ಬೆನಗಲ್ ತರಕಾರಿ ಬೆಳೆಗಾರರ ಸಂಘ ಯಶಸ್ವಿ ಪ್ರಯೋಗ
Team Udayavani, May 21, 2018, 2:35 AM IST
ಬ್ರಹ್ಮಾವರ: ರೈತರು ಬೆಳೆದ ಬೆಳೆಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಿ ಹೆಚ್ಚಿನ ಲಾಭ ಗಳಿಸುವ ಪ್ರಯೋಗವೊಂದು ಯಶಸ್ವಿಯಾಗಿದೆ. ಕೊಕ್ಕರ್ಣೆಯ ಬೆನಗಲ್ ತರಕಾರಿ ಬೆಳೆಗಾರರ ಸೌಹಾರ್ದ ಸೊಸೈಟಿ ಹೊಸ ಪರಿಕಲ್ಪನೆಗೆ ಮುನ್ನುಡಿಯಾಗಿದೆ.ಹಣ್ಣು, ತರಕಾರಿ ಬೆಳೆದ ರೈತರಿಗೂ, ಖರೀದಿಸುವ ಗ್ರಾಹಕರಿಗೂ ನೇರ ಸಂಪರ್ಕ ಕಲ್ಪಿಸುವ ವಿನೂತನ ಪ್ರಯೋಗವಿದು. ದಲ್ಲಾಳಿಗಳ ಹಗಲು ದರೋಡೆಗೆ ಕಡಿವಾಣ ಹಾಕುವುದು, ರೈತರಿಗೆ ನ್ಯಾಯಯುತ ಬೆಲೆ ಒದಗಿಸುವುದು , ಗ್ರಾಹಕರಿಗೆ ಕನಿಷ್ಠ ದರದಲ್ಲಿ ತಾಜಾ ತರಕಾರಿ ಒದಗಿಸುವುದು ಸಂಘದ ಉದ್ದೇಶ. ನಬಾರ್ಡ್ ಹಾಗೂ ಮಣಿಪಾಲ ಮಾಹೆ ಸಹಯೋಗದಲ್ಲಿ ಸಂಘ ಕಾರ್ಯ ನಿರ್ವಹಿಸುತ್ತಿದೆ.
ಶೇ.40 ಹೆಚ್ಚಿನ ಬೆಲೆ
ಈ ಯೋಜನೆಯಲ್ಲಿ ಪಾಲ್ಗೊಳ್ಳುವುದರಿಂದ ಕನಿಷ್ಠ ಪಕ್ಷ ಶೇ.40ರಷ್ಟು ಹೆಚ್ಚಿನ ಲಾಭ ದೊರೆಯುತ್ತಿದೆ. ಉದಾಹರಣೆಗೆ ದಲ್ಲಾಳಿಗಳು ಕೆ.ಜಿ.ಗೆ ರೂ.10ರಂತೆ ಖರೀದಿಸಿದರೆ, ನೇರ ಮಾರಾಟದಿಂದ ಎಲ್ಲ ಖರ್ಚು ಹೋಗಿ ಕೆ.ಜಿ.ಗೆ ರೂ.14ರಷ್ಟು ದೊರೆಯುತ್ತದೆ. ಪ್ರಸ್ತುತ ಸಂಘವು ದಿನಕ್ಕೆ ರೂ.10,000 ಮೌಲ್ಯದ ತರಕಾರಿ ವ್ಯಾಪಾರ ಮಾಡುತ್ತಿದೆ.
ತರಕಾರಿ ತವರೂರು
ಬೆನಗಲ್, ಒಳಬೈಲು, ನಿಂಜೂರು ಬೆಟ್ಟು, ಕೊಕ್ಕರ್ಣೆ, ಚೆಗ್ರಿಬೆಟ್ಟು ಮೊದಲಾದ ಪ್ರದೇಶ ತರಕಾರಿಗಳ ತವರೂರು.
ಈ ಭಾಗದಲ್ಲಿ ಕುಡುಬಿ ಜನಾಂಗದ ಸಾಕಷ್ಟು ಮಂದಿ ತರಕಾರಿ ಬೆಳೆಗಾರರಿದ್ದಾರೆ. ಆದ್ದರಿಂದ ಕೊಕ್ಕರ್ಣೆಯ ತರಕಾರಿ ಜಿಲ್ಲೆಯಲ್ಲೇ ಪ್ರಸಿದ್ಧಿ. ವಾರಕ್ಕೆ 20ಕ್ಕೂ ಮಿಕ್ಕಿ ಲೋಡ್ ತರಕಾರಿ ಉಡುಪಿ, ಕಲ್ಯಾಣಪುರಗಳಿಗೆ ಸರಬರಾಜು ಆಗುತ್ತಿದೆ. ಇದೀಗ ಬೆಳೆದ ಉತ್ಪನ್ನಗಳನ್ನು ಕಡಿಮೆ ದರಕ್ಕೆ ವ್ಯಾಪಾರಿಗಳಿಗೆ ನೀಡುವ ಬದಲು ನೇರವಾಗಿ ಗ್ರಾಹಕರಿಗೆ ತಲುಪಿಸುವ ಯೋಜನೆ ರೂಪಿಸಿದ್ದಾರೆ.
