ಗುರುಗಳಂತೆ ಪರ್ಯಾಯ ಪೀಠವನ್ನು ಶಿಷ್ಯರಿಗೆ ಬಿಟ್ಟುಕೊಡುವ ಶ್ರೀವಿಶ್ವಪ್ರಿಯತೀರ್ಥರು
Team Udayavani, Jan 15, 2020, 6:59 AM IST
ಉಡುಪಿ: ಭಾವೀ ಪರ್ಯಾಯ ಶ್ರೀಅದಮಾರು ಮಠದ ಪ್ರಸಕ್ತ ಪೀಠಾಧಿಪತಿ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಪರಂಪರೆಯಲ್ಲಿ ಆದ್ಯಯತಿ ಶ್ರೀನರಸಿಂಹತೀರ್ಥರನ್ನು (ನರಹರಿತೀರ್ಥರು) ಸೇರಿಸಿ 32ನೆಯವರು. ಈಗ ನಡೆಯುತ್ತಿರುವುದೂ 32ನೆಯ ದ್ವೆ„ವಾರ್ಷಿಕ ಪರ್ಯಾಯ ಚಕ್ರ. ಈ ಚಕ್ರದಲ್ಲಿ 250ನೆಯ ಪರ್ಯಾಯ.
ಇವರ ಪೂರ್ವಾಶ್ರಮದ ಹೆಸರು ರಾಘವೇಂದ್ರ. ಇವರು ಜನಿಸಿದ್ದು 1958ರ ಜೂ. 30ರಂದು ಮೂಡಬಿದಿರೆ ಸಮೀಪದ ಪುತ್ತಿಗೆಯಲ್ಲಿ. ಇವರ ತಂದೆ ತಾಯಿ ಹೆಸರು ಗುರುರಾಜ ಮುಚ್ಚಿಂತಾಯ ಮತ್ತು ಲಕ್ಷ್ಮೀ. ರಾಘವೇಂದ್ರರಿಗೆ ಎಂಟು ವರ್ಷವಾಗುವಾಗಲೇ 1966ರಲ್ಲಿ ತಿರುಪತಿ ಶ್ರೀನಿವಾಸನ ಸನ್ನಿಧಿಯಲ್ಲಿ ಉಪನಯನ ಸಂಸ್ಕಾರವಾಯಿತು.
ಮುಳಿಹುಲ್ಲಿನ ಶಾಲೆ, ಸೆಗಣಿ ಹಾಕಿದ ನೆಲ
ಮೊದಲ ನಾಲ್ಕು ತರಗತಿಗಳನ್ನು ಪುತ್ತಿಗೆ ಸಮೀಪದ ಕುಂಗೂರು ಸರಕಾರಿ ಶಾಲೆಯಲ್ಲಿ ಪೂರೈಸಿದರೆ, ಮತ್ತೆ ನಾಲ್ಕು ತರಗತಿಗಳನ್ನು ಪಲಿಮಾರಿನ ಸರಕಾರಿ ಶಾಲೆಯಲ್ಲಿ ಕಲಿತರು. ಕುಂಗೂರು ಶಾಲೆ ಆಗ ಮುಳಿಹುಲ್ಲಿನ ಮಾಡಿನಿಂದ ಕೂಡಿತ್ತು. ಇಬ್ಬರು ಶಿಕ್ಷಕರು. ಎರಡೇ ಕೊಠಡಿಯಲ್ಲಿ ನಾಲ್ಕು ತರಗತಿಗಳು ನಡೆಯುತ್ತಿದ್ದರೆ, ಒಬ್ಬ ಶಿಕ್ಷಕರು ಎರಡು ತರಗತಿಗಳನ್ನು ನೋಡಿಕೊಳ್ಳುತ್ತಿದ್ದರು. ನೆಲಕ್ಕೆ ವಿದ್ಯಾರ್ಥಿಗಳೇ ಸೆಗಣಿ ಹಾಕಿ ಸಾರಿಸಬೇಕಿತ್ತು. ಒಂದನೆಯ ತರಗತಿಯಲ್ಲಿ ಓದುವಾಗ ಎರಡನೆಯ ತರಗತಿ ಪಾಠ ಗೊತ್ತಿದೆ ಎಂಬ ಕಾರಣಕ್ಕೆ ಎರಡನೆಯ ತರಗತಿಯಲ್ಲಿ ಕುಳ್ಳಿರಿಸಲಾಯಿತು. ಹೀಗೆ ನಾಲ್ಕೂ ವರ್ಷ ಮುಂದುವರಿಯಿತು ಎಂಬ ತಮ್ಮ ಹಳೆಯ ಅನುಭವಗಳನ್ನು ಶ್ರೀವಿಶ್ವಪ್ರಿಯತೀರ್ಥರು ಬಿಚ್ಚಿಡುತ್ತಾರೆ.
