ಸುತ್ತಲೂ ಹೊಳೆಗಳು ಹರಿಯುತ್ತಿದ್ದರೂ ಕುಡಿಯುವ ನೀರಿಗೆ ತತ್ವಾರ
ಕಟಪಾಡಿ ಮತ್ತು ಕೋಟೆ ಗ್ರಾ.ಪಂ.ಗಳಲ್ಲಿ ನೀರಿನ ಬವಣೆ
Team Udayavani, Mar 18, 2020, 5:55 AM IST
ಕಳೆದ ಬೇಸಗೆಯಲ್ಲಿ ತೀವ್ರವಾಗಿ ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ “ಉದಯವಾಣಿ’ಯು ಭೇಟಿ ಕೊಟ್ಟು, “ಜೀವಜಲ’ ಎನ್ನುವ ಸರಣಿಯಡಿ ಸಾಕ್ಷಾತ್ ವರದಿಗಳನ್ನು ಪ್ರಕಟಿಸಿತ್ತು. ಈ ಬಾರಿಯ ಬೇಸಗೆಯಲ್ಲಿ ನೀರಿನ ಸಮಸ್ಯೆಯ ನಿವಾರಣೆಗೆ ಸ್ಥಳೀಯ ಪಂಚಾಯತ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಯಾವೆಲ್ಲ ಪರಿಹಾರ ಕ್ರಮಗಳನ್ನು ಕೈಗೊಂಡಿದ್ದಾರೆ? ಮುಂದೆ ಆಗಬೇಕಾದ ಪ್ರಮುಖ ಕ್ರಮಗಳೆಲ್ಲದರ ಕುರಿತಾದ ಸರಣಿ ಇದು.
ಕೋಟೆ, ಕಟಪಾಡಿ ಗ್ರಾಮಪಂಚಾಯತ್‌ಗಳಲ್ಲಿ ನೀರಿದ್ದರೂ ಪ್ರಯೋಜನವಿಲ್ಲದಾಗಿದೆ. ಕೆಲವೆಡೆ ಕೊಳವೆಬಾವಿ ಮೂಲಕ ಪರಿಹಾರಗಳನ್ನು ಕೈಗೊಂಡಿದ್ದರೂ ಕೂಡ ಸಮಸ್ಯೆ ಪೂರ್ಣವಾಗಿ ನಿವಾರಣೆಯಾಗಿಲ್ಲ.
ಕಟಪಾಡಿ: ಸುತ್ತಲೂ ಹೊಳೆಗಳಿವೆ. ಆದರೆ ಇವುಗಳಲ್ಲೆಲ್ಲ ಉಪ್ಪುನೀರಿನ ಅಂಶ. ಬಾವಿ, ಕೊಳವೆ ಬಾವಿ ತೋಡಿದರೂ ಹೆಚ್ಚು ಪ್ರಯೋಜನವಿಲ್ಲ. ಈ ಬಾರಿಯೂ ಕಟಪಾಡಿ, ಕೋಟೆ ಗ್ರಾ.ಪಂ.ಗಳ ಕೆಲವು ಭಾಗಗಳಲ್ಲಿ ನೀರಿನ ಬವಣೆ ಮುಂದುವರಿಯುವ ಸಾಧ್ಯತೆ ಇದೆ.
ಕಟಪಾಡಿ ಗ್ರಾ.ಪಂ.
ಇಲ್ಲಿನ ಜೆ.ಎನ್.ನಗರ, ಕಜಕಡೆ, ಪಡು ಏಣಗುಡ್ಡೆ, ಸರಕಾರಿ ಗುಡ್ಡೆ ನಗರ ಸಹಿತ ವಿವಿಧೆಡೆಗಳಲ್ಲಿ ಈ ಬಾರಿಯೂ ನೀರಿನ ಸಮಸ್ಯೆ ಬಿಗಡಾಯಿಸುವ ಸೂಚನೆ ಇದೆ. ಪೊಸಾರು ಭಾಗವು ಗದ್ದೆ, ನೀರಿನ ಪ್ರದೇಶವಾಗಿದ್ದರೂ ಈ ಬಾರಿ ಈ ಪ್ರದೇಶದಲ್ಲಿ ಸಮಸ್ಯೆ ತೀವ್ರವಾಗುವ ಸಾಧ್ಯತೆ ಇದೆ. 6 ಸರಕಾರಿ ಬಾವಿ, 6 ಕೊಳವೆಬಾವಿ, 8 ಓವರ್ ಹೆಡ್ ಟ್ಯಾಂಕ್ ಬಳಸಿಕೊಂಡು ಪಂಚಾಯತ್ ವ್ಯಾಪ್ತಿಯ ಏಣಗುಡ್ಡೆ ಮತ್ತು ಮೂಡಬೆಟ್ಟು ಗ್ರಾಮಗಳಿಗೆ ನೀರು ಪೂರೈಕೆ ಮಾಡಲಾಗುತ್ತದೆ.
