ನಿರಾಧಾರ್! ಕುಂದಾಪುರ, ಬೈಂದೂರು ತಾಲೂಕಿಗೆ ಆರು ಆಧಾರ್ ಕೇಂದ್ರಗಳು
Team Udayavani, Sep 21, 2019, 5:30 AM IST
ಕುಂದಾಪುರ, ಬೈಂದೂರು ತಾಲೂಕಿನ 101 ಗ್ರಾಮಗಳಿಗೆ ಕೇವಲ 6 ಆಧಾರ್ ಕೇಂದ್ರಗಳನ್ನು ನೀಡಲಾಗಿದೆ. ಈ ಪೈಕಿ ಮೂರು ಕಂದಾಯ ಇಲಾಖೆ ಅಧೀನದಲ್ಲಿದ್ದರೆ ಇತರವು ಬೇರೆ. ಖಾಸಗಿಯಾಗಿ ಆಧಾರ್ ತಿದ್ದುಪಡಿಗೆ ನೀಡಿದ ಅವಕಾಶವನ್ನು ಜನ ದುರುಪಯೋಗಪಡಿಸಿದ ಕಾರಣ ಈಗ ಹೆಸರು ಬದಲಾವಣೆ ಖಾಸಗಿಯಾಗಿ ಸರಳವಾಗಿಲ್ಲ. ಇತರ ಬದಲಾವಣೆಗೆ ಸರಕಾರಿ ಕಚೇರಿಗೇ ಬರಬೇಕೆಂದಿಲ್ಲ. ಹಾಗಿದ್ದರೂ ಜನರ ಸಾಲು ಸದಾ ಇರುತ್ತದೆ. ಜನರ ಪಾಲಿಗೆ ಆಧಾರವಾಗಬೇಕಿದ್ದ ಆಧಾರ್ “ನಿರಾಧಾರ್’ ಆದ ಕುರಿತು ಉದಯವಾಣಿ ಸಂಗ್ರಹಿಸಿದ ಮಾಹಿತಿ.
ಕುಂದಾಪುರ: ಪ್ರತಿಯೊಂದಕ್ಕೂ ಆಧಾರ್ ಲಿಂಕ್ ಮಾಡಲು ಹೇಳಿದ ಕಾರಣ ಆಧಾರ್‌ಗಾಗಿ ಜನ ಬೆನ್ನತ್ತುತ್ತಿದ್ದಾರೆ. ಅಗತ್ಯ ಇರಲಿ, ಇಲ್ಲದಿರಲಿ ಆಧಾರ್‌ಗಾಗಿ ಕ್ಯೂ ನಿಲ್ಲುವ ಪರಿಪಾಠ ನಿಂತಿಲ್ಲ. ಪರಿಣಾಮ ತುರ್ತಾಗಿ ಆಧಾರ್ ಕಾರ್ಡ್, ತಿದ್ದುಪಡಿ ಮಾಡಿಸುವವರಿಗೂ ಸರದಿ ಸಾಲಿನ ಕೊನೆಯಾಗುವವರೆಗೆ ನಿಲ್ಲುವ ಅನಿವಾರ್ಯ ಸ್ಥಿತಿ ಉಂಟಾಗಿದೆ.
ಆರು ಕೇಂದ್ರ
ಕುಂದಾಪುರ, ಬೈಂದೂರು ತಾಲೂಕಿನಲ್ಲಿ 6 ಕಡೆ ಗಳಲ್ಲಿ ಮಾತ್ರ ಆಧಾರ್ ಕೇಂದ್ರಗಳಿವೆ. ಕುಂದಾಪುರ ಮಿನಿ ವಿಧಾನಸೌಧ, ಕೆನರಾ ಬ್ಯಾಂಕ್, ಎಸ್‌ಬಿಐ, ಅಂಚೆಕಚೇರಿ, ವಂಡ್ಸೆ ನಾಡಕಚೇರಿ, ಬೈಂದೂರು ತಾಲೂಕು ಕಚೇರಿಗಳಲ್ಲಿವೆ. 101 ಗ್ರಾಮಗಳ ಜನತೆಗೆ ಈ ಕೇಂದ್ರಗಳು ಸಾಲುತ್ತಿಲ್ಲ ಎನ್ನುವುದು ಸದ್ಯದ ಬೇಡಿಕೆ.