ಗಂಜಿ ಮಾಡಿದ ಅನುಭವ
ಪಲಿಮಾರು ಮಠದಲ್ಲಿ ಉಳಿದುಕೊಂಡು ನಾಲ್ಕು ವರ್ಷ ಓದುವಾಗ ಇದ್ದ 10-12 ವಿದ್ಯಾರ್ಥಿಗಳು ಜತೆಗೂಡಿ ಬೆಳಗ್ಗೆ ಗಂಜಿಯನ್ನು ಬೇಯಿಸಬೇಕಿತ್ತು. ರಾತ್ರಿ ಅಡುಗೆಯವರು ಬಾರದೆ ಇದ್ದರೆ ಇವರೇ ಮಾಡಿಕೊಳ್ಳಬೇಕಿತ್ತು. ದೇವರ ಪೂಜೆಗೆ ಬೇಕಾದ ಹೂವು, ತುಳಸಿಗಳನ್ನು ತಂದು ಕೊಡುವ ಸೇವೆ ಮಾಡುತ್ತಿದ್ದರು. “ಆಗಿನದು ಸಂತೃಪ್ತಿಯ, ಪ್ರಶಾಂತದ, ನೆಮ್ಮದಿಯ ಜೀವನ’ ಎನ್ನುತ್ತಾರೆ ಶ್ರೀಪಾದರು.
ಉನ್ನತ ಶಾಸ್ತ್ರಾಧ್ಯಯನ
1972ರಲ್ಲಿ ಶ್ರೀವಿಬುಧೇಶತೀರ್ಥರು ತಂದೆ ಮೂಲಕ ಸನ್ಯಾಸ ಕೊಡುವುದಾಗಿ ಹೇಳಿ ಕಳುಹಿಸಿದರು. ಶ್ರೀವಿಬುಧೇಶತೀರ್ಥರು ಪರ್ಯಾಯ ಪೀಠಾಧೀಶ್ವರರಾಗಿರುವಾಗ ಶ್ರೀಕೃಷ್ಣಮಠದಲ್ಲಿ 1972ರ ಮೇ 30ರಂದು ಶ್ರೀವಿಶ್ವಪ್ರಿಯತೀರ್ಥರೆಂದು ನಾಮಕರಣಗೊಳಿಸಿ ಮಠದ ಉತ್ತರಾಧಿಕಾರಿಯಾಗಿ ನೇಮಿಸಿದರು. ಆಗ ರಾಘವೇಂದ್ರರಿಗೆ 14 ವರ್ಷ ವಯಸ್ಸಾಗಿತ್ತು. ಅದೇ ಸಮಯ ಶ್ರೀವಿಬುಧೇಶತೀರ್ಥರು ಅದಮಾರು ಮೂಲಮಠದಲ್ಲಿ ಗುರುಕುಲವನ್ನು ಆರಂಭಿಸಿದರು. ಗುರುಕುಲದ ಅಧ್ವರ್ಯುವಾಗಿ ಶ್ರೀಪಲಿಮಾರು ಮತ್ತು ಭಂಡಾರಕೇರಿ ಮಠಾಧೀಶರಾಗಿದ್ದ ಶ್ರೀವಿದ್ಯಾಮಾನ್ಯತೀರ್ಥರು ಕಾರ್ಯನಿರ್ವಹಿಸಿದರು. ಶ್ರೀವಿಶ್ವಪ್ರಿಯ ತೀರ್ಥರು, ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥರು, ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥರು, ಭಂಡಾರಕೇರಿ ಮಠದ ಶ್ರೀವಿದ್ಯೆಶತೀರ್ಥರು ಜತೆಯಾಗಿ ಉನ್ನತ ಶಾಸ್ತ್ರಗ್ರಂಥಗಳನ್ನು ಓದಿದರು.
