“ಹೆಬ್ರಿ ತಾಲೂಕು ರಚನೆಯಲ್ಲಿ ಕಾಂಗ್ರೆಸ್‌ನಿಂದ ಹೆಬ್ರಿ ಜನತೆಗೆ ದ್ರೋಹ’
Team Udayavani, Mar 17, 2017, 4:48 PM IST
ಹೆಬ್ರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರಕಾರ ಹೆಬ್ರಿಯನ್ನು ತಾಲೂಕು ಆಗಿ ಘೋಷಣೆ ಮಾಡದೇ ಇರುವುದು ಹೆಬ್ರಿ ಜನತೆಗೆ ಮಾಡಿದ ದ್ರೋಹವಾಗಿದೆ ಎಂದು ಹೆಬ್ರಿ ಜಿಲ್ಲಾ ಪಂಚಾಯತ್ ಸದಸ್ಯೆ ಜ್ಯೋತಿ ಹರೀಶ್ ಹೇಳಿದರು.
ಅವರು ಹೆಬ್ರಿ ಬಿಜೆಪಿ ಶಕ್ತಿಕೇಂದ್ರದ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಹೆಬ್ರಿಯನ್ನು ತಾಲೂಕಾಗಿ ಪರಿಗಣಿಸಬೇಕು ಎಂಬ ಹೋರಾಟ ಇಂದು ನಿನ್ನೆಯದಲ್ಲ . ಅನೇಕ ವರ್ಷಗಳಿಂದ ಹೆಬ್ರಿ ಪರಿಸರದ ಅನೇಕ ಮಂದಿ ಈ ಪ್ರಯತ್ನದಲ್ಲಿ ತೊಡಗಿದ್ದಾರೆ. ಹಿಂದೆಯೂ ಪ್ರಯತ್ನ ನಡೆಸಿದ್ದಾರೆ. ಈಗಲೂ ಪ್ರಯತ್ನ ಮಾಡುತ್ತಲೇ ಇದ್ದಾರೆ. ಆದರೆ ಕಾಂಗ್ರೆಸ್ ಸರಕಾರ ಎಲ್ಲರಿಗೂ ಚಳ್ಳೆಹಣ್ಣು ತಿನ್ನಿಸಿದೆ.
ಹೆಬ್ರಿಯನ್ನು ತಾಲೂಕು ಆಗಿ ಘೋಷಿಸುವ ಬಗ್ಗೆ ಅನೇಕ ರಾಜಕೀಯ ಮುಂದಾಳುಗಳು ಭರವಸೆ ನೀಡಿದ್ದಾರೆ. ಇತ್ತೀಚಿನ ದಿನದಲ್ಲಿ ಹೆಬ್ರಿಗೆ ಆಗಮಿಸಿದ ರಾಜ್ಯದ ಮಾಜಿ ಮುಖ್ಯಮಂತ್ರಿ ಕೇಂದ್ರದ ಮಾಜಿ ಸಚಿವರು ಕೂಡ ಆಗಿರುವ ವೀರಪ್ಪ ಮೊಲಿಯವರು ಹೆಬ್ರಿಯನ್ನು ತಾಲೂಕು ಆಗಿ ಘೋಷಿಸುವ ಭರವಸೆ ನೀಡಿದ್ದರಿಂದ ಈ ಭಾಗದ ಶಾಸಕರು ಸೇರಿದಂತೆ ಬಿಜೆಪಿ ಜನಪ್ರತಿನಿಧಿಗಳು ಸುಮ್ಮನಾಗಿದ್ದಾರೆ. ಆಡಳಿತದಲ್ಲಿ ಕಾಂಗ್ರೆಸ್ ಸರಕಾರ ಆರ್ಹತೆಯಿರುವ ಹೆಬ್ರಿ ತಾಲೂಕು ರಚನೆ ಬಗ್ಗೆ ನಿರ್ಲಕ್ಷ್ಯ ತೋರಿರುವುದು ತುಂಬ ಬೇಸರದ ಸಂಗತಿ ಎಂದರು.