ಜಲಮೂಲ ಇಲ್ಲ!
ಪಂಚಾಯತ್ ವ್ಯಾಪ್ತಿಯ ಜೆ.ಎನ್. ನಗರ ಪ್ರದೇಶದಲ್ಲಿ ಜಲಮೂಲ ಇಲ್ಲ. ಹಾಗಾಗಿ ಶಾಶ್ವತ ಪರಿಹಾರವನ್ನು ಆ ಭಾಗದಲ್ಲಿ ಕಂಡುಕೊಳ್ಳಲು ಸ್ವಲ್ಪ ಕಷ್ಟ ಸಾಧ್ಯವಾಗಲಿದೆ. ಆದರೂ ಜಿಲ್ಲಾ ಪಂಚಾಯತ್ ಸದಸ್ಯರ ಅನುದಾನದಿಂದ ಅಲ್ಲಿ ಒಂದು ಓವರ್ ಹೆಡ್‌ಟ್ಯಾಂಕ್ ನಿರ್ಮಾಣ ಕೆಲಸ ನಡೆಯುತ್ತಿದೆ.
ಕೈಗೊಂಡ ಕ್ರಮಗಳೇನು?
ಕಳೆದ ಬಾರಿ ಚೊಕ್ಕಾಡಿ, ಶಿವಾನಂದ ನಗರ ಪ್ರದೇಶದಲ್ಲಿ ಕಂಡು ಬಂದಿದ್ದ ಕುಡಿಯುವ ನೀರಿನ ಕೊರತೆಗೆ ಈ ಬಾರಿ ಗೋಕುಲ ಕಂಪೌಂಡ್ ಬಳಿಯಲ್ಲಿನ ಕೊಳವೆ ಬಾವಿಯ ಮೂಲಕ ಪರಿಹಾರ ಕಂಡುಕೊಳ್ಳಲಾಗಿದೆ. ಆದ್ದರಿಂದ ಆ ಭಾಗದಲ್ಲಿ ಈ ಬಾರಿ ಸಮಸ್ಯೆ ಹೆಚ್ಚು ಬಾಧಿಸುವುದು ಅನುಮಾನ. ಇನ್ನು ಜಲಮೂಲ ಲಭ್ಯವಿಲ್ಲದಿದ್ದ ಕಡೆಗಳಿಗೆ ಎಪ್ರಿಲ್, ಮೇ, ಜೂನ್ ತಿಂಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜಿಗೆ ಪಂಚಾಯತ್ ಚಿಂತಿಸಿದೆ.
ಕೋಟೆ ಗ್ರಾಮ ಪಂಚಾಯತ್
ಒಂದೆಡೆ ಕಡಲು ಮತ್ತೂಂದೆಡೆ ಪಿನಾಕಿನಿ ಹೊಳೆ ಹರಿಯುತ್ತಿದ್ದರೂ ಕುಡಿಯುವ ನೀರಿನ ಸಮಸ್ಯೆ ಕೋಟೆ ಗ್ರಾ.ಪಂ.ಗೆ ಬಾಧಿಸುತ್ತಿದೆ. ಪಂ. ವ್ಯಾಪ್ತಿಯ ಮಟ್ಟು ಗ್ರಾಮದಲ್ಲಿ ಈ ಬಾರಿಯೂ ಟ್ಯಾಂಕರ್ ಮೂಲಕ ನೀರು ಪೂರೈಸಬೇಕಾಗಿದೆ. ಈಗಾಗಲೇ ಈ ಭಾಗದಲ್ಲಿ ನಾಲ್ಕು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಇಂದಿರಾ ನಗರ, ವಿನೋಬಾ ನಗರ, ಕೋಟೆ ಕಂಡಿಗೆ, ಕೋಟೆಬೆ„ಲ್, ಸಮಾಜ ಮಂದಿರ, ತೌಡಬೆಟ್ಟು, ಮದೀನಾ ಪಾರ್ಕ್, ಕಿನ್ನಿಗುಡ್ಡೆ, ಕೋಟೆಬೈಲು, ಕಂಡಿಗೆ, ಪರೆಂಕುದ್ರು ಭಾಗದಲ್ಲಿ ನೀರಿನ ಸಮಸ್ಯೆ ಇದೆ.
ರುಚಿ ಇಲ್ಲ, ಕೆಂಪು ನೀರು!
