ಅಗಲ ಕಿರಿದಾದ ಮೇಲ್ಸೇತುವೆಗೆ ತಡೆಗೋಡೆಗಳಿಲ್ಲದೆ ಸಮಸ್ಯೆ
Team Udayavani, Jan 20, 2021, 2:40 AM IST
ಕಾರ್ಕಳ : ಕಿರಿದಾದ ಕಿಂಡಿ ಅಣೆಕಟ್ಟಿನ ಮೇಲ್ಸೇತುವೆ ಎರಡೂ ಬದಿ ತಡೆಗೋಡೆಗಳಿಲ್ಲ. ಮಳೆಗಾಲ ಹಳ್ಳ ಹರಿಯುವ ಭಯ. ಬೇಸಗೆಯಲ್ಲಿ ಅಸುರಕ್ಷತೆ ಕಾಡುತ್ತಿರುತ್ತದೆ. ಇಲ್ಲಿ ಸಂಚರಿಸುವಾಗ ಸ್ವಲ್ಪ ಯಾಮಾರಿದರೂ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಇದು ಕಾವೆರಡ್ಕ ಎಂಬಲ್ಲಿನ ಮೇಲ್ಸೇತುವೆಯ ಸ್ಥಿತಿ.
ಕಾರ್ಕಳ ಪುರಸಭೆ ಹಾಗೂ ದುರ್ಗ ಗ್ರಾ.ಪಂ. ಗಡಿಭಾಗದಲ್ಲಿ ದುರ್ಗಾ, ತೆಳ್ಳಾರು ಸಂಪರ್ಕಿಸುವ ಜೋಗುಳಬೆಟ್ಟು ಪರಿಸರದ ಕಾವೆರಡ್ಕ ಎಂಬಲ್ಲಿ 9 ವರ್ಷಗಳ ಹಿಂದೆ ಸ್ವರ್ಣಾ ನದಿಯ ಉಪನದಿಯೊಂದಕ್ಕೆ ಸಣ್ಣ ನೀರಾವರಿ ಇಲಾಖೆಯಿಂದ ಸುಮಾರು 13 ಲಕ್ಷ ರೂ. ವೆಚ್ಚದಲ್ಲಿ ಕಿಂಡಿ ಅಣ್ಣೆಕಟ್ಟು ನಿರ್ಮಿಸಲಾಗಿತ್ತು. ಅಂತರ್ಜಲ ಸಂರಕ್ಷಣೆ ಜತೆಗೆ ಸಂಪರ್ಕ ರಸ್ತೆಯಾಗಿಯೂ ಇದನ್ನು ಬಳಸುವ ರೀತಿಯಲ್ಲಿ ನಿರ್ಮಿಸಲಾಗಿತ್ತು. ಬಳಿಕ ಈ ಮೇಲ್ಸೇತುವೆಯನ್ನು ಸಾರ್ವಜನಿಕರು ಸಂಚಾರಕ್ಕಾಗಿ ಬಳಸುತ್ತ ಬಂದಿದ್ದಾರೆ.
ಅಯೋಧ್ಯನಗರ, ಕಾವೇರಡ್ಕ ಪರಿಸರ ಹಾಗೂ ದುರ್ಗಾ ಗ್ರಾ.ಪಂ. ವ್ಯಾಪ್ತಿಯ ಹಲವು ಜನವಸತಿ ಪ್ರದೇಶಗಳಿಂದ ಕಾರ್ಕಳ ನಗರಕ್ಕೆ, ಕೆರ್ವಾಸೆ, ಮಿಯಾರು, ಬಜಗೋಳಿ ಈ ಭಾಗಕ್ಕೆ ಅತಿ ಹತ್ತಿರವಾಗಿ ಸಂಪರ್ಕಿಸುವ ಮೇಲ್ಸೇತುವೆಯಾಗಿ ಇದು ಬಳಕೆಯಾಗುತ್ತಿದೆ.
