ನೀತಿ ಸಂಹಿತೆ ಬಿಸಿ : ಕೋಲ, ಮದುವೆ, ಗೃಹಪ್ರವೇಶ ಪರವಾನಿಗೆಗೂ ಕ್ಯೂ!
Team Udayavani, Mar 31, 2018, 9:35 AM IST
ಉಡುಪಿ: ‘ಮೇಡಂ… ನಮ್ಮ ಊರಿನದ್ದು ನೇಮೋತ್ಸವ’, ‘ಸರ್… ನಮ್ಮದು ಜಾತ್ರೆ’, ‘ನಮ್ಮದು ಗೃಹಪ್ರವೇಶ ಇದೆ ಸಾರ್…’, ‘ಮದುವೆ ಇನ್ವಿಟೇಷನ್ ಸರ್…’ – ಇದು ಕಾರ್ಯಕ್ರಮ, ಸಮಾರಂಭಗಳಿಗೆ ಆಹ್ವಾನಿಸುವ ರೀತಿಯಲ್ಲ, ವಿಧಾನಸಭಾ ಚುನಾವಣೆಯ ನೀತಿಸಂಹಿತೆ ಜಾರಿಯಲ್ಲಿರುವ ಈ ಹೊತ್ತಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ಪರವಾನಿಗೆ ಕೋರಿ ವಿನಂತಿಸಿಕೊಂಡ ಪರಿ.
ಉಡುಪಿ ಚುನಾವಣಾಧಿಕಾರಿಗಳ ಕಚೇರಿಯಾಗಿರುವ ಉಡುಪಿ ತಾಲೂಕು ಕಚೇರಿಯಲ್ಲಿ ಮಾ. 30ರಂದು ಕೈಯಲ್ಲಿ ಆಹ್ವಾನ ಪತ್ರಿಕೆ ಹಿಡಿದುಕೊಂಡು ನಿಂತಿದ್ದವರಲ್ಲಿ ದುಗುಡ ತುಳುಕುತ್ತಿತ್ತು. ನಿವೇದನೆಯ ಮಾತುಗಳು ಪುಂಖಾನುಪುಂಖವಾಗಿ ಹೊರಡುತ್ತಿದ್ದವು. ಆದರೆ ಅಧಿಕಾರಿ ವರ್ಗ ಯಾವುದಕ್ಕೂ ಕರಗದೆ ನಿಯಮಗಳ ಪಟ್ಟಿಯನ್ನು ಮುಂದಿಡುತ್ತಿತ್ತು. ಅನುಮತಿ ಪತ್ರ/ಪರವಾನಿಗೆಗಾಗಿ ಆಗಮಿಸಿದವರು ಒಮ್ಮೆ ಸಿಬಂದಿ ಬಳಿ, ಇನ್ನೊಮ್ಮೆ ತಹಶೀಲ್ದಾರ್ ಚೇಂಬರ್‌ಗೆ ಅಲೆದಾಡುತ್ತಿದ್ದರು. ಕೊನೆಗೂ ಪರವಾನಿಗೆ ಪಡೆದು ಹೊರಗೆ ಬರುವಾಗ ಪರವಾನಿಗೆಯಲ್ಲಿ ನಮೂದಿಸಲಾಗಿರುವ ಷರತ್ತುಗಳನ್ನು ಓದಿ ಮತ್ತೆ ದಂಗು ಬಡಿಯುತ್ತಿದ್ದರು.
ಚುನಾವಣೆ ನೀತಿಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ರಾಜಕೀಯ ಹಾಗೂ ಧಾರ್ಮಿಕ, ಮನೆಯ ಇತರ ಖಾಸಗಿ ಕಾರ್ಯಕ್ರಮಗಳು ಒಳಗೊಂಡಂತೆ ರಾಜಕೀಯೇತರ – ಯಾವುದೇ ಕಾರ್ಯಕ್ರಮಗಳಿಗೂ ಚುನಾವಣಾಧಿಕಾರಿಗಳ ಒಪ್ಪಿಗೆ ಅಗತ್ಯ ಎಂದು ಸೂಚಿಸಿರುವುದರಿಂದ ಜನತೆ ಗೊಂದಲ, ಒತ್ತಡಕ್ಕೊಳಗಾಗಿದ್ದಾರೆ. ಕಳೆದೆರಡು ದಿನಗಳಿಂದ ಇದು ಚುನಾವಣಾಧಿಕಾರಿಗಳ ಕಚೇರಿ ಪರಿಸರದಲ್ಲಿ ವ್ಯಕ್ತವಾಗುತ್ತಿದೆ. ರಾಜಕೀಯ ಪಕ್ಷಗಳ ಮುಖಂಡರ ಜತೆಗೆ ದೇವಸ್ಥಾನ, ದೈವಸ್ಥಾನಗಳ ವಾರ್ಷಿಕ ಕಾರ್ಯಕ್ರಮಗಳ ಆಯೋಜನೆಗೂ ಮೊಕ್ತೇಸರರು, ಸಂಘಟಕರು ಚುನಾವಣಾಧಿಕಾರಿಗಳ ಕಚೇರಿಗೆ ಎಡತಾಕುವಂತಾಗಿದೆ. ಧಾರ್ಮಿಕ ಕಾರ್ಯಕ್ರಮಗಳ ಬ್ಯಾನರ್‌ಗಳನ್ನು ಕೂಡ ಸಾರ್ವಜನಿಕ ಸ್ಥಳದಲ್ಲಿ ಹಾಕಲೇಬಾರದು ಎಂಬ ಆದೇಶ ಹೊರಡಿಸಿರುವುದರಿಂದ ಮುದ್ರಿಸಿದ ಬ್ಯಾನರ್‌ಮೂಲೆ ಸೇರುತ್ತಿವೆ. ಆರ್ಡರ್ ಕೊಟ್ಟಿರುವ ಬ್ಯಾನರ್‌ಗಳು ಕೂಡ ಬಾಕಿಯಾಗುವ ಸ್ಥಿತಿ ಉಂಟಾಗಿದೆ.
