ಮಕರ ಸಂಕ್ರಮಣ ಉತ್ಸವಕ್ಕೆ ಸೇವಂತಿಗೆ ಸೇವೆ
ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ
Team Udayavani, Jan 16, 2020, 5:54 AM IST
ಮಾರಣಕಟ್ಟೆ: ಮೂರು ತಾಲೂಕುಗಳ ನಂಬಿದ ಭಕ್ತರ ಸಿದ್ಧಿ ಕ್ಷೇತ್ರವಾಗಿರುವ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಸೇರಿದ ಭಕ್ತರ ಸಮ್ಮುಖ ದಲ್ಲಿ ಸಡಗರ ಸಂಭ್ರಮದ ಮಾರಣಕಟ್ಟೆ ಜಾತ್ರೆ ಆರಂಭಗೊಂಡಿತು.
ಸೇವಂತಿಗೆ ಪ್ರಿಯ ಬ್ರಹ್ಮಲಿಂಗೇಶ್ವರ ಮಾರಣಕಟ್ಟೆ ಮಕರ ಸಂಕ್ರಮಣ ದಂದು ಇಲ್ಲಿಗೆ ಆಗಮಿಸುವ ಭಕ್ತರು ಹೊರೆ ಕಾಣಿಕೆಯಾಗಿ ಬುಟ್ಟಿಯಲ್ಲಿ ಸೇವಂತಿಗೆ ಹಾಗೂ ಸಿಂಗಾರ ಹೂವನ್ನು ಶ್ರೀ ದೇವರಿಗೆ ಸಮರ್ಪಿಸುವ ಪದ್ಧತಿ ಅನಾದಿ ಕಾಲದಿಂದಲೂ ನಡೆದುಕೊಂಡು ಬರುತ್ತಿದೆ. ಸರತಿ ಸಾಲಿನಲ್ಲಿ ತಲೆಯಲ್ಲಿ ಸೇವಂತಿಗೆ ಬುಟ್ಟಿ ಹೊತ್ತ ಮಹಿಳೆಯರು ಹಾಗೂ ಪುರುಷರ ಸಾಲು ಈ ವರ್ಷವೂ ಕೂಡ ಉದ್ದಕ್ಕೂ ಕಂಡುಬಂತು.
ದಾಖಲೆಯ ಅನ್ನಪ್ರಸಾದ ವಿತರಣೆ
18 ಸಾವಿರಕ್ಕೂ ಮಿಕ್ಕಿ ಭಕ್ತರು ಈ ದಿನ ಅನ್ನಪ್ರಸಾದ ಸ್ವೀಕರಿಸಿ ದೇವರ ಅನುಗ್ರಹಕ್ಕೆ ಪಾತ್ರರಾಗಿರುತ್ತಾರೆ. ವಕೀಲ ಕುಸುಮಾಕರ ಶೆಟ್ಟಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪ್ರಮುಖರು ಸಹಿತ ಗ್ರಾಮಸ್ಥರು ದೂರ ದೂರಿನ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದರು.
ಸೇವಂತಿಗೆ ಹೆಚ್ಚಿದ ಬೇಡಿಕೆ
ಜಾತ್ರೆಯಲ್ಲಿ ಬ್ರಹ್ಮಲಿಂಗೇಶ್ವರನಿಗೆ ಅತ್ಯಂತ ಪ್ರಿಯವಾಗಿರುವ ಸೇವಂತಿಗೆ ಹೂವು ಹಾಗೂ ಸಿಂಗಾರದ ಹೂವಿಗೆ ಬೇಡಿಕೆ ಹೆಚ್ಚಿದ್ದು ಹೂವಿನ ಅಂಗಡಿಗಳ ಎದುರು ಭಕ್ತರ ದೊಡ್ಡ ಸಾಲು ಕಂಡುಬಂತು.
ನಂಬಿಕೆಯ ತೆಂಕ್ಲಾಯಿ ಚಿಕ್ಕು ದೈವ ಪ್ರಯಾಣ
ಚಿಕ್ಕು ಅಮ್ಮನವರು ಮಕರ ಸಂಕ್ರಮಣದ ಹಿಂದಿನ ಧನು ಸಂಕ್ರಮಣದ ಅನಂತರ ನದಿ ದಾಟಿ ತೆಂಕು ದಿಕ್ಕಿಗೆ ಸಾಗಿ (ಉಡುಪಿ ತಾಲೂಕು) ಆ ಭಾಗದ ಗ್ರಾಮಸ್ಥರನ್ನು ಮಕರ ಸಂಕ್ರಮಣಕ್ಕೆ ಆಹ್ವಾನಿಸುವ ಪದ್ದತಿಯು ಇಂದಿಗೂ ರೂಢಿಯಲ್ಲಿದೆ.
ಮಕರ ಸಂಕ್ರಮಣದ ದಿನ ಪೂರ್ವಾಹ್ನ 11 ಗಂಟೆಗೆ ನದಿ ದಾಟಿ ಪುರ ಪ್ರವೇಶ ಮಾಡಿದ ಚಿಕ್ಕು ದೇವರ ಪಾತ್ರಿಯನ್ನು ಧಾರ್ಮಿಕ ಪರಂಪರೆಯಂತೆ ಹೊತ್ತು ನದಿ ದಾಟಿಸಿ ಪುರ ಪ್ರವೇಶ ಮಾಡಿದ ಅನಂತರ ಮಕರ ಸಂಕ್ರಮಣ ಉತ್ಸವದ ಧಾರ್ಮಿಕ ಕಾರ್ಯಗಳು ಆರಂಭಗೊಂಡಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.