ಶ್ರೀ ದೇವರ ಅಡಿಕೆ ಪೂಜಾ ಉತ್ಸವ ಈ ಗ್ರಾಮದಲ್ಲಿ ಮಾತ್ರ
Team Udayavani, Nov 24, 2022, 6:54 PM IST
ಕಟಪಾಡಿ: ಇತರೆಡೆ ಎಲ್ಲಿಯೂ ಆಚರಣೆಯಲ್ಲಿ ಇಲ್ಲದ ವಿಶೇಷ ಸಂಪ್ರದಾಯವು ಚೊಕ್ಕಾಡಿ ಶ್ರೀ ಮಹಾಲಿಂಗೇಶ್ವರನ ಸನ್ನಿಧಾನದಲ್ಲಿ ಅನಾದಿ ಕಾಲದಿಂದಲೂ ನಡೆಯುತ್ತಿದೆ. ಈ ಗ್ರಾಮದಲ್ಲಿ ಮಾತ್ರ ವಿಶೇಷವಾಗಿ ಕಾರ್ತಿಕ ಮಾಸದ ಕೃಷ್ಣಪಕ್ಷದ ಅಮಾವಾಸ್ಯೆಯ ದಿನ ಸಂಪ್ರದಾಯದಂತೆ ಅಡಿಕೆ ಪೂಜೆಯು ನಡೆಯುತ್ತಿದೆ.
ಅಡಿಕೆ ಬೆಳೆಗಾರರ ಮೊದಲ ಫಸಲಿನ ಅಡಿಕೆ ಗೊನೆಯನ್ನು ದೇಗುಲದಲ್ಲಿ ಕಟ್ಟುವ ಮೂಲಕ ಗ್ರಾಮದ ಅಧಿಪತಿಗೆ ಸಮರ್ಪಿಸುತ್ತಾರೆ. ಬಳಿಕ ದೇವರಿಗೆ ಸಮರ್ಪಣೆ ನಡೆಸಿದ ಅಡಿಕೆಯನ್ನು ಪ್ರಸಾದ ರೂಪದಲ್ಲಿ ಭಕ್ತರಿಗೆ ವಿತರಿಸಲಾಗುತ್ತದೆ. ಭಕ್ತರು ಅಡಿಕೆ ಪ್ರಸಾದವನ್ನು ಬೆಳೆಯಾಗಿಸುತ್ತಾರೆ. ರಕ್ಷೆಯಾಗಿಯೂ ಬಳಸುತ್ತಾರೆ ಎಂದು ಶಿವರಾಜ ಉಪಾಧ್ಯಾಯ ಅವರು ಉದಯವಾಣಿಗೆ ಮಾಹಿತಿ ನೀಡಿದ್ದಾರೆ.
ಈ ಸಂದರ್ಭ ಶ್ರೀ ಕ್ಷೇತ್ರದ ತಂತ್ರಿಗಳಾದ ಕಂಬಳಕಟ್ಟ ರಾಧಾಕೃಷ್ಣ ತಂತ್ರಿ, ಪ್ರಧಾನ ಅರ್ಚಕರಾದ ವಿಷ್ಣುಮೂರ್ತಿ ನೆಲ್ಲಿ, ವಿಟಲ ರಾವ್, ಅರ್ಚಕ ವೃಂದ ಪೌರೋಹಿತ್ಯದಲ್ಲಿ ಶ್ರೀ ದೇವರಿಗೆ 1008 ಕೊಡ ಜಲಾಭಿಷೇಕ, ನವಕ ಪ್ರಧಾನ ಹೋಮ, ಕಲಶಾಭಿಷೇಕ, ಪಂಚಾಮೃತ ಅಭಿಷೇಕ, ಸಂಜೆ ಪೀಠಪೂಜೆ, ಬಲಿ, ರಾತ್ರಿ ಪೂಜೆ, ಮಹಾರಂಗಪೂಜೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಿದ್ದು, ಮಧ್ಯಾಹ್ನ ಸಂತರ್ಪಣೆಯು ನಡೆಯಿತು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ ಕುದ್ರಾಡಿ, ವ್ಯವಸ್ಥಾಪನ ಸಮಿತಿ ಸದಸ್ಯರು, ಪ್ರಮುಖರಾದ ಬಾಲಸುಂದರ್ ಭಟ್, ಗೋಪಾಲಕೃಷ್ಣ ಮಯ್ಯ, ಸುಂದರ್ ರಾವ್, ಪ್ರಭಾಕರ್ ರಾವ್, ಗಣೇಶ್ ಶೆಟ್ಟಿ ಕುರ್ಕಾಲು ಬೀಡು, ದಿವಾಕರ್ ರಾವ್ ಚೊಕ್ಕಾಡಿ, ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.