ರಂಗದಲ್ಲೇ ಅಸ್ವಸ್ಥರಾದ ಖ್ಯಾತ ಕಲಾವಿದ ತೀರ್ಥಹಳ್ಳಿ ಗೋಪಾಲಾಚಾರ್ ;
Team Udayavani, Aug 10, 2018, 9:44 PM IST
ಉಡುಪಿ: ಬಡಗು ಯಕ್ಷರಂಗದ ಸುಪ್ರಸಿದ್ಧ ವೇಷಧಾರಿ ತೀರ್ಥಹಳ್ಳಿ ಗೋಪಾಲಾಚಾರ್ ಅವರು ಶುಕ್ರವಾರದಂದು ಪಾತ್ರನಿರ್ವಹಿಸುತ್ತಿದ್ದ ಸಂದರ್ಭದಲ್ಲೇ ರಂಗದಲ್ಲಿ ತಲೆಸುತ್ತುಬಂದು ಅಸ್ವಸ್ಥಗೊಂಡ ಘಟನೆ ವರದಿಯಾಗಿದೆ. ಅದೃಷ್ಟವಶಾತ್ ಗೋಪಾಲಾಚಾರ್ ಅವರ ಆರೋಗ್ಯಸ್ಥಿತಿ ಇದೀಗ ಸುಧಾರಿಸುತ್ತಿದ್ದು ಅವರ ಅಭಿಮಾನಿಗಳಲ್ಲಿ ಮನೆಮಾಡಿದ್ದ ಆತಂಕ ದೂರವಾದಂತಾಗಿದೆ.
‘ನಾನು ಆರಾಮವಾಗಿದ್ದೇನೆ…ಚಿಂತೆ ಬೇಡ…’ : ಘಟನೆಯ ಬಳಿಕ ಚೌಕಿಯಲ್ಲಿ ವೇಷ ಕಳಚುತ್ತಿರುವ ತೀರ್ಥಹಳ್ಳಿ ಗೋಪಾಲಾಚಾರ್
ಘಟನೆಯ ವಿವರ:
ಉಡುಪಿಯ ಪೂರ್ಣಪ್ರಜ್ಞಾ ಆಡಿಟೋರಿಯಂನಲ್ಲಿ ಇಂದು ಬಡಗುತಿಟ್ಟಿನ ಖ್ಯಾತನಾಮ ಕಲಾವಿದರ ಒಗ್ಗೂಡುವಿಕೆಯಲ್ಲಿ ‘ಶ್ರೀ ಕೃಷ್ಣ ಪಾರಿಜಾತ ಮತ್ತು ಶರಸೇತು ಬಂಧನ’ ಎಂಬ ಎರಡು ಯಕ್ಷಗಾನ ಪ್ರದರ್ಶನಗಳನ್ನು ಆಯೋಜಿಸಲಾಗಿತ್ತು. ಇದರಲ್ಲಿ ಪ್ರಥಮ ಪ್ರಸಂಗವಾಗಿದ್ದ ಶ್ರೀ ಕೃಷ್ಣ ಪಾರಿಜಾತದಲ್ಲಿ ತೀರ್ಥಹಳ್ಳಿ ಗೋಪಾಲಾಚಾರ್ ಅವರು ಶ್ರೀ ಕೃಷ್ಣನ ಪಾತ್ರವನ್ನು ಅಮೋಘವಾಗಿ ನಿರ್ವಹಿಸುತ್ತಿದ್ದರು. ಇನ್ನೇನು ಪ್ರಸಂಗ ಮುಗಿಯುವ ಹಂತದಲ್ಲಿ ಇದೆ ಎನ್ನುವ ಸಂದರ್ಭದಲ್ಲಿ ಸತ್ಯಭಾಮೆಯೊಂದಿಗಿನ ಸಂಭಾಷಣೆಯ ಸಮಯದಲ್ಲಿ ತೀರ್ಥಹಳ್ಳಿಯವರಿಗೆ ಇದ್ದಕ್ಕಿದ್ದಂತೆ ತಲೆಸುತ್ತುಬಂದಿದೆ. ಇದನ್ನು ತಕ್ಷಣವೇ ಗುರುತಿಸಿದ ಬಡಗಿನ ಇನ್ನೋರ್ವ ಖ್ಯಾತ ಸ್ತ್ರೀವೇಷಧಾರಿ ಶಶಿಕಾಂತ್ ಶೆಟ್ಟಿ ಕಾರ್ಕಳ ಅವರು ತೀರ್ಥಹಳ್ಳಿ ಅವರನ್ನು ತಕ್ಷಣವೇ ಆಧರಿಸಿ ಹಿಡಿಯುತ್ತಾರೆ. ಆ ಕೂಡಲೇ ಭಾಗವತರಾಗಿದ್ದ ರಾಘವೇಂದ್ರ ಆಚಾರ್ ಸಹಿತ ಹಿಮ್ಮೇಳ ಕಲಾವಿದರು ಅವರನ್ನು ತಕ್ಷಣವೇ ರಂಗದಿಂದ ಚೌಕಿಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಉಪಚಾರವನ್ನು ಮಾಡುತ್ತಾರೆ.
ಈ ಘಟನೆಯಿಂದಾಗಿ ಪ್ರಸಂಗದ ಕೊನೆಯ ದೃಶ್ಯ ಬಾಕಿಯಿರುವಂತೆಯೇ ಪ್ರಸಂಗ ಮುಕ್ತಾಯಗೊಳಿಸಲಾಯಿತು. ವಯೋಸಹಜ ಬಳಲಿಕೆಯ ಕಾರಣದಿಂದ ತೀರ್ಥಹಳ್ಳಿಯವರಿಗೆ ಈ ರೀತಿಯಾಗಿದ್ದು ಅವರೀಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಯಕ್ಷಗಾನ ಸಂಘಟಕ ಮತ್ತು ಕಲಾವಿದ ವಾಸುದೇವ ರಂಗಭಟ್ಟರು ತಿಳಿಸಿದರು. ತಕ್ಷಣವೇ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು ಯಾವುದೇ ಆತಂಕಪಡುವ ಅಗತ್ಯ ಇಲ್ಲವೆಂದು ವೈದ್ಯರು ತಿಳಿಸಿದ್ದಾರೆ.
ದಯವಿಟ್ಟು ಅಪಪ್ರಚಾರ ಬೇಡ ನಾನೆ ರಂಗದಲ್ಲಿ ಅವರ ಜೊತೆಗಿದ್ದೆ , ಶುಗರ್ ಲೋ ಆಗಿ ತಲೆತಿರುಗಿತು, ನಾನೆ ಅವರನ್ನು ಒಳಗೆ ಕರೆದೊಯ್ದು ವೇಷ ಬಿಡಿಸಿ ಉಪಚರಿಸಿದೆ, ಈಗ ಸುದಾರಿಸಿಕೊಂಡಿದ್ದಾರೆ ,ಆರೋಗ್ಯವಾಗಿದ್ದಾರೆ.
– ಶಶಿಕಾಂತ್ ಶೆಟ್ಟಿ ಕಾರ್ಕಳ, ಕಲಾವಿದರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.