Karkala: ಜೋಡುರಸ್ತೆ ಪೇಟೆಯ ಪರಿಮಳ; ಅತ್ತ ಹಸಿರು, ಇತ ಅತ್ತ ಆಧುನಿಕತೆಯ ಉಸಿರು !
ಈಗ ಜೋಡೆರಸ್ತೆಯನ್ನು ಕಂಡರೆ ಇವೆಲ್ಲ ಸತ್ಯವೇ? ಎನ್ನಬೇಕು.
Team Udayavani, Aug 10, 2023, 3:10 PM IST
ಕಾರ್ಕಳ ಹೆಬ್ರಿ ರಾಜ್ಯ ರಸ್ತೆಯ ಇಕ್ಕೆಲಗಳಲ್ಲಿ ಹರಡಿಕೊಂಡಿರುವ ಪುಟ್ಟ ಪ್ರದೇಶವೇ ಜೋಡುರಸ್ತೆ. ಕಾರ್ಕಳ ಪೇಟೆಯಿಂದ ಈ
ಜೋಡು ರಸ್ತೆಗೆ 5 ಕಿ.ಮೀ. ದೂರ. ಇಂದು ಕಾರ್ಕಳದ ಪ್ರಮುಖ ವ್ಯಾಪಾರಿ ಕೇಂದ್ರ.
ಉಡುಪಿ ಕಾರ್ಕಳ ಹೆದ್ದಾರಿ ಹಾಗೂ ಹೆಬ್ರಿ ಕಾರ್ಕಳ ಸಂಪರ್ಕಿಸುವ ರಾಜ್ಯ ಹೆದ್ದಾರಿ ರಸ್ತೆಗಳು ಒಂದಾಗುವುದು ಇಲ್ಲಿಯೇ. ಎರಡು ರಸ್ತೆ ಕೂಡಿದ್ದಕ್ಕೆ ಆಗ ಇಟ್ಟ ಹೆಸರು ಜೋಡು ರಸ್ತೆ. ಒಂದನ್ನೊಂದು ಜೋಡಿಸುವ ರಸ್ತೆ ಎಂದೇ ಈ ಹೆಸರು ಬಂದಿರಬಹುದು. ಎರಡು ರಸ್ತೆಯಾಗಿದ್ದರೆ ಅದು ಜೋಡಿ ರಸ್ತೆ ಎಂದಾಗುತ್ತಿತ್ತೇನೋ ! ಅಜೆಕಾರು, ಮೂರೂರು, ಬೈಲೂರು ಗ್ರಾಮ ಗಳ ನಡುವೆ ನೇರ ಸಂಪರ್ಕ ಕಲ್ಪಿಸುವಂಥದ್ದೂ ಇದೇ. ಹಾಗಾಗಿ ಹಲವು ಗ್ರಾಮಗಳ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿದೆ.
ಮೊದಲು ಹೇಗಿತ್ತು?
ಇಂಥದೊಂದು ಪ್ರಶ್ನೆಯನ್ನು ಮನಸ್ಸಿನಲ್ಲಿಟ್ಟು ಕೊಂಡು ಹಿರಿಯರ ಬಳಿ ಹೋಗಿ ಕೇಳಿದರೆ, “ಆಗ ಏನು ಇತ್ತಪ್ಪ ಇಲ್ಲಿ? ಕಾಡು..ಕಾಡಿನ ರೀತಿ ಇರ್ತಾ ಇತ್ತು. ಸಂಜೆ 6 ಆಯಿತೆಂದರೆ ಇಲ್ಲಿ ಓಡಾಡುವುದಕ್ಕೇ ಹೆದರಿಕೆಯಾಗುತ್ತಿತ್ತು. ಜನರೂ ಹೆಚ್ಚು ಓಡಾಡ್ತಿರಲಿಲ್ಲ’.
ಈಗ ಜೋಡೆರಸ್ತೆಯನ್ನು ಕಂಡರೆ ಇವೆಲ್ಲ ಸತ್ಯವೇ? ಎನ್ನಬೇಕು. ಹಾಗೆ ಬೆಳೆವಣಿಗೆ ಕಂಡಿದೆ. ಆಧುನಿಕತೆಯ ಸ್ಪರ್ಶ ರಸ್ತೆಯುದ್ದ
ಗಲಕ್ಕೂ ಹರಡಿದೆ. ಆದರೂ ಸುತ್ತಲಿನ ಹಸಿರಿನ ಕವಚವನ್ನು ಸಂಪೂರ್ಣ ಕಳೆದುಕೊಂಡಿಲ್ಲ ಎನ್ನುವುದೇ ಸಂತಸದ ನುಡಿ.
