ಶ್ರೀಚಕ್ರಪೀಠ ಸುರಪೂಜಿತೆ : ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ
Team Udayavani, May 2, 2018, 8:12 PM IST
ಪವಿತ್ರ ತೀರ್ಥ ಸನ್ನಿಧಿ, ನದಿದಡ, ಸಮುದ್ರತಟ, ನದಿಗಳ ಸಂಗಮ ಸ್ಥಾನ, ಪರ್ವತಾಗ್ರ, ಪರ್ವತ ತಟಭಾಗ, ವನಪ್ರದೇಶ, ದೊಡ್ಡ ಉದ್ಯಾನ ಮತ್ತು ಋಷಿಮುನಿಗಳ ತಪಸ್ಸಿನಿಂದ ಪಾವನವಾದ ಭೂಮಿ ಮುಂತಾದೆಡೆ ದೇವಮಂದಿರ ನಿರ್ಮಾಣವಾಗಬೇಕು ಎಂಬುವುದು ಶಾಸ್ತ್ರ ಸೂಚನೆ. ಅಂದರೆ ಒಂದು ದೇವಮಂದಿರ ನಿರ್ಮಾಣಗೊಂಡ ಪ್ರದೇಶವು ಇದರಲ್ಲಿ ಯಾವುದಾದರೊಂದು ಸಲ್ಲಕ್ಷಣದಿಂದ ಕೂಡಿರುತ್ತದೆ. ನಿರ್ದಿಷ್ಟ ಭೂಪ್ರದೇಶವು ಸಹಜವಾಗಿ ದೇವ ಭೂಮಿಯಾಗಿರುತ್ತದೆ. ಆದುದರಿಂದಲೇ ಅಲ್ಲಿ ದೇವರು ಮತ್ತು ದೈವಗಳ ಸನ್ನಿಧಾನ ಸನ್ನಿಹಿತವಾಗುತ್ತದೆ. ಕಾಲ ಒದಗಿ ಬಂದಾಗ ಇದೆಲ್ಲವೂ ವ್ಯಕ್ತವಾಗುತ್ತವೆ. ಇಂತಹ ಒಂದು ಸಾಮಾನ್ಯ ಒಪ್ಪಿಗೆ ಅಥವಾ ಒಡಂಬಡಿಕೆಯಂತೆ ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರವು ಸಮಾವೇಶಗೊಂಡಿದೆ.
ಬ್ರಹ್ಮಕಲಶೋತ್ಸವ :
ದಿನಾಂಕ: 03.05.2018ನೇ ಗುರುವಾರ
ನಾಗಮಂಡಲೋತ್ಸವ
ದಿನಾಂಕ: 04.05.2018ನೇ ಶುಕ್ರವಾರ
ಪೂರ್ವದಲ್ಲಿ ಇದೊಂದು ತಪೋಭೂಮಿಯಾಗಿತ್ತಂತೆ…
ಜನಸಂಚಾರವಿಲ್ಲದ, ಬಂಜರು ಭೂಮಿಯಲ್ಲಿ ಈ ಪವಾಡ ಸದೃಶವಾದ ಅಭಿವೃದ್ಧಿಯಾಗುವುದಕ್ಕೆ ಮುನ್ನ ಇಲ್ಲೊಂದು ವಿದ್ಯಾಲಯ ಆರಂಭವಾಯಿತು. ಎಲ್ಲಿ ಶಾಲೆ, ಪಾಠ ಪ್ರವಚನಗಳು ನಡೆಯುತ್ತವೊ ಅಲ್ಲಿ ಭೂ ಸಂಬಂಧಿಯಾಗಿರುವ ದೋಷಗಳೇನಿದ್ದರೂ ಪರಿಹಾರವಾಗುತ್ತದೆ. ಸರಸ್ವತಿ ಬಂದ ಮೇಲೆ ಜ್ಞಾನ ಪ್ರಾಪ್ತಿಯಾದಂತೆ. ಜ್ಞಾನದ ಬೆಳಕು ಅಂತರ್ನಿಹಿತವಾದ ಶಕ್ತಿಗಳನ್ನು ತೋರಿಸುತ್ತದೆ. ಹಾಗೆ ಈ ನೆಲದಲ್ಲಿ ಅಂತರ್ಗತ ಶಕ್ತಿ ಪ್ರಕಟಗೊಂಡಿತು. ಗುರೂಜಿ ಮಾಧ್ಯಮವಾದರು ಕ್ಷಿಪ್ರದಲ್ಲಿ ದೇವಾಲಯವೇ ನಿರ್ಮಾಣವಾಯಿತು. ಬಳಿಕ ತಿಳಿಯಿತು ಪೂರ್ವದಲ್ಲಿ ಇದೊಂದು ತಪೋಭೂಮಿಯಾಗಿತ್ತಂತೆ.