ಮೊಬೈಲ್ ವ್ಯಾನ್
ಹಣ್ಣು ತರಕಾರಿಗಳನ್ನು ತುಂಬಿಸಿಕೊಂಡು ಬೆಳಗ್ಗೆ 8 ಗಂಟೆಗೆ ವ್ಯಾನ್ ಕೊಕ್ಕರ್ಣೆಯಿಂದ ಹೊರಡುತ್ತದೆ. ಬೆನಗಲ್ ತರಕಾರಿ ಬೆಳೆಗಾರರ ಸೌಹಾರ್ದ ಸೊಸೈಟಿಯ ಬ್ಯಾನರ್ ಹೊತ್ತ ಈ ವಾಹನ ಮಣಿಪಾಲದ ಟೈಗರ್ ಸರ್ಕಲ್, ಸಿಂಡಿಕೇಟ್ ಸರ್ಕಲ್, ಡಿಸಿ ಆಫೀಸ್ ಸರ್ಕಲ್, ಎಂಐಟಿ ಎದುರುಗಡೆ,
ಆರ್‌ಎಸ್‌ಬಿ ಸಭಾಭವನ ಎದುರು, ಅಂಬಲಪಾಡಿ ಮುಖ್ಯರಸ್ತೆ, ಪರ್ಕಳ, ಆದಿ ಉಡುಪಿ, ಶಿರಿಬೀಡು, ಆತ್ರಾಡಿ ಮೊದಲಾದ ಸ್ಥಳಗಳಲ್ಲಿ ನಿಲುಗಡೆಯಾಗಿ ತರಕಾರಿ ಮಾರಾಟ ಮಾಡಲಾಗುತ್ತದೆ. ಪ್ರತಿ ಶುಕ್ರವಾರ ಕಾರ್ಕಳದ ರೋಟರಿ ಭವನದ ವಠಾರ, ಮಂಗಳವಾರ ಹೊರತು ಪಡಿಸಿ ವಾರದ 6 ದಿನವೂ ಸಂಚರಿಸುತ್ತದೆ.
ಯಾವ ಯಾವ ಸಮಯ ?
ಟೈಗರ್ ಸರ್ಕಲ್‌ನಲ್ಲಿ ಪ್ರತಿನಿತ್ಯ ಸಂಜೆ ಸಂಜೆ 3ರಿಂದ 6 ಗಂಟೆಯ ತನಕ ಮೊಬೈಲ್ ವ್ಯಾನ್ ಇರಲಿದೆ. ಬುಧವಾರ, ರವಿವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಅಂಬಲಪಾಡಿ, ಸಾಯಿರಾ ಕಾಂಪ್ಲೆಕ್ಸ್ ಬಳಿ ಇರಲಿದೆ. ಬೇರೆ ದಿನಗಳಲ್ಲಿ ಮಣಿಪಾಲ ಪರಿಸರದಲ್ಲಿ 2 ಗಂಟೆ ಸಂಚರಿಸುತ್ತದೆ.
ತರಕಾರಿ ಬೆಳೆಯುವ ರೈತರಿಗೆ ಅನುಕೂಲವಾಗುವಂತೆ ತೋಟಗಾರಿಕೆ ಬೆಳೆಗಾರರ ಸಂಘ ಉಡುಪಿ, ಜೆ.ಎಲ್.ಜಿ., ವಿಜಯ ಬ್ಯಾಂಕ್ ಮಂದಾರ್ತಿ ಸಹಯೋಗದಲ್ಲಿ ನಬಾರ್ಡ್ ಯೋಜನೆಯಡಿ ಕನಿಷ್ಠ 5 ಮಂದಿಯ 27 ತಂಡಗಳ ರಚಿಸಲಾಗಿದೆ. ಸಾಲ ಸೌಲಭ್ಯ ಜತೆಗೆ ತರಕಾರಿ ಬೀಜದ ಕಿಟ್, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆಯಿಂದ ಸಿಗುವ ಸವಲತ್ತುಗಳನ್ನು ಕಲ್ಪಿಸಲಾಗುತ್ತಿದೆ.ಸರಕಾರದಿಂದ ದೊಡ್ಡಣಗುಡ್ಡೆಯಲ್ಲಿ ನಡೆಯುವ ವಾರದ ಸಂತೆಯಲ್ಲಿ ಮಾರಾಟ ವ್ಯವಸ್ಥೆ ಕಲ್ಪಿಸುವ ಯೋಜನೆ ಇದೆ.