ಎರಡು ಪರ್ಯಾಯಾನುಭವ
ಶ್ರೀವಿಬುಧೇಶತೀರ್ಥರಿಗೆ ಸರದಿಯಂತೆ ಮೂರನೆಯ ಪರ್ಯಾಯ 1988-90ರಲ್ಲಿ ಬರುವಾಗ ಅವರು ಶಿಷ್ಯ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರನ್ನು ಪರ್ಯಾಯಪೀಠದಲ್ಲಿ ಕುಳ್ಳಿರಿಸಿದರು. ಶ್ರೀಕೃಷ್ಣಮಠದ ಇತಿಹಾಸದಲ್ಲಿ ಶ್ರೀವಾದಿರಾಜಸ್ವಾಮಿಗಳ ಬಳಿಕ ಶಿಷ್ಯರನ್ನು ಪರ್ಯಾಯ ಪೀಠದಲ್ಲಿ ಕುಳ್ಳಿರಿಸಿದ್ದು ಶ್ರೀವಿಬುಧೇಶತೀರ್ಥರೇ ಮೊದಲಿಗರು, ಹಾಗೆ ಶ್ರೀವೇದವೇದ್ಯತೀರ್ಥರ ಬಳಿಕ ಶಿಷ್ಯನಾಗಿ ಪರ್ಯಾಯ ನಡೆಸಿದ್ದು ಶ್ರೀವಿಶ್ವಪ್ರಿಯತೀರ್ಥರು ಮೊದಲಿಗರು.
ವಿವಿಧ ಅಭಿವೃದ್ಧಿಗಳು
ಈಗ ಇರುವ ಶ್ರೀಕೃಷ್ಣಮಠದ ಭೋಜನ ಶಾಲೆ ಇದೇ ಸಮಯದಲ್ಲಿ ಉದ್ಘಾಟನೆಗೊಂಡಿತು. 2004-06ರಲ್ಲಿ ಎರಡನೆಯ ಬಾರಿಗೆ ಶ್ರೀವಿಶ್ವಪ್ರಿಯತೀರ್ಥರು ಶ್ರೀಕೃಷ್ಣಮಠದಲ್ಲಿ ಪರ್ಯಾಯ ಪೂಜೆಯನ್ನು ನಡೆಸಿದರು. ಈಗ ಉಡುಪಿ ಶ್ರೀಕೃಷ್ಣಮಠದ ಲ್ಯಾಂಡ್ ಮಾರ್ಕ್ ಎಂದು ಗುರುತಿಸಲ್ಪಟ್ಟಿರುವ ಕನಕ ಗೋಪುರವನ್ನು ನಿರ್ಮಿಸಿದ್ದು ಇವರ ಹೆಗ್ಗಳಿಕೆ. ಗುರುಗಳು ನಿರ್ಮಿಸಿದ್ದ ಬೆಳ್ಳಿರಥದ ನವೀಕರಣ ನಡೆಸಿದರು. ಶಾಲೆಗಳು ಶೌಚಾಲಯರಹಿತವಾಗಿರುವುದನ್ನು ಕಂಡು ಮಠದ ಖರ್ಚಿನಿಂದ ಶೌಚಾಲಯವನ್ನು ನಿರ್ಮಿಸಿಕೊಟ್ಟವರು ಶ್ರೀವಿಶ್ವಪ್ರಿಯತೀರ್ಥರು.
