“ದೇವರ-ಗುರುಗಳ ಅನುಗ್ರಹವಿದ್ದರೆ ಅಸಾಧ್ಯವೇನಿಲ್ಲ’
ಪರ್ಯಾಯ ಶ್ರೀ ಪಲಿಮಾರು ಮಠಾಧೀಶರ ಸಂದರ್ಶನ
Team Udayavani, Jan 9, 2020, 6:00 AM IST
2018-20ರ ಅವಧಿಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಪರ್ಯಾಯ ಪೂಜಾವಧಿ ಇದೇ ಜ. 17ರಂದು ಕೊನೆಗೊಳ್ಳುತ್ತದೆ. ಇದಕ್ಕೂ ಮುನ್ನ ಪರ್ಯಾಯದ ಕೊನೆಯ ಸಪೊತ್ಸವ ಜ. 9ರಂದು ಆರಂಭಗೊಂಡು ಜ. 14ರಂದು ಮಕರಸಂಕ್ರಾಂತಿ ಉತ್ಸವ, ಜ. 15ರಂದು ಚೂರ್ಣೋತ್ಸವದೊಂದಿಗೆ ಸಮಾಪನಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ “ಉದಯವಾಣಿ’ ಶ್ರೀಗಳೊಂದಿಗೆ ಸಂವಾದ ನಡೆಸಿತು.
ಉಡುಪಿ: ದೇವರು, ಗುರುಗಳನ್ನು ನಂಬಿ ನಿಸ್ವಾರ್ಥವಾಗಿ ಪ್ರಯತ್ನಿಸಿದರೆ ಯಾವುದೂ ಅಸಾಧ್ಯವಲ್ಲ. ಎಲ್ಲವನ್ನೂ ದೇವರೇ ಮಾಡಿಸಿಕೊಳ್ಳುತ್ತಾನೆ… ಶ್ರೀಕೃಷ್ಣ ಮಠದ ನಿರ್ಗಮನ ಪರ್ಯಾಯ ಪೀಠಾಧೀಶ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಹೇಳುವುದು ಹೀಗೆ. ಅವರೊಂದಿಗಿನ ಮಾತುಕತೆಯ ಸಾರ ಇಲ್ಲಿದೆ.
– ತಮ್ಮ ಎರಡು ಪರ್ಯಾಯಗಳ ನಡುವೆ ಏನು ವ್ಯತ್ಯಾಸ ಕಾಣುತ್ತಿದೆ?
ಎರಡು ಪರ್ಯಾಯ ಅವಧಿಗಳಲ್ಲಿ ಕಾಣಿಕೆ ಸಲ್ಲಿಸುವ ಕ್ರಮದಲ್ಲಿ ವ್ಯತ್ಯಾಸ ಕಂಡುಬಂದಿದೆ. ಹಿಂದಿನ ಪರ್ಯಾಯದಲ್ಲಿ ಭಕ್ತರು ನಗದು ರೂಪದಲ್ಲಿ ಹಣವನ್ನು ಕೊಡುತ್ತಿದ್ದರು. ಈಗ ಬಹುತೇಕ ಎಲ್ಲರೂ ಚೆಕ್ ಮೂಲಕ, ಖಾತೆ ಮೂಲಕ ಸಲ್ಲಿಸುತ್ತಿದ್ದಾರೆ. ನಗದು ಹಣ ಕಡಿಮೆಯಾಗಿದೆ. ಈಗ ಸಾಮಾಜಿಕ ಜಾಲತಾಣವೂ ಸೇರಿದಂತೆ ಮಾಧ್ಯಮದ ಪ್ರಚಾರ ಹೆಚ್ಚಾಗಿದೆ. ನಿತ್ಯ ಪ್ರವಚನವೂ ಸೇರಿದಂತೆ ಆನ್‌ಲೈನ್‌ನಲ್ಲಿ ರಿಲೇ ಆಗುವುದರಿಂದ ಜನರಿಗೆ ಮಾಹಿತಿ ಹೆಚ್ಚಿಗೆ ತಿಳಿಯುತ್ತಿದೆ.
– ಶ್ರೀಕೃಷ್ಣನ ಉತ್ಸವ ಮೂರ್ತಿಗೆ ಚಿನ್ನದ ತುಲಾಭಾರ ನಡೆಸಿದ್ದೀರಿ, ಇದರ ಹಿನ್ನೆಲೆ ಏನು?
