ಶ್ರೀಕೃಷ್ಣಮಠ: ಸುಸಜ್ಜಿತ ಸ್ನಾನ-ಶೌಚಗೃಹ ಸಂಕೀರ್ಣ ಸಂಪೂರ್ಣ
ಡಿ. 25: ಉದ್ಘಾಟನೆಗೆ ಸಿಎಂ
Team Udayavani, Dec 20, 2019, 5:53 AM IST
ಉಡುಪಿ: ಶ್ರೀಕೃಷ್ಣಮಠದ ದರ್ಶನಕ್ಕೆ ನಿತ್ಯ ಆಗಮಿಸುವ ಸಾವಿರಾರು ಯಾತ್ರಾರ್ಥಿಗಳಿಗೆ ಅಗತ್ಯವಾದ ಸುಸಜ್ಜಿತ ಸ್ನಾನ ಮತ್ತು ಶೌಚಗೃಹ ಸಂಕೀರ್ಣ ಸುಮಾರು 2 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಡಿ. 25ರ ಅಪರಾಹ್ನ 2.30ಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಂಕೀರ್ಣವನ್ನು ಉದ್ಘಾಟಿಸಲು ದಿನಾಂಕ ನಿಗದಿಯಾಗಿದೆ.
ಶ್ರೀಕೃಷ್ಣಮಠದ ವಾಹನ ಪಾರ್ಕಿಂಗ್ ಪ್ರದೇಶದಲ್ಲಿ ಮಂಗಳೂರಿನ ಎಂಆರ್‌ಪಿಎಲ್ ಸಂಸ್ಥೆ ತನ್ನ ಸಿಎಸ್‌ಆರ್ ನಿಧಿಯಿಂದ ಸಂಕೀರ್ಣವನ್ನು ನಿರ್ಮಿಸಿಕೊಟ್ಟಿದೆ.
ಸಂಕೀರ್ಣದ ಕೆಳಭಾಗದ ಎಡಭಾಗದಲ್ಲಿ ಮಹಿಳೆಯರಿಗೆ ಮತ್ತು ಬಲಭಾಗದಲ್ಲಿ ಪುರುಷರಿಗೆ ಶೌಚಾಲಯಗಳಿವೆ. ಮಹಿಳಾ ವಿಭಾಗದಲ್ಲಿ ಆರು ಇಂಡಿಯನ್ ಮತ್ತು ಆರು ವೆಸ್ಟರ್ನ್ ಶೌಚಾಲಯ, 12 ಸ್ನಾನಗೃಹ, ಬಟ್ಟೆ ಬದಲಾಯಿಸುವ ಕೋಣೆ, ಪ್ಯಾಡ್ ಬರ್ನಿಂಗ್ ಯಂತ್ರವಿದೆ. ಇದೇ ರೀತಿ ಮೇಲ್ಭಾಗದಲ್ಲಿಯೂ ಇದೆ. ಪುರುಷರ ವಿಭಾಗದಲ್ಲಿ ಐದು ಇಂಡಿಯನ್ ಮತ್ತು ಆರು ವೆಸ್ಟರ್ನ್ ಶೌಚಾಲಯ, 12 ಸ್ನಾನಗೃಹ, ಸುಮಾರು 10 ಮೂತ್ರಾಲಯಗಳಿವೆ. ಇದೇ ರೀತಿ ಮೇಲ್ಭಾಗದಲ್ಲಿಯೂ ಇದೆ. ಎರಡೂ ವಿಭಾಗದಲ್ಲಿ ನಾಲ್ಕು ಕೈತೊಳೆಯುವ ನಳ್ಳಿಗಳಿವೆ. ಒಟ್ಟು 46 ಶೌಚಾಲಯ, 48 ಸ್ನಾನಗೃಹಗಳಿವೆ.
ನೀರು ಸಂಗ್ರಹಣ ಸಂಪ್‌ಗೆ ಶ್ರೀಕೃಷ್ಣಮಠ ಪರಿಸರ ಪ್ರತಿಷ್ಠಾನದಲ್ಲಿರುವ ಬಾವಿ, ಕೊಳವೆಬಾವಿಗಳ ನೀರಿನೊಂದಿಗೆ ನಗರಸಭೆ ನೀರಿನ ಸಂಪರ್ಕವನ್ನೂ ಮಾಡಲಾಗಿದೆ. ಸಂಪ್ ಕಾಮಗಾರಿಯನ್ನು ಉಡುಪಿಯ ಶೈಲೇಶ್ ಮತ್ತು ಸ್ನಾನ-ಶೌಚಗೃಹವನ್ನು ವೆಂಕಟೇಶ್ ಶೇಟ್ ಅವರು ನಿರ್ವಹಿಸಿದ್ದಾರೆ.