ಗುರುಗಳ ಸ್ಥಾನದಲ್ಲಿ
2009ರಿಂದ ಅದಮಾರು ಮಠ ಶಿಕ್ಷಣ ಮಂಡಳಿಯ ಅಧ್ಯಕ್ಷರಾಗಿ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಮಾರ್ಗದರ್ಶನ ಮಾಡುತ್ತಿದ್ದಾರೆ. ಇವರ ಆಡಳಿತಾವಧಿಯಲ್ಲಿ ಶಿಕ್ಷಣ ಸಂಸ್ಥೆಗಳು ಅಭಿವೃದ್ಧಿ ಹೊಂದುತ್ತಿದೆ. ಶ್ರೀವಿಬುಧೇಶತೀರ್ಥರು 25 ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದರೆ ಅದಕ್ಕೆ ಇನ್ನೂ ಹತ್ತು ಸಂಸ್ಥೆಗಳನ್ನು ಶ್ರೀವಿಶ್ವಪ್ರಿಯತೀರ್ಥರು ಸೇರಿಸಿದ್ದಾರೆ.
ಗುಪ್ತದಾನಿ
ದಾನ ಮಾಡುವಲ್ಲಿ ಶ್ರೀವಿಶ್ವಪ್ರಿಯತೀರ್ಥರು ಎತ್ತಿದಕೈ. 2009ರ ಬಳಿಕ ಕುಂಜಾರುಗಿರಿ ದೇವಸ್ಥಾನವನ್ನು ಕೋಟ್ಯಂತರ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿದರು. ಇದಕ್ಕಾಗಿ ಅವರು 6 ಕೋ.ರೂ. ಖರ್ಚು ಮಾಡಿದರು. ಬಡವರ್ಗದವರಿಗೆ ಹೊಸ ಮನೆ ಅರ್ಧ ಆದ ಮನೆಗಳನ್ನು ಪೂರ್ತಿಗೊಳಿಸಲು ನೆರವು ನೀಡಿದರು. ಅವರು ಹೊಸದಾಗಿ ನಿರ್ಮಿಸಿಕೊಟ್ಟ ಮನೆ ಸುಮಾರು ನಲುವತ್ತರಷ್ಟು. ಇದಕ್ಕಾಗಿ 1.5 ಕೋ.ರೂ.ಗಳಿಗೂ ಹೆಚ್ಚು ವಿನಿಯೋಗಿಸಿದ್ದರು. 2,500 ವಿದ್ಯಾರ್ಥಿಗಳಿಗೆ 2.62 ಕೋ.ರೂ. ನೆರವು, ಅನಾರೋಗ್ಯ ಪೀಡಿತ 500 ಜನರಿಗೆ 50 ಲ.ರೂ., ಸುಮಾರು 100 ಸಂಸ್ಥೆಗಳಿಗೆ 50 ಲ.ರೂ., ಸಾಮಾಜಿಕ ಕಾರ್ಯಗಳಿಗೆ 22 ಲ.ರೂ., ಮನೆ, ಶಿಕ್ಷಣ, ಆರೋಗ್ಯ, ಮದುವೆ ಇತ್ಯಾದಿಗೆ ನೀಡಿದ್ದಾರೆ. ಫಲಾನುಭವಿಗಳಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರಾದಿ ಎಲ್ಲ ಜಾತಿಯವರೂ ಇದ್ದಾರೆ.
