ಕಳತ್ತೂರು – ಗುರ್ಮೆ ಸೇತುವೆ ರಕ್ಷಿಸಲು ಮರಳು ಚೀಲ ಅಳವಡಿಕೆ
Team Udayavani, Jul 25, 2018, 2:50 AM IST
ಕಾಪು: ಭಾರೀ ಮಳೆ ಮತ್ತು ನೆರೆಯಿಂದಾಗಿ ಅಡಿಪಾಯ ಕುಸಿದು ಅಪಾಯದ ಸ್ಥಿತಿ ಎದುರಿಸುತ್ತಿದ್ದ ಕಳತ್ತೂರು – ಗುರ್ಮೆ ಸೇತುವೆ ರಕ್ಷಿಸಿ, ಸಂಚಾರಕ್ಕೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ತಾತ್ಕಾಲಿಕ ತಡೆಗೋಡೆ ರಚನೆಯ ತುರ್ತು ಪರಿಹಾರ ಕಾರ್ಯಕ್ಕೆ ಚಾಲನೆ ದೊರಕಿದೆ.
ಬೆಳಕು ಚೆಲ್ಲಿದ ವರದಿ
ಕಳತ್ತೂರು – ಗುರ್ಮೆ – ಪೈಯ್ನಾರು – ಬೆಳಪು ನಡುವಿನ ಪ್ರಧಾನ ಸಂಪರ್ಕ ಸೇತುವಾಗಿರುವ ಗುರ್ಮೆ ಸೇತುವೆಯ ಪಿಲ್ಲರ್ ನ ಅಡಿಪಾಯ ಕುಸಿದು ಸೇತುವೆ ಮೇಲಿನ ಸಂಚಾರಕ್ಕೆ ಅಪಾಯವುಂಟಾಗಿರುವ ಬಗ್ಗೆ ಉದಯವಾಣಿಯಲ್ಲಿ ಸಚಿತ್ರ ಲೇಖನ ಪ್ರಕಟವಾಗಿತ್ತು. ವರದಿ ಪ್ರಕಟಗೊಂಡ ಬಳಿಕ ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯೆ ಶಿಲ್ಪಾ ಜಿ. ಸುವರ್ಣ ಅವರು ಸೋಮವಾರ ಇದಕ್ಕೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಸಮಸ್ಯೆಯನ್ನು ಪರಿಹರಿಸಿಕೊಡುವಂತೆ ಸೂಚನೆ ನೀಡಿದ್ದರು.
ಹತ್ತು ದಿನಗಳ ಒಳಗಾಗಿ ಕಾಮಗಾರಿ ಪೂರ್ಣ
ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಎಂಜಿನಿಯರ್ ಸ್ಥಳ ಪರಿಶೀಲನೆ ನಡೆಸಿ, ತುರ್ತಾಗಿ ಮರಳು ಚೀಲಗಳನ್ನು ಇರಿಸಿ ಸೇತುವೆ ರಕ್ಷಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂಬ ಭರವಸೆ ನೀಡಿದ್ದರು. ಅದರಂತೆ ಮಂಗಳವಾರದಿಂದಲೇ ಮರಳು ಚೀಲ ಅಳವಡಿಕೆ ಕಾಮಗಾರಿ ಆರಂಭಿಸಿದ್ದು, ಹತ್ತು ದಿನಗಳ ಒಳಗಾಗಿ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ.
ಕುತ್ಯಾರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಜನಿ, ಸಮಾಜ ಸೇವಕ ಸುರೇಶ್ ಶೆಟ್ಟಿ ಗುರ್ಮೆ, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಪ್ರವೀಣ್ ಕುಮಾರ್ ಗುರ್ಮೆ, ಗುತ್ತಿಗೆದಾರ ಕಿಶೋರ್ ಕುಮಾರ್ ಗುರ್ಮೆ ಕಾಮಗಾರಿಯನ್ನು ಪರಿಶೀಲಿಸಿದರು.
ಎಚ್ಚೆತ್ತ ಅರಣ್ಯ ಇಲಾಖೆ
ಗುರ್ಮೆ ಹೊಳೆಯಲ್ಲಿ ನೀರು ಸರಾಗವಾಗಿ ಹರಿದು ಹೋಗಲು ತಡೆಯುಂಟು ಮಾಡುತ್ತಿದ್ದ ಬೃಹತ್ ಮರ ತೆರವುಗೊಳಿಸಲು ಅರಣ್ಯ ಇಲಾಖೆಯೂ ಮುಂದಾಗಿದೆ. ಮಂಗಳವಾರ ಬೆಳಗ್ಗಿನಿಂದಲೇ ಹೊಳೆಯಲ್ಲಿ ಅಡ್ಡಲಾಗಿ ಬಿದ್ದಿರುವ ಮರಗಳ ತೆರವು ಕಾಮಗಾರಿಗೆ ಚಾಲನೆ ನೀಡಿದ್ದು ಹೊಳೆಯಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಬೇಕಾಗುವ ವ್ಯವಸ್ಥೆ ಮಾಡಿಕೊಡುವುದಾಗಿ ಅರಣ್ಯ ಇಲಾಖೆ ಸಿಬಂದಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.