ಬೆಂಬಲ ಬೆಲೆ ಘೋಷಿಸಿದರೂ ಕರಾವಳಿಗರಿಗೆ ಪ್ರಯೋಜನವಿಲ್ಲ
Team Udayavani, Nov 19, 2021, 7:20 AM IST
ಕೋಟ: ಕನಿಷ್ಠ ಬೆಂಬಲ ಬೆಲೆಯಡಿ ಭತ್ತ ಖರೀದಿಗೆ ನೋಂದಣಿ ಆರಂಭವಾಗಿದ್ದರೂ ಉಡುಪಿ ಮತ್ತು ದಕ್ಷಿಣ ಕನ್ನಡದ ಶೇ. 90 ರೈತರಿಗೆ ನಿರಾಶೆಯೇ ಕಾದಿದೆ. ಪ್ರಸ್ತುತ ಮಾನದಂಡದಂತೆ ಯೋಜನೆಯಡಿ ಕೆಂಪು ಭತ್ತ ಖರೀದಿಗೆ ಅವಕಾಶ ಇಲ್ಲದಿರುವುದೇ ಇದಕ್ಕೆ ಕಾರಣ. ಇದನ್ನು ಶೀಘ್ರ ಬದಲಾಯಿಸಿದರೆ ಮಾತ್ರ ಕರಾವಳಿಯ ರೈತರಿಗೆ ಪ್ರಯೋಜನವಾಗಲು ಸಾಧ್ಯ.
ಸಾಕಷ್ಟು ಹೋರಾಟಗಳ ಅನಂತರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಸಹಿತ ರಾಜ್ಯದಲ್ಲಿ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಗಾಗಿ ರೈತರ ನೋಂದಣಿ ಆರಂಭವಾಗಿದೆ. ಆದರೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ. 90ರಷ್ಟು ರೈತರು ಎಂಒ 4 ತಳಿಯ ಕೆಂಪು ಭತ್ತವನ್ನೇ ಬೆಳೆಯುತ್ತಾರೆ. ಆದ್ದರಿಂದ ಅವರಾರಿಗೂ ನೋಂದಣಿಗೆ ಅವಕಾಶ ಇಲ್ಲ.
ಕಳೆದ ಸಾಲಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಕೃಷಿ ಇಲಾಖೆ ಮೂಲಕ ಎರಡು ಸಾವಿರ ಕ್ವಿಂಟಾಲ್ ಭತ್ತದ ಬೀಜ ಬಿತ್ತನೆಯಾಗಿತ್ತು. ಇದರಲ್ಲಿ 1,700 ಕ್ವಿಂಟಾಲ್ ಎಂಒ4 ತಳಿ. ದಕ್ಷಿಣ ಕನ್ನಡದಲ್ಲಿ ಇಲಾಖೆಯ ಮೂಲಕ 598 ಕ್ವಿಂ. ಬಿತ್ತನೆ ಬೀಜ ಮಾರಾಟವಾಗಿದ್ದು, ಅದರಲ್ಲಿ 418 ಕ್ವಿಂಟಾಲ್ ಎಂಒ 4. ಖಾಸಗಿಯಾಗಿ ಮಾರಾಟವಾಗುವ ಬೀಜದಲ್ಲೂ ಇದೇ ತಳಿಯ ಪ್ರಮಾಣ ಹೆಚ್ಚು.
ಉಭಯ ಜಿಲ್ಲೆಗಳಲ್ಲಿ ಬೆಂಬಲ ಬೆಲೆ ನೋಂದಣಿ ಆರಂಭಕ್ಕೆ ಜಿಲ್ಲಾಧಿಕಾರಿಗಳು ಹೊರಡಿಸಿರುವ ಅಧಿಸೂಚನೆಯಲ್ಲೂ ಕೆಂಪು ತಳಿ ಭತ್ತವನ್ನು ಹೊರತುಪಡಿಸಿ ಸಾಮಾನ್ಯ ಭತ್ತವನ್ನು ಪ್ರತಿ ಕ್ವಿಂ.ಗೆ 1,940 ರೂ.ಗಳಂತೆ ಹಾಗೂ ಎ ಗ್ರೇಡ್ ಭತ್ತವನ್ನು 1,960 ರೂ.ಗಳಂತೆ ಖರೀದಿಸಲು ಆದೇಶಿಸಿದ್ದಾರೆ. ಕೆಂಪು ತಳಿ ಭತ್ತವನ್ನು ಸರಕಾರದ ಮಾರ್ಗಸೂಚಿ ಪ್ರಕಟವಾದ ಮೇಲೆ ನೋಂದಣಿ ಆರಂಭಿಸುವುದಾಗಿ ತಿಳಿಸಿದ್ದಾರೆ.