ಕಾಯಬೇಕು, ಹೋಗಬೇಕು
ಪ್ರತಿದಿನ 100 ಮಂದಿಗೆ ಟೋಕನ್ ನೀಡಲಾಗುತ್ತದೆ. ನೋಂದಣಿ ಮಾಡಿಸಿಕೊಂಡು ಹೋಗಿ ಆ ದಿನದಂದು ಮಾಹಿತಿ ನೀಡ ಬೇಕಾಗುತ್ತದೆ. ಆದರೆ ಸರ್ವರ್ ಸಮಸ್ಯೆ, ಕಂಪ್ಯೂಟರ್ ಸಮಸ್ಯೆ ಮೊದಲಾದವುಗಳಿಂದಾಗಿ ಆ ದಿನ 100 ಮಂದಿಯದ್ದು ಆಗದಿದ್ದರೆ ಮರುದಿನ ಆಗಮಿಸಬೇಕಾಗುತ್ತದೆ. ಒಂದು ದಿನದಲ್ಲಿ ಹೆಚ್ಚೆಂದರೆ 60 ಮಂದಿಯ ಆಧಾರ್ ಕೆಲಸ ಮಾಡಿಕೊಡಲಾಗುತ್ತದೆ. ಗರ್ಭಿಣಿಯರು, ಅಂಗವಿಕಲರು, ಹಿರಿಯ ನಾಗರಿಕರಿಗೆ ಮಾನವೀಯತೆ ನೆಲೆಯಲ್ಲಿ ಪ್ರತ್ಯೇಕ ಸರದಿ ಸಾಲಿದ್ದರೂ ದಿನಗಟ್ಟಲೆ ಬಂದು ಹೋಗುವ ಜನರ ಅಸಹನೆ ಎದುರಿಸಬೇಕಾಗುತ್ತದೆ. ದೂರದ ಸಿದ್ದಾಪುರ, ಅಮಾಸೆಬೈಲು ಮೊದಲಾದ ಊರುಗಳಿಂದ ಬಂದವರು ಆಧಾರ್ ಕೆಲಸವಾಗದೇ ಬರಿಗೈಯಲ್ಲಿ ಮರಳಿ ಹೋಗುವ ಸ್ಥಿತಿಯಿದೆ.
ಸಿಬಂದಿ ಗುರುತೇ ಅಸ್ವೀಕೃತ
ಆಧಾರ್ ಕಂಪ್ಯೂಟರ್‌ಗೆ ಜೋಡೀಕೃತವಾದ ಸಿಬಂದಿಯ ಹೆಬ್ಬೆಟ್ಟಿನ ಗುರುತೇ ಕಳೆದ ಗುರುವಾರ ದಿಂದ ತಿರಸ್ಕೃತವಾಗಿತ್ತು. ಈ ಗುರುವಾರವಾದರೂ ವ್ಯವಸ್ಥೆ ಸರಿಹೊಂದಿಲ್ಲ. ಪ್ರತಿದಿನ ಎಲ್ಲೆಲ್ಲಿಂದಲೋ ಜನ ಬಂದು ಮರಳಿ ಹೋಗುವ ದೃಶ್ಯ ಸಾಮಾನ್ಯ ವಾಗುತ್ತಿದೆ. ಇದಕ್ಕೆ ಹೊಸದಾಗಿ ಗುರುತು ಜೋಡಣೆ ಯಾಗುವವರೆಗೆ ದಿನಗಟ್ಟಲೆ ಜನ ಪ್ರತಿದಿನ ಬಂದು ಮರಳಿ ಹೋಗುವ ಸ್ಥಿತಿ ಕುಂದಾಪುರದ ಮಿನಿ ವಿಧಾನಸೌಧದ ಆಹಾರ ಶಾಖೆಯ ಆಧಾರ್ ಕೇಂದ್ರದಲ್ಲಿ ಉಂಟಾಗಿದೆ. ಸದ್ಯದ ಮಟ್ಟಿಗೆ ಆಯುಷ್ಮಾನ್ ಕಾರ್ಡ್, ವಿದ್ಯಾರ್ಥಿವೇತನ, ಪಡಿತರ ಚೀಟಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಧಾರ್ ಅವಲಂಬನೆಯಾಗುತ್ತಿದೆ.