ಅನವರತ ಯಾಗ ಯಜ್ಞಾದಿಗಳು, ಅನ್ನಸಂತರ್ಪಣೆ, ವಿದ್ಯಾದಾನದಿಂದ ಕ್ಷೇತ್ರ ಪಾವನ..
ಋಜುಮಾರ್ಗದ ಜೀವನಶೈಲಿ, ಪೂಜೆ, ಅನುಷ್ಠಾನ ವ್ರತಾದಿಗಳಿಂದ ಸರಳ, ಸಜ್ಜನಿಕೆಯಿಂದ ಗುರೂಜಿಗೆ ಇದೆಲ್ಲವೂ ಸಾಧ್ಯವಾಗಿದೆ. ಅನವರತ ಯಾಗ ಯಜ್ಞಾದಿಗಳು, ಅನ್ನಸಂತರ್ಪಣೆ, ವಿದ್ಯಾದಾನದಿಂದ ಕ್ಷೇತ್ರ ಪಾವನವಾಗುತ್ತದೆ ಎಂಬುವುದು ನಂಬಿಕೆ. ಗಣಪತಿ ಪ್ರೀತ್ಯರ್ಥ ಯಾಗ ನಿರಂತರ ನಡೆಯುತ್ತದೆ. ಏಕಕಾಲದಲ್ಲಿ ನೂರ ಎಂಟು ಮಂಡಲ ಬರೆದು ಆಶ್ಲೇಷಾಬಲಿ ನಡೆಸಿರುವುದು ಒಂದು ಸಾಧನೆಯಾಗಿ ದಾಖಲೆಯಾಗಿದೆ. ಬರಡು ಬಂಜರು ಭೂಮಿಯಿಂದ ವೇದ ಘೋಷ ಕೇಳಿಸುವಂತಾಗಿದೆ. ಹೋಮ ಧೂಮದ ಗಂಧ ಪರಿಸರವನ್ನು ವ್ಯಾಪಿಸುತ್ತಿದೆ. ಈ ಪ್ರದೇಶ ಶಾಂತ ಪ್ರಶಾಂತವಾಗಿದೆ. ಇಲ್ಲಿ ನಿಸರ್ಗ ಸಹಜವಾಗಿ ಸ್ಪಂದಿಸುತ್ತಿದೆ. ಆದುದರಿಂದ ಇಲ್ಲಿಗೆ ಸಮಸ್ಯೆಗಳೊಂದಿಗೆ ಆಗಮಿಸುವವರ ದುಃಖ ದುಮ್ಮಾನಗಳು ಪರಿಹಾರವಾಗುತ್ತವೆ. ಇದಕ್ಕೆ ಮನಸ್ಸನ್ನು ಓದಬಲ್ಲ, ಕಷ್ಟ ಪರಂಪರೆಗಳಿಗೆ ಸಂವಾದಿಯಾಗಬಲ್ಲ, ದೇವರು ಎನ್ನುವ ನಿಯಾಮಕ ಶಕ್ತಿಯ ಮೇಲಿನ ವಿಶ್ವಾಸದಿಂದ ಅಥವಾ ಆ ಮುಖಾಂತರ ನೊಂದ ಮನಸ್ಸುಗಳಿಗೆ ಗುರೂಜಿ ಸಾಂತ್ವನ ಹೇಳುತ್ತಾರೆ.
