ರಥಬೀದಿ, ಪೇಜಾವರ ಮಠದಲ್ಲಿ ನೀರವ ಮೌನ
Team Udayavani, Dec 31, 2019, 7:50 AM IST
ಉಡುಪಿ: ಪಾಮರರಿಂದ ಹಿಡಿದು ಪಂಡಿತರ ವರೆಗೆ, ಸಾಮಾನ್ಯರಿಂದ ಹಿಡಿದು ಪ್ರಧಾನಿಯವರೆಗೆ ಸಂಪರ್ಕ ಹೊಂದಿದ್ದರೂ ಪೇಜಾವರ ಮಠದ ಒಂದು ಸಣ್ಣ ಕೋಣೆಯಲ್ಲಿ ಸಾಮಾನ್ಯ ಮಂಚದ ಮೇಲೆ ಮಲಗುತ್ತಿದ್ದ ಪೇಜಾವರ ಶ್ರೀಗಳು ರವಿವಾರ ಹರಿಪಾದ ಸೇರಿದ ಪರಿಣಾಮ ಸೋಮವಾರ ಮಠದೊಳಗೂ ಹೊರಗೂ ದಿವ್ಯಮೌನ ಆವರಿಸಿತ್ತು.
ಸ್ವಾಮೀಜಿಯವರು ಮಠದಲ್ಲಿದ್ದರೆ ಅಥವಾ ಮಠಕ್ಕೆ ಬರುತ್ತಾರೆಂದು ಗೊತ್ತಾಗುತ್ತಿದ್ದರೆ ಗಿಜಿಗುಡುತ್ತಿದ್ದ ಜನಸಂದಣಿ ಸೋಮವಾರ ಇರಲಿಲ್ಲ. ಉಡುಪಿಯಲ್ಲಿದ್ದಾಗ ಮಠದ ಗರ್ಭಗುಡಿ ಎದುರು ಅವರು ಜಪ, ಪಾರಾಯಣ ಮಾಡುತ್ತಿದ್ದ ಸ್ಥಳ ಅವರಿಲ್ಲದ ಶೂನ್ಯಭಾವವನ್ನು ಹೊಂದಿತ್ತು. ಸ್ವಾಮಿಗಳಿದ್ದಾರೆಂದರೆ ಅವರ ಸುತ್ತಮುತ್ತ ಓಡಾಡುತ್ತಿದ್ದ ವಿದ್ಯಾರ್ಥಿಗಳೊಬ್ಬರೂ ಇಲ್ಲದ ನೀರವ ವಾತಾವರಣವಿತ್ತು.
ಮಠದಲ್ಲಿ ಹಿರಿಯ ಅಧಿಕಾರಿ ವರ್ಗವೂ ಬೆಂಗಳೂರಿಗೆ ಹೋಗಿರುವುದರಿಂದ ಕಚೇರಿಯೂ ಬರಿದಾಗಿತ್ತು. ಕಿರಿಯ ಶ್ರೀಗಳೂ ಅಂತಿಮ ಸಂಸ್ಕಾರದ ಬಳಿಕ ನಡೆಯುವ ಮುಂದಿನ ಕಾರ್ಯಕ್ರಮಗಳಿಗಾಗಿ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿದ್ದಾರೆ.
ಸ್ವಾಮಿಗಳ ಜತೆ ಕೆಲಸ ಮಾಡಿದ್ದ ಕೃಷ್ಣ ಸಾಮಗ, ಸುಬ್ರಹ್ಮಣ್ಯ ಪೆರಂಪಳ್ಳಿ, ವಾಸುದೇವ ಭಟ್, ಇಂದು ಶೇಖರ್, ಸಂತೋಷ್ ಕೊಟ್ಟಾರಿ ಮೊದಲಾದವರು ಮಠಕ್ಕೆ ಭೇಟಿ ನೀಡಿದವರಿಗೆ ಸ್ವಾಮಿಗಳು ನಾಡಿನ ನಾನಾ ಭಾಗಗಳಲ್ಲಿ ಮಾಡಿದ ಸಾಧನೆಗಳನ್ನು ವಿವರಿಸುತ್ತಿದ್ದರು.
“ಶ್ರೀಕೃಷ್ಣ ಮಠದ ಗೋಶಾಲೆಯಲ್ಲಿ ಕೆಲಸ ಮಾಡುವ ಕಾರ್ಮಿಕ ವರ್ಗದವರು ಕಲಬುರಗಿ ಜಿಲ್ಲೆಯ ತಮ್ಮೂರಿನ ಕಾರ್ಯಕ್ರಮಕ್ಕೆ ಸ್ವಾಮೀಜಿಯವರನ್ನು ಒಮ್ಮೆ ಆಮಂತ್ರಿಸಿದರು. ಬಡ ಕಾರ್ಮಿಕರ ಬೇಡಿಕೆಯನ್ನೂ ಮನ್ನಿಸಿ ಕಲಬುರಗಿಗೆ ಹೋಗಿ ಅವರ ಭಜನೆಗಳನ್ನು ನೋಡಿ ಸ್ವಾಮೀಜಿ ಸಂತೋಷಪಟ್ಟಿದ್ದರು. ಗೋಶಾಲೆಯ ಕಾರ್ಮಿಕ ವರ್ಗಕ್ಕೆ ಆದ ಆನಂದ ಅಷ್ಟಿಷ್ಟಲ್ಲ’ ಎಂದು ವಾಸುದೇವ ಭಟ್ ತಿಳಿಸಿದರು.
