ರಸ್ತೆ ಭೂಸ್ವಾಧೀನ ಪರಿಹಾರಕ್ಕೆ ಟಿಡಿಆರ್ ಸೂತ್ರ
ಉಡುಪಿ ಜಿಲ್ಲೆಯಲ್ಲಿ ಮೊದಲ ಬಾರಿ
Team Udayavani, Feb 28, 2020, 5:03 AM IST
ಉಡುಪಿ: ಜಿಲ್ಲೆಯಲ್ಲಿ ಇದೇ ಮೊದಲ ಬಾರಿ ಉಡುಪಿ ನಗರಸಭೆ ವ್ಯಾಪ್ತಿಯ ಬೈಲೂರು- ಮಿಶನ್ ಕಂಪೌಂಡ್ ರಸ್ತೆ ವಿಸ್ತರಣೆಯಲ್ಲಿ ಭೂಮಿ ಕಳೆದುಕೊಂಡವರಿಗೆ ಅಭಿವೃದ್ಧಿ ಹಕ್ಕುಗಳ ವರ್ಗಾವಣೆ (ಟಿಡಿಆರ್) ಪತ್ರ ನೀಡಲು ನಗರಸಭೆ ಮುಂದಾಗಿದೆ.
ಏನಿದು ಟಿಡಿಆರ್?
ಬೆಂಗಳೂರು, ಮಂಗಳೂರಿನಂತಹ ಮಹಾ ನಗರಗಳಲ್ಲಿ ಟಿಡಿಆರ್ ಬಳಸಿಕೊಂಡು ಭೂ ಸ್ವಾಧೀನ ಮಾಡಲಾಗುತ್ತಿದೆ. ರಸ್ತೆಗಳ ವಿಸ್ತರಣೆಗೆ ಸ್ವಾಧೀನಪಡಿಸಿಕೊಂಡ ನಿವೇಶನಗಳು ಮತ್ತು ಕಟ್ಟಡಗಳಿಗೆ ಪರ್ಯಾಯವಾಗಿ ನೀಡುವ ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್) ಇದಾಗಿದೆ. ಈ ಹಕ್ಕು ಬಳಸಿಕೊಂಡ ಭೂ ಮಾಲಕರು ಜಿ+3 ಅಥವಾ 4 ಮನೆಯನ್ನು ನಿರ್ಮಿಸಬಹುದು ಇಲ್ಲವೇ ಅಭಿವೃದ್ಧಿ ಹಕ್ಕುಗಳನ್ನು ಡೆವಲಪರ್‌ಗೆ ಮಾರಾಟ ಮಾಡಿ ಅಧಿಕ ಹಣವನ್ನು ಪಡೆಯಬಹುದಾಗಿದೆ. ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಬೈಲೂರು- ಮಿಶನ್ ಕಂಪೌಡ್ ರಸ್ತೆ ವಿಸ್ತರಣೆ ಸಂದರ್ಭ ಸಂತ್ರಸ್ತರು ಕಳೆದುಕೊಂಡ ಭೂಮಿ ಒಂದೂವರೆ ಪಟ್ಟು ಅಭಿವೃದ್ಧಿ ಹಕ್ಕುಗಳ ವರ್ಗಾವಣೆ ಪತ್ರ ಸಿಗಲಿದೆ.
ಭೂಸ್ವಾಧೀನ
ಕಳೆದ ಒಂದೂವರೆ ವರ್ಷದಿಂದ ನನೆಗುದಿಗೆ ಬಿದ್ದ ಬೈಲೂರು – ಮಿಶನ್ ಕಂಪೌಂಡ್ ರಸ್ತೆ ವಿಸ್ತರಣೆ ಕಾಮಗಾರಿ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭವಾಗಿದೆ. ಬೈಲೂರಿನಿಂದ ಸುಮಾರು 500 ಮೀಟರ್ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಮಿಶನ್ ಕಾಂಪೌಂಡ್‌ನಿಂದ ಕೊರಂಗ್ರಪಾಡಿ ವರೆಗಿನ ಸುಮಾರು 1.5 ಕಿ. ಮೀ. ರಸ್ತೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಖಾಸಗಿ ಜಾಗದಲ್ಲಿ ಮಾಡಬೇಕಾದ ಹಿನ್ನೆಲೆಯಲ್ಲಿ ಕಾಮಗಾರಿ ಕುಂಠಿತವಾಗಿತ್ತು.
