ಮುಗಿಯಿತು ಸ್ವಾಭಿಮಾನಿ ವಿದ್ಯಾರ್ಥಿಯ “ಕೂಲಿ ಬದುಕು’
Team Udayavani, Oct 30, 2020, 12:47 AM IST
ಉಡುಪಿ: ಶುಲ್ಕ ಪಾವತಿಗಾಗಿ ಕೂಲಿ ಕೆಲಸದಲ್ಲಿ ತೊಡಗಿದ್ದ ಬಿಎಸ್ಸಿ ನರ್ಸಿಂಗ್ ಕಲಿಯಲು ಹೊರಟ ಬಾಗಲಕೋಟೆಯ ವಿದ್ಯಾರ್ಥಿ ಶಶಿಕುಮಾರ್ (ಬುಡ್ಡನಗೌಡ) ಅದೃಷ್ಟ ಖುಲಾಯಿಸಿದೆ. ಅವರಿನ್ನು ಶುಲ್ಕ ಪಾವತಿಗಾಗಿ ಕೂಲಿ ಮಾಡುವ ಅಗತ್ಯವಿಲ್ಲ.
ಅ. 27ರಂದು “ಉದಯವಾಣಿ’ ಪತ್ರಿಕೆಯ ಮುಖಪುಟದಲ್ಲಿ “ಕಲಿಕೆ ಗಾಗಿ ಸ್ವಾಭಿಮಾನಿ ವಿದ್ಯಾರ್ಥಿಯ ಕೂಲಿ’ ಶಿರೋನಾಮೆಯಲ್ಲಿ ಪ್ರಕಟ ವಾದ ವಿಶೇಷ ಸುದ್ದಿಯನ್ನು ಶಿಕ್ಷಣಾ ಸಕ್ತರು ಗಮನಿಸಿ ನೆರವು ನೀಡುವ ಭರವಸೆ ನೀಡಿದ್ದಾರೆ. ಬೆಂಗಳೂರಿನ ಶಿವಲಿಂಗಯ್ಯನವರು ತತ್‌ಕ್ಷಣ ಕಾಲೇಜಿಗೆ ಹೋಗಿ ಪ್ರವೇಶವನ್ನು ಪಡೆದುಕೊಳ್ಳು. ಶುಲ್ಕವನ್ನು ನಾನು ಭರಿಸುತ್ತೇನೆ ಎಂದು ಹೇಳಿದ್ದಾರೆ. ಬೆಂಗಳೂರಿನ ಗುರುಮೂರ್ತಿ, ಕುಮಾರ್ ಜಿ. ಸುಳ್ಯದ ಕೃಷಿಕ ಶಿವರಾಮ ಭಟ್ ಮತ್ತು ಅವರ ಪುತ್ರ ಡಾ| ರಾಮಚಂದ್ರ ಭಟ್ ಅವರೂ ಸಹಾಯ ಹಸ್ತ ನೀಡುವುದಾಗಿ ತಿಳಿಸಿದ್ದಾರೆ.
ಶಶಿಕುಮಾರ್ ಗುರುವಾರ ಬಾಗಲ ಕೋಟೆಗೆ ಹೊರಟಿದ್ದು ಶುಕ್ರವಾರ ಬೆಳಗ್ಗೆ ಹಾನಗಲ್ ಕುಮಾರೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಬಿಎಸ್ಸಿ ನರ್ಸಿಂಗ್ ಪ್ರಥಮ ವರ್ಷದ ಪ್ರವೇಶಾತಿಯನ್ನು ಪಡೆಯುವರು.
ಬಿಎಸ್ಸಿ ನರ್ಸಿಂಗ್ ಕೋರ್ಸ್‌ನ ಶುಲ್ಕ ಸುಮಾರು 60,000 ರೂ. ಪಾವತಿಸಲು ಶಶಿಕುಮಾರ್ ಅವರು ಒಂದು ತಿಂಗಳಿಂದ ಉಡುಪಿಯಲ್ಲಿ ಕೂಲಿ ಕೆಲಸವನ್ನು ಮಾಡುತ್ತಿದ್ದರು. ಇವರ ತಂದೆ ಚಂದಪ್ಪನವರು ಕಳೆದ 20 ವರ್ಷಗಳಿಂದ ಉಡುಪಿ ಕರಾವಳಿ ಬೈಪಾಸ್ ಬಳಿ ವಾಸವಿದ್ದು ಇವರ ಸಂಪರ್ಕದಿಂದ ಶಶಿಕುಮಾರ್‌ಗೆ ಕೂಲಿ ಕೆಲಸ ಸಿಕ್ಕಿತ್ತು. ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ| ಎ.ಪಿ.ಭಟ್ ಅವರ ಮನೆಗೆ ಕೆಲಸಕ್ಕೆ ಬಂದಾಗ ಶಶಿಕುಮಾರ್ ಬದುಕಿನ ನೋಟ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. “ಶಶಿಕುಮಾರ್ ಅವರ ಸಮಸ್ಯೆ ಬಗೆಹರಿದಿದೆ. ಅದೆಷ್ಟೋ ವಿದ್ಯಾರ್ಥಿಗಳು ಇಂತಹ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಇಂತಹವರನ್ನು ಎತ್ತಿ ಹಿಡಿಯ ಬೇಕಾಗಿದೆ’ ಎಂದು ಡಾ| ಭಟ್ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.