ಎಸೆಸೆಲ್ಸಿ ವಿದ್ಯಾರ್ಥಿಗಳೇ “ಆಲ್ ದಿ ಬೆಸ್ಟ್’
Team Udayavani, Mar 21, 2018, 7:30 AM IST
ಕುಂದಾಪುರ: ಎಸೆಸೆಲ್ಸಿ ಪರೀಕ್ಷೆ ಮಾ. 23ರಿಂದ ನಡೆಯಲಿದೆ. ವಿದ್ಯಾರ್ಥಿಗಳು ಕಳೆದ 8 ತಿಂಗಳಿನಿಂದ ಮಾಡಿದ ಸಿದ್ಧತೆ, ಶ್ರಮವನ್ನು ಪರೀಕ್ಷಾ ಆಲಯದಲ್ಲಿ ಪ್ರಶ್ನೆಪತ್ರಿಕೆಯೆದುರು ಭಟ್ಟಿ ಇಳಿಸುವ ಸಮಯ ಬಂದಿದೆ. ಮಕ್ಕಳ ಮೇಲೆ ಸಹಜವಾಗಿ ಹೆಚ್ಚು ಒತ್ತಡವಿರುತ್ತದೆ. ಜತೆ ಜತೆಗೇ ಮಕ್ಕಳ ಭವಿಷ್ಯ ರೂಪಿಸುವ ಹೆತ್ತವರಿಗೂ ಆತಂಕವಿರುತ್ತದೆ. ಮಕ್ಕಳು ಪೂರ್ಣ ಪ್ರಮಾಣದಲ್ಲಿ ಓದಿನಲ್ಲಿ ತೊಡಗಿಸಿಕೊಂಡು ಒಂದಷ್ಟೂ ಬೇರೆ ಕಡೆಗೆ ಗಮನ ಹರಿಸದಂತೆ ಮಾಡುವಲ್ಲಿ ಹೆತ್ತವರ ಗಮನ ಕೇಂದ್ರಿತವಾಗಿರುತ್ತದೆ. ಆದರೆ ಮಕ್ಕಳ ಮೇಲೆ ಒತ್ತಡ ಹೆಚ್ಚಾದರೆ ಅದು ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಮಕ್ಕಳ ಆರೋಗ್ಯದ ಮೇಲೆ ಪ್ರಭಾವ ವಾಗಬಹುದು. ಆದ್ದರಿಂದ ಸಹನೆಯಿಂದ ಜಾಗರೂಕತೆಯಿಂದ ಪರೀಕ್ಷೆ ಎದುರಿಸಲು ಸಜ್ಜಾಗಿ. ಪರೀಕ್ಷಾ ಭಯ ನಿವಾರಿಸಿ. ಸುಲಲಿತವಾಗಿ ಪರೀಕ್ಷೆ ಬರೆಯಲು ಅನುವಾಗಿ. ಇದು ಉದಯವಾಣಿ ಕಾಳಜಿ.
ಹೆತ್ತವರಿಗೆ ಸಲಹೆ
ಮಕ್ಕಳ ಓದಿಗೆ ಪೂರಕ ವಾತಾವರಣ ಕಲ್ಪಿಸಿ. ಅವರ ಜತೆ ಸ್ನೇಹದಿಂದ ವರ್ತಿಸಿ, ಸೌಮ್ಯದಿಂದ ಮಾತನಾಡುವ ಮೂಲಕ ಓದಿನಲ್ಲಿ ಆಸಕ್ತಿ ಬರುವಂತೆ ಮಾಡಿ. ಮಕ್ಕಳ ಓದಿಗೆ ಸಿದ್ಧವಾದ ವೇಳಾಪಟ್ಟಿಯನ್ನು ಗಮನಿಸಿ, ಎಷ್ಟು ಗಂಟೆ ಅಧ್ಯಯನ ಮಾಡಬೇಕೆಂದು ಅವರಿಗೆ ಮನದಟ್ಟು ಮಾಡಿ. ಅವರಿಗೆ ಆ ವೇಳೆಯನ್ನು ನೀಡುವುದರಿಂದ ಓದಲು ಅನುಕೂಲವಾಗುತ್ತದೆ. ಓದಿನ ಸಮಯದಲ್ಲಿ ಮಕ್ಕಳ ಮನಸ್ಸಿಗೆ ನೋವಾಗುವ ವಿಚಾರ ಮಾತನಾಡಬೇಡಿ, ವೃಥಾ ಸಿಡುಕಬೇಡಿ. ಓದಿನಲ್ಲಿ ಆಸಕ್ತಿ ತೋರಿಸದಿದ್ದರೆ ಬೈಯಬೇಡಿ. ದೈಹಿಕ ದಂಡನೆ ಬೇಡವೇ ಬೇಡ. ಉತ್ತಮ ಅಂಕ ಗಳಿಸದೇ ಆಗುವ ಅನನುಕೂಲ, ಗಳಿಸಿದರೆ ದೊರೆಯುವ ಅನುಕೂಲಗಳನ್ನು ತಿಳಿಹೇಳಿ. ಅವರನ್ನು ಯಾರೊಂದಿಗೂ ಹೋಲಿಸಬೇಡಿ. ಅವರ ಕನಸಿನ ದಾರಿಯಲ್ಲಿ ಸಾಗಲು ಬೇಕಾದ ಸಲಹೆಗಳನ್ನು ಕೊಡಿ. ಮಕ್ಕಳು ಯಾವ ಸ್ಥಿತಿಯಲ್ಲಿದ್ದರೂ ನಿಮ್ಮ ಬೆಂಬಲ ಮಕ್ಕಳಿಗಿದೆ ಎನ್ನುವುದನ್ನು ಮನವರಿಕೆ ಮಾಡಿ. ಎಡೆಬಿಡದ ಓದಿನಿಂದ ಮಕ್ಕಳ ದೈಹಿಕ ಹಾಗೂ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಅವರಿಗೆ ಪೌಷ್ಟಿಕ ಆಹಾರ, ಹಣ್ಣು, ಗ್ಲುಕೋಸ್ ಇತ್ಯಾದಿ ನೀಡಿ. ಇಲ್ಲದಿದ್ದರೆ ಪರೀಕ್ಷಾ ಸಮಯದಲ್ಲಿ ತಲೆಸುತ್ತುವಿಕೆ, ನಿತ್ರಾಣದಂತಹ ಸಮಸ್ಯೆ ಕಾಣಿಸೀತು.
ವಿದ್ಯಾರ್ಥಿಗಳಿಗೆ ಸಲಹೆ
ಪರೀಕ್ಷಾ ಭಯ ಬೇಡ. ನಿತ್ಯ ಶಾಲೆಗೆ ತೆರಳುವಂತೆಯೇ ಮನಃಸ್ಥಿತಿ ಇರಲಿ. ಪರೀಕ್ಷೆ ಎನ್ನುವುದು ಉನ್ನತೀಕರಣದ ಹಂತವಾಗಿದ್ದು ಅದರ ಮೂಲಕವೇ ಮುಂದಿನ ಹಂತ ತಲುಪಬೇಕು.
ನಿರಂತರ ಒಂದು ಚೂರೂ ವಿರಮಿಸದೇ ಓದಬೇಡಿ. ಒಂದಿಪ್ಪತ್ತು ನಿಮಿಷಗಳ ಓದಿನ ಬಳಿಕ ಒಂದೆರಡು ನಿಮಿಷಗಳ ವಿಶ್ರಾಂತಿ ಪಡೆಯಿರಿ.
ಶಾಂತವಾಗಿ ಉತ್ತರಿಸಿ. ಪ್ರಶ್ನೆ ಪತ್ರಿಕೆ ನೋಡಿ ಕಂಗಾಲಾಗಬೇಡಿ. ಶಾಂತತೆ ಕಳೆದುಕೊಂಡರೆ ಮನಸ್ಸು ವಿಕ್ಷಿಪ್ತವಾಗುತ್ತದೆ.
ಮರೆತು ಹೋದುದರ ಕುರಿತು ಚಿಂತಿಸಬೇಡಿ. ತಿಳಿದಿರುವ ಉತ್ತರಗಳನ್ನು ಮೊದಲು ಬರೆಯಿರಿ. ಆಗ ನಿಮ್ಮಲ್ಲಿ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಜತೆಜತೆಗೇ ಒಂದೊಂದೇ ಉತ್ತರಗಳು ನೆನಪಾಗಲು ಆರಂಭವಾಗುತ್ತದೆ. ಪರೀಕ್ಷೆ ಸುಲಭವಾಗುತ್ತಾ ಹೋಗುತ್ತದೆ.