ತುಲಾಭಾರ ಕ್ರಮ ಹಿಂದಿನಿಂದಲೂ ಇದೆ. ಮಕ್ಕಳಾಗದವರು ತುಲಾಭಾರ ಮಾಡಿಸುತ್ತೇವೆ ಎಂದು ಹೇಳಿಕೊಳ್ಳು ತ್ತಾರೆ. ಅದನ್ನು ತೀರಿಸುವ ಸಂದರ್ಭ ದಲ್ಲಿ ಮಗುವನ್ನೇ ದೇವರಿಗೆ ಅರ್ಪಿಸಲು ಆಗುತ್ತದೆಯೆ? ಅದಕ್ಕಾಗಿ ಮಗುವಿನ ಪ್ರತಿನಿಧಿಯಾಗಿ ಅಷ್ಟೇ ತೂಕದ ಸಾಮಗ್ರಿಗಳನ್ನು ದೇವರಿಗೆ ಸಮರ್ಪಿಸು ವುದು – ಇದು ತುಲಾಭಾರದ ಅರ್ಥ. ಶ್ರೀಕೃಷ್ಣನಿಗೆ ರುಕ್ಮಿಣಿ ಮತ್ತು ಸತ್ಯಭಾಮೆ ಯರು ತುಲಾಭಾರ ಮಾಡಿದ್ದರು ಎನ್ನುತ್ತದೆ ಪುರಾಣ. ಸತ್ಯಭಾಮೆ ಚಿನ್ನದಿಂದ ತುಲಾಭಾರ ಮಾಡಿದಾಗ ತಕ್ಕಡಿ ಏರಲಿಲ್ಲವಂತೆ. ಆಗ ರುಕ್ಮಿಣಿ ಭಕ್ತಿಯಿಂದ ತುಳಸೀದಳವನ್ನು ಸಮರ್ಪಿಸಿದಾಗ ತಕ್ಕಡಿ ಏರಿತು. ನಾವು ಎರಡರಿಂದಲೂ ತುಲಾಭಾರ ಮಾಡಿದ್ದೇವೆ. ಜ. 5ರಂದು ಶ್ರೀಕೃಷ್ಣನ ಉತ್ಸವ ಮೂರ್ತಿಗೆ ತುಲಾಭಾರ ನಡೆಸಿದ್ದೇವೆ. ಉತ್ಸವ ಮೂರ್ತಿ 20 ಕೆ.ಜಿ. ತೂಕ ಇದೆ. ಚಿನ್ನ, ದ್ರವ್ಯದ ಜತೆಗೆ ತುಳಸೀದಳವನ್ನೂ ಸಮರ್ಪಿಸಿದ್ದೇವೆ.
– ಚಿನ್ನದ ಗೋಪುರ ನಿರ್ಮಾಣದಲ್ಲಿ ಹಣದ ಕೊರತೆ ಆಗಿದೆಯೇ?
ಸ್ವಲ್ಪ ಕಡಿಮೆಯಾಗಿದೆ. ಅದೆಲ್ಲವೂ ಬರುವ ನಿರೀಕ್ಷೆ ಇದೆ. ಶ್ರೀಕೃಷ್ಣ ಮಠದ ಚಿನ್ನದ ಗೋಪುರಕ್ಕೆ ನಮಗೆ ಚಿನ್ನ ಖರ್ಚಾದುದು 96.5 ಕೆ.ಜಿ. ಒಟ್ಟು 100 ಕೆ.ಜಿ. ಪೂರ್ಣಗೊಳಿಸೋಣವೆಂದು ಮುಖ್ಯಪ್ರಾಣ ದೇವರ ಗುಡಿಗೂ ಚಿನ್ನದ ಹೊದಿಕೆಯ ಗೋಪುರ ನಿರ್ಮಿಸಿದೆವು. ಉತ್ಸವ ಮೂರ್ತಿಯ ಪ್ರಭಾವಳಿ, ಪ್ರಾಣದೇವರ ಉತ್ಸವ ಮೂರ್ತಿಯ ಪ್ರಭಾವಳಿ, ವಾದಿರಾಜ ಪ್ರತಿಷ್ಠಾಪಿತ ಸುಬ್ರಹ್ಮಣ್ಯ ದೇವರ ಗುಡಿಯ ನಾಗದೇವರ ಕಲ್ಲಿಗೆ ಚಿನ್ನವನ್ನು ಮಡಾಯಿಸಿದೆವು.
– ಯೋಜನೆಗಳನ್ನು ಜಾರಿಗೊಳಿಸು ವಾಗ ಅಡಚಣೆ ಆಗಿದೆಯೆ?
ಕೆಲವು ಬಾರಿ ಆಗಿದೆ. ಉದಾಹರಣೆಗೆ, ಹೋದ ವರ್ಷ ಮತ್ತು ಈ ವರ್ಷ ಮಳೆಗಾಲದಲ್ಲಿ ಹಣಕಾಸು ಮುಗ್ಗಟ್ಟು ಆಯಿತು. ಇದು ನಮಗೆ ಮಾತ್ರವಲ್ಲ, ಎಲ್ಲ ದೇವಸ್ಥಾನಗಳಲ್ಲೂ. ಒಂದು ದಿನ ಬೆಳಗ್ಗೆ ಸ್ನಾನಕ್ಕೆ ಹೋಗುವಾಗ ತುಳಸಿ ಇಲ್ಲ ಎಂದು ಗೊತ್ತಾಯಿತು. ಏನು ಮಾಡುವುದು? ಕೂಡಲೇ ಕೋಟೇಶ್ವರ ಬೀಜಾಡಿಯ ರಾಮಚಂದ್ರ ವರ್ಣರಿಗೆ ತಿಳಿಸಲಾಯಿತು. ಅವರು ಏನಾದರೂ ಮಾಡಿ ಕೊಡುತ್ತೇನೆ ಎಂದರು. ಕೂಡಲೇ ಅಲ್ಲಿಂದ ವಾಹನದಲ್ಲಿ ತರಿಸಿ ಲಕ್ಷ ತುಳಸೀ ಅರ್ಚನೆ ನಡೆಸಿದೆವು. ಅಂತೂ ನಿತ್ಯ ಲಕ್ಷಾರ್ಚನೆ ನಿಲ್ಲಲಿಲ್ಲ.
