ವಜ್ರಾದಪಿ ಕಠೊರಾಣಿ ಮೃದೂನಿ ಕುಸುಮಾದಪಿ…
Team Udayavani, Aug 1, 2022, 7:35 AM IST
“ವಜ್ರಾದಪಿ ಕಠೊರಾಣಿ ಮೃದೂನಿ ಕುಸುಮಾದಪಿ…’ ಎನ್ನುವುದು ಭವಭೂತಿಯ “ಉತ್ತರ ರಾಮ ಚರಿತೆ’ ಕೃತಿಯ ಪ್ರಸಿದ್ಧ ಶ್ಲೋಕ. ವಜ್ರದಂತೆ ಕಠೊರವಾಗಿದ್ದರೂ ಪುಷ್ಪದಂತೆ ಮೃದುವಾಗಿದ್ದವನು ಎನ್ನುವುದು ಇದರ ಅರ್ಥ.
ಈ ಮಾತು ಮಣಿಪಾಲ ಸಂಸ್ಥೆಗಳ ಹಿರಿಯ ನೇತಾರ ಟಿ. ಮೋಹನದಾಸ್ ಪೈ ಅವರಿಗೆ ಅಕ್ಷರಶಃ ಅನ್ವರ್ಥವಾಗುತ್ತದೆ. ಅವರು ಬಹಳ ಶಿಸ್ತುಬದ್ಧ, ಕಠೊರವಾಗಿ ವರ್ತಿಸುತ್ತಾರೆ. ಆದರೆ ಅವರ ಹೃದಯ ಮಾತ್ರ ಮೃದುವಾದದ್ದು. ವ್ಯಾಪಾರ ವ್ಯವಹಾರ ಮಾಡುವವರು ಹಣದ ಆಸೆ ಇಲ್ಲದೆ ಮಾಡುವವರನ್ನು ನೋಡುವುದು ಎಷ್ಟು ಅಪರೂಪ? ನಾನು ಐಸಿಡಿಎಸ್‌ನಲ್ಲೂ, ಉದಯವಾಣಿಯಲ್ಲೂ ಮೋಹನದಾಸ್ ಪೈಯವರ ಅಧೀನ ಕೆಲಸ ಮಾಡಿದವನು. ಅವರ ಗುರಿ ಗ್ರಾಹಕರನ್ನು ಬೆಳೆಸುವುದೇ ವಿನಾ, ಅವರಿಂದ ಕಸಿದುಕೊಳ್ಳುವುದು ಆಗಿರಲಿಲ್ಲ. ಗ್ರಾಹಕರನ್ನು ಬೆಳೆಸಿದರೆ ನಾವೂ ಬೆಳೆದಂತೆ. ಅವರಿಂದ ಕಿತ್ತುಕೊಂಡರೆ ಕ್ಷಣಿಕವಾಗಿ ನಮಗೆ ಲಾಭವಾಗಬಹುದು. ಆದರೆ ದೀರ್ಘ ಕಾಲದ ದೃಷ್ಟಿಯಿಂದ ನಮಗೆ ಒಳಿತಾಗುವುದಿಲ್ಲ ಎಂಬ ಸಿದ್ಧಾಂತ/ ನೀತಿಯನ್ನು ಅವರು ಅನುಸರಿಸುತ್ತಿದ್ದರು ಎಂಬುದನ್ನು ಹತ್ತಿರದಿಂದ ನಾನು ಬಲ್ಲೆ. ಎಷ್ಟು ಮಂದಿ ಬಾಸ್‌ಗಳಿಗೆ ಈ ದೃಷ್ಟಿಕೋನವಿರುತ್ತದೆ?