ಪರೀಕ್ಷೆ ಮುಗಿದ ಬಳಿಕ ಗಳಿಸುವ ಅಂಕಗಳು, ಸರಿ, ತಪ್ಪುಗಳ ಕುರಿತು ಹೆಚ್ಚು ತಲೆಕೆಡಿಸಿಕೊಂಡು ಗಮನ ಕೊಡಬೇಡಿ. ಮುಂದಿನ ಪರೀಕ್ಷೆಗೆ ತಯಾರಿ ಆರಂಭಿಸಿ.
ಅಂಕಗಳಿಕೆ ಸುಲಭ. ಈಗ ಮೊದಲಿನಂತೆ ಅಕ್ಷರ ತಪ್ಪು, ಬರಹ ಸುಂದರವಿಲ್ಲ ಎಂದೆಲ್ಲ ಅಂಕಗಳ ಕಡಿತ ಇರುವುದಿಲ್ಲ.
ಕೊನೆಯ ತಯಾರಿ ಜತೆಗೆ ಮುಖ್ಯ ಪ್ರಶ್ನೆಗಳಿಗೆ ಬೇಕಾದ ಪಾಯಿಂಟ್ಸ್‌ಗಳನ್ನು ನೋಟ್ ಮಾಡಿಟ್ಟುಕೊಳ್ಳಿ. ಉತ್ತರಿಸುವಾಗಲೂ ಅಂತೆಯೇ ಉತ್ತರಿಸಿ.
‘ಟಾರ್ಗೆಟ್ -90’ ಸಫಲಕ್ಕೆ ಪ್ರಯತ್ನ
ಬೈಂದೂರು ವಲಯದಲ್ಲಿ ಎಸೆಸೆಲ್ಸಿ ಫಲಿತಾಂಶ ಹೆಚ್ಚಿಸಲು ಎಲ್ಲ ಪೂರ್ವ ತಯಾರಿಗಳನ್ನು ನಡೆಸಿದ್ದೇವೆ. ಹೆಚ್ಚಿನ ಶಾಲೆಗಳಲ್ಲಿ ಸಂಜೆ 6.30 ರಿಂದ ರಾತ್ರಿ 9.30ರ ವರೆಗೆ ವಿಶೇಷ ತರಗತಿಗಳನ್ನು ನಡೆಸಿ, ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಜ್ಜುಗೊಳಿಸಲಾಗಿದೆ. ರವಿವಾರ ಹಾಗೂ ಶನಿವಾರ ಹೆಚ್ಚುವರಿ ತರಗತಿಗಳನ್ನು ಮಾಡಲಾಗಿದೆ. ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರೆಲ್ಲ ವಿದ್ಯಾರ್ಥಿಗಳ ಫಲಿತಾಂಶ ಹೆಚ್ಚಳಕ್ಕೆ ಹೆಚ್ಚುವರಿ ಶ್ರಮ ವಹಿಸಿದ್ದಾರೆ. ಕಳೆದ ಬಾರಿ ಬೈಂದೂರು ವಲಯದ ಎಲ್ಲ 32 ಶಾಲೆಗಳನ್ನು ಒಟ್ಟು ಸೇರಿಸಿದರೆ ಶೇ. 80 ಫಲಿತಾಂಶ ಬಂದಿತ್ತು. ಈ ಬಾರಿ ಶೇ.90 ರಷ್ಟು ಫಲಿತಾಂಶ ಗಳಿಸುವ ನಿರೀಕ್ಷೆಯಿದೆ.