ಸನ್ನಿಧಿಗಳು
ಪೂರ್ವಾಭಿಮುಖವಾಗಿರುವ ದೇವಾಲಯ. ಷಡ್ವರ್ಗದ ಕ್ರಮದ ದ್ವಿತಲದ ಗರ್ಭಗುಡಿ. ಮೂಲಸ್ಥಾನ ಸನ್ನಿಧಿಯಾಗಿ ಶ್ರೀ ದುರ್ಗಾಆದಿಶಕ್ತಿ. ಈ ಅಮ್ಮ ಇಲ್ಲಿ ಅಷ್ಟಭುಜದಿಂದ ಶೋಭಿಸುತ್ತಿದ್ದಾಳೆ, ಸಿಂಹವಾಹಿನಿಯಾಗಿದ್ದಾಳೆ. ಅಮ್ಮನ ಮುಂಭಾಗ ಭೂಪುರ ಶ್ರೀಚಕ್ರವಿದೆ. ಉಪಸ್ಥಾನ ಸನ್ನಿಧಾನವಾಗಿ ಗರ್ಭಗುಡಿಯ ಮುಂಭಾಗ ಇಕ್ಕೆಲಗಳಲ್ಲಿ ಗಣಪತಿ, ಸುಬ್ರಹ್ಮಣ್ಯ ಗುಡಿಗಳು. ಗರ್ಭಗುಡಿಯ ಆಗ್ನೇಯಕ್ಕೆ ಆಂಜನೇಯ. ನೇರವಾಗಿ ಎದುರು ನಾಟ್ಯರಾಣಿ ಗಂಧರ್ವಕನ್ಯೆ ಸನ್ನಿಧಿಗಳಿವೆ. ನೈಋತ್ಯದಲ್ಲಿ ಯಕ್ಷೇಶ್ವರಿ, ಯಕ್ಷ ಕನ್ನಿಕೆ ಮತ್ತು ಪೂರ್ವದಲ್ಲಿ ಕಾಲ ಭೈರವ ಸಂಕಲ್ಪಗಳಿವೆ ಇದನ್ನು ‘ಪರಿವಾರ’ ಎಂದು ಪರಿಗ್ರಹಿಸುವಂತಿದೆ.
ದೇವಾಲಯ ಸಮುಚ್ಚಯಕ್ಕೆ ತಾಗಿದಂತೆ ಉತ್ತರದಲ್ಲಿ ವಿಸ್ತಾರವಾದ ಸಭಾಭವನವಿದೆ. ಗುರೂಜಿಯವರ ಕಚೇರಿಗೆ ಹೊಂದಿಕೊಂಡಿರುವುದು ಮೂಲತಃ ಸ್ಥಾಪನೆಯಾದ ಶಾಲೆ ಹಾಗೂ ಸರಸ್ವತಿ ಭವನ ಎನ್ನುವ ಸಭಾಗೃಹ. ಈ ದೇವಾಲಯ ಸಮುಚ್ಚಯದಿಂದ ಉತ್ತರಕ್ಕೆ ಸುಮಾರು ನೂರು ಮೀಟರ್ ದೂರದಲ್ಲಿ ನಾಗ ಸಹಿತ ಬ್ರಹ್ಮಸ್ಥಾನ, ಷಟ್ ಶಿರ ಸುಬ್ರಹ್ಮಣ್ಯ ಸಂಕಲ್ಪವಿದೆ. ದೇವಯಾನಿ ಮತ್ತು ವಲ್ಲಿಯರ ಮೂರ್ತಿಯೂ ಸುಬ್ರಹ್ಮಣ್ಯ ದೇವರ ಮುಂದೆ ಇಕ್ಕೆಲದಲ್ಲಿವೆ. ಬ್ರಹ್ಮ ಪ್ರಧಾನವಾದ ಪಂಚದೈವಗಳ ನೆಲೆ, ಪ್ರಸನ್ನಾಕ್ಷಿ ಸಂಕಲ್ಪ ಮತ್ತು ಕಲ್ಕುಡ – ಕಲ್ಲುರ್ಟಿ ದೈವಗಳ ಪ್ರತೀಕಗಳಿವೆ. ಈ ದೈವಗಳಿಗೆ ಸಿರಿಸಿಂಗಾರದ ಕೋಲ ನಡೆಯುತ್ತದೆ. ಕೊರಪಳು ಎನ್ನುವ ವಿಶೇಷ ಸನ್ನಿಧಿಯೊಂದಿದೆ. ಗುರುಪಾದದ ಸಂಕಲ್ಪವೂ ಇಲ್ಲಿ ಸ್ಥಾನ ಪಡೆದಿದೆ. ದೈವ – ದೇವರುಗಳ ಸಮೂಹವಾಗಿ ಕ್ಷೇತ್ರ ವಿಸ್ತಾರ ಹರವಿನಲ್ಲಿ ಹಬ್ಬಿಕೊಂಡಿದೆ.