ಕೋಲ, ಜಾತ್ರೆಯ ಕಾಲ
ಇದು ಕರಾವಳಿಯಲ್ಲಿ ನೇಮ, ಜಾತ್ರೆ ಹಾಗೂ ಇತರ ಹಲವು ಶುಭ ಕಾರ್ಯಕ್ರಮಗಳ ಋತು. ಇದೇ ಅವಧಿಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಮತ್ತು ಈ ಬಾರಿ ಕೊಂಚ ಕಟ್ಟುನಿಟ್ಟು ಎಂಬಷ್ಟು ಅದರ ಅನುಷ್ಠಾನ ನಡೆಯುತ್ತಿರುವುದರಿಂದ ಉತ್ಸವ, ಕೋಲ, ನೇಮ, ತಂಬಿಲ, ಆಚರಣೆ, ಮನೆ ಕಾರ್ಯಕ್ರಮಗಳ ಮೇಲೂ ಅದರ ಪರಿಣಾಮ ಬಿದ್ದಿದೆ. ಬ್ಯಾನರ್‌ಗಳನ್ನು ಹಾಕುವುದರಿಂದ ಹಿಡಿದು ಅನ್ನ ಸಂತರ್ಪಣೆ, ಮೆರವಣಿಗೆ, ಧ್ವನಿವರ್ಧಕ ಬಳಕೆ – ಹೀಗೆ ಪ್ರತಿಯೊಂದಕ್ಕೂ ಪರವಾನಿಗೆ ಪಡೆಯುವ ಅನಿವಾರ್ಯತೆ ಸೃಷ್ಟಿಯಾಗಿದೆ. ಕಠಿನ ಷರತ್ತುಗಳನ್ನು ಪಾಲಿಸುವುದು ಹೇಗೆ ಎಂಬ ಯೋಚನೆ ಕಾಡತೊಡಗಿದೆ. ಗೃಹಪ್ರವೇಶ, ಮದುವೆ ಕಾರ್ಯಕ್ರಮಗಳಿಗೂ ಪರವಾನಿಗೆ ಪಡೆಯಬೇಕಾಗಿದೆ.
ಅನುಮತಿ ಪತ್ರದಲ್ಲೇನಿದೆ?
ಧಾರ್ಮಿಕ ಕಾರ್ಯಕ್ರಮವೊಂದಕ್ಕೆ ನೀಡುವ ಪರವಾನಿಗೆಯಲ್ಲಿ ವಿಧಿಸುವ ಷರತ್ತುಗಳು ಇಂತಿವೆ: ರಾಜಕೀಯ ಪ್ರೇರಿತ/ಮತದಾರರನ್ನು ಓಲೈಕೆ ಮಾಡುವ ಯಾವುದೇ ಘೋಷಣೆಗಳನ್ನು ಅಥವಾ ರಾಜಕೀಯ ಸಂಬಂಧಿತ ಹೇಳಿಕೆಗಳನ್ನು ನೀಡುವಂತಿಲ್ಲ.
ಧ್ವನಿವರ್ಧಕಗಳನ್ನು ಬೆಳಗ್ಗೆ 6ರಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಬಳಸಬೇಕು. ಕಾರ್ಯಕ್ರಮ ನಡೆಸುವ ಆವರಣದ ಒಳಗೆ ನಿರ್ದಿಷ್ಟ ಸಮಯದಲ್ಲಿ ಮಾತ್ರ ಬ್ಯಾನರ್ ಅಳವಡಿಸಬೇಕು. ಈ ಬಗ್ಗೆ ಸ್ಥಳೀಯ ಸಂಸ್ಥೆಯಿಂದ ನಿರಾಕ್ಷೇಪಣ ಪತ್ರ ಪಡೆದುಕೊಳ್ಳತಕ್ಕದ್ದು – ಇತ್ಯಾದಿ.
