ಆಗ ರೋಗಪತ್ತೆ, ಈಗ ಆತಂಕ ನಿವಾರಣೆಯ ಸವಾಲು
Team Udayavani, May 28, 2018, 5:00 AM IST
ಕೇರಳದಲ್ಲಿ ಅಪರೂಪದ ಕಾಯಿಲೆಯ ಮಾಹಿತಿ ಬಂದಾಗ ಅದನ್ನು ಪತ್ತೆ ಹಚ್ಚುವುದು ಸವಾಲಾಗಿತ್ತು. ಆ ಸವಾಲಿನಲ್ಲಿ ಶೀಘ್ರ ಯಶಸ್ವಿಯಾದೆವು. ಈಗ ಸೋಂಕು ನಿಯಂತ್ರಣದಲ್ಲಿಯೂ ಯಶ ಸಿಗುತ್ತಿದೆ. ಆದರೆ ಜನರಲ್ಲಿರುವ ಆತಂಕವನ್ನು ದೂರ ಮಾಡುವ ಸವಾಲು ಇನ್ನೂ ಕೂಡ ನಮ್ಮ ಮುಂದಿದೆ ಎಂದಿದ್ದಾರೆ ಕಳೆದ 10 ದಿನಗಳಿಂದ ಕೇರಳದಲ್ಲಿ ನಿಫಾ ಸೋಂಕು ವಿರುದ್ಧ ಹೋರಾಟ ನಡೆಸುತ್ತಿರುವ ತಂಡದ ಪ್ರಮುಖ, ಮಣಿಪಾಲ MCVR (ಮಣಿಪಾಲ್ ಸೆಂಟರ್ ಫಾರ್ ವೈರಸ್ ರಿಸರ್ಚ್) ಮುಖ್ಯಸ್ಥ ಡಾ| ಜಿ. ಅರುಣ್ ಕುಮಾರ್. ಕೇರಳ ಸರಕಾರದ ಆಹ್ವಾನದ ಮೇರೆಗೆ MCVRನ ಆರು ಮಂದಿ ತಜ್ಞರ ಜತೆ ತೆರಳಿ ರಾತ್ರಿ ಹಗಲು ಸರಕಾರದ ಜತೆ ಕೈಜೋಡಿಸಿ ಕಾರ್ಯಾಚರಣೆಗಿಳಿದು ಸೋಂಕು ಒಂದು ಹಂತದ ನಿಯಂತ್ರಣಕ್ಕೆ ಬಂದ ಅನಂತರ ಮೇ 27ರಂದು ತುರ್ತುಕಾರ್ಯದ ನಿಮಿತ್ತ ಮಣಿಪಾಲಕ್ಕೆ ವಾಪಸಾದ ಸಂದರ್ಭದಲ್ಲಿ ಅವರ ಜತೆ ‘ಉದಯವಾಣಿ’ ನಡೆಸಿದ ಸಂದರ್ಶನದ ಆಯ್ದ ಭಾಗ ಇಂತಿದೆ.
ನಿಮಗೆ ಕರೆ ಬಂದದ್ದು ಯಾವಾಗ, ನಿಮ್ಮ ಕಾರ್ಯಾಚರಣೆ ಆರಂಭದ ಸಂದರ್ಭ ಹೇಗಿತ್ತು?
