Udupi ಇನ್ನೂ ನಡೆಯದ ಟೆಂಡರ್ ಪ್ರಕ್ರಿಯೆ; ರಾಜ್ಯದಲ್ಲಿ ಅಗ್ನಿಶಾಮಕ ವಾಹನ ಕೊರತೆ
Team Udayavani, May 4, 2024, 7:15 AM IST
ಉಡುಪಿ: ನಿರ್ದಿಷ್ಟ ಅವಧಿ ಪೂರೈಸಿರುವ ವಾಹನಗಳನ್ನು ಗುಜರಿಗೆ ಹಾಕಬೇಕು ಎಂಬ ಕೇಂದ್ರ ಸರಕಾರದ ಗುಜರಿ ನೀತಿಯಿಂದ ಅಗ್ನಿಶಾಮಕದಳದಲ್ಲಿ ವಾಹನಗಳ ಕೊರತೆ ಎದುರಾಗಿದೆ.
ರಾಜ್ಯದ 31 ಜಿಲ್ಲೆಗಳಲ್ಲಿಯೂ ಈ ಸಮಸ್ಯೆ ಇದೆ. ಬೇಸಗೆಯಲ್ಲಿ ಕಾಳ್ಗಿಚ್ಚು ಸಹಿತ ಅಗ್ನಿ ಅವಘಡಗಳು ಅಧಿಕ ಸಂಖ್ಯೆಯಲ್ಲಿ ಸಂಭವಿಸುತ್ತಿದ್ದು, ಉಡುಪಿ ಹಾಗೂ ದ.ಕ. ಜಿಲ್ಲೆಯಲ್ಲಿಯೇ ಈ ವರ್ಷ 200ಕ್ಕೂ ಅಧಿಕ ಅಗ್ನಿ ಸಹಿತ ವಿವಿಧ ಅವಘಡಗಳು ದಾಖಲಾಗಿವೆ.
ರಾಜ್ಯದ ಒಟ್ಟು 400 ಅಗ್ನಿಶಾಮಕ ವಾಹನಗಳ ಪೈಕಿ 284 ವಾಹನಗಳು 15 ವರ್ಷಕ್ಕೂ ಹಳೆಯದ್ದು. ಪ್ರಸ್ತುತ ಲಭ್ಯ ಇರುವ ವಾಹನಗಳನ್ನೇ ಬಳಸುವಂತೆ ಸರಕಾರ ಸೂಚನೆ ನೀಡಿದೆ. ಪ್ರತೀ ಅಗ್ನಿಶಾಮಕ ಠಾಣೆಗೂ ದಿನಕ್ಕೆ ಕನಿಷ್ಠ 10ಕ್ಕೂ ಅಧಿಕ ಕರೆಗಳು ಬರುತ್ತಿದ್ದು, ಏಕಕಾಲದಲ್ಲಿ ಎಲ್ಲವನ್ನೂ ನಿಭಾಯಿಸುವುದು ಕಷ್ಟಸಾಧ್ಯ. ಕೆಲವೆಡೆ ಟ್ಯಾಂಕ್ ನೀರಿನ ಮೂಲಕ ಬೆಂಕಿನಂದಿಸಲು ಯತ್ನಿಸಿರುವ ಉದಾಹರಣೆಗಳೂ ಇವೆ.
ಉತ್ತಮ ಸ್ಥಿತಿಯಲ್ಲಿದ್ದರೂ
ಕಾರ್ಯನಿರ್ವಹಿಸುವಂತಿಲ್ಲ!
