ಸಂಪಾದಕೀಯ ಸಿಬಂದಿ ಜತೆ ಚರ್ಚಿಸುತ್ತಿದ್ದ “ಬಾಸ್’
Team Udayavani, Aug 1, 2022, 6:10 AM IST
ಯುನಿಮಾನ್ ಯಂತ್ರ ಕಾರ್ಯಾರಂಭದ ಕ್ಷಣ.
ನಾನು 1981ರಲ್ಲಿ “ಉದಯವಾಣಿ’ ಸೇರಿದ್ದಾಗ ನಮಗೆ ಮೋಹನದಾಸ್ ಪೈ ಅವರು ಯಾರೆಂದು ಗೊತ್ತಿರಲಿಲ್ಲ. ಅವರು ನಿತ್ಯ ಉದಯವಾಣಿ ಕಚೇರಿಗೆ ಬರುತ್ತಿದ್ದರು. ಈಗಿನ ಹೊಸ ಕಚೇರಿಯಲ್ಲ. ಗೀತಾ ಮಂದಿರದ ಹತ್ತಿರವಿದ್ದ ಮಣಿಪಾಲ ಪ್ರಸ್‌ನ ಹಳೆಯ ಕಟ್ಟಡ. ಸಂಜೆ ಹೊತ್ತಿಗೆ ಬಂದಾಗ ನಾನು ಆಯಾ ದಿನದ ಪತ್ರಿಕೆಗಳ ಸಂಖ್ಯೆಯನ್ನು ಕೊಡಬೇಕಿತ್ತು. ಕೆಲವು ಬಾರಿ ಒಂದೂರಿನಲ್ಲಿ ಪತ್ರಿಕೆಗಳ ಸಂಖ್ಯೆ ಹೆಚ್ಚಿಗೆ ಇರುತ್ತಿತ್ತು, ಕಡಿಮೆಯೂ ಇರುತ್ತಿತ್ತು. ಹೆಚ್ಚಿಗೆಯಾದ್ದಕ್ಕೂ, ಕಡಿಮೆಯಾದ್ದಕ್ಕೂ ಕಾರಣ ಕೇಳುತ್ತಿದ್ದರು. ಹೆಚ್ಚಿಗೆ ಆದ ಮಾನದಂಡವನ್ನು ಕಡಿಮೆಯಾದಲ್ಲಿ ಅನ್ವಯಿಸಲು ಸೂಚಿಸುತ್ತಿದ್ದರು.
ಅಲ್ಲೇ ಸಂಪಾದಕೀಯ ವಿಭಾಗ ಮುಖ್ಯಸ್ಥ ಬನ್ನಂಜೆ ರಾಮಾಚಾರ್ಯ ಇರುತ್ತಿದ್ದರು. ಮುಖಪುಟದ ಅಗ್ರ ವಾರ್ತೆ, ಶೀರ್ಷಿಕೆ ಗಾತ್ರ ದ ಬಗ್ಗೆಯೂ ಮಾಹಿತಿ ಪಡೆಯುತ್ತಿದ್ದರು. ಪ್ರತಿ ನಿತ್ಯ ಕೆಳಭಾಗದಲ್ಲಿ ಬಾಟಮ್ ಸ್ಪ್ರೆಡ್ ಸುದ್ದಿಯೊಂದನ್ನು ಹಾಕಲು ನಿರ್ದೇಶಿಸುತ್ತಿದ್ದರು. ಡಿಗಾರ್ ನಮ್ಮಲ್ಲಿ ಕಾಟೂìನಿಸ್ಟ್ ಆಗಿದ್ದರು. ಯುದ್ಧ ಸಂಭವಿಸಿದಾಗ ಡಿಗಾರರಿಂದ ಕಲಾತ್ಮಕವಾಗಿ ಕೈಯಲ್ಲಿ ಬರೆದ ಶೀರ್ಷಿಕೆಯನ್ನು ಮುದ್ರಿಸಲಾಗುತ್ತಿತ್ತು. ಸಂಪಾದಕೀಯ ವಿಭಾಗದ ಮಧ್ಯ ಕುಳಿತೇ ಈ ಕೆಲಸಗಳನ್ನು ಮಾಡುತ್ತಿದ್ದರು. ಐಸಿಡಿಎಸ್ ಜವಾಬ್ದಾರಿ ಹೊತ್ತ ಬಳಿಕ ಸಂಜೆ ತಡವಾಗಿ ಪ್ರಸ್‌ಗೆ ಬರುತ್ತಿದ್ದರು. ನಾವು ಜಾಹೀರಾತಿನ ವಿನ್ಯಾಸಗಳನ್ನು ತೋರಿಸಬೇಕಿತ್ತು. ಅನಂತರ ಸಂಪಾದಕೀಯ ವಿಭಾಗದ ಎನ್.