ವಿಳಾಸ ಬದಲಿಸಬಹುದು
ಆಧಾರ್ ಹಾಗೂ ಮೊಬೈಲ್ ಸಂಖ್ಯೆ ಲಿಂಕ್ ಆಗಿ ದ್ದರೆ ವಿಳಾಸ ಬದಲಾವಣೆ ಸೇರಿದಂತೆ ಸಣ್ಣಪುಟ್ಟ ಬದಲಾವಣೆಗಳನ್ನು ನೇರವಾಗಿ ಸ್ವಯಂ, ಸೈಬರ್ ಸೆಂಟರ್‌ಗಳ ಮೂಲಕ ಮಾಡಬಹುದು. ಇದಕ್ಕೆ ಹೆಚ್ಚಿನ ದೃಢೀಕರಣದ ಅಗತ್ಯವಿಲ್ಲ. ಸ್ಥಳೀಯ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಯಾವುದೇ ಸ್ಥಳೀಯಾಡಳಿತ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಶಾಲಾ ವರ್ಗಾವಣೆ ಪ್ರಮಾಣಪತ್ರ ನೀಡಿದರೂ ಸಾಕಾಗುತ್ತದೆ.
ಮೂಲದಾಖಲೆಯಲ್ಲೂ, ಆಧಾರ್‌ನಲ್ಲೂ ಎರಡು ವರ್ಷಕ್ಕಿಂತ ಹೆಚ್ಚಿನ ಅಂತರ ಇದ್ದರೆ ವಯಸ್ಸು ಬದಲಾವಣೆ ಕಷ್ಟ. ಹೆಸರು ಬದಲಾವಣೆ, ಹುಟ್ಟಿದ ದಿನಾಂಕ, ಹೆಬ್ಬೆಟ್ಟು ಗುರುತು ನೀಡಲು ಮಾತ್ರ ತಾಲೂಕು ಕಚೇರಿಯವರನ್ನು ಹೊರತುಪಡಿಸಿ ಇತರರಿಗೆ ಅನುಮತಿ ನೀಡಿಲ್ಲ. ಹೆಸರು ಬದಲಾವಣೆ ಹಾಗೂ ಹುಟ್ಟಿದ ದಿನಾಂಕ ಬದಲಾವಣೆ ಏಕಕಾಲದಲ್ಲಿ ಆಗುವುದಿಲ್ಲ. ಹೆಸರು ಬದಲಾವಣೆ ಸರ್ವರ್‌ನಲ್ಲಿ ದಾಖಲಾಗುವಷ್ಟು ದಿನಗಳು ಕಾಯಲೇಬೇಕು.
ಹೆಚ್ಚುವರಿ ಕೇಂದ್ರ ಬೇಕು
ಬ್ಯಾಂಕುಗಳಲ್ಲಿ ನಿರ್ದಿಷ್ಟ ಸಂಖ್ಯೆಯ ಕೆಲಸ ಮಾತ್ರ ಮಾಡಲಾಗುತ್ತದೆ. ಹಾಗಾಗಿ ತಾ| ಕಚೇರಿಗೇ ಜನ ಬರುತ್ತಾರೆ. ಬೈಂದೂರು ತಾ|ಗೆ ಒಂದೇ ಕೇಂದ್ರವಿದೆ. ಹಾಗಾಗಿ ಎರಡೂ ತಾ|ಗಳಿಗೆ ಹೆಚ್ಚುವರಿ ಆಧಾರ್ ಕೇಂದ್ರಗಳು ಬೇಕು ಎನ್ನುವ ಬೇಡಿಕೆ ಬಲವಾಗಿದೆ.
ಗ್ರಾ.ಪಂ.ಗಳಲ್ಲಿ ಇಲ್ಲ
ಕೆಲವು ಸಮಯದ ಹಿಂದೆ ಎಲ್ಲ ಪಂಚಾಯತ್‌ಗಳಲ್ಲಿ ಆಧಾರ್ ಸೇವೆ ಆರಂಭಿಸಲಾಯಿತು. ಗ್ರಾಮ ಪಂಚಾಯತ್ ಸಿಬಂದಿಗೆ ಈ ಕುರಿತು ತರಬೇತಿ ನೀಡಿ ಸಾಫ್ಟ್ ವೇರ್ ಅಳವಡಿಸಲಾಗಿತ್ತು. ಆದರೆ ಈಗ ಯಾವುದೇ ಗ್ರಾ.ಪಂ.ಗಳಲ್ಲೂ ಪ್ರಕ್ರಿಯೆ ನಡೆಯುತ್ತಿಲ್ಲ. 4 ತಿಂಗಳ ಹಿಂದೆ ಆಧಾರ್ ಅದಾಲತ್ ನಡೆಸಿ 4 ಕಂಪ್ಯೂಟರ್‌ಗಳನ್ನು ಅಳವಡಿಸಿ ಸೇವೆ ಒದಗಿಸಲಾಗಿತ್ತು. ಆದರೆ ಬೇಡಿಕೆ ಮಾತ್ರ ಈಗಲೂ ಕುಂದಿಲ್ಲ.