ರಾಜಗೋಪುರ – ಮುಖಮಂಟಪ ಅಷ್ಟಬಂಧ ಬ್ರಹ್ಮಕಲಶಾಭಿಷೇಕ
ನಾಲ್ಕು ಆಲದ ಮರಗಳ ವಿನ್ಯಾಸವಿರುವ ರಾಜಗೋಪುರ ಪ್ರಕೃತಿ ಸಹಜವಾಗಿ, ಭೂಮಿಯಿಂದ ಮೇಲೆದ್ದು ಬಂದಂತೆ ಭಾಸವಾಗುವ ಶೈಲಿಯಲ್ಲಿ ನಿರ್ಮಿಸಲಾಗಿದೆ. ಮರದ ಬುಡದಲ್ಲಿ ಹಸಿರು ಹಾಸನ್ನು ಅಳವಡಿಸಿರುವುದರಿಂದ ಮತ್ತಷ್ಟು ನಿಸರ್ಗದೊಂದಿಗೆ ಸಂವಾದಿಯಾಗುತ್ತದೆ. ಇದು ಉದ್ಘಾಟನೆಗೊಳ್ಳಲಿದೆ. ಬಡಗು ಬದಿಯ ಮಂಟಪವೂ ಅನಾರವಣಗೊಂಡಿದೆ. ಗರ್ಭಗುಡಿಗೆ ನೂತನವಾಗಿ ಹೊಂದಿಸಲಾದ ಮುಖಮಂಟಪ ಮತ್ತು ಸುತ್ತುಪೌಳಿಯು ಅಮ್ಮನಿಗೆ ಅರ್ಪಿತವಾಗಿದೆ. ಪ್ರತಿಷ್ಠಾಪಿತ ಮೂಲ ಸನ್ನಿಧಾನವನ್ನು ಅಷ್ಟಬಂಧದ ಮೂಲಕ ದೃಢಗೊಳಿಸಿ ಪುನಃಪ್ರತಿಷ್ಠೆ ತದಂಗವಾಗಿ ಬ್ರಹ್ಮಕಲಶಾಭಿಷೇಕ ನೆರವೇರಲಿದೆ.
