ರಾಜರ ಕಾಲದ ವಸ್ತುಗಳ ವೀಕ್ಷಣೆಗೆ ಸುವರ್ಣಾವಕಾಶ
Team Udayavani, Jan 23, 2019, 12:50 AM IST
ಬ್ರಹ್ಮಾವರ: ರಾಜರ ಆಳ್ವಿಕೆಯ ಕಾಲದಲ್ಲಿ ಗೃಹೋಪಯೋಗಿ ವಸ್ತುಗಳು ಏನೆಲ್ಲ ಇದ್ದವು? ಅಂದು ಜನಜೀವನದಲ್ಲಿ ಏನೆಲ್ಲ ಬಳಕೆಯಲ್ಲಿತ್ತು ಎಂಬುದನ್ನು ಜನರಿಗೆ ತಿಳಿಯಲು ಈಗ ಸುರ್ವರ್ಣಾವಕಾಶ. ಆಳುಪೋತ್ಸವ ಪ್ರಯುಕ್ತ ಪಾರಂಪರಿಕ ವಸ್ತುಗಳ ಪ್ರದರ್ಶನ ಜ.25ರಿಂದ ಜ. 27ರ ವರೆಗೆ ನಡೆಯಲಿದ್ದು, ವೆಂಕಟರಮಣ ಭಂಡಾರ್‌ಕಾರ್ ಅವರು ಸಂಗ್ರಹಿಸಿದ ವಸ್ತುಗಳ ಪ್ರದರ್ಶನವಾಗಲಿದೆ.
ಮನೆಯೇ ಸಂಗ್ರಹಾಲಯ
ಪ್ರಸ್ತುತ ವೆಂಕಟರಮಣ ಭಂಡಾರ್‌ಕಾರ್ ಅವರ ಮನೆಯೇ ಅದ್ಭುತ ಸಂಗ್ರಹಾಲಯವಾಗಿದೆ. ಪ್ರವೇಶದ್ವಾರದಿಂದ ಹಿಡಿದು, ಚಾವಡಿ, ಪಡಸಾಲೆ, ಅಡುಗೆ ಮನೆ, ಕೋಣೆಗಳಲ್ಲಿ ಸುಂದರವಾಗಿ ಜೋಡಿಸಿಡಲಾಗಿದೆ. ಸ್ವತ್ಛತೆ, ಅಚ್ಚುಕಟ್ಟಿನಲ್ಲಿ ಪತ್ನಿ ಪೂರ್ಣಿಮಾ ಅವರ ಸಹಕಾರ ಅಮೂಲ್ಯ. ಪುತ್ರರಾದ ಬೆಂಗಳೂರಿನ ವೈದ್ಯ ಡಾ| ದಿನೇಶ್ ಹಾಗೂ ಸ್ವೀಡನ್‌ನಲ್ಲಿ ಎಂ.ಎಸ್. ಅಧ್ಯಯನ ಮಾಡುತ್ತಿರುವ ವಿಘ್ನೇಶ್ ಅವರ ಆಸಕ್ತಿಯೂ ಇದಕ್ಕೆ ಪೂರಕವಾಗಿದೆ.
ಎಲ್ಲಿಯ ಸಂಗ್ರಹ ?
ವೆಂಕಟರಮಣ ಭಂಡಾರ್‌ಕಾರ್ ಅವರ ಅಜ್ಜ ಪಟೇಲರಾಗಿದ್ದ ದಿ| ವೆಂಕಟೇಶ್ ಅವರ ಕಾಲದಿಂದಲೇ ಕೆಲವು ವಸ್ತುಗಳು ಬಳುವಳಿಯಾಗಿ ದೊರೆಯಿತು. ಅನಂತರ ಭಂಡಾರ್‌ಕಾರ್ ಅವರು ಹವ್ಯಾಸದಿಂದ ಪ್ರಾಚೀನ ವಸ್ತುಗಳನ್ನು ಕೇಳಿ ಪಡೆದು ಕೊಂಡರು. ಇನ್ನು ಹಲವು ವಸ್ತುಗಳನ್ನು ಹಣ ನೀಡಿ ಖರೀದಿಸಿದರು. ಕರ್ನಾಟಕ ಅಲ್ಲದೆ ನೆರೆಯ ಕೇರಳ, ಗೋವಾದಿಂದಲೂ ಹಲವು ವಸ್ತುಗಳನ್ನು ಸಂಗ್ರಹಿಸಿ ದರು. ಕಳೆದ 35 ವರ್ಷಗಳ ಶ್ರಮ ಅಡಗಿದೆ.