ವಿಳಂಬ ಯಾಕಾಗುತ್ತದೆ?
ಅರ್ಜಿಯಲ್ಲಿ ಗೊಂದಲ, ಅಸಮರ್ಪಕ ಮಾಹಿತಿ, ಯಂತ್ರ ಬೆರಳು ಗುರುತು ಸ್ವೀಕರಿಸದೇ ಇರುವುದು ಇತ್ಯಾದಿ ಗಳಿಂದಲೂ ವಿಳಂಬವಾಗುತ್ತದೆ. ಹಾಗಾಗಿ ದಿನದಲ್ಲಿ ಕೇವಲ 50-60 ಮಾತ್ರ ಸಾಧ್ಯವಾಗುತ್ತದೆ.
ಬದಲಿ ಜನ
ಆಧಾರ್ ಕಂಪ್ಯೂಟರ್ ಆಪರೇಟರ್ ಥಂಬ್ ಈಗ ಸ್ವೀಕರಿಸದ ಕಾರಣ ಬದಲಿ ಜನರನ್ನು ಬೇರೆಡೆಯಿಂದ ಕರೆಸಿ ಕೂರಿಸಲಾಗುತ್ತದೆ. 10 ದಿನಗಳ ಮಟ್ಟಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು.
-ತಿಪ್ಪೇಸ್ವಾಮಿ,
ತಹಶೀಲ್ದಾರ್, ಕುಂದಾಪುರ
ಬೈಂದೂರು: 2020 ಮಾರ್ಚ್‌ವರೆಗಿನ ಟೋಕನ್ ವಿತರಣೆ
ಬೈಂದೂರು: ತಾಲೂಕು ಕೇಂದ್ರ ವಾಗಿರುವ ಬೈಂದೂರಿನಲ್ಲಿ ಆಧಾರ್ ಕಾರ್ಡ್ ಸಮಸ್ಯೆ ತಾಲೂಕು ಕಚೇರಿಯಲ್ಲಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಅತೀ ವಿಶಾಲ ವ್ಯಾಪ್ತಿ ಹೊಂದಿರುವ ಬೈಂದೂರು ತಾಲೂಕು ಕಚೇರಿಯಲ್ಲಿ 2020 ಮಾರ್ಚ್ ವರೆಗಿನ ಟೋಕನ್ ನೀಡಲಾಗಿದೆ. ಹೀಗಾಗಿ ತೀರ ಅನಿವಾರ್ಯ ಪರಿಸ್ಥಿತಿಯಿದ್ದರೂ ಸದ್ಯದ ಮಟ್ಟಿಗೆ ಆಧಾರ್ ಕಾರ್ಡ್ ಮಾಡುವಂತಿಲ್ಲ.
ಏನಿದು ಆಧಾರ್ ಕಾರ್ಡ್ ಸಮಸ್ಯೆ?
ಪ್ರತಿ ಪ್ರಗತಿ ಪರಿಶೀಲನ ಸಭೆ, ತಾಲೂಕು ಪಂಚಾಯತ್, ಜಿ.ಪಂ. ಸಭೆ ಸೇರಿದಂತೆ ಹಲವು ಕಡೆಗಳಲ್ಲಿ ಬೈಂದೂರಿನ ಆಧಾರ್ ನೋಂದಣಿ ಸಮಸ್ಯೆ ಕುರಿತು ಚರ್ಚೆ ಆಗಿದೆ. ಪ್ರಸ್ತುತ ಬೈಂದೂರಿನಲ್ಲಿ 2 ಜನ ಸಿಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿದಿನ ಸರಾಸರಿ 60ರಿಂದ 70 ಜನರಿಗೆ ಅವಕಾಶ ನೀಡಲಾಗುತ್ತದೆ. ಹಿರಿಯರು ಹಾಗೂ ಮಕ್ಕಳ ಆಧಾರ್ ಕಾರ್ಡ್ ಲಿಂಕ್ ಕೆಲವೊಮ್ಮೆ ಸಮರ್ಪಕವಾಗಿ ಸ್ಪಂದಿಸದೆ ವಿಳಂಬವಾಗುತ್ತದೆ. ಉಳಿದೆಲ್ಲಾ ಕಚೆೇರಿ ಕೆಲಸಗಳಿಗಿಂತ ಆಧಾರ್ ಗೊಂದಲವೇ ಬೈಂದೂರಿನ ಜನತೆಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಅದರಲ್ಲೂ ಕರೆಂಟ್ ಇಲ್ಲದಿರುವುದು, ಜನರೇಟರ್ ವೈಫಲ್ಯಗಳು ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಿವೆ.