ಗುರುಗಳು ಹಾಕಿಕೊಟ್ಟ ಪರಂಪರೆಯಂತೆ ಜ. 18ರಂದು ಅದಮಾರು ಮಠದ ಪರ್ಯಾಯ ಪೂಜಾ ಕೈಂಕರ್ಯವನ್ನು ಪಟ್ಟ ಶಿಷ್ಯ ಶ್ರೀಈಶಪ್ರಿಯತೀರ್ಥ ಶ್ರೀಪಾದರಿಂದ ಮಾಡಿಸುತ್ತಿದ್ದಾರೆ.
ಬಾಲ್ಯದ ಸಂಸ್ಕಾರ
ನೆಲದಲ್ಲಿ ಪಾಠ ಓದಿದ್ದ ಶ್ರೀವಿಶ್ವಪ್ರಿಯತೀರ್ಥರಲ್ಲಿ ಈಗಲೂ ಬಾಲ್ಯದ ಸಂಸ್ಕಾರವಾಸನೆ ಕಂಡುಬರುತ್ತದೆ. ಅವರು ಮಠದಲ್ಲಿದ್ದರೆಂದರೆ ಉಡುಪಿ ಆಸುಪಾಸಿನಲ್ಲಿ ಓದುವ ಹರುಕುಮುರುಕು ಬಟ್ಟೆ ತೊಟ್ಟ ಶಾಲಾ ಬಡ ಮಕ್ಕಳು ಅವರಿರುವ ಕೋಣೆಯ ಹೊರಗೆ ದಾಕ್ಷಿಣ್ಯದಿಂದ ಇಣುಕುತ್ತಾರೆ. ಸ್ವಾಮಿಗಳು ಮಕ್ಕಳನ್ನು ಬಾಗಿಲ ಹೊರಗೆ ಕಂಡಾಗ “ಬಾ’ ಎಂದು ಕರೆಯುತ್ತಾರೆ. ಮಕ್ಕಳು ಗುಂಪುಗುಂಪಾಗಿ ಒಳ ಹೋಗುತ್ತಾರೆ. “ನಿನಗೆ ಯಾವ ಹಣ್ಣು ಇಷ್ಟ’ ಎಂದು ಕೇಳಿದಾಗ ಒಂದೊಂದು ಮಕ್ಕಳು ಒಂದೊಂದನ್ನು ತೋರಿಸುತ್ತಾರೆ. ಕೇಳಿದ ಹಣ್ಣುಗಳನ್ನು ಕೊಟ್ಟು ಸ್ವಾಮಿಗಳು ಖುಷಿಪಡುವುದನ್ನು ಕಣ್ಣಾರೆ ಕಾಣುವುದು ಚೆಂದ.
ಶಾಲೆಯ ಹೆಮ್ಮೆ
ಶ್ರೀಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ನಮ್ಮ ಶಾಲೆಯಲ್ಲಿ ಓದಿದವರು ಎಂಬುದು ನಮಗೆ ಹೆಮ್ಮೆ. ಅವರ ಪೂರ್ವಾಶ್ರಮದ ಸಂಬಂಧಿಕರಾದ ಡಾ|ಪದ್ಮನಾಭ ಉಡುಪರು ನಮ್ಮ ಶಾಲೆಗೆ ದಾನಿಯೂ ಹೌದು. ಸ್ವಾಮೀಜಿಯವರು ನಮ್ಮ ಶಾಲೆಗೆ ಬಂದಿರುವುದನ್ನು ಮಕ್ಕಳು ಹೇಳುತ್ತಿರುತ್ತಾರೆ.
-ಮೋನಿಕಾ ಡಿ’ಸೋಜಾ, ಪ್ರಭಾರ ಮುಖ್ಯ ಶಿಕ್ಷಕಿ, ಕುಂಗೂರು ಸರಕಾರಿ ಹಿ.ಪ್ರಾ. ಶಾಲೆ, ಪುತ್ತಿಗೆ ಮೂಡಬಿದಿರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.