ನಾಡಿನ ವಿವಿಧೆಡೆ ಸಾವಿರಾರು ಭಕ್ತರಿಗೆ ತಪ್ತಮುದ್ರಾಧಾರಣೆ
Team Udayavani, Jul 11, 2022, 12:50 AM IST
ಉಡುಪಿ/ಮಂಗಳೂರು: ಉಡುಪಿ ಶ್ರೀಕೃಷ್ಣಮಠವೂ ಸೇರಿದಂತೆ ನಾಡಿನ ವಿವಿಧೆಡೆಗಳಲ್ಲಿ ವಿವಿಧ ಮಠಾಧೀಶರು ರವಿವಾರ ಪ್ರಥಮನ ಏಕಾದಶಿಯಂದು ಭಕ್ತರಿಗೆ ತಪ್ತಮುದ್ರಾಧಾರಣೆ ನಡೆಸಿದರು.
ಶ್ರೀಕೃಷ್ಣ ಮಠದಲ್ಲಿ ಬೆಳಗ್ಗೆ ಮಹಾಪೂಜೆ ಪೂರೈಸಿದ ಪರ್ಯಾಯ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು, ಅದಮಾರು ಕಿರಿಯ ಶ್ರೀಈಶಪ್ರಿಯತೀರ್ಥ ಶ್ರೀಪಾದರು, ಶೀರೂರು ಮಠದ ಶ್ರೀವೇದವರ್ಧನತೀರ್ಥ ಶ್ರೀಪಾದರು ಅಪರಾಹ್ನದವರೆಗೆ ಸಾವಿರಾರು ಭಕ್ತರಿಗೆ ಮುದ್ರಾಧಾರಣೆ ನಡೆಸಿದರು. ಮುದ್ರಾಧಾರಣೆಗಾಗಿ ಬಂದವರ ಸರತಿ ಸಾಲು ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಶ್ರೀಕೃಷ್ಣಮಠದ ಮುಂಭಾಗದಲ್ಲಿ ಇತ್ತು.
ಮುದ್ರಾಧಾರಣೆ ಮಾಡುವ ಮುನ್ನ ವೈದಿಕರು ಸುದರ್ಶನ ಹೋಮ ನಡೆಸಿದರು. ಅದರಲ್ಲಿ ಬಿಸಿ ಮಾಡಿದ ಶಂಖ ಚಕ್ರಗಳ ಚಿಹ್ನೆಗಳನ್ನು ಮಠಾಧೀಶರು ಭಕ್ತರ ತೋಳಿನಲ್ಲಿ ಮುದ್ರಿಸಿದರು.
ಅದಮಾರು ಕಿರಿಯ, ಶೀರೂರು, ಕಾಣಿಯೂರು ಶ್ರೀಗಳು ಇದಕ್ಕೂ ಮುನ್ನ ಸ್ವಮಠಗಳಲ್ಲಿ ಮುದ್ರಾಧಾರಣೆ ಮಾಡಿದರು. ಕಾಣಿಯೂರು ಶ್ರೀಗಳು ಅಪರಾಹ್ನ ಕಳತ್ತೂರು ದೇವಸ್ಥಾನ, ಶೀರೂರು ಶ್ರೀಗಳು ಪೆರ್ಡೂರು ದೇವಸ್ಥಾನದಲ್ಲಿ, ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಶನಿವಾರ ಮೂಲಮಠದಲ್ಲಿ ಕಿರಿಯ ಶ್ರೀಗಳಿಗೆ, ರವಿವಾರ ಬೆಂಗಳೂರಿನಲ್ಲಿ ಭಕ್ತರಿಗೆ ತಪ್ತಮುದ್ರಾಧಾರಣೆ ನಡೆಸಿದರು.