ಒಂದೇ ಕೇಂದ್ರ
ಕುಂದಾಪುರದಲ್ಲಿ ತಾಲೂಕಿನ ಒಟ್ಟು 5 ಕಡೆಗಳಲ್ಲಿ ಲಿಂಕ್ ಮಾಡಬಹುದು, ಆದರೆ ಬೈಂದೂರಿನಲ್ಲಿ ತಾಲೂಕು ಕಚೇರಿಯಲ್ಲಿ ಮಾತ್ರ ಆಧಾರ್ ಮೊಬೈಲ್ ನಂಬರ್ ಲಿಂಕ್ ಮಾಡಬಹುದಾಗಿದೆ. ಹುಟ್ಟಿದ ದಿನಾಂಕ ನಮೂದಾಗಿರದ ಕಾರಣ ಬಹುತೇಕ ಜನರು ಹೊಸದಾಗಿ ನಂಬರ್ ಲಿಂಕ್ ಮಾಡುತ್ತಿದ್ದಾರೆ. ಒಂದೇ ಕೇಂದ್ರವಾದ ಕಾರಣ ಜನರ ಒತ್ತಡ ಹೆಚ್ಚಿದೆ. ಸರಕಾರಿ ರಜೆ ಸೇರಿ ಎಲ್ಲಾ ದಿನಗಳಿಗೂ ಟೋಕನ್ ನೀಡಲಾಗಿದೆ.
ಮೂಲ ಸೌಕರ್ಯಗಳಿಲ್ಲ
ಬೈಂದೂರು ವಿಶೇಷ ತಹಶೀಲ್ದಾರರ ಕಚೇರಿಯಲ್ಲಿ ಸರದಿ ಸಾಲಿನಲ್ಲಿ ನಿಲ್ಲಲೂ ಯಾವುದೇ ವ್ಯವಸ್ಥೆಗಳಿಲ್ಲ. ಹಿರಿಯ ನಾಗರಿಕರು ವಿಶ್ರಾಂತಿ ಪಡೆಯಲು ಹಾಗೂ ಮಳೆಗಾಲದಲ್ಲಿ ನಿಲ್ಲಲೂ ವ್ಯವಸ್ಥೆಗಳಿಲ್ಲವಾಗಿದೆ.ಅದರಲ್ಲೂ ಶೌಚಾಲಯ ಗಬ್ಬು ನಾರುತ್ತಿದೆ. ಹೀಗಾಗಿ ದಿನವಿಡಿ ಕಾಯುವ ಸಾರ್ವಜನಿಕರು, ಮಹಿಳೆಯರು ಶೌಚಾಲಯಗಳಿಲ್ಲದೆ ಸಮಸ್ಯೆ ಉಂಟಾಗುತ್ತಿದೆ. ಹೀಗಾಗಿ ಪ್ರಾಥಮಿಕ ಮೂಲ ಸೌಕರ್ಯಗಳನ್ನು ಇಲಾಖೆ ಒದಗಿಸಬೇಕಾಗಿದೆ.
