ಕಂಗೆಟ್ಟ ಕೃಷಿಕರ ಚಿತ್ತ ಕೊಳಕೆ ಬೆಳೆಯತ್ತ
ಕಾರ್ತಿ ಬೆಳೆಯ ನಷ್ಟ ಸರಿದೂಗಿಸಲು ಕೃಷಿಕರ ಪರದಾಟ, ಬೈಹುಲ್ಲು ಪಿಂಡಿಗೆ 300 ರೂ.
Team Udayavani, Dec 13, 2021, 6:57 PM IST
ಬೆಳ್ಮಣ್: ನಿರಂತರ ಮಳೆಯಿಂದಾಗಿ ಕಾರ್ತಿ ಬೆಳೆಯಲ್ಲಿ ಸಂಪೂರ್ಣ ಕೈ ಸುಟ್ಟುಕೊಂಡ ಕರಾವಳಿಯ ಕೃಷಿಕರು ಭಾರೀ ನಿರೀಕ್ಷೆಗಳೊಂದಿಗೆ ಕೊಳಕೆ ಬೆಳೆಯತ್ತ ಮುಖ ಮಾಡಿದ್ದಾರೆ. ಮುಂಗಾರು ಮಳೆ ನಿರಂತರವಾಗಿ ಸುರಿದು ಭತ್ತ ಬೆಳೆಯಲ್ಲಿ ಅಪಾರ ನಷ್ಟ ಅನುಭವಿಸಿರುವ ರೈತರು ತಮ್ಮ ಉಪ ಕಸುಬು ಹೈನುಗಾರಿಕೆಗೆ ಬಳಕೆಯಾಗುತ್ತಿದ್ದ ಬೈ ಹುಲ್ಲನ್ನೂ ಕಳೆದುಕೊಂಡು ಚಡಪಡಿಸುತ್ತಿದ್ದಾರೆ. ಈ ಕಾರಣಕ್ಕಾಗಿ ಕೊಳಕೆ ಕಾಲದ ಕೃಷಿಯತ್ತ ತೊಡಗಿಸಿಕೊಂಡಿದ್ದಾರೆ.
ಮುಂಡ್ಕೂರು, ಬೆಳ್ಮಣ್, ಬೋಳ, ಕಡಂದಲೆ, ಏಳಿಂಜೆ, ಸಂಕಲಕರಿಯ, ಪೊಸ್ರಾಲು ಭಾಗದ ನದಿ ಬದಿಯ ನೀರಿನಾಶ್ರಯ ಇರುವ ಗದ್ದೆಗಳ ಕೃಷಿಕರು ಇದೀಗ ಕೊಳಕೆ ಕಾಲದ ಕೃಷಿ ಚಟುವಟಿಕೆ ಪ್ರಾರಂಭಿಸಿದ್ದಾರೆ. ಡಿಸೆಂಬರ್ ಮೊದಲ ವಾರದ ವರೆಗೂ ನಿರಂತರ ಮಳೆ ಸುರಿಯುತ್ತಿದ್ದು ಬೆಳೆ ನೀರು ಪಾಲಾಗಿತ್ತು.
ಬೈ ಹುಲ್ಲು ಪಿಂಡಿಗೆ 300 ರೂ.
ಕಳೆದ ವರ್ಷ ಪಿಂಡಿಗೆ 150 ರೂ.ನಂತೆ ಧಾರಾಳವಾಗಿ ಸಿಗುತ್ತಿದ್ದ ಬೈ ಹುಲ್ಲು ಈ ಬಾರಿ 300 ರೂ.ಗೆ ತಲುಪಿದೆ. ಈ ಮೂಲಕ ಕರಾವಳಿಯ ರೈತರ ಉಪಕಸುಬು ಹೈನುಗಾರಿಕೆಯ ನೆಮ್ಮದಿಯನ್ನೂ ಈ ಬಾರಿಯ ಮಳೆ ಕಸಿದು ಕೊಂಡಿದೆ. ಈ ಬಾರಿ ನಿರಂತರ ಮಳೆಗೆ ಬಹುತೇಕ ಗದ್ದೆಗಳ ಬೈ ಹುಲ್ಲು ನೆರೆಪಾಲಾಗಿದೆ. ಅಲ್ಲದೆ ಗದ್ದೆಯಲ್ಲೇ ಕೊಳೆತು ಹೋಗುತ್ತಿದೆ.
ಕಾರ್ತಿ ಬೆಳೆಯ ನಷ್ಟ ಸರಿದೂಗಿಸಲು ಕರಾವಳಿಯ ರೈತರು ಕೊಳಕೆ ಬೆಳೆಯ ಸಿದ್ಧತೆಯಲ್ಲಿ ತೊಡಗಿದ್ದಾರೆ. ಕಡಂದಲೆ ಭಾಗಗಗಳಲ್ಲಿ ಬಿತ್ತನೆ ನಡೆದಿದೆ. ಸಂಕಲಕರಿಯ ಭಾಗಗಳಲ್ಲಿ ಉಳುಮೆ ಪ್ರಾರಂಭಗೊಂಡಿದೆ.
ನಷ್ಟ ಸರಿದೂಗಿಸುವ ಆಶಯ
ಮಳೆಗಾಲದ ಬೆಳೆ ವಿಪರೀತ ಮಳೆಗೆ ಕೊಚ್ಚಿ ಹೋಗಿ ನಷ್ಟ ಉಂಟಾಗಿರುವ ಹಿನ್ನೆಲೆಯಲ್ಲಿ ಕೊಳಕೆ ಬೆಳೆಗೆ ತೊಡಗಿದ್ದೇವೆ. 1 ಲಕ್ಷ ರೂ. ಬೆಲೆಯ ಬೈ ಹುಲ್ಲೂ ನಷ್ಟವಾಗಿದೆ. ಈ ಬೆಳೆ ನಷ್ಟ ಸರಿದೂಗಿಸುವ ಆಶಯ ಇದೆ. -ಸುಧಾಕರ ಸಾಲ್ಯಾನ್ ಸಂಕಲಕರಿಯ, ಕೃಷಿಕ
ಬೆಂಬಲ ಬೆಲೆ ಘೋಷಣೆ ವಿಳಂಬ
ಮಳೆಯಿಂದ ಉಂಟಾದ ನಷ್ಟ ಸರಿದೂಗಿ ಸುವುದು ಕಷ್ಟ, ರೈತರಿಗೆ ಬೆಂಬಲ ಬೆಲೆ ಘೋಷಣೆಯೂ ವಿಳಂಬವಾಗಿದೆ. ಕೊಳಕೆ ಬೆಳೆ ನಮ್ಮನ್ನು ರಕ್ಷಿಸಬಹುದು.
-ಶರತ್ ಶೆಟ್ಟಿ ಸಚ್ಚೇರಿಪೇಟೆ, ಕೃಷಿಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.