ಭಾರತ ವಿಶ್ವಗುರುವಾಗಲು ಸಂತರ ಕೊಡುಗೆಯೂ ಅಪಾರ: ಡಾ| ಕಲ್ಲಡ್ಕ ಪ್ರಭಾಕರ ಭಟ್
Team Udayavani, Jun 2, 2019, 11:09 AM IST
ಪಡುಬಿದ್ರಿ: ಭಾರತವು ಮುಂದೆ ವಿಶ್ವಗುರುವೆನಿಸಲು ಸಂತರ ಕೊಡುಗೆಯೂ ಅಪಾರವಾಗಿರುತ್ತದೆ. ಬ್ರಿಟಿಷ್ ಅಧಿಕಾರಿ ಮೆಕಾಲೆ ಕೆಡಿಸಿರುವಂತಹಾ ಭಾರತೀಯತೆಯು ನಮ್ಮ ದೇಶದಲ್ಲಿ ಅದಮಾರು ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕಿರುವ ಶ್ರೀ ವಿಬುಧೇಶರು ಹಾಗೂ ಅದನ್ನು ಮುಂದುವರಿಸಿಕೊಂಡು ಬಂದಿರುವ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರ ಶಿಕ್ಷಣ ಸಂಸ್ಥೆಗಳಲ್ಲಿನ ಶಿಕ್ಷಣ ವ್ಯವಸ್ಥೆಗಳಿಂದ ಇಂದು ಉಳಿದುಕೊಂಡಿದೆ. ಇಂತಹವರಿಂದ ಜಗತ್ತಿಗೇ ಮಂಗಳವಾಗಲಿದೆ ಎಂದು ಪುತ್ತೂರು ವಿವೇಕಾನಂದ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ | ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಅವರು ಜೂ. 1ರಂದು ಸುಮಾರು 2.5ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಶ್ರೀ ಅದಮಾರು ಮಠ ಶಿಕ್ಷಣ ಸಂಸ್ಥೆಗಳ ಆಡಳಿತಕ್ಕೊಳಪಟ್ಟ ಅದಮಾರು ಪೂರ್ಣಪ್ರಜ್ಞ ಪ. ಪೂ. ಕಾಲೇಜಿನ ನೂತನ ತರಗತಿ ಕೊಠಡಿ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಭಾರತೀಯರು ಜಗತ್ತಿನಲ್ಲೇ ಶ್ರೇಷ್ಠರಿದ್ದಾರೆ. ನಮಗೆ ಕೀಳರಿಮೆ ಬೇಡ. ನಮ್ಮ ಶಕ್ತಿಯನ್ನು ಮರೆಯದಿರೋಣ. ಎಲ್ಲಾ ಕ್ಷೇತ್ರಗಳಲ್ಲೂ ನಾವು ಸಾವಿರಾರು ವರ್ಷಗಳಿಂದಲೂ ನಮ್ಮ ಛಾಪನ್ನು ಮೂಡಿಸಿದ್ದೇವೆ. ನಾವು ಎಲ್ಲರಿಗೂ ಆಶ್ರಯ ಕೊಟ್ಟಿದ್ದೇವೆ. ಎಲ್ಲರಿಂದಲೂ ಮನ್ನಣೆಯನ್ನೂ ಗಳಿಸಿಕೊಂಡಿದ್ದೇವೆ. ನಮ್ಮ ಹಿಂದೂ ಧರ್ಮದ ಮರ್ಮವೇ ಜಗತ್ತಿಗೇ ಒಳ್ಳೆಯದಾಗಲಿ ಎಂದು ಹಾರೈಸುವುದಾಗಿದೆ. ಹಾಗಾಗಿ ಮುಂದೆ ಭಾರತವು ಸೂಪರ್ ಪವರ್ ಆಗುವುದಲ್ಲ. ಭಾರತವು ಮುಂದಿನ ದಿನಗಳಲ್ಲಿ ವಿಶ್ವಗುರುವಾಗಲಿದೆ. ಯುವ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಪರಿಪೂರ್ಣ ಶಿಕ್ಷಣ ಪಡೆದು ತಮ್ಮದಾದ ಉತ್ತಮ ಕೊಡುಗೆಯನ್ನು ನೀಡಬೇಕು ಎಂದೂ ಪ್ರಭಾಕರ ಭಟ್ ವಿವರಿಸಿದರು.
ನಮ್ಮ ವಿದ್ಯಾರ್ಥಿಗಳೂ ಪೂರ್ಣ ಪ್ರಜ್ಞರಾಗುತ್ತಾರೆ: ಶ್ರೀ ವಿಶ್ವಪ್ರಿಯ ತೀರ್ಥರು
ಅಧ್ಯಾಪಕರನ್ನೂ ಪರಿಪೂರ್ಣ ಶಿಕ್ಷಕರೆಂಬ ಪರಿಧಿಗೆ ತಲುಪಿಸುವವನೂ ವಿದ್ಯಾರ್ಥಿಯೇ ಆಗಿದ್ದು ಪ್ರಶ್ನೆಯ ಮೇಲೆ ಪ್ರಶ್ನೆಯನ್ನು ಕೇಳಿಕೊಂಡು ತಮಗೆ ಅರ್ಥವಾಗದ್ದನ್ನು ಕೇಳಿ ಅರಿತುಕೊಂಡು ನಮ್ಮ ವಿದ್ಯಾರ್ಥಿಗಳೂ ಪೂರ್ಣಪ್ರಜ್ಞರೂ, ಅಭಿನಂದನಾರ್ಹರೂ ಆಗುತ್ತಾರೆ. ಅಧ್ಯಾಪಕರನ್ನು ಒಳ್ಳೆಯವನನ್ನಾಗಿಸುವ ಗುಣ, ಜವಾಬ್ದಾರಿಯು ನಮ್ಮ ವಿದ್ಯಾರ್ಥಿಗಳಲ್ಲಿದೆ. ಇದು ಅದಮಾರು ಶಿಕ್ಷಣ ಸಂಸ್ಥೆಗಳ ಯಶಸ್ಸಿನ ಗುಟ್ಟು ಎಂದು ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿಯ ಅಧ್ಯಕ್ಷ, ಶ್ರೀ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಹೇಳಿದರು.