ಹಲವು ದೇವಸ್ಥಾನಗಳಲ್ಲಿ ನಿರಂತರ ಭಜನೆ, ಪೂಜಾದಿಗಳು ನಡೆದವು. ಸುಬ್ರಹ್ಮಣ್ಯ ಮಠಾಧೀಶರು ಉಜಿರೆ ಜನಾರ್ದನ ದೇವಸ್ಥಾನ, ಕೆಮ್ಮಾಯಿ ವಿಷ್ಣುಮೂರ್ತಿ ದೇವಸ್ಥಾನ, ಕೆಮ್ಮಿಂಜೆ ಸುಬ್ರಹ್ಮಣ್ಯ ದೇವಸ್ಥಾನ, ಸುಬ್ರಹ್ಮಣ್ಯ ಮಠದಲ್ಲಿ, ಬಾಳೆಗಾರು ಶ್ರೀಗಳು ಕೊಡವೂರು ಸಮೀಪದ ಕಂಗೂರು ಮಠ, ಪಡುಬಿದ್ರಿ, ಪಾವಂಜೆ ದೇವಸ್ಥಾನ, ಮಂಗಳೂರು ನೆಲ್ಲಿಕಾಯಿ ರಾಘವೇಂದ್ರ ಮಠ, ಬನ್ನಡ್ಕ ರಾಘವೇಂದ್ರ ಮಠ, ಕಾರ್ಕಳ ಅನಂತಶಯನ ದೇವಸ್ಥಾನ, ಗುಡ್ಡೆಯಂಗಡಿ, ಪಲಿಮಾರು ಮೂಲಮಠದಲ್ಲಿ, ಚಿತ್ರಾಪುರ ಮಠಾಧೀಶರು ಸುರತ್ಕಲ್ ಸಮೀಪದ ಚಿತ್ರಾಪುರ ಮಠದಲ್ಲಿ, ಗೃಹಸ್ಥರು ಮುದ್ರಾಧಾರಣೆ ನಡೆಸುವ ಏಕೈಕ ಸ್ಥಳವಾದ ಉಪ್ಪಿನಂಗಡಿ ಸಮೀಪದ ಎರ್ಕಿ ಮಠದಲ್ಲಿ ಅರ್ಚಕ ನರಹರಿ ಉಪಾಧ್ಯಾಯರು ಮುದ್ರಾಧಾರಣೆ ನಡೆಸಿದರು.
ಕಾಶೀ ಮಠಾಧೀಶರು ಮತ್ತು ಗೋಕರ್ಣ ಪರ್ತಗಾಳಿ ಮಠಾಧೀಶರು ಮೊಕ್ಕಾಂ ಸ್ಥಳದಲ್ಲಿ ತಪ್ತಮುದ್ರಾಧಾರಣೆ ನಡೆಸಿದರು. ಸೋದೆ ಶ್ರೀಗಳು ಬೆಂಗಳೂರಿನ ಶ್ರೀಕೃಷ್ಣವಾದಿರಾಜ ಮಂದಿರದಲ್ಲಿ, ಪೇಜಾವರ ಶ್ರೀಗಳು ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠ, ಚೆನ್ನೈಯ ಟಿ. ನಗರ ರಾಘವೇಂದ್ರ ಮಠ, ಪಲಿಮಾರು ಉಭಯ ಮಠಾಧೀಶರು ಬೆಂಗಳೂರು ಮಲ್ಲೇಶ್ವರದ ಪಲಿಮಾರು ಮಠ, ಮೈಸೂರು, ಕೆಆರ್ ನಗರದಲ್ಲಿ, ಅದಮಾರು ಹಿರಿಯ ಶ್ರೀಗಳು ಬಳ್ಳಾರಿಯಲ್ಲಿ, ಭಂಡಾರಕೇರಿ ಶ್ರೀಗಳು ಹುಬ್ಬಳ್ಳಿ ದೇಶಪಾಂಡೆ ನಗರದ ರಾಘವೇಂದ್ರ ಮಠದಲ್ಲಿ ಮುದ್ರಾಧಾರಣೆ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ
Yakshadhruva Patla Foundation Trust: ನ.14ರಂದು ಉಡುಪಿ ಘಟಕದ ಮಹಿಳಾ ವಿಭಾಗ ಆರಂಭ
Parashurama Murthy Case: ಉಳಿದ ಆರೋಪಿಗಳನ್ನು ಬಂಧಿಸಲು ಆಗ್ರಹ
Udupi: ನಗರದಲ್ಲಿ ಫುಟ್‌ಪಾತ್‌ಗಳ ಅತಿಕ್ರಮಣ; ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್
Udupi: ಶ್ರೀಕೃಷ್ಣ ಮಠಕ್ಕೆ ನ.20ರಂದು ಕಾಂಚಿ ಶ್ರೀ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಆಗಮನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.