ಮೊಲಿ ಮಾತು ನಡೆಯುವುದಿಲ್ಲ: ಮೊಲಿ ಅವರ ಭರವಸೆಯಿಂದಾಗಿ ಹೆಬ್ರಿ ಜನತೆ ಆಶಾದಾಯಕ ನಿಲುವು ತಳೆದಿದ್ದರು. ಆದರೆ ಇದೀಗ ನೋಡಿದಾಗ ಮೊಲಿಯವರ ಬೇಳೆ-ಕಾಳು ಕಾಂಗ್ರೆಸ್ ಪಕ್ಷದಲ್ಲಿ ಬೇಯುತ್ತಿಲ್ಲ ಎನ್ನುವುದು ಸಾಬೀತಾದಂತಾಗಿದೆ. ಸಿದ್ದರಾಮಯ್ಯನವರ ಸರಕಾರ ಹೆಬ್ರಿ ಜನತೆಗೆ ಮಾತ್ರ ದ್ರೋಹ ಮಾಡುತ್ತಿಲ್ಲ.ಮೊಲಿಯವರ ಸೂಚನೆಗಳನ್ನು ತಿರಸ್ಕರಿಸುವ ಮೂಲಕ ತನ್ನ ಪಕ್ಷದ ಹಿರಿಯರೆಲ್ಲರಿಗೆ ಅನ್ಯಾಯ ಮಾಡುತ್ತಿದೆ ಎನ್ನುವುದು ಮೂಲ ಕಾಂಗ್ರೆಸಿಗರು ತಿಳಿಯಬೇಕಾಗಿದೆ ಎಂದರು.
ಹೋರಾಟವೇ ಮಾಡದ ಅರ್ಹತೆಯಿರದ ಕಾಪುವನ್ನು ತಾಲೂಕು ಮಾಡಿ ಭೌಗೋಳಿಕವಾಗಿ ಹಾಗೂ ಎಲ್ಲ ರೀತಿಯ ಆರ್ಹತೆಯಿರುವ ಹೆಬ್ರಿಯನ್ನು ಕೈಬಿಟ್ಟಿರುವುದು ಹೆಬ್ರಿಯನ್ನು ತಾಲೂಕು ಮಾಡಿಸ ಬೇಕೆಂಬ ಹೋರಾಟಗಾರರಿಗೆ ಕಾಂಗ್ರೆಸ್ ಸರಕಾರ ನೀಡಿದ ಅನ್ಯಾಯದ ಉಡುಗೊರೆಯಾಗಿದೆ. ಕಾಂಗ್ರೆಸ್ ಪಕ್ಷ ಹೆಬ್ರಿ ಪರಿಸರದ ಜನತೆಗೆ ಮಾಡಿದ ಈ ದ್ರೋಹವನ್ನು ಜನತೆ ಎಂದೂ ಮರೆಯುವುದಿಲ್ಲ. ಆದರೆ ಬಿಜೆಪಿ ಈ ಬಗ್ಗೆ ಸುಮ್ಮನಿರುವುದಿಲ್ಲ. ಇನ್ನೂ ಅನುಮೋದನೆಯಾಗಲು 10 ದಿನಗಳಿವೆ. ಅದರ ಒಳಗೆ ತಾಲೂಕು ರಚನೆ ಘೋಷಣೆಯಾಗುವ ವರೆಗೆ ಉಗ್ರ ಹೋರಾಟ ಹಾಗೂ ಇನ್ನಾದರೂ ಕಾಂಗ್ರೆಸ್ ಪಕ್ಷ ರಾಜಕೀಯ ಮಾಡದೆ ಬಿಜೆಪಿಯವರೊಂದಿಗೆ ಸೇರಿ ನಿಯೋಗ ಬೆಂಗಳೂರಿಗೆ ತೆರಳಿ ಪ್ರತಿಭಟನೆ ನಡೆಸಲಾಗುವುದು ಎಂದರು.
ಈ ಸಂದರ್ಭ ಹೆಬ್ರಿ ಗ್ರಾ.ಪಂ. ಅಧ್ಯಕ್ಷ ಸುಧಾಕರ ಹೆಗ್ಡೆ, ತಾ.ಪಂ ಸದಸ್ಯರಾದ ಅಮೃತಕುಮಾರ್ ಶೆಟ್ಟಿ, ಚಂದ್ರ ಶೇಖರ ಶೆಟ್ಟಿ, ರಮೇಶ್ ಕುಮಾರ್, ಬಿಜೆಪಿ ಪ್ರಮುಖರಾದ ನಂದಕುಮಾರ್ ಹೆಗ್ಡೆ, ಸಮೃದ್ಧಿ ಪ್ರಕಾಶ್ ಶೆಟ್ಟಿ, ಗಣೇಶ ಜರ್ವತ್ತು, ಡಿ.ಜಿ. ರಾಘವೇಂದ್ರ, ಶ್ರೀಕರ್ ಭಾರಧ್ವಜ್ ಕಬ್ಬಿನಾಲೆ, ಗಣಪತಿ ಮುದ್ರಾಡಿ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.