ಇತ್ತ ಹಸಿರು, ಅತ್ತ ಆಧುನಿಕತೆಯ ಉಸಿರು ಎನ್ನುವಂತಾಗಿದೆ ಜೋಡು ರಸ್ತೆ. ಸುಮಾರು 1.5ಕಿ.ಮೀ. ಅಂತರದಲ್ಲಿರುವ ಪೇಟೆಯಲ್ಲಿ ಗಗನಚುಂಬಿ ಕಟ್ಟಡಗಳೂ ರಾರಾಜಿಸುತ್ತಿವೆ. ಹಾಗೆಯೇ ಗ್ರಾಮೀಣ ಭಾಗದಲ್ಲಿ ಭತ್ತ, ತೆಂಗು, ಬಾಳೆ, ಅಡಿಕೆ ಕೃಷಿಗಳು ಕಣ್ಮನ ಸೆಳೆಯುತ್ತವೆ. ಹತ್ತು ವರ್ಷಗಳ ಹಿಂದೆ ನಾಲ್ಕೈದು ಅಂಗಡಿಗಳು, ಒಂದೆರಡು ಬ್ಯಾಂಕ್‌ಗಳು ಬಿಟ್ಟರೆ ಬೇರೇನೂ ಇರಲಿಲ್ಲ. ಆದರೆ ದೊಡ್ಡ ಪೇಟೇಯೇ ಇಲ್ಲಿದೆ !
ಒಂದು ರಸ್ತೆ, ಮೂರು ಸರಕಾರ !
ಜೋಡು ರಸ್ತೆ ಒಂದೇ. ಆದರೆ ಅದಕ್ಕೆ ಮೂರು ಸರಕಾರಗಳು. ಇದು ಕಾರ್ಕಳ ಪುರಸಭೆ, ಕುಕ್ಕುಂದೂರು ಗ್ರಾ.ಪಂ, ಹಿರ್ಗಾನ ಗ್ರಾ.ಪಂ. ಗಳು ಸಂಧಿಸುವ ಪ್ರದೇಶ. ಈ ಹಿಂದೆ ಕುಕ್ಕುಂದೂರು ಮಂಡಲ ಪಂಚಾಯತ್ ಆಡಳಿತ ವ್ಯಾಪ್ತಿಗೆ ಒಳಪಟ್ಟಿತ್ತು. ಆದರೀಗ ಜೋಡು ರಸ್ತೆಯ ಒಂದು ಭಾಗ ಕುಕ್ಕಂದೂರು ಪಂಚಾಯತ್‌ಗೆ ಒಳಪಟ್ಟರೆ, ಮತ್ತೂಂದು ಹಿರ್ಗಾನ ಪಂಚಾಯತ್‌ಗೆ.
ಮಗದೊಂದು ಕಾರ್ಕಳ ಪುರಸಭೆಗೆ. ಹಾಗಾಗಿ ಇಲ್ಲಿ ಮೂರು ಸ್ಥಳೀಯ ಸರಕಾರಗಳು !
ಅಪ್ರಾಯರ ಪೋಡಿ, ಮಣಿಯಣ್ಣನ ನೈಯಪ್ಪ
ಐವತ್ತು ವರ್ಷಗಳ ಹಿಂದೆ ಎಂಬ ಮಾಹಿತಿ ಇದೆ. ಜೋಡುರಸ್ತೆಯಲ್ಲಿ ಎರಡು ಹೋಟೇಲ್‌ಗಳು ಭಾರೀ ಸದ್ದು ಮಾಡಿದ್ದವು. ಅದರಲ್ಲಿ ಅಪ್ರಾಯರ ಹೋಟೇಲ್ ಪೋಡಿಗೆ ಪ್ರಸಿದ್ಧ. ಮಣಿಯಣ್¡ ಹೋಟೇಲ್ ನೈಯಪ್ಪ ಹಾಗೂ ಶಿರಾಕ್ಕೆ ಹೆಸರುವಾಸಿ. ಪರಿಸರದವರಷ್ಟೇ ಅಲ್ಲ, ಸುತ್ತಲ ಗ್ರಾಮದವರು ಹಾಗೂ ಈ ರಸ್ತೆಯನ್ನು ಹಾದು ಹೋಗುವವರೆಲ್ಲ ತಪ್ಪದೇ ಇಲ್ಲಿಗೆ ಬಂದು ಈ ತಿಂಡಿಗಳನ್ನು ಆಸ್ವಾದಿಸುತ್ತಿದ್ದರಂತೆ. ಲಕ್ಕಿಯಣ್ಣನ ಅವಲಕ್ಕಿ ಮಿಲ್ಲು, ಸುಬ್ರಾಯ ನಾಯಕ್,ರಾಘವೇಂದ್ರ ನಾಯಕ್, ಅಣ್ಣಪ್ಪ
ನಾಯಕರ ಅಂಗಡಿಗಳೂ ಅಷ್ಟೇ ಪ್ರಸಿದ್ಧ.