– ನಿಫಾದಂತಹ ಸೋಂಕು ರೋಗವನ್ನು ಪತ್ತೆ ಹಚ್ಚುವ, ನಿಯಂತ್ರಿಸುವ ಕುರಿತಾಗಿ MCVRನ ಎಲ್ಲ ತಜ್ಞರು ಕಳೆದ ಆಗಸ್ಟ್ ನಲ್ಲಿಯೇ ಸಿದ್ಧರಾಗಿದ್ದೆವು. ಮೇ 18ಕ್ಕೆ ಅಪರೂಪದ ಕಾಯಿಲೆಯೊಂದರ ಮಾದರಿಯನ್ನು ಪರೀಕ್ಷೆಗಾಗಿ MCVRಗೆ ಕಳುಹಿಸಲಾಯಿತು. ನಾವು ಅದೇ ದಿನ ನಿಫಾ ವೈರಸ್ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದೆವು. ಆದರೆ ನಮಗೆ ಇನ್ನೊಂದು ಬಾರಿ ಪರೀಕ್ಷೆ ನಡೆಸಬೇಕೆಂದು ಅನಿಸಿದ್ದರಿಂದ ಪುಣೆ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿದೆವು. ಅಲ್ಲಿಯೂ ಖಚಿತವಾಯಿತು. ಅದೇ ವೇಳೆ ಕೇರಳಕ್ಕೆ ಬರುವಂತೆ ಕರೆ ಬಂತು. ಮೇ 19ಕ್ಕೆ ನಾವು ಹೊರಟೆವು. ಕೂಡಲೇ ಕಾರ್ಯಾಚರಣೆ ಆರಂಭಿಸಿದೆವು. ಮೇ 20ಕ್ಕೆ ನಿಫಾ ಎಂದು ಅಧಿಕೃತವಾಗಿ ಘೋಷಿಸಲಾಯಿತು. ಮೊದಲ ಮಾದರಿಯನ್ನು ಮಾತ್ರ ಪುಣೆಯಲ್ಲಿ ಮರುಪರೀಕ್ಷೆ ಮಾಡಲಾಗಿತ್ತು. ಉಳಿದ ಎಲ್ಲ ಮಾದರಿಗಳನ್ನು ಮಣಿಪಾಲದಲ್ಲೇ ದೃಢಪಡಿಸಲಾಗಿತ್ತು.
ನಿಮ್ಮ ಮೊದಲ ಸಲಹೆ ಏನಿತ್ತು?
– ಸೋಂಕು ಹೇಗೆ ಬಂತು ಎಂಬುದರ ಸುಳಿವು ಸಿಕ್ಕಿರಲಿಲ್ಲ. ಆದರೆ ಸೋಂಕು ಪೀಡಿತರಿಗೆ ಪ್ರತ್ಯೇಕ ವಾರ್ಡ್ (ಐಸೊಲೇಷನ್ ವಾರ್ಡ್) ವ್ಯವಸ್ಥೆ ಮಾಡಬೇಕೆಂಬುದು ನನ್ನ ಮೊದಲ ಸಲಹೆಯಾಗಿತ್ತು. ಅದನ್ನು ಆರೋಗ್ಯ ಇಲಾಖೆಯ ತಂಡ ಕೂಡಲೇ ಕಾರ್ಯರೂಪಕ್ಕೆ ತಂದಿತು. ಇದರಿಂದಾಗಿ ನಿಯಂತ್ರಣ ಸುಲಭವಾಯಿತು.
ಮೊದಲ ಪ್ರಕರಣಕ್ಕೆ ಕಾರಣ ತಿಳಿಯಿತೆ?
– ಇಲ್ಲ. ಅದು ಅಷ್ಟು ಸುಲಭವಲ್ಲ. ಮೊದಲ ಪ್ರಕರಣ ಕಂಡುಬಂದ ಮನೆಯ ಪಕ್ಕ ಸತ್ತು ಬಿದ್ದ ಬಾವಲಿ ಪತ್ತೆಯಾಗಿದ್ದು ಹೌದು. ಆದರೆ ಅದರಲ್ಲಿ ವೈರಸ್ ಇತ್ತೇ ಎಂಬುದು ಇನ್ನೂ ದೃಢ ಪಟ್ಟಿಲ್ಲ.
ಸೋಂಕು ಹರಡಿದ್ದು ಹೇಗೆ?