– ಒ.ಆರ್. ಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ, ಬೈಂದೂರು ವಲಯ
ಶ್ರೇಷ್ಠ ಫಲಿತಾಂಶಕ್ಕೆ ಆದ್ಯತೆ
ಪ್ರತೀ ತಿಂಗಳು ಮುಖ್ಯೋಪಾಧ್ಯಾಯರ ಸಭೆ ಕರೆದು ಎಲ್ಲ ಶಾಲೆಗಳ ಪ್ರಗತಿ ಪರಿಶೀಲನೆ ಮಾಡಲಾಗುತ್ತಿತ್ತು. ಎಲ್ಲ ವಿಷಯಗಳ ಪಠ್ಯಶಿಕ್ಷಕರಿಗೆ ಪ್ರತ್ಯೇಕ ಕಾರ್ಯಾಗಾರ ನಡೆಸಲಾಗಿದೆ. ಕಳೆದ ವರ್ಷ ಶೇ. 100 ಫಲಿತಾಂಶ ಬಂದ ಶಾಲೆಗಳನ್ನು ಗೌರವಿಸಲಾಗಿದೆ. ಕಲಿಕೆಯಲ್ಲಿ ಗಮನ ಹರಿಸಲು ಅಗತ್ಯವಿರುವ 580 ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರ ನಡೆಸಲಾಗಿದೆ. ಕಳೆದ ವರ್ಷ ಫಲಿತಾಂಶದಲ್ಲಿ ರಾಜ್ಯದಲ್ಲಿ ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಪಡೆದಿದ್ದರೆ ಜಿಲ್ಲೆಯಲ್ಲಿ ಕುಂದಾಪುರ ವಿಭಾಗ ಪ್ರಥಮ ಸ್ಥಾನ ಗಳಿಸಿತ್ತು. ಈ ಬಾರಿ ಅದನ್ನು ಉಳಿಸಿಕೊಳ್ಳುವುದರ ಜತೆಗೆ ಗುಣಮಟ್ಟದ ಫಲಿತಾಂಶಕ್ಕೆ ಆದ್ಯತೆ ನೀಡಲಾಗಿದೆ. ಕೊರಗ ವಿದ್ಯಾರ್ಥಿಗಳಿಗೆ ಸನಿವಾಸ ತರಬೇತಿ, ಅಲ್ಪಸಂಖ್ಯಾಕ ವಿದ್ಯಾರ್ಥಿಗಳಿಗೆ ತರಬೇತಿ, ಸಂಜೆ ವಿಶೇಷ ತರಗತಿಗಳನ್ನು ನಡೆಸಲಾಗಿದೆ.
– ಅಶೋಕ್ ಕಾಮತ್, ಕ್ಷೇತ್ರ ಶಿಕ್ಷಣಾಧಿಕಾರಿ, ಕುಂದಾಪುರ ವಲಯ
ನಿದ್ದೆಬಿಟ್ಟು ಓದಬೇಡಿ
ಪರೀಕ್ಷೆಗೆ ಹಾಜರಾದ ಕೂಡಲೇ 2-3 ಬಾರಿ ಪ್ರಶ್ನೆಪತ್ರಿಕೆ ಓದಿ. ದೌರ್ಬಲ್ಯಕ್ಕೆ ಒಳಗಾಗಬೇಡಿ. ನಿದ್ದೆಬಿಟ್ಟು ಓದಬೇಡಿ. ಅದು ಆರೋಗ್ಯಕ್ಕೂ ಹಾಳು. ಗೊತ್ತಿರುವುದನ್ನು ರೋಮನ್ ಅಂಕೆ ಹಾಕಿ ಮೊದಲು ಬರೆಯಿರಿ. ಪಬ್ಲಿಕ್ ಎಕ್ಸಾಂ ಎಂಬ ಹೆಚ್ಚುವರಿ ಭಯ ಬೇಡ. ಶಾಲೆ ಯಲ್ಲಿ ಯಾವಾಗಲೂ ಆಗುವ ಪರೀಕ್ಷೆ ಯಂತೆಯೇ ಎಂದು ಭಾವಿಸಿ ಎದುರಿಸಿ.