ಕೆಲವು ಅಗ್ನಿಶಾಮಕ ವಾಹನಗಳು 30-35 ವರ್ಷ ಮೇಲ್ಪಟ್ಟವಾಗಿದ್ದರೂ ಉತ್ತಮ ಸ್ಥಿತಿಯಲ್ಲಿವೆ. ಆದರೆ ಸರಕಾರದ ಮಾರ್ಗಸೂಚಿ ಪ್ರಕಾರ ಬಳಸುವಂತಿಲ್ಲ. ಪರಿಣಾಮ ಠಾಣೆಯಲ್ಲಿ ವಾಹನ ಇದ್ದೂ ಇಲ್ಲದಂತಾಗಿದೆ. ಜಿಲ್ಲಾ ಕೇಂದ್ರ ಕಚೇರಿ ಹೊರತುಪಡಿಸಿ ಎಲ್ಲ ಅಗ್ನಿಶಾಮಕ ಠಾಣೆಗಳಲ್ಲಿಯೂ ತಲಾ 2 ವಾಹನಗಳು ಇರಬೇಕು. ಪ್ರಸ್ತುತ ಒಂದೊಂದೇ ವಾಹನಗಳು ಕಾರ್ಯನಿರ್ವಹಿಸುತ್ತಿವೆ. ಉಡುಪಿ ಜಿಲ್ಲೆಯ ಮಲ್ಪೆ ಸಹಿತ ಕೆಲವೊಂದು ಠಾಣೆಗಳಲ್ಲಿ ವಾಹನವೇ ಇಲ್ಲ. ಕೇಂದ್ರ ಕಚೇರಿಯಲ್ಲಿ 3 ವಾಹನಗಳ ಪೈಕಿ ಕೆಲವೆಡೆ 2 ಮತ್ತೆ ಕೆಲವೆಡೆ 1 ವಾಹನಗಳಷ್ಟೇ ಕಾರ್ಯನಿರ್ವಹಿಸುತ್ತಿವೆ.
ಇನ್ನಷ್ಟೇ ನಡೆಯಬೇಕಿದೆ
ಟೆಂಡರ್ ಪ್ರಕ್ರಿಯೆ: ಪ್ರಾಕೃತಿಕ ವಿಪತ್ತು ಮಾನದಂಡಗಳ ಪ್ರಕಾರ ಸರಕಾರದ ಅನುಮೋದನೆ ಪಡೆಯ ಬೇಕಿದೆ. ಅಗ್ನಿಶಾಮಕದಳದ ವಾಹನಗಳಿಗೆ ಕೆಲವೊಂದು ಮಾನದಂಡ ಗಳಿರುವ ಕಾರಣ ಯಾವುದೇ ಕಂಪೆನಿಗಳು ಅದನ್ನು ಉತ್ಪಾದಿಸು ವಂತಿಲ್ಲ. ಬೇರೆ-ಬೇರೆ ಸಲಕರಣೆ (ಪಾರ್ಟ್ಸ್)ಗಳನ್ನು ಖರೀದಿಸಿ ಅನಂತರ ಸಿದ್ಧಪಡಿಸಬೇಕಿದೆ. ಇದು ಬಹಳಷ್ಟು ವಿಳಂಬಿತ ಪ್ರಕ್ರಿಯೆ. ಕಳೆದ ಅಧಿವೇಶನ ದಲ್ಲಿಯೂ ಈ ಬಗ್ಗೆ ಚರ್ಚೆ ನಡೆದಿತ್ತು.ಆದರೆ ಇದುವರೆಗೂ ಟೆಂಡರ್ ಪ್ರಕ್ರಿಯೆ ನಡೆಯದ ಕಾರಣ ಮತ್ತಷ್ಟು ವರ್ಷಗಳ ಕಾಲ ಲಭ್ಯ ಇರುವ ವಾಹನಗಳಲ್ಲಿಯೇ ದಿನದೂಡಬೇಕಾದ ಅನಿವಾರ್ಯ ಎದುರಾಗಿದೆ.