– ನಿಫಾ ವೈರಸ್ ಗಾಳಿಯ ಮೂಲಕ ಹರಡುವುದಿಲ್ಲ. ಅದು ಜೊಲ್ಲು, ಸೀನು, ರಕ್ತ ಇತ್ಯಾದಿಗಳ ಮೂಲಕ ಹರಡುತ್ತದೆ. ಮೊದಲ ಪ್ರಕರಣದಲ್ಲಿ ಮೃತಪಟ್ಟ 26 ವರ್ಷದ ಯುವಕನಿಗೆ ಮೇ 2ರಂದು ಜ್ವರ ಆರಂಭವಾಗಿತ್ತು. ಮೇ 5ರಂದು ಆತ ಮೃತಪಟ್ಟ. ಅನಂತರ ಅದೇ ಮನೆಯ ಇನ್ನೋರ್ವನಿಗೆ ಮೇ 13ಕ್ಕೆ ಜ್ವರ ಬಂತು, ಆತ 18ರಂದು ಸಾವನ್ನಪ್ಪಿದ. ಬಳಿಕ ಅದೇ ಮನೆಯ ಇಬ್ಬರು ಮೃತಪಟ್ಟರು. ಓರ್ವ ಮಹಿಳೆ ಮಾತ್ರ ಬದುಕುಳಿದರು. ಸೋಂಕು ಪೀಡಿತರ ಜೊಲ್ಲು, ಕಫ ಮೊದಲಾದವುಗಳಲ್ಲಿದ್ದ ವೈರಸ್ ಅವರನ್ನು ಹತ್ತಿರದಿಂದ ಉಪಚರಿಸಿದವರ ದೇಹ ಪ್ರವೇಶಿಸಿರುವ ಸಾಧ್ಯತೆ ಇದೆ. ಮಹಿಳೆ ಅದೇ ಮನೆಯಲ್ಲಿದ್ದರೂ ಆಕೆ ಏನೂ ಆಗಿಲ್ಲ. ಸೋಂಕು ಹೆಚ್ಚಾಗಿ ಹರಡಿದ್ದು ಆಸ್ಪತ್ರೆಯಲ್ಲಿಯೇ. ಪಕ್ಕದ ಬೆಡ್ ನವರಿಗೆ ಸೋಂಕು ತಗಲಿತ್ತು.
ನಿಫಾ ವೈರಸ್‌ಗೆ ಈಗಿನ ವಾತಾವರಣ ಸೂಕ್ತವೆ?
– ಈ ಹಿಂದೆ ಬಾಂಗ್ಲಾ ಮತ್ತು ಪ. ಬಂಗಾಲಗಳಲ್ಲಿ ಕೂಡ ಇದೇ ಅವಧಿಯಲ್ಲಿ ನಿಫಾ ಪ್ರಕರಣ ಕಂಡುಬಂದಿತ್ತು. ಡಿಸೆಂಬರ್‌ನಿಂದ ಮೇವರೆಗೆ ಬಾವಲಿಗಳ ಸಂತಾನೋತ್ಪತ್ತಿಯ ಕಾಲ. ಈ ಅವಧಿಯಲ್ಲಿ ಹೆಚ್ಚು ಕಂಡುಬರಬಹುದು ಎಂಬುದನ್ನು ಅಧ್ಯಯನವೊಂದು ಹೇಳಿದೆ.
ಪ್ರಾಣಿಗಳಲ್ಲಿ ಲಕ್ಷಣಗಳೇನು?
– ಈ ವೈರಸ್ ಹಂದಿ, ಕುದುರೆಗಳಿಗೂ ತಗಲುತ್ತದೆ. ಇವೆರಡಕ್ಕೂ ಜ್ವರ ಬರುತ್ತದೆ. ಬಾವಲಿಗಳಲ್ಲಿ ವೈರಸ್ ಇದ್ದರೂ ಅವುಗಳ ಆರೋಗ್ಯದ ಮೇಲೆ ಪರಿಣಾಮ ಇಲ್ಲ. 1 ಲಕ್ಷ ಬಾವಲಿಗಳಲ್ಲಿ ಕೇವಲ ಐದರಲ್ಲಿ ಮಾತ್ರವೇ ವೈರಸ್ ಇರಬಹುದು.
MCVR ಕಾರ್ಯಾಚರಣೆ ಮುಂದುವರಿಯುವುದೇ?
– ಹೌದು. ಸರಕಾರ ಹೇಳುವವರೆಗೂ ಅಲ್ಲಿ ಸೇವೆ ಸಲ್ಲಿಸುತ್ತೇವೆ. ನಾನು ಮೇ 28ರ ಬೆಳಗ್ಗೆ ಮತ್ತೆ ಕೇರಳ ತಲುಪಬೇಕಾಗಿದೆ. ನಮ್ಮ ತಜ್ಞರು ಅಲ್ಲಿ ಸೇವೆಗೈಯುತ್ತಿದ್ದಾರೆ. ಮುಂದಿನ ಬಾರಿ ಇದಕ್ಕಿಂತಲೂ ಹೆಚ್ಚು ಕ್ಷಿಪ್ರ ರೋಗ ನಿಯಂತ್ರಣಕ್ಕೆ ಈ ಬಾರಿಯ ನಮ್ಮ ಕೆಲಸ ನೆರವಾಗಲಿದೆ.