ಶೀಘ್ರದಲ್ಲಿ ಕಾಮಗಾರಿ
ಬೈಲೂರು- ಮಿಶನ್ ಕಂಪೌಂಡ್ ರಸ್ತೆ ವಿಸ್ತರಣೆ 4.50 ಕೋ.ರೂ. ವೆಚ್ಚದಲ್ಲಿ ನಡೆಯುತ್ತಿದೆ. ಎರಡು ಕಡೆಗಳಲ್ಲಿ 47 ಸರ್ವೆ ನಂಬರ್ ಜಾಗಗಳ ಭೂಸ್ವಾಧೀನ ಪ್ರಕ್ರಿಯೆ ನಡೆಯಲಿದೆ. 3 ಮನೆಗಳು ಹಾಗೂ ವಾಣಿಜ್ಯ ಕಟ್ಟಡಗಳ ಭೂಸ್ವಾಧೀನವಾಗಲಿದೆ. ಜನರು ಸ್ವಯಂ ಪ್ರೇರಣೆಯಿಂದ ಭೂಮಿ ನೀಡಲು ಸಿದ್ಧರಾಗಿದ್ದು, ಭೂಸ್ವಾಧೀನ ಮುಗಿದ ತತ್‌ಕ್ಷಣ ಕಾಮಗಾರಿ ಪ್ರಾರಂಭವಾಗಲಿದೆ.
ಒತ್ತಡ ಕಡಿಮೆ
ಬಲೈಪಾದೆ ಟ್ರಾಫಿಕ್ ಜಾಮ್ ಅದರೆ ಉಡುಪಿಯ ನಗರವನ್ನು ಪ್ರವೇಶಿಸುವ ಏಕ ಮಾತ್ರ ರಸ್ತೆ ಇದಾಗಿದೆ. ಹಿಂದೆ ರಸ್ತೆಯನ್ನು ರಿಂಗ್ ರೋಡ್ ಆಗಿ ಮಾಡುವಂತೆ ಒತ್ತಡಗಳು ಬಂದಿತ್ತು. ಪ್ರಸ್ತುತ ರಸ್ತೆ 20-25 ಮೀಟರ್ ಅಗಲವಿದೆ. ಅದನ್ನು 40 ಮೀಟರ್‌ಗೆ ವಿಸ್ತರಿಸಲು ನಗರಸಭೆ ನಿರ್ಧರಿಸಿದ್ದು, ಎರಡೂ ಕಡೆಗಳಲ್ಲಿ 20 ಮೀ. ಜಾಗ ಭೂಸ್ವಾಧೀನವಾಗಲಿದೆ.
ಟಿಡಿಆರ್ ಪತ್ರ
ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಭೂಮಿಯನ್ನು ರಸ್ತೆ ಅಭಿವೃದ್ಧಿಗೆ ಬಿಟ್ಟುಕೊಟ್ಟಿದ್ದಾರೆ. ಅವರಿಗೆ ಟಿಡಿಆರ್ ಪತ್ರವನ್ನು ನೀಡಲಾಗುತ್ತದೆ. ಕಳೆದ ಒಂದೂವರೆ ವರ್ಷದಿಂದ ಭೂಸ್ವಾಧೀನವಾಗದ ಹಿನ್ನೆಲೆ ಕಾಮಗಾರಿ ನಿಧಾನಗೊಂಡಿತ್ತು.
– ಮೋಹನ್ ರಾಜ್, ಎಇಇ ಉಡುಪಿ ನಗರಸಭೆ
ಆರ್ಥಿಕ ಹೊರೆ ಕಡಿಮೆ
ಈ ಹಿಂದೆ ನಗರಸಭೆ ವ್ಯಾಪ್ತಿಯಲ್ಲಿ ಟಿಡಿಆರ್ ಮೂಲಕ ಭೂ ಸ್ವಾಧೀನ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ಮಿಶನ್ ಕಂಪೌಂಡ್ ರಸ್ತೆ ವಿಸ್ತರಣೆಯಲ್ಲಿ ಜಾಗ ಕಳೆದುಕೊಂಡವರಿಗೆ ಟಿಡಿಆರ್ ಪತ್ರ ನೀಡಲಾಗುತ್ತದೆ. ಆ ಮೂಲಕ ಸ್ಥಳೀಯಾಡಳಿತದ ಮೇಲಿನ ಆರ್ಥಿಕ ಹೊರೆ ಕಡಿಮೆ ಆಗಲಿದೆ.
-ಕೆ.ರಘುಪತಿ ಭಟ್, ಶಾಸಕ ಉಡುಪಿ.
ಟಿಡಿಆರ್ ಪತ್ರ ಭರವಸೆ
ರಸ್ತೆಯ ಅಭಿವೃದ್ಧಿಗೆ ಜಾಗ ನೀಡುವುದು ನಮ್ಮ ಕರ್ತವ್ಯ. ನಗರಸಭೆ ಅಧಿಕಾರಿಗಳು ಭೂಸ್ವಾಧೀನಗೊಂಡ ಜಾಗಕ್ಕೆ ಟಿಡಿಆರ್ ಪತ್ರ ನೀಡುವುದಾಗಿ ಭರವಸೆ ನೀಡಿದ್ದಾರೆ.
-ಸಿಸಿಲಿ ಪೀಟರ್, ಮಿಶನ್ ಕಂಪೌಂಡ್ ನಿವಾಸಿ.
– ತೃಪ್ತಿ ಕುಮ್ರಗೋಡು