ಗುರುರಾಜರನ್ನು, ಸ್ಥಳೀಯ ಸುದ್ದಿಗಳನ್ನು ನೋಡಿಕೊಳ್ಳುವವರನ್ನೂ ಕರೆಸಿ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು. ವರ್ಷಕ್ಕೊಂದು ಬಾರಿ “ಸಿಂಹಾವಲೋಕನ’ ಬರೆಯಲು ಪ್ರಮುಖರಿಗೆ ಜವಾಬ್ದಾರಿ ನೀಡುತ್ತಿದ್ದರು.
ಎಚ್ಚರಿಕೆಯೇ ಮೆಮೋ!
ತಪ್ಪಾದಾಗ ಪ್ರೂಫ್ ರೀಡರ್‌ಗಳಾದ (ಕರಡು ತಿದ್ದುವವರು) ಎಂ.ಆರ್.ಎಂ.ಕಿಣಿ, ಅನಂತ ನಾಯಕ್, ಐತಪ್ಪ ಮಾಸ್ಟರ್, ಸುರೇಶ ಪೈ, ಸುಭಾಸ್, ಸುಬ್ಬಣ್ಣಾಚಾರ್ಯ ಬಂಗ್ಲೆ, ಸುರೇಶ ಭಟ್ ಅವರನ್ನು ಕರೆಯುತ್ತಿದ್ದರು. ಇನ್ನು ಮುಂದೆ ಹೀಗಾಗಬಾರದೆಂದು ಎಚ್ಚರಿಕೆ ಕೊಡುತ್ತಿದ್ದರು. ಎಚ್ಚರಿಕೆಯೇ ಮೆಮೋ ಆಗಿತ್ತು. ರಾತ್ರಿ ಪಾಳಿ ಕೆಲಸಕ್ಕೆ ಶಾರ್ಪ್ (ಚುರುಕು ಬುದ್ಧಿ) ಇರುವವರನ್ನು ಆಯ್ಕೆ ಮಾಡುತ್ತಿದ್ದರು. ಕಚೇರಿಗೆ ಬರಲಾಗದಿದ್ದಾಗ ದೂರವಾಣಿಯಲ್ಲಿ ಮಾರ್ಗದರ್ಶನ ನೀಡುತ್ತಿದ್ದರು.
ತಪ್ಪಾದಾಗ
ಕಚೇರಿಗೆ ಬಂದಾಗ ರಾತ್ರಿ 2 ಗಂಟೆಯವರೆಗೆ ಕುಳಿತುಕೊಳ್ಳುತ್ತಿದ್ದರು. ಪತ್ರಿಕೆ ಮುದ್ರಣವಾದ ಅನಂತರ ಒಂದು ಪ್ರತಿಯನ್ನು ತಂದುಕೊಡುತ್ತಿದ್ದೆವು. ಒಂದು ಬಾರಿ ಯಾರಧ್ದೋ ಭಾವಚಿತ್ರ ತಪ್ಪಾಗಿ ಮುದ್ರಣಗೊಂಡಿತ್ತು. ಕೆಲವು ಸಾವಿರ ಪ್ರತಿಗಳು ಮುದ್ರಣವಾಗಿದ್ದವು. ಕೂಡಲೇ ಅದನ್ನು ತಡೆದು ಹೊಸ ಮುದ್ರಣಕ್ಕೆ ಆದೇಶ ನೀಡಿದ್ದರು.