ಮಾಧವ ಪೈಯವರ ಹಿರಿಯ ಮಗನಾಗಿ ಅವರು ಎಲ್ಲಿಗೋ ಹೋಗಬಹುದಿತ್ತು. ಆ ಅನುಕೂಲವೂ ಇತ್ತು. ಆದರೆ ಅವರು ಪ್ರಸ್ ಅನ್ನು ಆಯ್ಕೆ ಮಾಡಿಕೊಂಡಿದ್ದರು. 1940ರ ದಶಕದಿಂದ 50ರ ದಶಕದವರೆಗೂ ಪ್ರಸ್ ಕೇವಲ ಸಾಮಾನ್ಯ ಕರಪತ್ರ ಮುದ್ರಿಸುವ ಕೆಲಸ ಮಾಡುತ್ತಿತ್ತು. ಈ ಮಟ್ಟದವರೆಗೆ ಎದ್ದು ನಿಲ್ಲಲು ಅವರ ಕೊಡುಗೆ ಮಹತ್ವದ್ದಾಗಿದೆ.
ಸಾಮಾನ್ಯರು ಸಾಕು ಅನ್ನುತ್ತಿದ್ದರು
ಒಮ್ಮೆ ಉದಯವಾಣಿಯಲ್ಲಿ ವಾಂಟೆಡ್ ಕಾಲಂನಲ್ಲಿ ಜಾಹೀರಾತು ಪ್ರಕಟಿಸಿದ್ದೆವು. ಅದರಲ್ಲಿ ಎಂಬಿಎಯಂತಹ ಹೆಚ್ಚು ಓದಿದವರಿಂದ ಅರ್ಜಿ ಆಹ್ವಾನಿಸಿದ್ದೆವು. ಮರುದಿನ ನನ್ನನ್ನು ಕರೆದು “ಯಾರು ಆ ಜಾಹೀರಾತು ಹಾಕಿದರು?’ ಎಂದು ಕೇಳಿದರು. “ನಾನು’ ಎಂದು ಒಪ್ಪಿಕೊಂಡೆ. “ನೋಡು ನನ್ನ ತಂದೆ, ನಾನು ಇಲ್ಲಿ ಸಂಸ್ಥೆಗಳನ್ನು ಬೆಳೆಸಿದ್ದು ಎಸೆಸೆಲ್ಸಿ, ಪಿಯುಸಿ ಕಲಿತವರನ್ನು ನೇಮಿಸಿ ಕೊಂಡು. ಹೆಚ್ಚೆಂ ದರೆ ಪದವೀಧರರನ್ನು ಕರೆಸಿ ನಿಯುಕ್ತಿಗೊಳಿಸಿ. ಹೆಚ್ಚು ಹೆಚ್ಚು ಓದಿದವರು ನಮ್ಮಲ್ಲಿ ನಿಲ್ಲುವುದಿಲ್ಲ. ಸಾಮಾನ್ಯ ಮನುಷ್ಯರು ನಿಷ್ಠೆಯಿಂದ ಕೆಲಸ ಮಾಡುತ್ತಾರೆ. ನಿಷ್ಠಾವಂತ ಕೆಲಸಗಾರರಿಂದ ಸಂಸ್ಥೆ ಬೆಳೆಯುತ್ತದೆ’ ಎಂದು ಬುದ್ಧಿಮಾತು ಹೇಳಿದರು.
ಬೈಕ್ ಬೇಕಾಗಿದ್ದಾಗ
ನಾನು ಐಸಿಡಿಎಸ್‌ನಲ್ಲಿದ್ದಾಗ ಮಧ್ಯಾಹ್ನ ಊಟಕ್ಕೆ ಹೋಗಿ ಬರುವುದಕ್ಕೆ ಬೈಕ್ ಬೇಕಾಗಿತ್ತು. ಅರ್ಜಿ ಹಾಕಿದಾಗ ಅರ್ಜಿ ಸ್ವೀಕಾರವಾಗಲಿಲ್ಲ. ನಾನು ಹೋಗಿ ಮೋಹನದಾಸ್ ಪೈಯವರನ್ನು ಕೇಳಿದೆ. “ನೋಡು ಮಾರಾಯ ಈಗ ವಾಹನಗಳಲ್ಲಿ ಹೋಗುವುದು ಅಪಾಯ. ನೀನು ಜಾಗರೂಕತೆಯಿಂದ ಬೈಕ್ ಚಲಾಯಿಸುವುದಾದರೆ ಮಾತ್ರ ಮಂಜೂರು ಮಾಡುತ್ತೇನೆ’ ಎಂದು ಹೇಳಿ ಮಂಜೂರು ಮಾಡಿದರು. ಇದು ಅವರಿಗೆ ನೌಕರರ ಮೇಲಿದ್ದ ಪ್ರೀತಿಯನ್ನು ತೋರಿಸುತ್ತದೆ.
