ಅಪಘಾತಗೊಂಡ ವಾಹನಗಳನ್ನು ಇಡಲು ಪೊಲೀಸರ ಪರದಾಟ!
Team Udayavani, Jan 10, 2019, 8:10 PM IST
ಕಾಪು: ರಾ.ಹೆ. 66ರ ಸನಿಹದಲ್ಲೇ ಇರುವ ಕಾಪು ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣಗಳು ದಾಖಲಾಗುತ್ತಲೇ ಇರುತ್ತವೆ. ಇಂತಹ ವಾಹನಗಳನ್ನು ವಶಕ್ಕೆ ಪಡೆದು ಠಾಣೆಗೆ ತಂದಿಡುವಷ್ಟರಲ್ಲಿ ಹೈರಾಣಾಗಿರುತ್ತಾರೆ.
ಇಕ್ಕಟ್ಟಿನಲ್ಲಿ ಪೊಲೀಸರು
ಇದಕ್ಕೆ ಕಾರಣ ಸ್ಥಳಾವಕಾಶವೇ ಇಲ್ಲದಿರುವುದು. ಅಪಘಾತಕ್ಕೊಳಗಾದ ವಾಹನಗಳನ್ನು ತಾರದೆ ಬಿಡುವಂತಿಲ್ಲ, ತಂದರೆ ಠಾಣೆ ಪ್ರದೇಶದಲ್ಲಿ ಇಡಲು ಜಾಗವಿಲ್ಲ ಎಂಬ ಸ್ಥಿತಿ ಪೊಲೀಸರದ್ದು. ಉಡುಪಿ ಜಿಲ್ಲೆ ಹೆದ್ದಾರಿ ಬದಿ ಪೊಲೀಸ್ ಠಾಣೆಗಳಲ್ಲೇ ಅತೀ ಹೆಚ್ಚು ಅಪಘಾತಗಳು ಸಂಭವಿಸುವ ಪ್ರದೇಶ ಮೂಳೂರಿನಿಂದ ಉದ್ಯಾವರದವರೆಗಿನ ಪ್ರದೇಶ. ಈ ಪ್ರದೇಶ ಕಾಪು ಪೊಲೀಸ್ ವ್ಯಾಪ್ತಿಗೆ ಬರುತ್ತದೆ. ಇಲ್ಲಿ ಅಪಘಾತಕ್ಕೊಳಗಾದ ವಾಹನ ತಂದರೆ ಅವುಗಳನ್ನು ಇಡುವುದೆಲ್ಲಿ ಎಂಬ ಗೊಂದಲ ಕಾಡಿದೆ.
2018ರಲ್ಲಿ 85ಕ್ಕೂ ಹೆಚ್ಚು ಅಪಘಾತ
ಕಾಪು ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದ (2018) ಅವಧಿಯಲ್ಲಿ 85 ಅಪಘಾತಗಳ ದೂರು ದಾಖಲಾಗಿವೆ. ಇನ್ನು ಹಲವು ಪ್ರಕರಣಗಳು ರಾಜಿಯಲ್ಲಿ ಇತ್ಯರ್ಥವಾಗಿವೆ. ವರ್ಷದ ಅಂತರದಲ್ಲಿ ನಡೆದ ಅಪಘಾತಗಳಿಂದಾಗಿ 18 ಮಂದಿ ಮೃತಪಟ್ಟಿದ್ದು, 85ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಪ್ರಕರಣಗಳಲ್ಲಿ ಅಪಘಾತಕ್ಕೀಡಾದ ವಾಹನಗಳ ಸಂಖ್ಯೆ 127. ಇವುಗಳಲ್ಲಿ ಹಲವು ವಾಹನಗಳು ಠಾಣೆ ಆವರಣದಲ್ಲಿ ಕೊಳೆಯುತ್ತಿವೆ. ನಜ್ಜುಗುಜ್ಜಾದ ವಾಹನಗಳಂತೂ ಮಳೆಬಿಸಿಲೆನ್ನದೆ ಇದ್ದು ತುಕ್ಕು ಹಿಡಿದು ಹೋಗುತ್ತಿವೆೆ.
ಎಲ್ಲೆಂದರಲ್ಲಿ ವಾಹನಗಳು
ಪೊಲೀಸರು ವಶಪಡಿಸಿಕೊಂಡ ವಾಹನಗಳನ್ನು ಠಾಣೆಯ ಕಾಂಪೌಂಡ್‌ನ ಹೊರಗೆ, ಕಾಪು ಪೇಟೆ ಸಂಪರ್ಕಿಸುವ ರಸ್ತೆ ಬದಿ, ಗೂಡ್ಸ್ ಟೆಂಪೋ ನಿಲುಗಡೆ ಪ್ರದೇಶ, ಖಾಸಗಿ ಕಟ್ಟಡಗಳ ಕಾಂಪೌಂಡ್‌ನ ಮುಂಭಾಗ ಹೀಗೆ ಎಲ್ಲೆಂದರಲ್ಲಿ ವಾಹನಗಳನ್ನು ಇಡಲಾಗುತ್ತಿದೆ.
ಸ್ಥಳಾವಕಾಶ ಯಾಕಿಲ್ಲ?
