Shirva: ಮನೆ ಜಗಲಿಯಲ್ಲಿ ಮಲಗಿದ್ದಾತನ ಮೇಲೆ ಚಿರತೆ ದಾಳಿ; ಗಂಭೀರ ಗಾಯ
Team Udayavani, Mar 25, 2024, 1:37 PM IST
ಶಿರ್ವ: ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲೊಟ್ಟು ಬಳಿ ಚಿರತೆಯೊಂದು ಮನೆಯ ಜಗಲಿಯಲ್ಲಿ ಮಲಗಿದ್ದ ವ್ಯಕ್ತಿಯೋರ್ವರ ಮೇಲೆ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ ಘಟನೆ ರವಿವಾರ ರಾತ್ರಿ ನಡೆದಿದೆ.
ನದಿಯಲ್ಲಿ ಮರಳುಗಾರಿಕೆ ನಡೆಸುವ ಬಿಹಾರ ಮೂಲದ ಕಾರ್ಮಿಕ ಸುರೇಂದ್ರ (55 ವ) ಗಾಯಗೊಂಡ ವ್ಯಕ್ತಿ.
ಆತ ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾ ರಾಜೇಶ್ ಅವರ ಮನೆ ಬಳಿಯ ಕಲ್ಲೊಟ್ಟು ಸಂತೋಷ್ ಪೂಜಾರಿ ಅವರ ಮನೆಯ ವರಾಂಡದಲ್ಲಿ ಮಲಗಿದ್ದು, ರಾತ್ರಿ ಚಿರತೆ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದೆ. ಕೆನ್ನೆ, ಗಲ್ಲ ಮತ್ತು ಮುಖಕ್ಕೆ ಗಾಯಗೊಳಿಸಿದ್ದು ರಕ್ತದ ಕೋಡಿ ಹರಿದಿದೆ. ಚಿಕಿತ್ಸೆಗಾಗಿ ಅವರನ್ನು ಉಡುಪಿಯ ಅಜ್ಜರಕಾಡು ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿಲಾಗಿದೆ. ದಾಳಿ ನಡೆಸಿದ ಚಿರತೆಯೊಂದಿಗೆ ಮರಿ ಚಿರತೆಯೂ ಇತ್ತು ಎನ್ನಲಾಗಿದೆ.
ಕಲ್ಲೊಟ್ಟು, ಸೊರ್ಪು, ಆಗೋಳಿಬೈಲು, ಪದವು ಪರಿಸರದಲ್ಲಿ ಕಳೆದ ಕೆಲವು ಸಮಯಗಳಿಂದ ಚಿರತೆ ಓಡಾಡುತ್ತಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕಳೆದೆರಡು ದಿನಗಳಲ್ಲಿ ಕಲ್ಲೊಟ್ಟು ಸಂಗೀತಾ ನಾಯ್ಕ ಅವರ ಮನೆಯ ಎರಡು ಸಾಕು ನಾಯಿಗಳನ್ನು ಚಿರತೆ ಬೇಟೆಯಾಡಿ ನಾಯಿಗಳೆರಡನ್ನೂ ತಿಂದು ಹಾಕಿದೆ.
ಕಳೆದ ನವೆಂಬರ್‌ನಲ್ಲಿ ಇದೇ ಪರಿಸರದ ಕಲ್ಲೊಟ್ಟು ದೇವಣ್ಣ ನಾಯಕ್ ಅವರ ಮನೆಯ ಸಾಕು ನಾಯಿಯನ್ನು ಚಿರತೆ ಬೇಟೆಯಾಡಿ ಅರ್ಧ ತಿಂದು ಹಾಕಿ ಉಳಿದರ್ಧ ದೇಹವನ್ನು ಮಲ್ಲಿಗೆ ಗಿಡದ ತೋಟದ ಬಳಿ ಬಿಟ್ಟು ಹೋಗಿತ್ತು.
ಕಳೆದ ವರ್ಷ ಚಿರತೆಯೊಂದು ಪದವು ಮುಟ್ಲುಪಾಡಿ ರಸ್ತೆಯಲ್ಲಿ ಓಡಾಡುತ್ತಿರುವುದನ್ನು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೋರ್ವರು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದರೆಂದು ನಂಬಲಾದ ವೀಡಿಯೋವೊಂದು ವೈರಲ್ ಆಗಿತ್ತು. ಆ ಸಮಯ ಅರಣ್ಯ ಇಲಾಖೆಯವರು ಅಗೋಳಿಬೈಲು ಸಮೀಪ ದರ್ಕಾಸು ಬಳಿ ಚಿರತೆ ಹಿಡಿಯಲು ಬೋನು ಇಟ್ಟಿದ್ದರು. ಆದರೆ ಚಿರತೆ ಬೋನಿಗೆ ಬಿದ್ದಿರಲಿಲ್ಲ.
ಈ ರಸ್ತೆಯಲ್ಲಿ ಪ್ರತೀದಿನ ಶಿರ್ವದ ವಿವಿಧ ಶಾಲಾ ಕಾಲೇಜುಗಳಿಗೆ ಕಾಲ್ನಡಿಗೆಯಲ್ಲಿ ಹೋಗುವ ವಿದ್ಯಾರ್ಥಿಗಳು, ವಿವಿಧ ಸ್ಥಳಗಳಿಗೆ ಕೆಲಸಕ್ಕೆ ಹೋಗುವ ಪರಿಸರದ ನಾಗರಿಕರು, ವಾಹನ ಸವಾರರು ಭಯಭೀತರಾಗಿದ್ದು, ಗ್ರಾ.ಪಂ. ಆಡಳಿತ ಮತ್ತು ಅರಣ್ಯ ಇಲಾಖೆ ಸಮಸ್ಯೆಗೆ ತುರ್ತು ಪರಿಹಾರ ಒದಗಿಸಬೇಕಾಗಿದೆ.
ಪರಿಹಾರ ನೀಡಲು ಪ್ರಯತ್ನ
ಘಟನೆ ನಡೆದ ಕಲ್ಲೊಟ್ಟು ಪರಿಸರದಲ್ಲಿ ಬೋನು ಇಡಲು ಅರಣ್ಯ ರಕ್ಷಕರಿಗೆ ಸೂಚಿಸಲಾಗಿದೆ. ಗಾಯಾಳುವನ್ನು ಭೇಟಿ ಮಾಡಿ, ದಾಳಿ ನಡೆಸಿದ್ದು ಚಿರತೆಯೇ ಆಗಿದ್ದರೆ, ಮಹಜರು ನಡೆಸಿ ಸರಕಾರದಿಂದ ಗರಿಷ್ಠ ಪರಿಹಾರ ನೀಡಲು ಪ್ರಯತ್ನಿಸಲಾಗುವುದು ಎಂದು ಪಡುಬಿದ್ರಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಜೀವನ್ ದಾಸ್ ಶೆಟ್ಟಿ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.