ಸೇತುವೆಗೆ ತಡೆಗೋಡೆಗಳಿತ್ತು. ಬಳಿಕ ಅದು ಹೊಳೆ ತುಂಬಿ ಹರಿದಾಗ ನೆರೆ ನೀರು ಸೆಳೆತಕ್ಕೆ, ವಾಹನಗಳು ಗುದ್ದಿ ನಾಶವಾಗಿದೆ. ಈಗ ಎರಡೂ ಬದಿ ಯಾವುದೇ ಸುರಕ್ಷತೆಗಳಿಲ್ಲ. ತಡೆಗೋಡೆಗಳ ಪಿಲ್ಲರ್ ಮುರಿದು ಬಿದ್ದಿವೆ. ದ್ವಿಚಕ್ರ, ಲಘು ವಾಹನಗಳಿರಲಿ ಇಲ್ಲಿ ತೆರಳುವಾಗ ಬಹಳಷ್ಟು ಜಾಗ್ರತೆಯಿಂದ ತೆರಳಬೇಕು. ಪಾದಚಾರಿಗಳು ಅಷ್ಟೆ ಸಾಕಷ್ಟು ಎಚ್ಚರ ವಹಿಸಬೇಕಿದೆ. ನಾಗರಿಕರು, ಶಾಲಾ ಮಕ್ಕಳು, ಉದ್ಯೋಗಿಗಳು, ಕೂಲಿ ಕಾರ್ಮಿಕರು ಎಲ್ಲರೂ ಇದೇ ಮೇಲ್ಸೇತುವೆಯನ್ನು ನಿತ್ಯವೂ ಬಳಸುತ್ತಿದ್ದಾರೆ. ಅವರೆಲ್ಲ ಭೀತಿಯಿಂದಲೇ ಇಲ್ಲಿ ಸಂಚರಿಸುತ್ತಿರುತ್ತಾರೆ. ಅಪಾಯಕ್ಕೆ ಸಿಲುಕಿದ ಘಟನೆಗಳು ಇಲ್ಲಿ ಅನೇಕ ಬಾರಿ ನಡೆದಿದ್ದಾಗಿ ಸ್ಥಳೀಯರು ಹೇಳುತ್ತಾರೆ.
ಒಂದು ತೆರಳಿದ ಬಳಿಕವೇ ಮತ್ತೂಂದು :
ನಗರದ ವಿವಿಧ ಕಾಲೇಜು, ಕಚೇರಿಗೆ ತೆರಳು ವವರೆಲ್ಲರೂ ಈ ಮೇಲ್ಸೇತುವೆ ಮೇಲಿಂದಲೇ ತೆರಳುತ್ತಾರೆ. ಮೇಲ್ಸೇತುವೆಯಿಂದ ಸಾರ್ವ ಜನಿಕರಿಗೆ ಅನುಕೂಲವೇನೋ ಆಯಿತು. ಸೇತುವೆ ಮೇಲೆ ತೆರಳುವ ಸಂದರ್ಭವಂತೂ ಭಯದಿಂದ ಸಂಚರಿಸುವ ಅಪಾಯವು ಜತೆಗೇ ಬಂದಿದೆ.
ಹೆತ್ತವರಿಗೆ ದಡ ಕಾಯುವ ಕೆಲಸ :
ಮಳೆಗಾಲ. ಬೇಸಗೆ ಎರಡು ಅವಧಿಯಲ್ಲಿ ತಡೆಗೋಡೆಯಿಲ್ಲದೆ ಅಸುರಕ್ಷತೆ ಕಾಡುತ್ತಿರುತ್ತದೆ. ಮಳೆಗಾಲ ಮುಳುಗು ಸೇತುವೆಯ ಎರಡು ಕಡೆ ಮಕ್ಕಳ ಪೋಷಕರು ಎರಡು ಹೊತ್ತು ಕಾದು ಕುಳಿತು ಮಕ್ಕಳನ್ನು ಶಾಲೆಗೆ ಕಳುಹಿಸಿ ಎಚ್ಚರ ವಹಿಸುತ್ತಾರೆ. ವೃದ್ಧರು, ಮಕ್ಕಳು, ಮಹಿಳೆಯರು ಹೀಗೆ ಎಲ್ಲರೂ ಸೇತುವೆ ಮೇಲೆ ಓಡಾಡುವಾಗ ಸ್ವಲ್ಪ ಅಚೀಚೆಯಾದರೂ ಅಪಾಯ ಎದುರಾಗುವುದು.