ಹಿಂದೆ ವಾಹನಗಳನ್ನು ಠಾಣೆಯ ಕಾಂಪೌಂಡ್ ಒಳಗೆ ತಂದಿರಿಸಲಾಗುತ್ತಿತ್ತು. ಠಾಣೆ ಹಿಂಭಾಗ ಮತ್ತು ಎದುರು ಅಚ್ಚುಕಟ್ಟಾಗಿ ಇಡಲಾಗುತ್ತಿತ್ತು. ಈಗ ಠಾಣೆಯ ಕಾಂಪೌಂಡ್‌ನ ಒಳಗಿನ ಖಾಲಿ ಜಾಗದಲ್ಲಿ ಎರಡು ಪೊಲೀಸ್ ವಸತಿ ಗೃಹಗಳನ್ನು ನಿರ್ಮಿಸಲಾಗುತ್ತಿದೆ. ಇದರಿಂದ ವಾಹನ ಇಡಲು ಜಾಗವಿಲ್ಲದಾಗಿದೆ.
ಉನ್ನತ ಅಧಿಕಾರಿಗಳಿಗೆ ಮಾಹಿತಿ
ಅಪಘಾತಕ್ಕೊಳಗಾದ ವಾಹನಗಳನ್ನು ಇರಿಸುವುದೇ ದೊಡ್ಡ ಸಮಸ್ಯೆ ಬಿಟ್ಟಿದೆ. ಅದರ ಜೊತೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖಾಧಿಕಾರಿಗಳು ವಶಪಡಿಸಿಕೊಂಡಿರುವ ಅಕ್ರಮ ಮರಳು ಸಾಗಾಟದ ಟಿಪ್ಪರ್‌ಗಳನ್ನೂ ಹಸ್ತಾಂತರಿಸುತ್ತಿದ್ದಾರೆ. ಇದರಿಂದ ಸ್ಥಳಾವಕಾಶ ಸಾಲುತ್ತಿಲ್ಲ. ಸ್ಥಳಾವಕಾಶದ ಕೊರತೆಯ ಬಗ್ಗೆ ನಮ್ಮ ಉನ್ನತಾಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ.
– ಬಿ. ಲಕ್ಷ್ಮಣ್, ಕ್ರೈಂ ಪಿಎಸ್‌ಐ, ಕಾಪು ಪೊಲೀಸ್ ಠಾಣೆ
ಪೊಲೀಸರಿಗೆ ಮನವಿ
ಕಾಪು ಪೇಟೆಯ ಸಿಎ ಬ್ಯಾಂಕ್ ಬಳಿಯಿಂದ ಪೊಲೀಸ್ ಠಾಣೆಯ ಮುಂಭಾಗವರೆಗೂ ಗೂಡ್ಸ್ ಟೆಂಪೋ ನಿಲುಗಡೆಯ ಸ್ಥಳಾವಕಾಶವಿದೆ. ಪೊಲೀಸ್ ಠಾಣೆಯ ಮುಂಭಾಗದ ಖಾಲಿ ಪ್ರದೇಶದಲ್ಲಿ ಅಪಘಾತಕ್ಕೊಳಗಾದ ವಾಹನಗಳನ್ನು ಪೊಲೀಸರು ಇರಿಸುತ್ತಿದಾರೆ. ಸದ್ಯ ಸಮಸ್ಯೆ ಆಗದಿದ್ದರೂ ಮುಂದೆ ಸಮಸ್ಯೆಯಾದಂತೆ ಪೊಲೀಸರಿಗೆ ಮನವರಿಕೆ ಮಾಡಿ, ತೆರವು ಮಾಡಲು ಸಂಘದಿಂದ ಮನವಿ ನೀಡಲಾಗುವುದು.
– ಬಾಷಾ ಸಾಹೇಬ್, ಅಧ್ಯಕ್ಷರು, ಗೂಡ್ಸ್ ಟೆಂಪೋ ಚಾಲಕರ ಮತ್ತು ಮಾಲಕರ ಸಂಘ, ಕಾಪು
ತಾತ್ಕಾಲಿಕ ಅವಕಾಶ
ಪಾರ್ಕಿಂಗ್‌ಗಾಗಿ ಮೀಸಲಿರಿಸಿದ ಜಾಗದಲ್ಲಿ ಅಪಘಾತಕ್ಕೊಳಗಾದ ವಾಹನಗಳನ್ನು ನಿಲ್ಲಿಸಲು ಪೊಲೀಸರಿಗೆ ತಾತ್ಕಾಲಿಕವಾಗಿ ಅವಕಾಶ ಮಾಡಿಕೊಡಲಾಗಿದೆ. ಪ್ರಸ್ತುತ ಈಗ ವಾಹನಗಳನ್ನು ಇರಿಸಿರುವ ಪ್ರದೇಶದ ಹಿಂಬದಿಯಲ್ಲಿ ಖಾಸಗಿಯವರು ಕೆಲವು ಸಮಯಗಳವರೆಗೆ ಈ ವಾಹನಗಳನ್ನು ಇರಿಸಲು ಅವಕಾಶ ಕೊಡುವುದಾಗಿ ಭರವಸೆ ನೀಡಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆಗೂ ಮಾಹಿತಿ ನೀಡಿ, ವಾಹನಗಳನ್ನು ಸ್ಥಳಾಂತರಿಸಿ, ಪಾರ್ಕಿಂಗ್ ಜಾಗ ತೆರವುಗೊಳಿಸಲು ವಿನಂತಿಸಲಾಗಿದೆ.
– ರಾಯಪ್ಪ, ಮುಖ್ಯಾಧಿಕಾರಿ, ಕಾಪು ಪುರಸಭೆ
— ರಾಕೇಶ್ ಕುಂಜೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.