ತಂದೆಯದೇ ಕಾರ್ಯಶೈಲಿ
ಹಿಂದೆ ಡಾ| ಟಿಎಂಎ ಪೈ ಅವರು ಕೋಲು ಊರಿಕೊಂಡು ವಿವಿಧ ವಿಭಾಗಗಳ ಮುಖ್ಯಸ್ಥರ ಜತೆಗೆ ನಿತ್ಯ ಆಸ್ಪತ್ರೆಯ ಪ್ರತೀ ವಾರ್ಡ್‌ಗಳಿಗೆ ಭೇಟಿ ಕೊಡುತ್ತಿದ್ದರಂತೆ. ಅಲ್ಲಲ್ಲಿ ಕಂಡುಬರುವ ಲೋಪದೋಷಗಳನ್ನು ಅಲ್ಲಲ್ಲೇ ಸರಿಪಡಿಸಲು ನಿರ್ದೇಶನ ನೀಡುತ್ತಿದ್ದರು. ಅದೇ ರೀತಿ ಮೋಹನದಾಸ್ ಪೈ ಅವರು ಟಿ.ಸತೀಶ್ ಪೈ ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರೊಂದಿಗೆ ಪ್ರತೀ ವಿಭಾಗಕ್ಕೆ ಭೇಟಿ ಕೊಡುತ್ತಿದ್ದರು. ಆಯಾ ವಿಭಾಗಗಳಲ್ಲಿ ಕಂಡುಬರುವ ಸಮಸ್ಯೆಗಳಿಗೆ ಅಲ್ಲಲ್ಲೇ ಪರಿಹಾರ ಸೂಚಿಸುತ್ತಿದ್ದರು. ತಪ್ಪುಗಳಾದಾಗ ಅವರು ಎಚ್ಚರಿಕೆ ಕೊಟ್ಟರೆ ಅದು ಫೈನಲ್. ಒಮ್ಮೆ ಒಂದು ವಿಭಾಗದಲ್ಲಿ ನೌಕರನೊಬ್ಬ ಬೀಡಿ ಸೇದುತ್ತಿದ್ದ. ಮೋಹನದಾಸ್ ಪೈಯವರು ಬರುವುದನ್ನು ನೋಡಿ ಬೀಡಿ ಎಸೆದ. ಕೂಡಲೇ ಪೈ ಅವರು “ನೀನು ಬೀಡಿ ಸೇದಿದ್ದು ಮೊದಲ ತಪ್ಪು, ಎಲ್ಲೆಂದರಲ್ಲಿ ಎಸೆದದ್ದು ಇನ್ನೊಂದು ತಪ್ಪು’ ಎಂದು ಎಚ್ಚರಿಕೆ ನೀಡಿದರು.