ಕೇರಳ ನಿಫಾ ಪ್ರಕರಣದಿಂದ ಪಾಠ ಏನು?
– ಇದೊಂದು ದೇಶದ ವೈದ್ಯಕೀಯ ಕ್ಷೇತ್ರಕ್ಕೊಂದು ದೊಡ್ಡ ಪಾಠ. ನಮ್ಮ ಆಸ್ಪತ್ರೆಗಳಲ್ಲಿ ಸೋಂಕು ನಿಯಂತ್ರಣ ಕ್ರಮ (ಇನ್‌ಫೆಕ್ಷನ್ ಕಂಟ್ರೋಲ್ ಪ್ರಾಕ್ಟೀಸ್) ಕಡ್ಡಾಯ ಮಾಡಬೇಕಾದ ಸಂದರ್ಭ ಸೃಷ್ಟಿಯಾಗಿದೆ. ಅಂತೆಯೇ ಐಸೊಲೇಷನ್ ವಾರ್ಡ್‌ಗಳ ಬಗ್ಗೆಯೂ ಗಮನಹರಿಸಲೇಬೇಕಾಗಿದೆ. ಜತೆಗೆ ನರ್ಸ್, ಆಸ್ಪತ್ರೆ ಅಟೆಂಡರ್ ಕೂಡ ಇದರ ಬಗ್ಗೆ ತರಬೇತಿ ಪಡೆಯುವುದು ಅನಿವಾರ್ಯ ಎಂಬುದನ್ನು ಇದು ಕಲಿಸಿಕೊಟ್ಟಿದೆ.
ಆತಂಕ ದೂರ ಮಾಡುವುದು ಹೇಗೆ?
– ಆಸ್ಪತ್ರೆಗಳಲ್ಲಿ ರೋಗಿಗಳನ್ನು ಹತ್ತಿರದಿಂದ ಉಪಚರಿಸುವವರು, ಆರೋಗ್ಯ ವಿಚಾರಿಸಲೆಂದು ಹೋಗುವವರು ಹೆಚ್ಚು ಜಾಗರೂಕರಾಗಿರಬೇಕು. ಮಾಸ್ಕ್ ಧರಿಸುವುದು ಸುರಕ್ಷಿತ. ಬಾವಲಿಗಳು ಕಚ್ಚಿದ ಹಣ್ಣುಗಳನ್ನು ತಿನ್ನಬಾರದು. ಕೈಗಳನ್ನು ಸಾಬೂನಿನಲ್ಲಿ ತೊಳೆದು ಸ್ವಚ್ಛವಾಗಿಟ್ಟುಕೊಳ್ಳಬೇಕು. ಆತಂಕ ಪಡುವ ಅಗತ್ಯವಿಲ್ಲ. ಸಾರ್ವಜನಿಕವಾಗಿ ಮಾಸ್ಕ್ ಧರಿಸಿ ಓಡಾಡಬೇಕಾಗಿಲ್ಲ.
ಜನರಲ್ಲಿ ಹೇಗೆ ಧೈರ್ಯ ಮೂಡಿಸಿದಿರಿ?
– ಅದೊಂದು ದೊಡ್ಡ ಸವಾಲು. ಆ ಸವಾಲು ಈಗಲೂ ಇದೆ. ಒಂದೇ ಕುಟುಂಬದ ನಾಲ್ಕು ಮಂದಿ ಮೃತಪಟ್ಟ ಮನೆಗೆ ನಾನು ಭೇಟಿ ಕೊಟ್ಟು ಅಧ್ಯಯನ ನಡೆಸಿದಾಗ ಅಲ್ಲೇ ಪಕ್ಕದ ಮನೆಯವರೆಲ್ಲ ದೂರದಿಂದ ಮಾಸ್ಕ್ ಕಟ್ಟಿಕೊಂಡು ನೋಡುತ್ತಿದ್ದರು. ಕೆಲವು ಮಂದಿ ಮನೆ ಖಾಲಿ ಮಾಡಿದ್ದರು. ನಾವು ಧೈರ್ಯ ತುಂಬಿದ ಅನಂತರ ವಾಪಸಾಗಿದ್ದಾರೆ. ಈಗಲೂ ಅವರಿಗೆ ಏನೂ ಆಗಿಲ್ಲ.
— ಸಂತೋಷ್ ಬೊಳ್ಳೆಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.