ತೊಂದರೆಯಾಗದಂತೆ ಕ್ರಮ
ತಾಲೂಕು ಕಚೇರಿಯಲ್ಲಿ ಮಾತ್ರ ಅವಕಾಶ ಇರುವುದರಿಂದ ಈ ಸಮಸ್ಯೆ ಕಂಡು ಬರುತ್ತಿದೆ. ಬಾಪೂಜಿ ಸೇವಾ ಕೇಂದ್ರ ಹಾಗೂ ಅಂಚೆ ಕಚೇರಿಗಳಲ್ಲಿ ಈ ಸೇವೆ ಆರಂಭವಾದಲ್ಲಿ ಬೈಂದೂರಿನ ಸಮಸ್ಯೆ ಇರಲಾರದು. ಇನ್ನುಳಿದಂತೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಈಗಿರುವ ಶೌಚಾಲಯ ಸ್ವತ್ಛಗೊಳಿಸಿ ಶುಚಿತ್ವಗೊಳಿಸಲಾಗುವುದು. ಸಾರ್ವಜನಿಕರಿಗೆ ತಾಲೂಕು ಕಚೇರಿಯಲ್ಲಿ ಸಮರ್ಪಕ ಸೇವೆ ದೊರೆಯುತ್ತಿದೆ.
-ಬಿ.ಪಿ. ಪೂಜಾರ್,
ತಹಶೀಲ್ದಾರರು ಬೈಂದೂರು
ಮೂಲ ಸೌಕರ್ಯ ವಂಚಿತ ವಂಡ್ಸೆ ನಾಡ ಕಚೇರಿ
ಕೊಲ್ಲೂರು: ವಾಸ್ತವ್ಯಕ್ಕೆ ಕಂದಾಯ ಇಲಾಖೆಯ ಸ್ವಾಮ್ಯದ ಜಾಗವಿದ್ದರೂ ಕಟ್ಟಡ ನಿರ್ಮಾಣಗೊಳ್ಳಲು ಹಳೆ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಗತಿಯಲ್ಲಿ ವಂಡ್ಸೆ ನಾಡಕಚೇರಿ ನಲುಗುತ್ತಿದ್ದು ಆಧಾರ್ ಕಾರ್ಡ್‌ಗಾಗಿ ಅಲ್ಲಿಗೆ ಆಗಮಿಸುವ ಗ್ರಾಮಸ್ಥರ ಗೋಳು ಹೇಳತೀರದು.
39 ಗ್ರಾಮಗಳ ನಿರ್ವಹಣೆ
ವಂಡ್ಸೆ ನಾಡ ಕಚೇರಿ 39 ಗ್ರಾಮಗಳ ನಿರ್ವಹಣೆಯ ಜವಾಬ್ದಾರಿ ಹೊಂದಿದೆ. ಮುಖ್ಯವಾಗಿ ಗಂಗೊಳ್ಳಿ, ತಲ್ಲೂರು, ಉಪ್ಪಿನಕುದ್ರು, ಆಲೂರು, ಕೆಂಚನೂರು, ಕಟ್‌ಬೆಲೂ¤ರು, ಇಡೂರು, ಕಮಲಶಿಲೆ, ಕರ್ಕುಂಜೆ, ಕಾವ್ರಾಡಿ, ಕುಂದ ಬಾರಂದಾಡಿ, ಕುಳಂಜೆ, ಕೊಡ್ಲಾಡಿ, ಗುಜ್ಜಾಡಿ, ಗುಲ್ವಾಡಿ, ಚಿತ್ತೂರು, ತ್ರಾಸಿ, ಬೆಳ್ಳಾಲ, ಮೂಡ ಮುಂದ, ವಂಡ್ಸೆ, ಶಂಕರನಾರಾಯಣ, ಸಿದ್ಧಾಪುರ, ಸೇನಾಪುರ, ಹಟ್ಟಿಯಂಗಡಿ, ಹೊಸಂಗಡಿ, ಹೊಸೂರು, ಹೊಸಾಡು ಸಹಿತ ಇನ್ನಿತರ ಗ್ರಾಮಗಳು ನಾಡಕಚೇರಿಯನ್ನು ಅವಲಂಬಿಸಬೇಕಾಗಿದೆ.
