್ ಶೆಟ್ಟಿ,ಜಯಪಾಲ ಶೆಟ್ಟಿ, ಜಯಶ್ರೀ ಶೆಟ್ಟಿ, ಜ್ಯೋತಿ ಶೆಟ್ಟಿ, ಮಿನಿ ಶೆಟ್ಟಿ, ಶಂಭು ಶೆಟ್ಟಿಯವರ ಕುಟುಂಬದ ಸದಸ್ಯರು, ರವೀಂದ್ರ ಶೆಟ್ಟಿ ಕೊಲ್ಲಬೆಟ್ಟು, ಉದಯ ಶೆಟ್ಟಿ ಕಲ್ಲರಬೆಟ್ಟು, ಕುತ್ಯಾರು ಸಾಯಿನಾಥ ಶೆಟ್ಟಿ, ಗ್ರಾ.ಪಂ. ಸದಸ್ಯರು, ಗ್ರಾ.ಪಂ.ಸಿಬಂದಿ, ಮಹಿಳಾ ಮಂಡಳಿಯ ಸದಸ್ಯೆಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಪಿಡಿಒ ಅನಂತಪದ್ಮನಾಭ ನಾಯಕ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಶಿಕ್ಷಕ ಪಿಲಾರು ಸುಧಾಕರ ಶೆಣೈ ಕಾರ್ಯಕ್ರಮ ನಿರೂಪಿಸಿ, ಗಾ.ಪಂ. ಕಾರ್ಯದರ್ಶಿ ಮಂಗಳಾ ಜೆ.ವಿ. ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.