ಆಯಾಸ ನೀಗುವ ಸ್ಥಳ: ಇಂದು ಪೇಟೆ ಈ ಜೋಡುರಸ್ತೆ ದೂರದ ಊರಿನಿಂದ ಕಾಲ್ನಡಿಗೆ ಹಾಗೂ ಎತ್ತಿನ ಗಾಡಿಯಲ್ಲಿ ಬರುವ
ಪ್ರಯಾಣಿಕರ ಆಯಾಸ ನೀಗುವ ಸ್ಥಳವೂ ಆಗಿತ್ತು. ದೂರದ ಊರುಗಳಿಂದ ಕಾರ್ಕಳ ನಗರ ಪ್ರದೇಶಕ್ಕೆ ತಮ್ಮ ಕೃಷಿ ಉತ್ಪನ್ನಗಳನ್ನು ಮಾರಲು ಹಾಗೂ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಬರುತ್ತಿದ್ದ ಜನರು ಇಲ್ಲಿ ವಿಶ್ರಮಿಸುತ್ತಿದ್ದರಂತೆ. ಹೀಗೆ ವಿಶ್ರಾಂತಿ ಪಡೆಯುತ್ತಿದ್ದ ಸ್ಥಳವೇ ಜನಸಂಚಾರ ಹೆಚ್ಚಳಗೊಂಡಂತೆ ಆರ್ಥಿಕ ಚಟುವಟಿಕೆಯ ಕೇಂದ್ರವೂ ಆಯಿತಂತೆ.
ಪೇಟೆ ಸದ್ದಿನ ಮಧ್ಯೆಯೂ ಕರಗದ ಉತ್ಸವಗಳು
ಕಾರಣೀಕದ ಉಳ್ಳಾಲ್ತಿ
ಪಶ್ಚಿಮ ಘಟ್ಟದಿಂದ ಇಳಿದು ಬಂದ ಶ್ರೀ ದುರ್ಗಾ ಪರಮೇಶ್ವರೀ ಹಾಗೂ ಕುಮಾರಿ ದುರ್ಗೆಯರು ಕುಕ್ಕುಂದೂರಿನ ಕುಕ್ಕುದ ಮರ (ಮಾವಿನ ಮರ) ಬಳಿಯ ಬಂಡೆ ಮೇಲೆ ಸಂಚರಿಸುವಾಗ ಶ್ರೀ ದುರ್ಗಾಪರಮೇಶ್ವರೀ ದೇವಿಯು ಅಲ್ಲಿಯೇ ನೆಲೆನಿಂತರೆ, ಕುಮಾರಿ ದುರ್ಗೆ ಮುಂದುವರಿದು ದೂರದ ಕುಂಜಾರು ಗಿರಿಯಲ್ಲಿ ನೆಲೆ ನಿಂತಿದ್ದಾರೆ ಎಂಬುದು ಭಕ್ತರ ನಂಬಿಕೆ.
ಕುಕ್ಕುಂದೂರಿನ ಶ್ರೀ ದುರ್ಗಾಪರಮೇಶ್ವರೀ ದೇವರು ಪಶ್ಚಿಮಾಭಿಮುಖವಾಗಿ ನೆಲೆನಿಂತರೆ ಕುಂಜಾರು ಗಿರಿಯ ಕುಮಾರಿ ದುರ್ಗೆ ಪೂರ್ವಾಭಿಮುಖವಾಗಿ ನೆಲೆ ನಿಂತಿದ್ದಾರೆ ಎಂಬುದು ಪ್ರತೀತಿ. ಈ ಎರಡು ಕಾರಣಿಕ ಕ್ಷೇತ್ರಗಳ ಮಧ್ಯೆ ನಕ್ರೆ ಕಲ್ಲು ಎಂಬ ಬೆಟ್ಟವಿದೆ. ಸುಮಾರು 9ನೇ ಶತಮಾನದಲ್ಲಿ ನಿರ್ಮಾಣವಾಗಿದೆ ಎಂಬ ನಂಬಿಕೆಯ ಜೋಡುರಸ್ತೆ ಶ್ರೀ ದುರ್ಗಾ ಪರಮೇಶ್ವರೀ ಕ್ಷೇತ್ರದಲ್ಲಿ ಭಕ್ತರು ಹೂವಿನ ಪೂಜೆ, ಕಾರ್ತಿ ಪೂಜೆ ನೆರವೇರಿಸುತ್ತಾರೆ. ಈ ದೇವಿಯನ್ನು ಭಕ್ತರು ಭಕ್ತರು ಉಳ್ಳಾಲ್ತಿ ಎಂದು ಕರೆದು ಪೂಜಿಸುವುದೂ ಉಂಟು.