– ಪರ್ಯಾಯ ಪೀಠದಿಂದ ನಿರ್ಗಮಿಸುವಾಗ ಏನನ್ನಿಸುತ್ತಿದೆ?
ದೇವರನ್ನು, ಗುರುಗಳನ್ನು ನಂಬಿದರೆ ಅಸಾಧ್ಯವಾದ ಕೆಲಸವೂ ಆಗುತ್ತದೆ. ಇದರಲ್ಲಿ ನಮ್ಮ ಪ್ರಯತ್ನವೇನೂ ಇರುವುದಿಲ್ಲ. ದೇವರ ಅನುಗ್ರಹವಿದ್ದರೆ ಮಾತ್ರ ಹಣ- ಮಾನವ ಶಕ್ತಿ ಒದಗಿ ಬರುತ್ತದೆ. ನಿಸ್ವಾರ್ಥವಾಗಿ ಕೆಲಸ ಮಾಡಿದರೆ ಶ್ರೀಕೃಷ್ಣ ಎಲ್ಲವನ್ನೂ ನಡೆಸುತ್ತಾನೆ ಎಂದು ಅನಿಸುತ್ತಿದೆ.
– ಪರ್ಯಾಯ ಪೀಠದಿಂದ ನಿರ್ಗಮನದ ಬಳಿಕ ಕಾರ್ಯಕ್ರಮ ಗಳೇನು?
ಮುಂದಿನ ಅದಮಾರು ಮಠದ ಪರ್ಯಾಯ ಅವಧಿಯಲ್ಲಿ ಉಡುಪಿಯಲ್ಲಿಯೇ ಇರುತ್ತೇವೆ. ಅದಮಾರು ಕಿರಿಯ ಶ್ರೀಗಳಿಗೆ ಪಾಠ ಬಾಕಿ ಇದೆ. ಅದಾಗಬೇಕು. ಜತೆಗೆ ನಮ್ಮ ಕಿರಿಯ ಶ್ರೀಗಳಿಗೂ ಪಾಠ ಮಾಡುತ್ತೇವೆ.
ಮಧ್ಯರಾತ್ರಿ ಭಜನೆಗೆ ಹೆಚ್ಚಾದ ಬೇಡಿಕೆ
ನಿರಂತರ ಭಜನೆ ಆರಂಭಿಸುವಾಗ ರಾತ್ರಿ ಪೂರ್ತಿ ಭಜನೆ ಮಾಡುವವರು ಸಿಗುವುದು ಕಷ್ಟವಾಗಿತ್ತು. ಪ್ರತಿ ಎರಡು ಗಂಟೆಗಳಿಗೊಮ್ಮೆ ಪಾಳಿ ಇತ್ತು. ಈಗ ಒಂದು ತಂಡಕ್ಕೆ ಅರ್ಧ ತಾಸು ಕೊಡುವುದೂ ಕಷ್ಟವಾಗುತ್ತಿದೆ. ಹೋದ ವರ್ಷ ಒಂದು ದಿನ ಮಧ್ಯರಾತ್ರಿ ರಥಬೀದಿ ನಿರ್ಜನವಾಗಿದ್ದಾಗ ಕಾಸರಗೋಡಿನ ತಣ್ತೀಮಸಿ ಭಜನ ಮಂಡಳಿ ಸದಸ್ಯರು ಒಳಗೆ ಭಜನೆ ಹಾಡುತ್ತಿದ್ದರು. ಆ ಸಂದರ್ಭ ಹೊರಭಾಗದಲ್ಲಿ ಅವರಿಗೆ ಶ್ರೀಕೃಷ್ಣನಂತೆ ಅಲಂಕೃತವಾದ ಮಗುವೊಂದು ಆಚೀಚೆ ಓಡಾಡುವುದು ಕಾಣಿಸಿಕೊಂಡಿತು, ಸ್ವಲ್ಪ ಹೊತ್ತಿನಲ್ಲಿ ಹುಡುಕಿದರೂ ಸಿಗಲಿಲ್ಲ. ಇದಾದ ಬಳಿಕ ಮಧ್ಯರಾತ್ರಿ ಭಜನೆಗೆ ಬೇಡಿಕೆ ಹೆಚ್ಚಾಯಿತು.
– ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಪರ್ಯಾಯ ಶ್ರೀಪಲಿಮಾರು ಮಠ, ಶ್ರೀಕೃಷ್ಣ ಮಠ, ಉಡುಪಿ.
– ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.