ರಥಬೀದಿಯಲ್ಲಿಯೂ ಜನಸಂಚಾರ ತುಸು ವಿರಳವೇ ಇತ್ತು. ಶ್ರೀಕೃಷ್ಣಮಠದಲ್ಲಿ ದೈನಂದಿನ ಕಾರ್ಯಕ್ರಮ ನಡೆಯುತ್ತಿದ್ದರೂ ಪೇಜಾವರ ಶ್ರೀಗಳ ಅಗಲುವಿಕೆ ದುಃಖ ಶ್ರೀಮಠಕ್ಕೆ ಭೇಟಿ ನೀಡಿದ ಭಕ್ತವರ್ಗದ ಮುಖಭಾವದಲ್ಲಿ ಕಾಣುತ್ತಿತ್ತು. ನಗರದ ಜನರ ಬಾಯಲ್ಲೂ ಪೇಜಾವರ ಶ್ರೀಗಳ ಸ್ಮತಿಪಟಲ ಹೊರಸೂಸುತ್ತಿತ್ತು. “ಅವರ ಮೌಲ್ಯ ಇನ್ನು ಗೊತ್ತಾಗುತ್ತದೆ. ಇದ್ದಾಗ ಗೊತ್ತಾಗುತ್ತಿರಲಿಲ್ಲ’ ಎಂಬ ಮಾತನ್ನು ಹೇಳಿದವರು ಅದೆಷ್ಟೋ ಮಂದಿ…
ನೀರವತೆಯ ನಡುವೆಯೂ ಜೀವಂತಿಕೆ
ನೀರವ ವಾತಾವರಣದ ನಡುವೆಯೂ ಪೇಜಾವರ ಮಠವನ್ನು ಜೀವಂತವಾಗಿರಿಸಿರುವುದು ಕಿರಿಯ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಚಿಕ್ಕ ಮಕ್ಕಳ ಪ್ರಹ್ಲಾದ ಗುರುಕುಲ. ಇದರ ವಿದ್ಯಾರ್ಥಿಗಳು ನಿತ್ಯ ಗುರುಕುಲದಲ್ಲಿ ಮಾಡುವ ಸ್ತೋತ್ರ ಪಾಠಗಳನ್ನು ಸೋಮವಾರ ಪೇಜಾವರ ಮಠದಲ್ಲಿರಿಸಿದ ಹಿರಿಯ ಸ್ವಾಮೀಜಿಯವರ ಭಾವಚಿತ್ರದೆದುರು ಮಂಡಿಸಿದ ಮುಗ್ಧ ಮನಸ್ಸಿನ ಪ್ರಾರ್ಥನೆ ಅದೇ ತೆರನಾಗಿ ಮುಗ್ಧವಾಗಿದ್ದ ಹಿರಿಯ ಸ್ವಾಮೀಜಿಯವರಿಗೆ ತಲುಪಬಹುದೋ ಎಂದೆನಿಸುತ್ತಿತ್ತು.
ಒಬ್ಬ ವಿದ್ಯಾರ್ಥಿ “ನಾನು ಡಾಕ್ಟರ್ ಆಗ್ತೀನೆ. ನಾನಾಗಿದ್ದರೆ ಸ್ವಾಮಿಗಳನ್ನು ಉಳಿಸಿಕೊಳ್ತಿದ್ದೆ’ ಎಂದು ಹೇಳಿದ. “ನಮಗೆ ಇಬ್ಬರು ಸ್ವಾಮಿಗಳೂ ಇಷ್ಟ. ಏಕೆಂದರೆ ಕಿರಿಯ ಸ್ವಾಮಿಗಳಿಗೆ ಹಿರಿಯ ಸ್ವಾಮಿಗಳು ಪಾಠ ಮಾಡಿದ್ದರು. ನಾವು ಸಿಕ್ಕಿದಾಗ ಹೆಸರು, ಊರು ಕೇಳಿ ಹಣ್ಣುಗಳನ್ನು ಕೊಡುತ್ತಿದ್ದರು’ ಇನ್ನೊಬ್ಬ ವಿದ್ಯಾರ್ಥಿ ಹೇಳಿದ. ಬಾಲಮಕ್ಕಳ ಮನಸ್ಸಿನ ಮೇಲೂ ವಯೋವೃದ್ಧ, ಜ್ಞಾನವೃದ್ಧ ಸ್ವಾಮಿಗಳು ತಮ್ಮ ಛಾಪು ಒತ್ತಿರುವುದು ಕಂಡುಬರುತ್ತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Online Fraud: ಸುರಕ್ಷೆಗೆ ಹೀಗೆ ಮಾಡಿ: ಸದಾ ಜಾಗರೂಕರಾಗಿರಿ
Ajekar: ಬಾಲಕೃಷ್ಣ ಪೂಜಾರಿ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವು ಉಲ್ಲೇಖ
Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ
ಮೀನುಗಾರಿಕೆ ಬಂದರುಗಳ ಕಾಮಗಾರಿ ಶೀಘ್ರ ಆರಂಭಿಸಿ: ಅಧಿಕಾರಿಗಳ ಸಭೆಯಲ್ಲಿ ಕೋಟ ಸೂಚನೆ
Udupi: ಗೀತಾರ್ಥ ಚಿಂತನೆ-84: ಮಧುವಾದದ್ದನ್ನು ನಾಶಪಡಿಸುವವ ಮಧುಸೂದನ
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.