ನಗರ ಭಜನೆ
ಜೋಡುರಸ್ತೆ ಪರಿಸರದಲ್ಲಿ ಸುಮಾರು 60 ವರ್ಷಗಳ ಹಿಂದೆ ಪ್ರಾರಂಭವಾದ ನಗರ ಭಜನೆಯಲ್ಲಿ ಪ್ರತಿ ಮನೆಯವರೂ ಭಾಗವಹಿಸುತ್ತಿದ್ದರಂತೆ. ಭಜನಾ ತಂಡವು ದುರ್ಗಾ ಅನುದಾನಿತ ಶಾಲೆಯಿಂದ ಪ್ರಾರಂಭಗೊಂಡು ಜೋಡುರಸ್ತೆ ಪರಿಸರದ ಪ್ರತೀ ಮನೆ, ಅಂಗಡಿಗಳಿಗೆ ತೆರಳಿ ಭಜನೆ ಮಾಡುತ್ತಾ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದವರೆಗೂ ಸಾಗುತ್ತಿತ್ತಂತೆ. ಇಪ್ಪತ್ತು ವರ್ಷಗಳಿಂದ ನಗರೀಕರಣದ ಹೊಡೆತವೋ ಏನೋ? ಈ ನಗರ ಭಜನೆ ಪರಂಪರೆ ನಿಂತಿದೆ. ಈ ಭಜನೆಯಲ್ಲಿ ಜಾತಿ ಧರ್ಮ ಭೇದವಿಲ್ಲದೆ ಪ್ರತಿಯೋರ್ವರೂ ಪಾಲ್ಗೊಂಳ್ಳುತ್ತಿದ್ದರು. ಭಜನೆಯ ಬಳಿಕ ನೀಡುತ್ತಿದ್ದ ಪ್ರಸಾದ ರೂಪದ ಅವಲಕ್ಕಿಯ ರುಚಿ ಮರೆಯಲು ಅಸಾಧ್ಯ ಎನ್ನುತ್ತಾರೆ ಆಗ ನಗರ ಭಜನೆಯಲ್ಲಿ ಭಾಗವಹಿಸುತ್ತಿದ್ದ ಫೆಲಿಕ್ಸ್ ಮಥಾಯಿಸ್ ಅವರು.
ವೈಭವದ ಗಣೇಶೋತ್ಸವ
ಪರಿಸರದಲ್ಲಿ ಎಲ್ಲಿಯೂ ಇಲ್ಲದ ಗಣೇಶೋತ್ಸವವನ್ನು ಜೋಡುರಸ್ತೆಯಲ್ಲಿ 36 ವರ್ಷಗಳ ಹಿಂದೆ ವೈಭವದಿಂದ ಪ್ರಾರಂಭಿಸ
ಲಾಗಿತ್ತು. ಇಂದಿಗೂ ವೈಭವದಿಂದ ನಡೆಯುತ್ತಿರುವ ಉತ್ಸವವಿದು. ಆಗ ಬಾಲಕೃಷ್ಣ ನಾಯಕ್, ಸದಾನಂದ ನಾಯಕ್, ಗಣಪತಿ, ಟೈಲರ್ ಜಯಣ್ಣ, ಶೀನಣ್ಣ, ರಮಾನಾಥ ಕಾಮತ್, ಪಂಡಿತರು ಸೇರಿದಂತೆ ಅಂದಿನ ಸಮಾನ ಮನಸ್ಕರು ಪ್ರಾರಂಭಿಸಿದ
ಗಣೇಶೋತ್ಸವ ಇಂದಿಗೂ ತನ್ನ ಹಿರಿಮೆ ಉಳಿಸಿಕೊಂಡಿದ್ದು, ರಮೇಶ್ ನಾಯಕ್, ರಮೇಶ್ ಹಾಗೂ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳ ಸೇವಾ ಮನೋಭಾವದಿಂದಾಗಿ ಇಂದಿಗೂ ಸಾಂಸ್ಕೃತಿಕ, ಧಾರ್ಮಿಕ ವೈಭವವನ್ನು ಮೆರೆಸುತ್ತಿದೆ.
ಲೇಖನ: ಜಗದೀಶ್ ಅಂಡಾರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.