ಗ್ರಾಮೀಣ ಭಾಗದಲ್ಲಿ
ಅಧಿಕ ಅವಘಡ
ನಗರಕ್ಕೆ ಹೋಲಿಸಿದರೆ ಗ್ರಾಮೀಣ ಭಾಗದಲ್ಲಿ ಅಗ್ನಿ ಅವಘಡಗಳು ಅಧಿಕ. ಮುಖ್ಯವಾಗಿ ಹುಲ್ಲು, ಕಾಡು, ಅರಣ್ಯ ಭಾಗದಲ್ಲಿ ಬೆಂಕಿ ಅನಾಹುತ ಸಂಭವಿಸುತ್ತಿರುತ್ತದೆ. ಪ್ರಸ್ತುತ ಬಿಸಿಲಿನ ತಾಪಮಾನವೂ ಅಧಿಕವಾಗಿರುವ ಕಾರಣ ಬೆಂಕಿಯ ಪ್ರಮಾಣವೂ ಹೆಚ್ಚು. ಏಕಕಾಲದಲ್ಲಿ ಕರೆಗಳು ಬಂದಾಗ ಸಮೀಪದ ತಾಲೂಕು ಕೇಂದ್ರಗಳ ನೆರವು ಪಡೆಯಬೇಕಾಗಿದೆ. ನಗರಭಾಗದಲ್ಲಿ ಅವಘಡಗಳು ಕಡಿಮೆಯಾದರೂ ಅವಘಡ ಸಂಭವಿಸಿದರೆ ಹಾನಿಯ ತೀವ್ರತೆ ಹೆಚ್ಚಿರುತ್ತದೆ.
ಉಡುಪಿ, ದ.ಕ. ಸ್ಥಿತಿಗತಿ
ಉಡುಪಿ ಜಿಲ್ಲೆಯ ಅಜ್ಜರಕಾಡು, ಮಲ್ಪೆ, ಕುಂದಾಪುರ, ಬೈಂದೂರು, ಕಾರ್ಕಳ, ದ.ಕ. ಜಿಲ್ಲೆಯ ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಮೂಡುಬಿದಿರೆ, ಕದ್ರಿ, ಪಾಂಡೇಶ್ವರದಲ್ಲಿ ಅಗ್ನಿಶಾಮಕ ಠಾಣೆಗಳಿವೆ. ಅಜ್ಜರಕಾಡು ಕೇಂದ್ರ ಠಾಣೆಯಲ್ಲಿ 2 ವಾಹನಗಳ ಪೈಕಿ ಒಂದಷ್ಟೇ ಕಾರ್ಯಾಚರಿಸುತ್ತಿದೆ. ಪಾಂಡೇಶ್ವರದಲ್ಲಿ 3 ವಾಹನಗಳ ಪೈಕಿ 2 ಮಾತ್ರ ಕಾರ್ಯಾಚರಣೆಯಲ್ಲಿವೆ.
ಉಡುಪಿ ಜಿಲ್ಲೆಯಲ್ಲಿ ಈ ವರ್ಷ 98 ಹಾಗೂ ದ.ಕ. ಜಿಲ್ಲೆಯಲ್ಲಿ 100ಕ್ಕೂ ಅಧಿಕ ಅಧಿಕ ಬೆಂಕಿ ಅವಘಡಗಳು ಸಂಭವಿಸಿವೆ. ಬಂಟ್ವಾಳದಲ್ಲಿ ಇಬ್ಬರು ಈ ವರ್ಷವೇ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದ್ದರು.
ಅಗ್ನಿಶಾಮಕ ವಾಹನಗಳ ಕೊರತೆ ಬಗ್ಗೆ ಈಗಾಗಲೇ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಈ ಪ್ರಕ್ರಿಯೆ ರಾಜ್ಯಮಟ್ಟದಲ್ಲಿ ನಡೆಯುವಂಥದ್ದು. ಪ್ರಸ್ತುತ ಲಭ್ಯ ವಾಹನಗಳನ್ನು ಬಳಸುತ್ತಿದ್ದೇವೆ. ಏಕಕಾಲದಲ್ಲಿ ವಿವಿಧೆಡೆಗಳಿಂದ ಬೇಡಿಕೆ ಬಂದರೆ ತತ್‌ಕ್ಷಣದ ಕಾರ್ಯಾಚರಣೆ ಕಷ್ಟಸಾಧ್ಯವೆನಿಸುತ್ತದೆ.
– ವಿನಾಯಕ ಕಲ್ಗುಟ್ಕರ್ / ಭರತ್ ಕುಮಾರ್,
ಅಗ್ನಿಶಾಮಕ ಅಧಿಕಾರಿಗಳು, ಉಡುಪಿ ಮತ್ತು ದ.ಕ. ಜಿಲ್ಲೆ
– ಪುನೀತ್ ಸಾಲ್ಯಾನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.