ರಾಜಕೀಯವಾದರೆ…
ರಾಜಕೀಯ ಸಭೆಗಳಿಗೆ ನೀಡುವ ಪರವಾನಿಗೆಯಲ್ಲಿ ವಿಧಿಸುವ ಷರತ್ತುಗಳು:
ಕಾರ್ಯಕ್ರಮ ಆರಂಭವಾಗುವ 2 ಗಂಟೆಯ ಮೊದಲು ಪರಿಸರಕ್ಕೆ ಹಾನಿಕರವಲ್ಲದ ಬ್ಯಾನರ್ ಮತ್ತು ಬಂಟಿಂಗ್‌ಗಳನ್ನು ಹಾಕಬೇಕು. ಕಾರ್ಯಕ್ರಮ ಮುಗಿದ ತತ್‌ಕ್ಷಣ ತೆರವುಗೊಳಿಸಬೇಕು. ಸಮಾವೇಶದಲ್ಲಿ ಪಾಲ್ಗೊಳ್ಳುವವರಿಗೆ ಊಟ, ಉಪಾಹಾರ ನೀಡಬಾರದು. ಶಾಲೆ, ಕಾಲೇಜು ಆಟದ ಮೈದಾನ, ಆಸ್ಪತ್ರೆ ಆವರಣಗಳಲ್ಲಿ ಕಾರ್ಯಕ್ರಮ ನಡೆಸ ಬಾರದು- ಇತ್ಯಾದಿ.
ಮಜ್ಜಿಗೆಗೆ 6 ರೂ., ಶಾಲಿಗೆ 20 ರೂ.
ಮಜ್ಜಿಗೆ ಪ್ಯಾಕೆಟ್ ಒಂದಕ್ಕೆ 6 ರೂ., ಸಾಮಾನ್ಯ ಶಾಲಿಗೆ 20 ರೂ., ಬಟ್ಟೆ ಕಟೌಟ್‌ಗೆ ಚದರ ಅಡಿಗೆ 30 ರೂ.- ಹೀಗೆ ರಾಜಕೀಯ ಕಾರ್ಯಕ್ರಮಗಳಲ್ಲಿ ಬಳಸುವ ಪರಿಕರಗಳಿಗೆ ದರ ನಿಗದಿಗೊಳಿಸಿ ಆ ಪಟ್ಟಿಯನ್ನು ರಾಜಕೀಯ ಪಕ್ಷಗಳಿಗೆ ನೀಡಲಾಗಿದೆ. ವಾಹನಗಳ ಬಾಡಿಗೆಯನ್ನು ಕೂಡ ನಿಗದಿ ಮಾಡಲಾಗಿದೆ. ಇದರಿಂದ ರಾಜಕೀಯ ಪಕ್ಷಗಳ ಕೈ ಕಟ್ಟಿ ಹಾಕಿದಂತಾಗಿದೆ.
‘ವರ್ಷಂಪ್ರತಿ ಜರಗುವ ಕಾರ್ಯಕ್ರಮಗಳಿಗೂ ಯಾಕೆ ಈ ರೀತಿಯ ಅಡ್ಡಿ? ದೇವರಿಗೂ ರಾಜಕೀಯ ಇದೆಯಾ?’ ಎಂಬಿತ್ಯಾದಿಯಾಗಿ ಪರವಾನಿಗೆಗಾಗಿ ಬಂದಿದ್ದ ಸಂಘಟಕರು, ಊರವರು ಪ್ರಶ್ನಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅವರಲ್ಲಿ ಅಸಮಾಧಾನ ಜಿನುಗುತ್ತಿತ್ತು. ‘ಚುನಾವಣೆ ಸಂಬಂಧಿ ಅಕ್ರಮಗಳನ್ನು ತಡೆಯಲು ಇಂತಹ ಕಠಿನ ಸುಧಾರಣೆ ಹೆಜ್ಜೆಗಳು ಉತ್ತಮ’ ಎಂಬ ಪ್ರಶಂಸೆ ಒಂದು ವರ್ಗದಿಂದ ಬರುತ್ತಿದೆಯಾದರೂ ಕಠಿನ ನಿಯಮಗಳು ಅನುಭವಕ್ಕೆ ಬರುತ್ತಿದ್ದಂತೆ ಅಸಮಾಧಾನ ಹೆಚ್ಚಾಗುತ್ತಿರುವುದು ಸುಳ್ಳಲ್ಲ.