– ಕೆ.ವಿ. ಬಾಲಚಂದ್ರ ಶೆಟ್ಟಿ, ನಿವೃತ್ತ ಮುಖ್ಯೋಪಾಧ್ಯಾಯರು, ಬಿಎಂ ಶಾಲೆ, ಬಸ್ರೂರು
ಧೈರ್ಯ ಇರಲಿ
ಪೂರ್ವತಯಾರಿ ಮಾಡಿಕೊಳ್ಳಿ. ಪ್ರಯತ್ನ ಮಾಡಿದರೆ ಫಲ ಖಂಡಿತ. ಫಲಿತಾಂಶದ ಕುರಿತು ಯೋಚನೆ ಬೇಡ. ಪರೀಕ್ಷೆಯ ಹಿಂದಿನ ದಿನ ಚೆನ್ನಾಗಿ ನಿದ್ದೆ ಮಾಡಿ. ನಿದ್ದೆ ಕಡಿಮೆಯಾದರೆ ಮೆದುಳಲ್ಲಿ ಗೊಂದಲ ಉಂಟಾಗುವ ಕಾರಣ ಸಾಕಷ್ಟು ವಿಶ್ರಾಂತಿ ಅಗತ್ಯ. ಮುಖ್ಯ ಅಂಶಗಳನ್ನು ನೋಟ್ ಮಾಡಿಟ್ಟುಕೊಳ್ಳಿ. ತಾಯಿ, ದೇವರ ಮೇಲಿನ ನಂಬಿಕೆ ಆತಂಕ ದೂರಾಗಿಸುತ್ತದೆ. ಪರೀಕ್ಷಾ ಕೇಂದ್ರಕ್ಕೆ ಅರ್ಧ ತಾಸು ಮೊದಲೇ ಹೋಗಿ. ಪರೀಕ್ಷೆಗೆ ಮುನ್ನ ಸಕಾರಾತ್ಮಕ ಗುಣದವರ ಜತೆಗೇ ಹೆಚ್ಚು ಬೆರೆಯಿರಿ. ನಿಮಗೆ ನೀವೇ ಧೈರ್ಯ ತುಂಬಿಕೊಳ್ಳಿ. ಪ್ರಶ್ನೆಗಳಿಗೆ ಸಮಯ ವಿಂಗಡಿಸಿಕೊಂಡು ಉತ್ತರಿಸಿ.
– ಡಾ| ಪ್ರಕಾಶ್ ತೋಳಾರ್, ಮನಃಶಾಸ್ತ್ರಜ್ಞರು, ಕುಂದಾಪುರ
ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ
ಪ್ರತಿ ಪರೀಕ್ಷೆಯ ದಿನ ಬೆಳಗ್ಗೆ ನಾನು ಉತ್ತಮವಾಗಿ ಪರೀಕ್ಷೆ ಬರೆಯುತ್ತೇನೆ ಎನ್ನುವ ಆತ್ಮವಿಶ್ವಾಸ, ಮನೋಭಾವವನ್ನು ಬೆಳೆಸಿಕೊಳ್ಳಿ. ಭಯ ಪಡದೇ ಧೈರ್ಯದಿಂದ ಸವಾಲುಗಳನ್ನು ಎದುರಿಸಿ. ಎಲ್ಲ ಪ್ರಶ್ನೆಗಳನ್ನು ಮೊದಲು ಸರಿಯಾಗಿ ಓದಿಕೊಳ್ಳಿ. ಗೊತ್ತಿರುವ ಪ್ರಶ್ನೆಗಳಿಂದ ಮೊದಲು ಉತ್ತರಿಸಲು ಆರಂಭಿಸಿ. ಮೊದಲ 2-3 ಪುಟಗಳಲ್ಲಿ ಉತ್ತಮವಾಗಿ ಬರೆದಿದ್ದರೆ, ಮೌಲ್ಯಮಾಪಕರಿಗೂ ಆತ/ಆಕೆಯ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡುತ್ತದೆ. ಒಂದು ಪರೀಕ್ಷೆ ಕಷ್ಟವಿದ್ದರೂ, ಆತ್ಮವಿಶ್ವಾಸ ಕಳೆದುಕೊಳ್ಳದೆ ಉಳಿದ ಪರೀಕ್ಷೆಗಳನ್ನು ಚೆನ್ನಾಗಿ ಮಾಡಿ. ಹೆತ್ತವರ ಒಳ್ಳೆಯ ಸಹಕಾರ, ಪ್ರೋತ್ಸಾಹ ಅಗತ್ಯ.
– ನಾಗೇಶ್ ಶಾನುಭೋಗ್, ಶಿಕ್ಷಣ ತಜ್ಞ
— ಲಕ್ಷ್ಮೀಮಚ್ಚಿನ/ ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.