ಚಿಂತನೆಯ ಆಯಾಮವನ್ನು ಬದಲಿಸಿ ಕೊಳ್ಳಿರಿ: ಶ್ರೀ ಈಶಪ್ರಿಯ
ತೀರ್ಥ ಶ್ರೀಪಾದರು
ವಿದ್ಯಾರ್ಥಿಗಳು ತಮ್ಮ ಚಿಂತನೆಯ ಆಯಾಮವನ್ನು ಬದಲಿಸಿಕೊಳ್ಳಿರಿ. ವಿಧುರ ನೀತಿಯನ್ವಯ ಕೋಪ, ನಾಚಿಕೆ, ಹರ್ಷ, ದರ್ಪಗಳು ಬೇಕಾದಾಗ ಆಯಾಯ ರೀತಿಯಲ್ಲಿ ಉತ್ತಮ ಪ್ರಯೋಜನ ಲಭಿಸುವಂತಾಗುವಲ್ಲಿ ಬಳಸಿಕೊಳ್ಳಲು ತಾವು ಅರಿತುಕೊಂಡು ಸದ್ವಿದ್ಯಾ ಪಾರಂಗತರಾಗಿರಿ ಎಂದು ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿಯ ಉಪಾಧ್ಯಕ್ಷ, ಅದಮಾರು ಕಿರಿಯ ಶ್ರೀಪಾದರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿ ನಿವೃತ್ತ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಕುದಿ ವಸಂತ ಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ನಮ್ರತೆ, ಚಿಂತನಾಶೀಲತೆಗಳಿರಲಿ. ದೂರದೃಷ್ಟಿಯೊಂದಿಗೆ ಗುಣವಂತರಾಗಿ ಇಂತಹಾ ಉತ್ತಮ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಾಗಿರುವುದಕ್ಕೆ ಹಮ್ಮೆ ಪಟ್ಟುಕೊಳ್ಳಿರೆಂದರು. ಅದಮಾರು ಪ. ಪೂ. ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಪೈ ಸಂದರ್ಭೋಚಿತವಾಗಿ ಮಾತನಾಡಿದರು.
ಪಿಯುಸಿಯಲ್ಲಿ ರಾಜ್ಯಕ್ಕೇ 7ನೇ ಸ್ಥಾನಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ವೈಷ್ಣವಿ ವೈ., ಶಿಶಿರ್ ಭಟ್, ಸಿಇಟಿ ರ್‍ಯಾಂಕ್ ವಿಜೇತ ಸಂಹಿತಾ ಆರ್. ಭಟ್ ಮತ್ತಿತರ ವಿದ್ಯಾರ್ಥಿಗಳನ್ನು ಶ್ರೀಪಾದರು ಸಮ್ಮಾನಿಸಿದರು. ಅದಮಾರು ಮಠ ಶಿಕ್ಷಣ ಸಂಸ್ಥೆಗಳ ವಿವಿಧೆಡೆಗಳ ಕಾರ್ಯದರ್ಶಿಗಳನ್ನು, ಶಿಕ್ಷಣವೇತ್ತರನ್ನು ಸಮ್ಮಾನಿಸಲಾಯಿತು. ಸುಮಾರು 5.75ಲಕ್ಷ ರೂ. ಸಹಾಯಧನ, ಸಮವಸ್ತ್ರ ವಿತರಣೆ, ವಿದ್ಯಾರ್ಥಿವೇತನವನ್ನು ಅದಮಾರು ಶಿಕ್ಷಣ ಮಂಡಳಿಯ ಮೂಲಕ ವಿತರಿಸಲಾಯಿತು.
ಅದಮಾರು ಮಠ ಶಿಕ್ಷಣ ಮಂಡಳಿಯ ಬೆಂಗಳೂರು ಕಾರ್ಯಾಲಯದ ಕಾರ್ಯದರ್ಶಿಗಳಾದ ಡಾ | ಕೆ. ಶ್ರೀಹರಿ ಭಟ್ ಸ್ವಾಗತಿಸಿದರು. ಕನ್ನಡ ಪ್ರಾಧ್ಯಾಪಕ ದೇವಿಪ್ರಸಾದ್ ಬೆಳ್ಳಿಬೆಟ್ಟು ಕಾರ್ಯಕ್ರಮ ನಿರ್ವಹಿಸಿದರು. ಅದಮಾರು ಮಠ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ, ನ್ಯಾಯವಾದಿ ಪ್ರದೀಪ್ ಕುಮಾರ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.