ಮದುವೆ ಸಮಾರಂಭಕ್ಕೂ ಕಡ್ಡಾಯ
ಮದುವೆ, ಗೃಹಪ್ರವೇಶದಂತಹ ಕಾರ್ಯಕ್ರಮಗಳಿಗೂ ಚುನಾವಣಾಧಿಕಾರಿಗಳ ಅನುಮತಿ ಪತ್ರ ಕಡ್ಡಾಯ. ಇಂತಹ ಕಾರ್ಯಕ್ರಮ ನಡೆಸುವವರು ಕೂಡ ಅರ್ಜಿ ಸಲ್ಲಿಸಿ ಅನುಮತಿ ಪಡೆದುಕೊಳ್ಳಬೇಕು. ಊಟ ವ್ಯವಸ್ಥೆ ಇರುವಲ್ಲಿಗೆ ನಮ್ಮ ವೀಡಿಯೋ ಸರ್ವೇಕ್ಷಣೆ ತಂಡ ತೆರಳುತ್ತದೆ. ಅಲ್ಲಿಗೆ ಯಾರೆಲ್ಲ ಬರುತ್ತಾರೆ ಎಂಬುದನ್ನು ಗಮನಿಸಬೇಕಾಗುತ್ತದೆ. ರಾಜಕೀಯ ಕಾರ್ಯಕ್ರಮಗಳಲ್ಲಿ ನೀರು ಮತ್ತು ಮಜ್ಜಿಗೆ ಮಾತ್ರ ಕೊಡಬಹುದು.
– ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ, ಉಡುಪಿ
ಗೃಹಪ್ರವೇಶ, ಮದುವೆಗೂ ಯಾಕೆ?
ಗೃಹಪ್ರವೇಶ, ಮದುವೆ, ಮೆಹಂದಿ ಮೊದಲಾದ ಕಾರ್ಯಕ್ರಮಗಳಲ್ಲಿ ಊರಿನವರಿಗೆ, ಬಂಧುಮಿತ್ರರಿಗೆ ಊಟೋಪಚಾರ ಇದ್ದೇ ಇರುತ್ತದೆ. ಇದನ್ನು ರಾಜಕೀಯ ವ್ಯಕ್ತಿಗಳು ಪ್ರಾಯೋಜಿಸಿ ಹಿಂಬಾಗಿಲ ಮೂಲಕ ಮತದಾರರ ಮೇಲೆ ಪ್ರಭಾವ ಬೀರಬಾರದು ಎಂಬುದಕ್ಕಾಗಿಯೇ ಇಷ್ಟು ಕಠಿನ ಕ್ರಮಗಳಿವೆ. ಪ್ರಾಯೋಜಿಸಿದ ಬಗ್ಗೆ ದೂರುಗಳೇನಾದರೂ ಬಂದರೆ ದೂರು ದಾಖಲಿಸಬೇಕಾಗುತ್ತದೆ. ಈ ರೀತಿಯ ಗೊಂದಲಗಳು ಆಗಬಾರದೆಂಬ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳಿಗೂ ಪರವಾನಿಗೆ ಪಡೆದುಕೊಳ್ಳುವುದು ಅಗತ್ಯ ಎಂದು ಅಧಿಕಾರಿಯೋರ್ವರು ಹೇಳುತ್ತಾರೆ.
ಮಜ್ಜಿಗೆ ನೀರು ಮಾತ್ರ ಕೊಡಿ…!
‘ರಾಜಕೀಯ ಕಾರ್ಯಕ್ರಮದಲ್ಲಿ ಚಹಾ – ತಿಂಡಿ ಕೂಡ ಕೊಡಬಾರದು. ಮಜ್ಜಿಗೆ ಅಥವಾ ನೀರು ಮಾತ್ರ ಕೊಡಬಹುದು ಎಂದು ನಮಗೆ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. ಹಾಗಾದರೆ ಬಂದವರು ಬರೀ ಹೊಟ್ಟೆಯಲ್ಲಿಯೇ ಇರುವುದಾ?’ ಎಂದು ಕಾರ್ಯಕ್ರಮವೊಂದಕ್ಕೆ ಪರವಾನಿಗೆ ಪಡೆಯಲು ಚುನಾವಣಾಧಿಕಾರಿಗಳ ಕಚೇರಿಗೆ ಬಂದಿದ್ದ ರಾಷ್ಟ್ರೀಯ ಪಕ್ಷವೊಂದರ ಓರ್ವ ಮುಖಂಡರು ಪ್ರಶ್ನಿಸಿದರು.
— ಸಂತೋಷ್ ಬೊಳ್ಳೆಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Perth test: ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಅನುಮಾನ: ಏನಿದು ವಿವಾದ?
Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.