ನಿಜ ಅರ್ಥದ ಗುರು ‘ಗುರೂಜಿ’
ಪರಮ ಧಾರ್ಮಿಕತೆ, ಸಹೃದಯತೆ, ಸಾಂಸ್ಕೃತಿಕವಾದ ಲೋಕಧರ್ಮಿ ಚಿಂತನೆಗಳಿಂದ ಸಮಾಜದಲ್ಲಿ ಬಹುಮಾನ್ಯರಾಗಬಹುದು. ಮತ್ತಷ್ಟು ತೀವೃವಾಗಿ ಆಲೋಚಿಸಿದರೆ ಇದೇ ವ್ಯಕ್ತಿತ್ವದಿಂದ ನೊಂದ ಮನಸ್ಸುಗಳಿಗೆ ಸಾಂತ್ವನ ಹೇಳಬಲ್ಲ ಮನೋವೈದ್ಯನಾಗಬಹುದು. ವೈಯಕ್ತಿಕ – ಕೌಟುಂಬಿಕ ಸಮಸ್ಯೆಗಳ ಪರಿಹಾರಕನಾಗಬಹುದು. ಚಿಂತೆಗೆ ಪರಿಹಾರ ನೀಡುವ ಮಾರ್ಗದರ್ಶಕನಾಗಬಹುದು. ಇವುಗಳಿಂದ ಬೋಧಕನಾಗಿ ಗುರುವಾಗುತ್ತಾ, ಗುರೂಜಿಯಾಗಬಹುದು. ಅಜ್ಞಾನದಿಂದ ಮಾನಸಿಕ ತುಮುಲಗಳು ಹೆಚ್ಚುತ್ತವೆ. ಭಯದಿಂದ ವ್ಯಕ್ತಿ ವ್ಯಾಕುಲಚಿತ್ತನಾಗುತ್ತಾನೆ. ವ್ಯತ್ಯಸ್ತ ಮನಃಸ್ಥಿತಿಯಿಂದ ಜಿಗುಪ್ಸೆ ಬರುತ್ತದೆ. ಹೀಗೆ ಲೌಕಿಕ ಸಮಸ್ಯೆಗಳಿಂದ ಬಸವಳಿದವರ ಸಮಸ್ಯೆ ಪರಿಹಾರಕ್ಕೆ ಹತ್ತಾರು ದಾರಿಗಳಿವೆ. ದೇವರು ಎನ್ನುವ ಒಂದು ಪರಮಸತ್ಯವನ್ನು ಮಾಧ್ಯಮವಾಗಿ ಬಳಸಿಕೊಂಡು ಚಿಕಿತ್ಸಕನಾಗಿ ಸಂಕಷ್ಟಗಳಿಗೆ ಪರಿಹಾರ ಒದಗಿಸುವ, ಧೈರ್ಯ ತುಂಬುತ್ತಾ ಸಹಜ ಬದುಕಿಗೆ ಪಥ ನಿರ್ದೇಶಿಸುವ ಗುರೂಜಿ ‘ರಮಾನಂದ ಗುರೂಜಿ’.
ಇವರಲ್ಲಿ, ಇವರ ಸಮ್ಮುಖದಲ್ಲಿ ಎಲ್ಲವೂ ಆಪ್ತವಾಗಿರುತ್ತದೆ. ತೆರೆದ ಹೃದಯದ ನಡವಳಿಕೆಯಾಗಿರುತ್ತದೆ. ಬೆದರಿಸುವ ತಂತ್ರಗಳಿಲ್ಲದ ಪ್ರೀತಿಯ ಸಂಭಾಷಣೆಗಳಿರುತ್ತವೆ. ಮಾತನಾಡುವ ಕ್ರಮದಲ್ಲೇ ಮನ ಗೆಲ್ಲುವ ಗುರೂಜಿ ವ್ಯಕ್ತಿ ಜೀವನವನ್ನು ಪ್ರವೇಶಿಸಿ ಬಿಡುತ್ತಾರೆ. ಈ ಪ್ರವೇಶವೇ ಕಾರಣವಾಗಿ ಸಮಸ್ಯೆ ಪರಿಹಾರವಾಗುತ್ತದೆ. ಪ್ರಾಯಶ್ಚಿತ್ತಕ್ಕಾಗಿ ಆದಿಶಕ್ತಿ, ಪರಿವಾರ ದೇವರು, ನಾಗದೇವರು ಭೂತಗಳು. ಇಂತಹ ಅಲೌಕಿಕ ಶಕ್ತಿಗಳಿಗೆ ಶರಣಾಗುವ ಮನಃ ಸ್ಥೈರ್ಯ ಹೆಚ್ಚಿಸಿಕೊಳ್ಳುವ ಸಹಜ ಪ್ರಕ್ರಿಯೆಗಳೇ ಇಲ್ಲಿ ಕಷ್ಟ ಪರಿಹಾರಕ್ಕೆ ಚಿಕಿತ್ಸೆ. ವ್ಯಕ್ತಿತ್ವವು