ಆದೇಶ ಜಾರಿಯಾದರಷ್ಟೇ ಅನುಕೂಲ:
ಅವಿಭಜಿತ ದ.ಕ. ಜಿಲ್ಲೆಯಲ್ಲಿ ಬಹುತೇಕ ಕೆಂಪು ತಳಿಯ ಭತ್ತವನ್ನೇ ಬೆಳೆಯುವುದರಿಂದ ಬೆಂಬಲ ಬೆಲೆ ಕೇಂದ್ರದಲ್ಲಿ ಇದರ ಖರೀದಿಗೆ ಅವಕಾಶ ನೀಡಬೇಕು ಎಂದು ಆಹಾರ ಇಲಾಖೆಯಿಂದ ಸರಕಾರಕ್ಕೆ ಮನವಿ ಸಲ್ಲಿಕೆಯಾಗಿದೆ. ಆದರೆ ಭತ್ತಕ್ಕೆ ಮುಖ್ಯವಾಗಿ ಬೆಂಬಲ ಬೆಲೆ ನಿಗಡಿಪಡಿಸುವುದು ಕೇಂದ್ರ ಸರಕಾರವಾದ್ದರಿಂದ ಅಲ್ಲಿಂದ ಅನುಮೋದನೆ ಸಿಗಬೇಕಿದೆ. ಒಮ್ಮೆ ಆದೇಶ ಜಾರಿಯಾದಲ್ಲಿ ಪ್ರತೀ ವರ್ಷ ಖರೀದಿಗೆ ಅನುಕೂಲವಾಗುತ್ತದೆ. ಕೇಂದ್ರ ಸರಕಾರಕ್ಕೂ ಮನವಿ ಸಲ್ಲಿಕೆಯಾಗಿದ್ದು ಪ್ರಕ್ರಿಯೆ ಚಾಲನೆಯಲ್ಲಿದೆ. ವಾರದಲ್ಲಿ ಈ ಕುರಿತು ಪೂರಕ ಆದೇಶ ಹೊರಬೀಳಬಹುದು ಎನ್ನುತ್ತಾರೆ ಇಲಾಖೆಯ ಪ್ರಮುಖರು.
ಕೆಂಪು ಭತ್ತ ಖರೀದಿಗೆ ಅನುಮೋದನೆ ದೊರಕದಿದ್ದಲ್ಲಿ ಬೆಂಬಲ ಬೆಲೆ ಖರೀದಿ ಕೇಂದ್ರದಿಂದ ಉಭಯ ಜಿಲ್ಲೆಗಳ ರೈತರಿಗೆ ಚಿಕ್ಕಾಸು ಪ್ರಯೋಜನವಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳು ತತ್‌ಕ್ಷಣ ಕಾರ್ಯಪ್ರವೃತ್ತರಾಗಬೇಕಿದೆ.
ಅವಿಭಜಿತ ದ.ಕ. ಜಿಲ್ಲೆಯ ಬೆಂಬಲ ಬೆಲೆ ಕೇಂದ್ರಗಳಲ್ಲಿ ಕೆಂಪು ಭತ್ತ ಖರೀದಿಗೆ ಅವಕಾಶ ನೀಡಬೇಕು ಎಂದು ಈ ಹಿಂದೆಯೇ ಸರಕಾರದ ಗಮನ ಸೆಳೆಯಲಾಗಿದೆ. ಆಹಾರ ಇಲಾಖೆ ಮೂಲಕವೂ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಕೆಯಾಗಿದೆ. ಕೇಂದ್ರದಿಂದ ಶೀಘ್ರವಾಗಿ ಆದೇಶ ಜಾರಿಯಾಗುವ ನಿರೀಕ್ಷೆ ಇದೆ.ಆದ್ದರಿಂದ ಬೆಂಬಲ ಬೆಲೆ ಕೇಂದ್ರಕ್ಕೆ ಭತ್ತ ನೀಡಲಿಚ್ಛಿಸುವ ಎಂ.ಒ.4 ಭತ್ತ ಬೆಳೆದ ರೈತರು ಸ್ವಲ್ಪ ಸಮಯ ಕಾಯಬಹುದು.–ಕಿರಣ್ ಕೊಡ್ಗಿ, ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.