ವಸ್ತು ಪ್ರದರ್ಶನ
ಆಳುಪೋತ್ಸವ ಪ್ರಯುಕ್ತ ಬಾರಕೂರು ರಥಬೀದಿ ಯಲ್ಲಿರುವ ಶ್ರೀ ಪಟ್ಟಾಭಿರಾಮಚಂದ್ರ ದೇವಸ್ಥಾನದ ಎದುರಿನ ಭಂಡಾರ್‌ಕಾರ್ ಕಂಪೌಂಡ್‌ನಲ್ಲಿ ಮುಕ್ತ ಪ್ರವೇಶದೊಂದಿಗೆ ಪ್ರದರ್ಶನ ಏರ್ಪಡಿಸಲಾಗಿದೆ. ಪೂರ್ವಜರ ಕಾಲದ ಬಳಕೆಯಲ್ಲಿದ್ದ ವಸ್ತುಗಳನ್ನು ಪರಿಚಯಿಸುವ ಆಶಯ ಹೊಂದಲಾಗಿದೆ.
ಡಾ| ಹೆಗ್ಗಡೆ ಅವರು ಪ್ರೇರಣೆ
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಪ್ರೇರಣೆಯೇ ಈ ಪ್ರಾಚೀನ ವಸ್ತುಗಳ ಸಂಗ್ರಹಕ್ಕೆ ಕಾರಣ. ಅಂದು ಬಳಕೆಯಲ್ಲಿದ್ದ ಅಪೂರ್ವ ವಸ್ತುಗಳು ಮುಂದೆಯೂ ನೋಡುವಂತಾಗಬೇಕು. ಅದಕ್ಕಾಗಿ ಬಾರಕೂರಿನಲ್ಲಿ ಶಾಶ್ವತ ಸಂಗ್ರಹಾಲಯ ನಿರ್ಮಿಸುವ ಯೋಜನೆ ಇದೆ.
– ಎಂ. ವೆಂಕಟರಮಣ ಭಂಡಾರ್‌ಕಾರ್, ಪ್ರಾಚೀನ ವಸ್ತು ಸಂಗ್ರಾಹಕ
ಏನೇನು ಇವೆ?
600 ವರ್ಷಗಳಿಗೂ ಹಳೆಯದಾದ ಗೃಹೋಪಯೋಗಿ ವಸ್ತುಗಳ ಅದ್ಭುತ ಸಂಗ್ರಹ ಇದಾಗಿದೆ. ಮುಖ್ಯವಾಗಿ ತಾಮ್ರದ ಶಾಸನ, ಹಳೆಯ ನಾಣ್ಯಗಳು, ನೂರಾರು ವರ್ಷಗಳ ಹಿಂದಿನ ಭರಣಿ, ಪಾತ್ರೆ, ಗಡಿಯಾರ, ಸುಣ್ಣದ ಡಬ್ಬಿ, ಕಾಲುದೀಪಗಳಿವೆ. ಅಮೂಲ್ಯ ತಾಳೆಗರಿ, ಗಂಗಾ ಜಮುನಾ ಚೆಂಬು, ದೇವರ ಪೂಜೆಯ ಹೂಜಿಗಳನ್ನು ನೋಡಬಹುದಾಗಿದೆ. ಅಂದು ಬಳಕೆಯಲ್ಲಿದ್ದ ಚಿನ್ನ ಹಾಕುವ ಡಬ್ಬ, ತೊಟ್ಟಿಲು, ಶಾವಿಗೆ ಮಣೆ, ಕೆಮರಾ, ಉರುವಳಿ, ಫೋನು, ಗ್ರಹಾಂ ಫೋನು, ಡಾಕ್ಟರ್ ಕಿಟ್, ಸಿಗರ್‌ಲೈಟರ್, ಶಂಖ, ಕಳಸಿಗೆ, ಬಾಗ್ ಮರ್ಗಿ, ನೊಗ, ಏತನೀರಾವರಿ ದೊಟ್ಟೆ ಮರ್ಗಿ, ಜತೆಗೆ ತಾಮ್ರ, ಮರ, ಕಬ್ಬಿಣದ ಮರ್ಗಿಗಳಿವೆ.
ಅಲ್ಲದೆ ತಬಲಾ, ಶಹನಾಯ್, ಕೊಂಬು, ಕಹಳೆ, ರಥಾರತಿ, ರೈಲ್ ಚೆಂಬು, ಹಿತ್ತಾಳೆಯ ಪೀಕ ದಾನಿ, ಪತ್ತಾಸೆ, ಅಡಕೆ ಕತ್ತರಿ, ಚನ್ನೆಮಣೆ, ಪಟೇಲರ ಕಾಲದ ಶಾಯಿ ಡಬ್ಬಿ, ತಾಮ್ರದ ಕಳಸಿಗೆ, ತೂಕದ ಕಲ್ಲು, ರಾಜರ ಕಾಲದ ಸೊಂಟದ ಪಟ್ಟಿ ಇತ್ಯಾದಿ ಸಂಗ್ರಹದಲ್ಲಿ ಒಳಗೊಂಡಿದೆ. 1,000ಕ್ಕೂ ಮಿಕ್ಕಿದ ವಿಭಿನ್ನ ಪ್ರಾಚೀನ ವಸ್ತುಗಳು ಸಂಗ್ರಹದಲ್ಲಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.