ಆಧಾರ್ ಕಾರ್ಡ್ ವಿತರಣೆ
ತಿದ್ದುಪಡಿ ಸಹಿತ ಹೊಸ ಆಧಾರ ಕಾರ್ಡ್ ವಿತರಣೆ ದಿನಂಪ್ರತಿ ಇಲ್ಲಿ ನಡೆಯುತ್ತಿದ್ದು 50ರಿಂದ 70 ಆಧಾರ್ ಕಾರ್ಡ್‌ಗಳ ತಿದ್ದುಪಡಿ ಹಾಗೂ ಹೊಸ ಕಾರ್ಡ್‌ಗಳ ಹಂಚಿಕೆ ವ್ಯವಸ್ಥೆಗೊಳಿಸಲಾಗುತ್ತಿದೆ. ಬಹುದೂರದ ಸಿದ್ದಾಪುರ ಸಹಿತ ಗಂಗೊಳ್ಳಿಯಿಂದ ವಂಡ್ಸೆಗೆ ಆಗಮಿಸಬೇಕಾದ ಗ್ರಾಮಸ್ಥರು ತಾಸುಗಟ್ಟಲೆ ಇಲ್ಲಿ ಕಾಯಬೇಕಾಗಿದೆ. ಟೋಕನ್ ಹಂಚಿಕೆಯ ಕ್ರಮಪ್ರಕಾರ ಇದೀಗ ಡಿಸೆಂಬರ್ ತನಕ ಟೋಕನ್ ನೀಡಲಾಗಿದ್ದು ತುರ್ತುಅಗತ್ಯತೆಗೆ ಜನರು ಡಿಸೆಂಬರ್ ಅನಂತರದ ದಿನಗಳಿಗಾಗಿ ಟೋಕನ್ ಪಡೆಯಲು ಕಾಯ ಬೇಕಾದ ಅನಿವಾರ್ಯತೆ ಎದುರಾಗಿದೆ.
ಗ್ರಾಮ ಪಂಚಾಯತ್ ಹಾಗೂ ಅಂಚೆ ಕಚೇರಿಗಳಲ್ಲಿ ಆಧಾರ್ ಕಾರ್ಡ್ ಒದಗಿಸುವ ವ್ಯವಸ್ಥೆಯಿದ್ದರೂ ಕೆಲವು ಗ್ರಾಮ ಪಂಚಾಯತ್‌ಗಳು ಸಾಫ್ಟ್ವೇರ್‌ಗಳ ತಾಂತ್ರಿಕ ಸಮಸ್ಯೆಗಳು ಅರ್ಜಿ ಸ್ವೀಕರಿಸುತ್ತಿಲ್ಲ.
20 ಲಕ್ಷ ರೂ. ಅನುದಾನ ಬಳಕೆಯಾಗಿಲ್ಲ
ಕಂದಾಯ ಇಲಾಖೆಯಿಂದ 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಬೇಕಿರುವ ನೂತನ ನಾಡ ಕಚೇರಿ ಕಟ್ಟಡ ಕಾಮಗಾರಿ ಆರಂಭಗೊಳ್ಳದಿರುವುದು ಚರ್ಚೆಗೆ ಗ್ರಾಸವಾಗಿದೆ. ಸರಕಾರಿ ಕಚೇರಿಗಳ ಸಂಕೀರ್ಣದಲ್ಲಿ 38 ಸೆಂಟ್ಸ್ ಜಾಗ ಕಾದಿರಿಸಲಾಗಿದ್ದರೂ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಗೊಳ್ಳದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಪೂರ್ಣಕಾಲಿಕ ಉಪ ತಹಶೀಲ್ದಾರರ ಕೊರತೆ
ಕಂದಾಯ ನಿರೀಕ್ಷಕರು ಹಾಗೂ ಸಿಬಂದಿಯನ್ನು ಹೊಂದಿರುವ ವಂಡ್ಸೆ ನಾಡ ಕಚೇರಿಗೆ ಈವರೆಗೆ ಪೂರ್ಣಕಾಲಿಕ ಉಪ ತಹಶೀಲ್ದಾರರ ನೇಮಕಾತಿಯಾಗಿಲ್ಲ. ಪ್ರಭಾರ ಕಂದಾಯ ನಿರೀಕ್ಷಕರನ್ನು ಹೊಂದಿರುವ ಇಲ್ಲಿ ಪೂರ್ಣಕಾಲಿಕ ಕಂದಾಯ ನಿರೀಕ್ಷಕರನ್ನು ಈ ವರೆಗೆ ನೀಡಿಲ್ಲ. ಓರ್ವ ಗುಮಾಸ್ತರ ಕೊರತೆಯು ಎದುರಾಗಿದೆ.
ಮಾಹಿತಿ: ಲಕ್ಷ್ಮೀ ಮಚ್ಚಿನ, ಡಾ| ಸುಧಾಕರ ನಂಬಿಯಾರ್, ಅರುಣ ಕುಮಾರ್ ಶಿರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shirva ಹಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.