ವಿರೂಪಗೊಂಡಾಗ ಅದನ್ನು ಸಹಜ ಸ್ಥಿತಿಗೆ ತರುವಲ್ಲಿ ಯಾವ ಗುರೂಜಿಯು ಶೋಷಿತನ ಅಥವಾ ಪೀಡಿತನ ಮನಸ್ಸನ್ನು ಗೆಲ್ಲುತ್ತಾನೊ ಅವನನ್ನು ಪೀಡಿತನು ಒಪ್ಪುವುದು ಸಾಧಾರಣ. ಅಂತೆ ಗುರೂಜಿ ಮನ ಗೆಲ್ಲುತ್ತಾರೆ. ಸಮಸ್ಯೆ ಪರಿಹರಿಸುತ್ತಾರೆ. ಸಮಸ್ಯೆಯ ಆಳಕ್ಕೆ ಹೋಗಬೇಕಾದರೆ, ಸಾಮಾಜದ ಆಗುಹೋಗುಗಳ ತಿಳುವಳಿಕೆ, ಕೌಟುಂಬಿಕ ಜೀವನದಲ್ಲಿ ಒದಗುವ ಸಾಮಾನ್ಯ ಸಮಸ್ಯೆಗಳ ಪೂರ್ಣ ಜ್ಞಾನಬೇಕು. ಇದು ತಿಳಿದರೆ ಮಾನಸಿಕ ವ್ಯಾಧಿಗಳ ಪರಿಹಾರ ಸಾಧ್ಯ, ಅದರಂತೆ ಗುರೂಜಿಯ ಲೋಕಜ್ಞಾನವು ಇಲ್ಲಿ ಕೆಲಸ ಮಾಡುತ್ತದೆ.
ಯಾರಿಗೆ ಯಾವ ಮಣ್ಣಿನ ಋಣವಿದೆಯೊ…
ಸುದೀರ್ಘ ಅವಧಿಯಲ್ಲಿ ಮಾಡಿದ ಜಪಾನುಷ್ಠಾನಗಳ ಫಲ, ಆರಾಧನೆಗಳ ಪುಣ್ಯ, ವಿಶೇಷವಾಗಿ ನಡೆಸಲಾಗುವ ಅನ್ನಸಂತರ್ಪಣೆಯ ಫಲಗಳು ಗುರೂಜಿಯ ವಾಕ್ ಸಿದ್ಧಿಯ ಹಿನ್ನೆಲೆಯಲ್ಲಿದೆ. ನಿರ್ಲಿಪ್ತತೆ, ನಿರಾಡಂಬರ ಜೀವನ ಶೈಲಿಯೂ ಗುರೂಜಿಯ ವ್ಯಕ್ತಿತ್ವಕ್ಕೆ ಮೆರಗನ್ನು ನೀಡುತ್ತದೆ. ಎಲ್ಲ ಮಣ್ಣು ಎಲ್ಲರಿಗೂ ಅನುಗ್ರಹಿಸುತ್ತದೆ ಎನ್ನುವಂತಿಲ್ಲ. ಯಾರಿಗೆ ಯಾವ ಮಣ್ಣಿನ ಋಣವಿದೆಯೊ ಅಲ್ಲಿ ಆತನಿಂದ ಆ ಮಣ್ಣಿನ ಶಕ್ತಿಯು ಸಂಭ್ರಮಿಸುತ್ತದೆ. ಆ ವ್ಯಕ್ತಿ ಆಗಮಿಸುವವರೆಗೆ ಮಣ್ಣಾಗಿಯೇ ಇರುತ್ತದೆ, ಋಣ ಇದ್ದವ ಬಂದಾಗ ಅಭಿವೃದ್ಧಿಯಾಗುತ್ತದೆ. ಹೀಗೆ ಗುರೂಜಿ ದೊಡ್ಡಣಗುಡ್ಡೆಗೆ ಬಂದರು. ವಿದ್ಯಾಲಯ ಸ್ಥಾಪಿಸಿದರು. ಸಪರಿವಾರ ಅಮ್ಮನ ಸನ್ನಿಧಾನ ಸ್ಥಾಪನೆಯಾಯಿತು. ಮಣ್ಣಿನ ಮಗ ನಾಗಬ್ರಹ್ಮ ಸಮೇತನಾಗಿ ಸನ್ನಿಹಿತನಾದ. ಪೂಜೆ, ಹೋಮ, ಹವನ, ವ್ರತ, ನಾಗಾರಾಧನೆ, ಭೂತಾರಾಧನೆಗಳು ನಿತ್ಯನಿರಂತರವಾಯಿತು. ಸಂಚಯಗೊಂಡ ಪುಣ್ಯವು ಪರಿಹಾರ ಬಯಸಿ ಬರುವವರ ಪಾಪ ಪ್ರಾಯಶ್ಚಿತ್ತಕ್ಕೆ, ಸಮಸ್ಯೆ ಪರಹಾರಕ್ಕೆ ವಿನಿಯೋಗವಾಗುತ್ತಿದೆ.