ಉದ್ಘಾಟನ ಸಮಾರಂಭದಲ್ಲಿ ಮುಖ್ಯಮಂತ್ರಿಗಳ ಜತೆಗೆ ಸಚಿವರು, ಸಂಸದರು, ಶಾಸಕರು, ಎಂಆರ್‌ಪಿಎಲ್‌ನ ಹಿಂದಿನ ಮತ್ತು ಈಗಿನ ಹಿರಿಯ ಅಧಿಕಾರಿಗಳು ಪಾಲ್ಗೊಳ್ಳುವರು.
1.5 ಕೋ.ರೂ.
ವೆಚ್ಚದಲ್ಲಿ ನಿರ್ಮಾಣ
ತಳಅಂತಸ್ತಿನಲ್ಲಿ 5 ಲಕ್ಷ ಲೀಟರ್ ನೀರು ಸಂಗ್ರಹಣ ತೊಟ್ಟಿಯನ್ನು ಸುಮಾರು 50 ಲ.ರೂ. ವೆಚ್ಚದಲ್ಲಿ ನಿರ್ಮಿಸಿದರೆ, ನೆಲ ಮಟ್ಟ ಮತ್ತು ಮಹಡಿಯಲ್ಲಿ ಸುಮಾರು 8,000 ಚದರಡಿ ವಿಸ್ತೀರ್ಣದಲ್ಲಿ ಸ್ನಾನ ಗೃಹ ಮತ್ತು ಶೌಚಗೃಹ ಸಂಕೀರ್ಣ ಸುಮಾರು 1.5 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಎಂಆರ್‌ಪಿಎಲ್‌ನಿಂದ ನಿರ್ಮಾಣ
ಪಲಿಮಾರು ಸ್ವಾಮೀಜಿಯವರ ಅಪೇಕ್ಷೆ ಮೇರೆಗೆ ಎಂಆರ್‌ಪಿಎಲ್ ಸಂಸ್ಥೆಯವರು ಶೌಚಾಲಯ ಸಂಕೀರ್ಣ ನಿರ್ಮಿಸಿಕೊಟ್ಟಿದ್ದಾರೆ. ಉದ್ಘಾಟನೆ ಅನಂತರ ಶ್ರೀಕೃಷ್ಣಮಠ ಪರಿಸರ ಪ್ರತಿಷ್ಠಾನಕ್ಕೆ ಬಿಟ್ಟುಕೊಡಲಿದ್ದೇವೆ.
-ಪ್ರಹ್ಲಾದ ರಾವ್, ಆಡಳಿತಾಧಿಕಾರಿ, ಪರ್ಯಾಯ ಶ್ರೀಪಲಿಮಾರು ಮಠ
ಸ್ವಚ್ಛತೆ ಕೆಲಸ
ಸಂಕೀರ್ಣವನ್ನು ವ್ಯವಸ್ಥಿತವಾಗಿ ಉತ್ತಮ ರೀತಿಯಲ್ಲಿ ನಿರ್ವಹಿಸಲು ಬೇಕಾದ ಮಾನವ ಸಂಪನ್ಮೂಲವನ್ನು “ಸ್ವತ್ಛಂ ಕ್ಲೀನಿಂಗ್ ಸರ್ವಿಸಸ್’ ಸಂಸ್ಥೆ ಒದಗಿಸಲಿದೆ. ಸಂಸ್ಥೆಯ ಮಾನದಂಡದಂತೆ ಸ್ವಚ್ಛತೆ ಇತ್ಯಾದಿ ಕೆಲಸಗಳು ನಡೆಯಲಿವೆ.
– ರತ್ನಕುಮಾರ್, ಕಾರ್ಯದರ್ಶಿ, ಶ್ರೀಕೃಷ್ಣಮಠ ಪರಿಸರ ಪ್ರತಿಷ್ಠಾನ, ಉಡುಪಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.