ಹೆರಿಟೇಜ್ ವಿಲೇಜ್‌ನ ಹಿಂದೆ…
ಮಣಿಪಾಲದ ಹೆರಿಟೇಜ್ ವಿಲೇಜ್ ಕೇವಲ ಉಡುಪಿ ಜಿಲ್ಲೆ, ಕರಾವಳಿಗೆ ಮಾತ್ರವಲ್ಲದೆ ರಾಜ್ಯ, ದೇಶದಲ್ಲಿಯೂ ಪ್ರಸಿದ್ಧ. ಇದರ ರೂವಾರಿ ವಿಜಯನಾಥ ಶೆಣೈ ಅವರ ಜತೆ ಟಿ. ಮೋಹನದಾಸ್ ಪೈ ಅವರು ಬಹಳಷ್ಟು ಶ್ರಮಿಸಿದ್ದರು. ಪ್ರತೀ ರವಿವಾರ ಮೋಹನದಾಸ್ ಪೈ, ವಿಜಯನಾಥ ಶೆಣೈಯವರ ಜತೆ ನಾನೂ ಹೋಗುತ್ತಿದ್ದೆ. ಸಾಗರ, ಸೊರಬ, ಶಿವಮೊಗ್ಗ, ತೀರ್ಥಹಳ್ಳಿ ಮೊದಲಾದೆಡೆ ನಾನು ಹೋಗಿದ್ದೆ. ಬೆಳಗ್ಗೆ ಮೋಹನದಾಸ್ ಪೈಯವರ ಮನೆಯಲ್ಲಿ ಮಾಡಿದ ಕಡುಬನ್ನು ಪ್ಯಾಕ್ ಮಾಡಿ ಕೊಂಡೊಯ್ಯುತ್ತಿದ್ದೆವು. ನನಗೆ ಉದಯವಾಣಿ ಏಜೆಂಟರು ಎಲ್ಲೆಲ್ಲಿ ಇರುತ್ತಿದ್ದರು ಎನ್ನುವುದು ತಿಳಿದ ಕಾರಣ ಅಲ್ಲಿನ ಪರಿಚಯಕ್ಕೋಸ್ಕರ ನನ್ನನ್ನು ಕರೆದೊಯ್ಯುತ್ತಿದ್ದರು. ಹೆರಿಟೇಜ್ ವಿಲೇಜ್‌ನಲ್ಲಿರುವ ವಿವಿಧ ಹಳೆಯ ಕಟ್ಟಡ, ಹಳೆಯ ನಾಣ್ಯ- ಪುರಾತನ ಸಾಮಗ್ರಿಗಳನ್ನು ತರಲು ಇಷ್ಟು ಪ್ರಯತ್ನಪಟ್ಟಿದ್ದರು.
ನಾವು ಒಮ್ಮೆ ಆರೂರಿನ ಮೇಲ್ಮಠಕ್ಕೆ ಹೋಗಿದ್ದೆವು. ವಿಜಯನಾಥ ಶೆಣೈಯವರು ಹೇಗಿದ್ದರೂ ಸಿಂಡಿಕೇಟ್ ಬ್ಯಾಂಕ್ ಅಧಿಕಾರಿ. ಅವರ ಜತೆಗೆ ಮೋಹನದಾಸ್ ಪೈಯವರು ಬಂದಿದ್ದರು. “ನನ್ನನ್ನು ಬಾಸ್ ಎಂದು ಪರಿಚಯಿಸಬೇಡ. ನನ್ನನ್ನು ಬ್ಯಾಂಕ್ ಅಧಿಕಾರಿ ಎಂದು ಪರಿಚಯಿಸು’ ಎಂದು ನನಗೆ ಮೊದಲೇ ತಿಳಿಸಿದ್ದರು. ಆ ಪ್ರಕಾರ ನಮ್ಮ ಬಾಸ್ ಅನ್ನು ಬ್ಯಾಂಕ್ ಅಧಿಕಾರಿ ಎಂದು ಪರಿಚಯಿಸಬೇಕಾಯಿತು. ಇದು ಟಿ. ಮೋಹನದಾಸ ಪೈ ಅವರ ಸರಳತೆಗೆ ಒಂದು ಅತೀ ಉತ್ತಮ ನಿದರ್ಶನವಾಗಿದೆ.
– ಆರೂರು ಗುರುರಾಜ್,
ಉದಯವಾಣಿಯಲ್ಲಿ ಮ್ಯಾನೇಜರ್
ಆಗಿ ಸೇವೆ ಸಲ್ಲಿಸಿದವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.