ಅಂದು ಆಕೆ ಬದುಕುಳಿದಳು! :
ಇದು ಎರಡು ವರ್ಷದ ಹಿಂದಿನ ಘಟನೆ. ಹೊಳೆ ತುಂಬಿ ಹರಿಯುತ್ತಿತ್ತು. ಇದೇ ಮೇಲ್ಸೇತುವೆ ಮೇಲೆ ಸ್ಥಳೀಯ ಯುವತಿಯೋರ್ವಳು ಸ್ಕೂಟರಿನಲ್ಲಿ ತೆರಳುತ್ತಿದ್ದಳು. ಆಕೆ ಸೇತುವೆ ಅಂಚಿಗೆ ತಲುಪಿದ ವೇಳೆ ಅಪಾಯಕ್ಕೆ ಒಳಗಾಗಿ ತಡೆಗೋಡೆಯಿಲ್ಲದೆ ಸ್ಕೂಟರ್ ಸಹಿತ ಆಕೆ ಸೇತುವೆಯಿಂದ ಕೆಳಕ್ಕೆ ಬಿದ್ದಿದ್ದಳು.ಯುವತಿ ಪಿಲ್ಲರ್ ಸಲಾಕೆಯಲ್ಲಿ ಸಿಕ್ಕಿಹಾಕಿಕೊಂಡು ದುರಾದೃಷ್ಟವಶಾತ್ ಬದುಕುಳಿದಿದದುÛ. ಸ್ಕೂಟರ್ ನೀರಿನಲ್ಲಿ ಕೊಚ್ಚಿ ಹೋಗಿತ್ತು.
ಆಮ್ನಿ ಕಾರು ತೆರಳುವಷ್ಟು ಮಾತ್ರ ಸೇತುವೆ ಅಗಲವಿದೆ. ಎದುರಿಗೆ ವಾಹನ ಬಂದರೆ ಏಕಕಾಲಕ್ಕೆ ಚಲಿಸುವುದು ಕಷ್ಟ. ಸೇತುವೆ ಮೇಲಿನ ಒಂದು ವಾಹನ ತೆರಳಿದ ಮೇಲೆಯೇ ಮತ್ತೂಂದು ವಾಹನ ಚಲಿಸಬೇಕು. ಒಮ್ಮೆಲೆ 2 ತೆರಳುವಂತಿಲ್ಲ.ಸೇತುವೆ ಮೇಲಿನ ವಾಹನ ದಡ ಮುಟ್ಟುವವರೆಗೂ ಭಯವೇ ಇರುತ್ತದೆ. ನಿರ್ಲಕ್ಷದಿಂದ ವಾಹನ ಚಾಲಕರು ಸೇತುವೆ ಮೇಲೆ ವಾಹನ ಚಲಾಯಿಸಿದರೆ ಅನಾಹುತ ತಪ್ಪಿದಲ್ಲ. ಅವಘಡ ಸಂಭವಿಸುವ ಮೊದಲು ಸೇತುವೆ ಸುತ್ತಲೂ ತಡೆಗೋಡೆ ನಿರ್ಮಿಸಬೇಕು. ಸಾಧ್ಯವಾದರೆ ಸೇತುವೆ ವಿಸ್ತರಿಸಬೇಕು ಎನ್ನುತ್ತಾರೆ ಸ್ಥಳೀಯರು.
ಅಂತರ್ಜಲ ಹೆಚ್ಚಳಕ್ಕೆಂದು ಕಿಂಡಿ ಅಣೆಕಟ್ಟು ನಿರ್ಮಿಸಲಾಗಿತ್ತು. ಬಳಿಕ ಅದು ಸಂಚಾರಕ್ಕೂ ಬಳಕೆಯಾಗುತ್ತಿದೆ. ಅದರ ಮೇಲೆ ವಾಹನಗಳು, ಪಾದಚಾರಿಗಳು ಸಂಚರಿಸುವಾಗ ಅಸುರಕ್ಷತೆ ಕಾಡುತ್ತದೆ. ಶಿಥಿಲವಾದ ತಡೆಬೇಲಿ ನಿರ್ಮಿಸಿದರೆ ಇಲ್ಲಿ ಸಂಭವಿಸಬಹುದಾದ ಅಪಾಯ ತಪ್ಪುತ್ತದೆ.– ರಮೇಶ್, ಸ್ಥಳೀಯರು
ಮೇಲ್ಸೇತುವೆ ಇರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವೆ. ಪುರಸಭೆ ವ್ಯಾಪ್ತಿಗೆ ಒಳಪಟ್ಟಿದ್ದರೆ ಸಾರ್ವಜನಿಕರ ಸುರಕ್ಷತೆಗೆ ತೆಗೆದುಕೊಳ್ಳಬೇಕಿರುವ ಕ್ರಮ ತೆಗೆದುಕೊಳ್ಳುತ್ತೇವೆ.-ರೇಖಾ ಜೆ. ಶೆಟ್ಟಿ, ಪುರಸಭೆ ಮುಖ್ಯಾಧಿಕಾರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.