ಸಮನ್ವಯತೆ ಅಗತ್ಯ
ಪ್ರಸ್ತುತ ರೈತರಲ್ಲಿ ಸಮನ್ವಯತೆ ಹಾಗೂ ಸಂಘಟನೆಯ ಕೊರತೆಯಿಂದ ಒಂದೇ ಬಗೆಯ ತರಕಾರಿಯನ್ನು ಬಹಳಷ್ಟು ಮಂದಿ ಬೆಳೆಯುತ್ತಾರೆ. ಮುಖ್ಯವಾಗಿ ಸೌತೆ, ಗುಂಬಳದಂತ ಬೆಳೆಗಳು ಜಾಸ್ತಿ ಬೆಳೆದಾಗ ದರ ಪಾತಾಳಕ್ಕಿಳಿದು ಕಟಾವು ಮಾಡಿದ ಖರ್ಚು ಹುಟ್ಟದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಬದಲಾಗಿ ಇಂತಹ ಸಂಘದ, ತಂಡದ ಸದಸ್ಯರಾಗವುದರಿಂದ ರೈತರಲ್ಲಿ ಹೊಂದಾಣಿಕೆ ಮೂಡುತ್ತದೆ. ಗ್ರಾಹಕರ ಅಭಿರುಚಿಯೂ ತಿಳಿಯುತ್ತದೆ. ಬೇರೆ ಬೇರೆ ರೈತರು, ಬೇರೆ ಬೇರೆ ಉತ್ಪನ್ನಗಳು ಬೆಳೆಯಲು ಸಾಧ್ಯ. ತನ್ಮೂಲಕ ಮಾರುಕಟ್ಟೆ ನಿಯಂತ್ರಣ ಸಾಧ್ಯವಾಗುತ್ತದೆ.
ಮಾರುಕಟ್ಟೆ ಕಡೆ ಗಮನ ಇರಲಿಲ್ಲ
ಬಹುತೇಕ ರೈತರು ಬೆಳೆ ಬೆಳೆಯುವಲ್ಲಿ ನಿಪುಣರು. ಆದರೆ ಮಾರುಕಟ್ಟೆ ಕುರಿತು ಹೆಚ್ಚಿನ ಗಮನ ಹರಿಸದೆ ಕಡಿಮೆ ದರಕ್ಕೆ ದಲ್ಲಾಳಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಬದಲಾಗಿ ರೈತರ ನಡುವೆ ಹೊಂದಾಣಿಕೆ ತಂದು, ಗ್ರಾಹಕರನ್ನು ನೇರವಾಗಿ ಮುಟ್ಟುವ ಪ್ರಕ್ರಿಯೆ ಇದಾಗಿದೆ.
– ಡಾ| ಹರೀಶ್ ಜೋಶಿ, ಪ್ರೊಫೆಸರ್, ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್, ಮಾಹೆ ಮಣಿಪಾಲ ಹಾಗೂ ನಬಾರ್ಡ್ ನ ಪ್ರೊಜೆಕ್ಟ್ ಕೋ- ಆರ್ಡಿನೇಟರ್.
ನೀರಾವರಿ ಅಗತ್ಯ
ನಾವೇ ಗುಣಮಟ್ಟದ ಬೀಜ ತಯಾರಿಸಿ ಅದರಿಂದಲೇ ತರಕಾರಿ ಬೆಳೆಯುತ್ತೇವೆ. ಬೆಳೆ ವಿಸ್ತರಣೆಗೆ ಇನ್ನಷ್ಟು ನೀರಾವರಿ ಸೌಲಭ್ಯ ಬೇಕು
– ಒಳಬೈಲು ಗೋಪಾಲ ಕೃಷಿಕ
ಬೆಳೆದವರಿಗೆ ಲಾಭ
ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವುದರಿಂದ ಸ್ಥಳೀಯ ಮಾರಾಟಕ್ಕಿಂತ ಹೆಚ್ಚಿನ ದರ ಸಿಗುತ್ತದೆ. ವಿಭಿನ್ನ ತರಕಾರಿ ಬೆಳೆಯಬೇಕು.
– ಶಂಕರ ನಾಯ್ಕ , ಸಂಘದ ಅಧ್ಯಕ್ಷರು
– ಪ್ರವೀಣ್ ಮುದ್ದೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.