ಅಕ್ಷಯ ತೃತೀಯಾ
“ಉದಯವಾಣಿ’ಯಲ್ಲಿ ಅಕ್ಷಯ ತೃತೀಯಾದಂದು ಚಿನ್ನ ಖರೀದಿಸುವ ಕಲ್ಪನೆಯನ್ನು ಜಾರಿಗೆ ತಂದೆವು. ಯಶಸ್ಸೂ ಕಂಡಿತು. ಇದರ ಬಗ್ಗೆ ಕೆಲಸ ಮಾಡಿದ ಮಾರುಕಟ್ಟೆ ವಿಭಾಗದ ಎಲ್ಲರಿಗೂ ತನ್ನ ಸ್ವಂತ ಖಾತೆಯಿಂದ ಚಿನ್ನದ ನಾಣ್ಯವನ್ನು ಉಡುಗೊರೆಯಾಗಿ ಮೋಹನದಾಸ್ ಪೈ ನೀಡಿದರು. ಸಂಸ್ಥೆಯಿಂದ ಇದನ್ನು ನೀಡಲು ಅವರು ಒಪ್ಪಲಿಲ್ಲ.
ಪ್ರೀತಿಗಾಗಿ ಕೆಲಸ ಮಾಡಿದ್ದೆವು
ನಾವು ಅವರ ಕೈಕೆಳಗೆ ಎರಡು ಸಂಸ್ಥೆಗಳಲ್ಲಿ ಕೆಲಸ ಮಾಡಿದಾಗ ಕಂಡದ್ದು ಅವರ ಪ್ರೀತಿಯನ್ನು. ನಾವು ಸಂಬಳ ನೋಡಿ ಕೆಲಸ ಮಾಡಿದ್ದಲ್ಲ, ಬದಲಾಗಿ ಅವರು ತೋರಿಸುತ್ತಿದ್ದ ಮಾನವೀಯ ಗುಣಕ್ಕಾಗಿ. ನನ್ನಂತಹ ಅದೆಷ್ಟೋ ಜನರನ್ನು ಅವರು ಬೆಳೆಸಿದ್ದರು. ಅವರು ನೌಕರರ ಕಷ್ಟವನ್ನು ಗುರುತಿಸಿ ಅದಕ್ಕೆ ಬೇಕಾದ ಪರಿಹಾರವನ್ನು ತೋರಿಸುತ್ತಿದ್ದರು. ನಾವು ಎಷ್ಟೂ ಮೇಲಕ್ಕೆ ಹೋಗಬಹುದು, ಆದರೆ ಪಂಚಾಂಗವನ್ನು ಮರೆಯಲಾಗದು, ಪಂಚಾಂಗಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ.
ಕುಟುಂಬದಲ್ಲಿ “ಮೋನಣ್ಣ’
ಪೈ ಕುಟುಂಬದಲ್ಲಿ ಮೋಹನದಾಸ್ ಪೈಯವರು ಕಮಾಂಡರ್ ಇದ್ದಂತೆ. ಪೈ ಕುಟುಂಬದ ಸದಸ್ಯರಿಗೆ “ಮೋನಣ್ಣ’ ಹೇಳಿದರೆ ಮುಗಿಯಿತು. ಮತ್ತಾರೂ ಮಾತನಾಡುತ್ತಿದ್ದಿಲ್ಲ.
– ದಾಮೋದರ ನಾಯಕ್
ಮಣಿಪಾಲದ ಮಧುವನ್ ಸೆರಾಯ್ ಹೊಟೇಲ್ ಮಾಲಕರು,
ಉದ್ಯಮಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.