ಮಟ್ಟು ಭಾಗದ ಪರೆಂಕುದ್ರು, ದಡ್ಡಿ, ಮಟ್ಟು ಕೊಪ್ಲ, ಕಾಲನಿ, ಮಟ್ಟು ಕಟ್ಟ, ಆಳಿಂಜೆ ದೇವರಕುದ್ರು, ಮಟ್ಟು ಬೀಚ್, ದುಗ್ಗುಪ್ಪಾಡಿ ಸಹಿತ ಮತ್ತಿತರೆಡೆಗಳ ಸುಮಾರು 500ಕ್ಕೂ ಮಿಕ್ಕಿದ ಮನೆಮಂದಿಗೆ ಕುಡಿಯುವ ನೀರಿನ ಸರಬರಾಜಿನ ತುರ್ತು ಅಗತ್ಯವಿದೆ. ಈ ಭಾಗದಲ್ಲಿ ಬಾವಿಗಳ ನೀರು ಕೆಂಪು ಬಣ್ಣಯುಕ್ತವಾಗಿ, ಲವಣಾಂಶ ಭರಿತವಾಗಿ, ರುಚಿ ಇರುವುದಿಲ್ಲ. ಆದ್ದರಿಂದ ಕುಡಿಯುವ ನೀರಿನ ಸಮಸ್ಯೆ ಜಟಿಲವಾಗಿದೆ. ಕೋಟೆ ಗ್ರಾ.ಪಂ.ಗೊಳಪಡುವ ಕೋಟೆ ಗ್ರಾಮದಲ್ಲಿ 443 ಮತ್ತು ಮಟ್ಟು ಗ್ರಾಮದಲ್ಲಿ 286 ಸಹಿತ ಸುಮಾರು 729 ಮನೆಗಳಿಗೆ ನಳ್ಳಿ ನೀರಿನ ಸಂಪರ್ಕವಿದೆ.
ಕೈಗೊಂಡ ಕ್ರಮವೇನು?
ತಾ.ಪಂ. ಸದಸ್ಯರ ಅನುದಾನದಿಂದ ಸಮಾಜ ಮಂದಿರದ ಬಳಿ 3 ಲಕ್ಷ ರೂ. ಅನುದಾನದಲ್ಲಿ ತೆರೆದ ಬಾವಿ ನಿರ್ಮಾಣ ಆಗಿದೆ. ಕಿನ್ನಿಗುಡ್ಡೆ ಕಾಲನಿಯಲ್ಲಿ ಬಾವಿ ರಚನೆಯಾಗಿದೆ. ಮಟ್ಟು ಕಟ್ಟ, ಕೋಟೆ ಕಂಡಿಗೆ, ಕಿನ್ನಿಗುಡ್ಡೆ ಕಾಲನಿ ಸಹಿತ 3 ಕಡೆಗಳಲ್ಲಿ ಕುಡಿಯುವ ನೀರು ಸರಬರಾಜಿಗೆ ಪೈಪ್ ಲೈನ್ ಕಾಮಗಾರಿ ನಡೆಸಲಾಗಿದೆ. ಜಿ.ಪಂ. ಸದಸ್ಯರ ಅನುದಾನದಿಂದ ಮಟ್ಟು ಬಳಿ ಒಂದು ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಕೆಲಸ ನಡೆಯುತ್ತಿದೆ.
ಟ್ಯಾಂಕರ್ ನೀರಿಗೆ ಪ್ರಸ್ತಾವನೆ
ಗ್ರಾಮದ ಕೆಲವೆಡೆ ಜಲಮೂಲಗಳು ಲಭ್ಯವಿಲ್ಲ. ಈ ಚೊಕ್ಕಾಡಿ, ಶಿವಾನಂದ ನಗರ ಭಾಗದಲ್ಲಿ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಎಪ್ರಿಲ್, ಮೇ ಮತ್ತು ಜೂನ್ ಮಳೆ ಆರಂಭದ ತನಕ ಕುಡಿಯುವ ನೀರು ಟ್ಯಾಂಕರ್ ಮೂಲಕ ಸರಬರಾಜು ಮಾಡುವಂತೆ ತಹಶೀಲ್ದಾರರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
– ಇನಾಯತುಲ್ಲಾ ಬೇಗ್, ಪಿಡಿಒ, ಕಟಪಾಡಿ ಗ್ರಾ.ಪಂ.
ಜಲಮೂಲವಿಲ್ಲ
ಮಟ್ಟು ಭಾಗದಲ್ಲಿ ಉಪ್ಪು ನೀರಿನ ಸಮಸ್ಯೆ ಇದೆ. ಕುಡಿಯುವ ನೀರಿನ ಮೂಲವೇ ಇಲ್ಲವಾಗಿದ್ದು, ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಬೇಕಾಗಿದೆ. ತಹಶೀಲ್ದಾರರಿಗೆ ಈಗಾ ಗಲೇ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.
– ಸುರೇಖಾ,ಪಿ.ಡಿ.ಒ. ಕೋಟೆ ಗ್ರಾ.ಪಂ.
- ವಿಜಯ ಆಚಾರ್ಯ, ಉಚ್ಚಿಲ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.