ಜೈ ಗುರೂಜೀ…
ದಾರು ಶಿಲ್ಪದ ಬೆಡಗು
ಗರ್ಭಗುಡಿಗೆ ದಾರುಶಿಲ್ಪ ಸಂಭ್ರಮಿಸುವಂತಿರುವ ಮುಖಮಂಟಪವನ್ನು ಜೋಡಿಸಲಾಗಿದೆ. ಚತುರಸ್ರ ಆಕಾರದಲ್ಲಿದ್ದ ಗರ್ಭಗುಡಿ ಈಗ ಮುಖಮಂಟಪ ಸಹಿತವಾದ ಪ್ರಾಸಾದದಂತೆ ಕಾಣುತ್ತದೆ. ನೂತನ ಅಳವಡಿಕೆಯು ಗರ್ಭಗುಡಿಗೆ ದೀಪದಳಿಯನ್ನು ಜೋಡಿಸಿದಂತಿದೆ. ದೀಪದಳಿಯು ಚಾರೆಗುಂಟ ಮಾದರಿಯಲ್ಲಿ ಜೋಡಿಸಲ್ಪಟ್ಟಿದೆ. ಮರದ ರಚನೆಯು ವಿಶಿಷ್ಟ ವಿನ್ಯಾಸದಿಂದ ಗಮನ ಸೆಳೆಯುತ್ತದೆ. ಮುಂಭಾಗದ ದಾರಂದದಲ್ಲಿ ಕೆತ್ತಿರುವ ಕೀರ್ತಿಮುಖ ಆಕರ್ಷಣೀಯವಾಗಿದೆ. ದ್ವಾರ ಶಾಖೆಯಲ್ಲೂ ಸುಂದರ ಕೆತ್ತನೆಗಳಿವೆ. ಐದು ಹಂತಗಳಲ್ಲಿ ಉಬ್ಬು ಚಿತ್ರಗಳನ್ನು ಅಳವಡಿಸಲಾಗಿದೆ. ದೀಪದಳಿಯ ನಾಲ್ಕು ದಿಕ್ಕುಗಳಲ್ಲಿ ಕಡೆಗೋಲನ್ನಿರಿಸಿ ಶ್ರೀ ಕೃಷ್ಣನ ಸುಂದರ ಮಂದಿರಗಳ ನಗರವೆನ್ನುವುದನ್ನು ನೆನಪಿಸುತ್ತದೆ. ಬಾಗಿಲವಾಡದಲ್ಲಿ ಶಂಖ, ಚಕ್ರ, ಗದಾ, ಪದ್ಮ ಹಾಗೂ ದೀಪ ಮುಂತಾದ ಉಬ್ಬು ಚಿತ್ರಗಳಿವೆ. ಸಪ್ತಮಾತೃಕೆಯರು, ನವಗ್ರಹಗಳು, ವಿಶ್ವಕರ್ಮ ಸಹಿತ ಗಣಪತಿ, ಸುಬ್ರಹ್ಮಣ್ಯ, ಅಯ್ಯಪ್ಪ, ಸತ್ಯನಾರಾಯಣ, ಲಕ್ಷ್ಮೀ, ಸರಸ್ವತಿ, ಪಾರ್ವತಿ ಮುಂತಾದ ದೇವಾನುದೇವತೆಗಳನ್ನು, ಮಹರ್ಷಿಗಳನ್ನು, ದಶಾವತಾರ, ಬಸವ, ಮಾಚಿದೇವ, ಮಧ್ವ ಶಂಕರ, ಕನಕದಾಸ, ಪುರಂದರದಾಸ, ನಾರಾಯಣಗುರು ಮೊದಲಾದ ಸಂತರು, ಫಲವಸ್ತುಗಳು, ತುಳುನಾಡಿನ ಬದುಕಿಗೆ ಅಗತ್ಯದ ಹಾಗೂ ಕೃಷಿ ಸಂಸ್ಕೃತಿಯ ಮರೆಯಾಗುತ್ತಿರುವ ವಿಷಯಗಳ ಚಿತ್ರಗಳು ಮಾಹಿತಿಗೆ ಪೂರಕವಾಗಿವೆ. ಚೆನ್ನೆಮಣೆ, ಸಂಗೀತ, ನೃತ್ಯ ದೃಶ್ಯಗಳು ಮತ್ತು ಉಪಕರಣಗಳು, ಯಕ್ಷಗಾನ, ಭೂತಾರಾಧನೆ, ಕಂಬಳ ಮುಂತಾದ ಚಿತ್ತಾರಗಳನ್ನು ಮರದಲ್ಲಿ ಪಡಿಮೂಡಿಸಿ ಅಳವಡಿಸಿರುವ ದಾರುಶಿಲ್ಪಿ ಪೇರಲ್ಕೆ ಜಗದೀಶ ಆಚಾರ್ಯರು ವಿವರಿಸಿದಷ್ಟು ಹಂತ ಹಂತವಾಗಿ ಬರೆಯಲಾಗಲಿಲ್ಲ. ಆದರೆ ಗರ್ಭಗುಡಿಗೆ ಹೊಂದಿಸಲಾದ ದಾರು ಶಿಲ್ಪದ ಅಲಂಕರಣವು ಶಿಲ್ಪಿಯ ಚಿಂತನೆ, ನಿರ್ಮಿಸುವ ತಂತ್ರದ ಅಭಿವ್ಯಕ್ತಿಯಾಗಿದೆ.
ಆನಂದಮಯ…
ರಮಾನಂದರು ಕೇವಲ ತಾವು ಮಾತ್ರ ಆನಂದರಾಗಿರದೆ, ಸರ್ವರನ್ನೂ ಆನಂದರನ್ನಾಗಿಸುವ ಶಕ್ತಿ, ಚೈತನ್ಯ ಉಳ್ಳವರಾಗಿದ್ದಾರೆ. ಕ್ಷೇತ್ರದಲ್ಲಿ ನಡೆಯುವ ನಿತ್ಯ ಅನ್ನ ಸಂತರ್ಪಣೆಯಿಂದ ಭಕ್ತರ ಹಸಿವು ತಣಿಸುವುದರೊಂದಿಗೆ, ಅವರ ಮನಸ್ಸಿಗೂ ಆನಂದ ನೀಡುತ್ತಿದ್ದಾರೆ. ಕ್ಷೇತ್ರದಲ್ಲಿ ಇದೀಗ ಹಮ್ಮಿಕೊಂಡ ಪ್ರತಿಷ್ಠಾ ಕಾರ್ಯ ನಿರ್ವಿಘ್ನವಾಗಿ ನೆರವೇರಲಿ.
– ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು
— ಕೆ.ಎಲ್. ಕುಂಡಂತಾಯ
ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ
ರೈಲ್ವೇ ಬ್ರಿಡ್ಜ್ ಬಳಿ, ದೊಡ್ಡಣ್ಣಗುಡ್ಡೆ, ಉಡುಪಿ
ಮೊ: 09342749650, 6360459569, 7738387979, 0820-2575057
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ
Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್ ಕುಮಾರ್
Udupi: ರೈಲು ಬಡಿದು ವ್ಯಕ್ತಿ ಸಾವು
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
MUST WATCH
ಹೊಸ ಸೇರ್ಪಡೆ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.